ಬರಪೀಡಿತ ಕರ್ನಾಟಕಕ್ಕೆ ಕೇಂದ್ರದಿಂದ ಈವರೆಗೆ ನಯಾಪೈಸೆ ಬಂದಿಲ್ಲ; ಫೆಬ್ರವರಿ 7ರಂದು ನವದೆಹಲಿಯಲ್ಲಿ ಸಿದ್ದು, ಡಿಕೆಶಿ ಪ್ರತಿಭಟನೆ
ಬೆಂಗಳೂರು:ಕೇಂದ್ರ ಸರಕಾರದ ಮಲತಾಯಿ ದೋರಣೆ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಫೆಬ್ರವರಿ 7ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ.
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಕ್ಕೆ ಪರಿಹಾರ ನೀಡದಿರುವುದು ಸೇರಿದಂತೆ ಕೇಂದ್ರ ಸರಕಾರ ಎಲ್ಲಾ ಹಂತದಲ್ಲೂ ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಕೇಂದ್ರದ ಗಮನ ಸೆಳೆಯಲು ಒಂದು ದಿನದ ಧರಣಿ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಜತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಎಲ್ಲಾ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ 62,000 ಕೋಟಿ ಹಣ ನಷ್ಟವಾಗಿದೆ. 2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.5 ಲಕ್ಷ ಕೋಟಿ ರೂ. ಇತ್ತು. 2023-24ನೇ ಸಾಲಿನಲ್ಲಿ ದುಪ್ಪಟ್ಟಾಗಿ 45 ಲಕ್ಷ ಕೋಟಿ ರೂ. ಆಗಿದೆ. 2018-19ರಲ್ಲಿ ಕೇಂದ್ರ ಬಜೆಟ್ʼನಲ್ಲಿ ರಾಜ್ಯಕ್ಕೆ 46,000 ಕೋಟಿ ರೂ. ಅನುದಾನ ಸಿಕ್ಕಿತ್ತು. 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಕೇವಲ 50,000 ಕೋಟಿ ಮಾತ್ರ. ಕೇಂದ್ರ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಸಿಗುತ್ತಿರುವ ಪಾಲಿನಲ್ಲಿ ಅತ್ಯಲ್ಪ ಏರಿಕೆ ಆಗಿದೆ ಅಷ್ಟೇ.
ಡಿ.ಕೆ. ಶಿವಕುಮಾರ್ , ಉಪ ಮುಖ್ಯಮಂತ್ರಿ
ರಾಷ್ಟ್ರದ ಗಮನಕ್ಕೆ ರಾಜ್ಯದ ಸಂಕಷ್ಟ
ಪ್ರತಿಭಟನೆ ಮೂಲಕ ಕೇಂದ್ರ ಸರಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ಇಡೀ ರಾಷ್ಟ್ರದ ಗಮನಕ್ಕೆ ತರಲು ಮುಖ್ಯಮಂತ್ರಿ ಸಜ್ಜಾಗಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ವಿವರ, ಅಂಕಿ-ಅಂಶಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ನ ದೆಹಲಿ ನಾಯಕರು ಇಂದು ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಚರ್ಚಿಸಿದ ನಂತರ, ರಾಜ್ಯ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ಧರಣಿ ಮಾಡುವ ನಿರ್ಧಾರ ಕೈಗೊಂಡರು. ಈಗಾಗಲೇ ಎಲ್ಲಾ ಶಾಸಕರಿಗೆ ಈ ವಿಷಯ ತಿಳಿಸಲಾಗಿದೆ.
ಕರ್ನಾಟಕದ ಬಹುತೇಕ ಭಾಗ ಬರಗಾಲಕ್ಕೆ ತುತ್ತಾಗಿದ್ದರೂ ಕೇಂದ್ರ ಸರಕಾರ ಇದುವರೆಗೂ ನಯಾಪೈಸೆಯನ್ನೂ ನೀಡಿಲ್ಲ, ಕೋಟ್ಯಂತರ ರೂ. ಬೆಳೆ ನಷ್ಟವಾಗಿದ್ದು ರೈತರಿಗೂ ಪರಿಹಾರ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರಕಾರ ದೂರುತ್ತಿದ್ದು, ಅದೇ ಅಂಶವನ್ನು ಇಡೀ ದೇಶದ ಗಮನಕ್ಕೆ ತರಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮೇಕೆದಾಟು ಅಣೆಕಟ್ಟೆಗೂ ಮಂಜೂರಾತಿ ನೀಡಿಲ್ಲ
ಬೆಂಗಳೂರಿಗೆ ಕುಡಿಯುವ ನೀರು ಹಾಗೂ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಅನುಕೂಲವಾಗುವಂತೆ ಕೃಷ್ಣರಾಜ ಸಾಗರ ಜಲಾಶಯಕ್ಕೆ ಸಮಾನಾಂತರವಾಗಿ ಮೇಕೆದಾಟು ಸಮೀಪ ಅಣೆಕಟ್ಟೆ ನಿರ್ಮಿಸಲು ಇದುವರೆಗೂ ಕೇಂದ್ರ ಸರಕಾರ ಮಂಜೂರಾತಿ ನೀಡಿಲ್ಲ.

ಹದಿನೈದನೇ ಹಣಕಾಸು ಆಯೋಗ ರಾಜ್ಯಕ್ಕೆ ನಿಗದಿ ಮಾಡಿರುವ ಅನುದಾನದಲ್ಲಿ 5,495 ಕೋಟಿ ರೂ.ಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಬೆಂಗಳೂರಿನ ವರ್ತುಲ ರಸ್ತೆಗೆ ನೀಡಬೇಕಿದ್ದ 6,000 ಕೋಟಿ ರೂ.ಗಳನ್ನು ಕೇಂದ್ರ ನೀಡಿಲ್ಲ. ಜನರ ಮುಂದೆ ಭರವಸೆಯ ಮಹಾಪೂರವನ್ನೇ ಹರಿಸಿರುವ ಕೇಂದ್ರವು, ನಂತರ ಯಾವುದೇ ಯೋಜನೆಗಳಿಗೆ ಮಂಜೂರಾತಿ ಮತ್ತು ಆರ್ಥಿಕ ನೆರವು ಕೊಟ್ಟಿಲ್ಲ.
ಭದ್ರಾ ಮೇಲ್ದಂಡೆ ಯೋಜನೆಗೆ ನೀಡಬೇಕಾದ 5,300 ಕೋಟಿ ರೂ.ಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ, ರಾಜ್ಯದಿಂದ ಸಂಗ್ರಹವಾಗುತ್ತಿರುವ GST ಪಾಲಿನ ವಿಷಯದಲ್ಲೂ ಅನ್ಯಾಯವಾಗುತ್ತಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ನೀಡಿದ್ದ 1,000 ಕೋಟಿ ರೂ.ಗಳನ್ನು ಈಗ ಹಿಡಿದಿಟ್ಟುಕೊಂಡಿದೆ.
ದೇಶವನ್ನು ಇಬ್ಬಾಗವಾಗಿಸುವ ಉದ್ದೇಶದಿಂದ ಸಂಸದ ಡಿ.ಕೆ.ಸುರೇಶ್ ಅವರು ಆ ಹೇಳಿಕೆಯನ್ನು ನೀಡಿರುವುದಿಲ್ಲ. ದೇಶ ಅಖಂಡವಾಗಿರಬೇಕೆಂಬುದು ನಾವು ಬಯಸುತ್ತೇವೆ. ಬಿಜೆಪಿಯವರು ಕೇಂದ್ರ ಬಜೆಟ್ ನಲ್ಲಿ ಬಡವರು, ರೈತರು, ನಿರುದ್ಯೋಗ ವಿಷಯಗಳ ಬಗ್ಗೆ ಚರ್ಚೆ ಮಾಡಿ, ಪರಿಹಾರ ನೀಡುವ ಬದಲು ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕೇಂದ್ರದ ಯೋಜನೆಗಳಿಗೆ ಪಾಲು ಕಡಿತ
ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ನೀಡುವ ಬೆಂಬಲ ಬೆಲೆ ಯೋಜನೆಯಡಿ 1,800 ಕೋಟಿ ರೂ.ಗಳನ್ನು ಇದುವರೆಗೆ ಕೇಂದ್ರ ನೀಡಿಲ್ಲ, ಅದೇ ರೀತಿ ರಾಜ್ಯದಲ್ಲಿ ಜಾರಿಯಾಗುವ ಕೇಂದ್ರದ ಯೋಜನೆಗಳಿಗೆ ನೀಡುವ ಪಾಲನ್ನು ಕೂಡ ಕಡಿತ ಮಾಡಲಾಗಿದ್ದು, ಆ ಪ್ರಮಾಣವನ್ನು ಶೇ.10 ಮತ್ತು ಶೇ.25ಕ್ಕೆ ಇಳಿಸಲಾಗಿದೆ!
ಕೇಂದ್ರದ ಪ್ರಾಯೋಜಿತ ಯೋಜನೆಗಳಿಗೆ ಈ ಮೊದಲು ಶೇ.75ರಷ್ಟು ಹಣವನ್ನು ನೀಡಲಾಗುತ್ತಿತ್ತು. ಉಳಿದ ಶೇ.25ರಷ್ಟು ಹಣವನ್ನು ಆಯಾ ರಾಜ್ಯ ಸರಕಾರಗಳು ಭರಿಸುತ್ತಿದ್ದವು. ನಂತರದ ದಿನಗಳಲ್ಲಿ ಆ ಪಾಲಿನ ಪ್ರಮಾಣವನ್ನು ಶೇ.50ಕ್ಕೆ ಇಳಿಸಲಾಯಿತು. ಇದೀಗ ಕೇವಲ ಶೇ.10ರಷ್ಟು ಮಾತ್ರ ಭರಿಸುತ್ತಿದೆ ಕೇಂದ್ರ ಸರಕಾರ. ಉಳಿದದ್ದನ್ನು ರಾಜ್ಯಗಳೇ ಭರಿಸಬೇಕಿದೆ.
ಕೆಲ ವಿಶೇಷ ಯೋಜನೆಗಳಿಗೆ ಮಾತ್ರ ಕೇಂದ್ರ ಸರಕಾರ ಶೇ.25ರಷ್ಟು ಅನುದಾನ ನೀಡುತ್ತದೆ. ಉಳಿದಂತೆ ಎಲ್ಲಾ ಯೋಜನೆಗಳಿಗೆ ರಾಜ್ಯವೇ ಹಣ ಹೊಂದಿಸಬೇಕಿದೆ. ಕೊರತೆ ಬಜೆಟ್ ಸರಿದೂಗಿಸಲು ಕೇರಳಕ್ಕೆ 15,000 ಕೋಟಿ ರೂ. ನೀಡಿರುವ ಕೇಂದ್ರ, ಕರ್ನಾಟಕದಲ್ಲಿ ಕೊರತೆ ಬಜೆಟ್ ಮಂಡನೆಯಾಗಿದ್ದರೂ ನೆರವು ನೀಡುವುದಿಲ್ಲ ಎಂಬುದು ಸೇರಿ ಹಲವು ವಿಷಯಗಳನ್ನು ರಾಷ್ಟ್ರದ ಗಮನಕ್ಕೆ ತರುವ ಮೂಲಕ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ತಂಡ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪ್ರತಿಭಟನೆ ಮೂಲಕ ಬಿಜೆಪಿಗೆ ಶಾಕ್
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಅದರ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಗೆ ಈ ಪ್ರತಿಭಟನೆಯ ಮೂಲಕ ಶಾಕ್ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ.
ಭಾವನಾತ್ಮಕ ವಿಷಯಗಳನ್ನು ಹಿಡಿದುಕೊಂಡು ರಾಜಕೀಯ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ, ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಎಳೆಎಳೆಯಾಗಿ ದೇಶಕ್ಕೆ ವಿವರಿಸುವುದು ಸಿದ್ದರಾಮಯ್ಯ ಅವರ ದೂರಾಲೋಚನೆ.
ನವದೆಹಲಿಯಲ್ಲಿ ಫೆಬ್ರವರಿ 7ರಂದು ನಡೆಸಲಿರುವ ಪ್ರತಿಭಟನೆಯಲ್ಲಿ ತಾವು ಮತ್ತು ತಮ್ಮ ಸಂಪುಟದ ಸದಸ್ಯರಲ್ಲದೆ ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕರೂ ಭಾಗವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಕೇಂದ್ರದ ಅನ್ಯಾಯದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ರೀತಿಯಲ್ಲೇ ಬೀದಿಗಿಳಿದು ಹೋರಾಟಕ್ಕಿಳಿಯುವ ಮೂಲಕ ದೇಶದ ಗಮನ ಸೆಳೆಯಬಹುದು, ಆ ಮೂಲಕ ಬಿಜೆಪಿಗೆ ತಿರುಗೇಟು ನೀಡಬಹುದು ಎಂಬುದು ಸಿದ್ದರಾಮಯ್ಯ ಅವರ ಆಲೋಚನೆಯಾಗಿದೆ.
ಡಿಕೆಸು ಹೇಳಿಕೆಯ ಡ್ಯಾಮೇಜ್ ಕಂಟ್ರೋಲ್
ಅನುದಾನ ಮತ್ತು ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಕೊಟ್ಟಿರುವ ಹೇಳಿಕೆ ದೇಶಾದ್ಯಂತ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಇದರಿಂದ ಕಾಂಗ್ರೆಸ್ ತೀವ್ರ ಇಕ್ಕಿಟ್ಟಿಗೆ ಸಿಲುಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸ್ವಪಕ್ಷೀಯ ನಾಯಕರೇ ಡಿಕೆಸು ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜತೆಗೆ, ದೇಶಾದ್ಯಂತ ಅದರಲ್ಲೂ ಉತ್ತರ ಭಾರತದ ಎಲ್ಲಾ ನಾಯಕರು ರಾಜಕೀಯ ಭಿನ್ನಭಿಪ್ರಾಯ ಮರೆತು ಸುರೇಶ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಅದರೆ, ದಕ್ಷಿಣದ ರಾಜ್ಯಗಳಲ್ಲಿ ಅವರಿಗೆ ಅಷ್ಟೇನೂ ಬೆಂಬಲ ವ್ಯಕ್ತವಾಗಿಲ್ಲ. ಬದಲಿಗೆ ವ್ಯಾಪಕ ಟೀಕೆಗಳೇ ಕೇಳಿ ಬರುತ್ತಿವೆ. ಇವರ ಹೇಳಿಕೆಯಿಂದ ಉತ್ತರ ಭಾರತದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೊಡೆತ ಬೀಳಬಹುದು ಎಂದು ಕಾಂಗ್ರೆಸ್ ಆತಂಕದಲ್ಲಿದೆ. ಈಗಾಗಲೇ ಅಯೋಧ್ಯೆ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಗೆ ಈ ವಿಷಯವೂ ಪೆಟ್ಟು ಕೊಟ್ಟರೆ ಕಷ್ಟ ಎನ್ನುವುದು ವರಿಷ್ಠರ ಆತಂಕವಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಡಿ.ಕೆ.ಸುರೇಶ್ ಈ ಹೇಳಿಕೆ ಕೊಡಲು ಮೂಲ ಕಾರಣ ಏನು? ಎನ್ನುವುದನ್ನು ದೇಶಕ್ಕೆ ತಿಳಿಸಲು ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಈ ಮೂಲಕ ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಮಡುಗಟ್ಟಿರುವ ಅಸಹನೆಯನ್ನು ದೇಶಕ್ಕೆ ತಿಳಿಸುವುದು ಅವರ ಉದ್ದೇಶವಾಗಿದೆ.

















