ಗುಡಿಬಂಡೆಯಲ್ಲಿ ಮುಖ್ಯ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರಿಂದ ಬಿಇಒ ಕಚೇರಿಗೆ ಮುತ್ತಿಗೆ
by GS Bharath Gudibande
ಗುಡಿಬಂಡೆ: ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಚಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಕರಿಗೆ ಹೆಚ್ಚುವರಿ ಹೊಣೆ ವಹಿಸುವ ಮೂಲಕ ಮಕ್ಕಳಿಗೆ ಅನ್ಯಾಯವಾಗುತ್ತಿದೆ.
ಈ ಶಾಲೆಯ ಮುಖ್ಯ ಶಿಕ್ಷಕ ಮಂಜೇನಾಯಕ ಅವರಿಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯ ಹೊಣೆಯನ್ನು ನೀಡಲಾಗಿದ್ದು, ಈಗ ಮಕ್ಕಳ ಅಕ್ಷರ ದಾಸೋಹಕ್ಕೆ ಖೋತಾ ಆಗಿದೆ.
ಈ ಬಗ್ಗೆ ಗುಡಿಬಂಡೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ಅಲ್ಲದೇ, ಪರೀಕ್ಷೆಗಳು ಹತ್ತಿರದಲ್ಲಿ ಇರುವುದುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಮುಖ್ಯ ಶಿಕ್ಷಕರನ್ನು ಹೆಚ್ಚುವರಿ ಹೊಣೆಯಿಂದ ಮುಕ್ತಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಿಇಒ ಕಚೇರಿ ಮುಂದೆ ಪ್ರತಿಭಟನೆ
ಮುಖ್ಯ ಶಿಕ್ಷಕರಿಲ್ಲದ ಶಾಲೆ ದೇವರಿಲ್ಲದ ಗುಡಿ ಎಂಬ ಮಾತು ಹಂಪಸಂದ್ರ ಶಾಲೆ ವಿಷಯದಲ್ಲಿ ಸಾಬೀತಾಗಿದೆ. ಬೋಧನೆ, ಆಡಳಿತ, ಮಕ್ಕಳ ಸುರಕ್ಷತೆ ಇತ್ಯಾದಿ ಅಂಶಗಳ ಮೇಲೆ ಇದು ಗಾಢ ಪರಿಣಾಮ ಬೀರಿದ್ದು, ಪೋಷಕರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಕೇ ಬೇಕು ಮುಖ್ಯ ಶಿಕ್ಷಕರು ಬೇಕು ಎಂದು ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು, ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ; ತಾಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದ್ವಾರದ ಮುಂದೆ ಕೂತು ಧರಣಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ಬಡ ವಿದ್ಯಾರ್ಥಿಗಳಿಗೆ ಅನ್ಯಾಯ
ಎಸ್ಎಸ್ಎಲ್’ಸಿ ಪರೀಕ್ಷೆ ಇನ್ನೊಂದು ತಿಂಗಳಿನಲ್ಲಿ ಆರಂಭವಾಗಲಿದ್ದು, ಪಾಠವನ್ನೇ ಕೇಳದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಏನು ಬರೆಯಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಿದೆ. ಶಾಲೆಯ ಮುಖ್ಯ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಎರಡು ವಿಷಯಗಳನ್ನು ಬೋಧಿಸುತ್ತಾರೆ. ಆದರೆ ಅವರಿಗೆ ಹೆಚ್ಚು ಕೆಲಸ ನಿಯೋಜನೆ ಮಾಡಿರುವ ಕಾರಣ ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ ಎಂದು ಪೋಷಕರು ಹಾಗೂ ಮಕ್ಕಳು ಬೇಸರ ವ್ಯಕ್ತಪಡಿಸಿ ಬಿಇಒ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಗುಡಿಬಂಡೆ ತಾಲ್ಲೂಕು ಎಸ್ಎಸ್ಎಲ್’ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುತ್ತಿದೆ. ಆದರ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶ್ರಮ ಹಾಗೂ ಶಿಕ್ಷಕರ ಸಹಕಾರವಿತ್ತು, ಈಗಿನ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳ ಪಾಠ ಪ್ರವಚನದಲ್ಲಿ ಬಹಳ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಇದನ್ನು ನಾವು ಸಹಿಸಲ್ಲ, ಅಲ್ಲದೇ ವಿದ್ಯಾಭ್ಯಾಸದಲ್ಲಿ ಗುಡಿಬಂಡೆಯ ಸರ್ಕಾರಿ ಶಾಲೆಯ ಬಡ ಮಕ್ಕಳು ಹಿಂದುಳಿಯಬಾರದು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಮುಖ್ಯ ಶಿಕ್ಷಕರ ಹೆಚ್ಚುವರಿ ಕೆಲಸ ರದ್ದು ಮಾಡಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
ನವೀನ್ ರಾಜ್ ಕನ್ನಡಿಗ, ಅಧ್ಯಕ್ಷರು ಕೆಪಿಸಿಸಿ ಸಾಮಾಜಿಕ ಜಾಲತಾಣ