ಮುಸ್ಲಿಂ ವಿದ್ಯಾರ್ಥಿಗಳ ಪ್ರಾರ್ಥನೆಗೆ ಅನುಕೂಲವಾಗುವಂತೆ ಪರೀಕ್ಷೆ ನಿಗದಿ ಮಾಡಲಾಗಿದೆ ಎಂದಿದ್ದ ಸೂಲಿಬೆಲೆ ವಿರುದ್ಧ ಎನ್ಎಸ್ಯುಐ ದೂರು
ಶಿವಮೊಗ್ಗ: ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎನ್ಎಸ್ಯುಐ ಕಾರ್ಯಕರ್ತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಆರ್ಪಿಸಿ ಕಲಂ 157 ಅಡಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಸ್ಎಸ್ಎಲ್ಸಿ ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ವಿಷಯದಲ್ಲಿ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದು, ಫೆ.26 ರಿಂದ ಮಾರ್ಚ್ 2 ರವರೆಗೆ ಪರೀಕ್ಷೆ ನಡೆಯಲಿದೆ.
ಐದು ವಿಷಯಗಳು ಬೆಳಗ್ಗೆ 10.15ಕ್ಕೆ ಆರಂಭವಾದರೆ ಮಾರ್ಚ್ 1ರಂದು ವಿಜ್ಞಾನ ಪರೀಕ್ಷೆ ಮಾತ್ರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಶುಕ್ರವಾರ ಮಾತ್ರ ಮಧ್ಯಾಹ್ನದ ನಂತರ ಪರೀಕ್ಷೆ ನಡೆಸುತ್ತಿರುವುದು ಯಾಕೆ? ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿತ್ತು.
ಶುಕ್ರವಾರ ಮಾತ್ರ ಮಧ್ಯಾಹ್ನ ಪರೀಕ್ಷೆ ಯಾತಕ್ಕಾಗಿ ನಮಾಜ್ ಸಮಯಕ್ಕಾ? ಎಂದು ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಈ ಕಾರಣವನ್ನೇ ಇಟ್ಟುಕೊಂಡು ದೂರು ನೀಡಲಾಗಿದೆ. ಹೀಗಾಗಿ ಎನ್ಎಸ್ಯುಐ ಕಾರ್ಯಕರ್ತರು ಶಿವಮೊಗ್ಗದ ಜಯನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಎಫ್ ಐ ಆರ್ ದಾಖಲಾಗಿದೆ.
ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ನಡೆಯುತ್ತಿದೆ. ಮಾರ್ಚ್ 1ರಂದು ದ್ವಿತೀಯ ಪಿಯುಸಿ ಕನ್ನಡ, ಅರೇಬಿಕ್ ಪರೀಕ್ಷೆ ನಿಗದಿಯಾಗಿದ್ದು, ಮಾರ್ಚ್ 1ರ ಶುಕ್ರವಾರ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ ಮಾರ್ಚ್ 1ರಂದು ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ನಿಗದಿ ಮಾಡಲಾಗಿದೆ. ಮಾರ್ಚ್ 1ರ ಮಧ್ಯಾಹ್ನ 2 ಗಂಟೆಯಿಂದ ಎಸ್ಎಸ್ಎಲ್ಸಿ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ ಪರೀಕ್ಷೆ ನಿಗದಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಪರೀಕ್ಷಾ ಮಂಡಳಿ ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ. ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಬೆಳಗ್ಗೆಯೇ ನಡೆಯುತ್ತಿರುವ ಕಾರಣಕ್ಕೆ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಮಾಡಲಾಗಿದೆಯೇ ಹೊರತು, ಯಾವುದೇ ಒಂದು ನಿರ್ದಿಷ್ಟ ಧರ್ಮದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಅಲ್ಲ ಎಂದು ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.
ಅಲ್ಲದೆ, ಪರೀಕ್ಷೆ ವಿಷಯ ಇಟ್ಟುಕೊಂಡು ಕೋಮುದ್ವೇಷ ಹರಡುತ್ತಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ, ಸೂಲಿಬೆಲೆ ವಿರುದ್ಧ ಎಫ್ ಐಆರ್ ದಾಖಲು ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ತುಷ್ಠೀಕರಣವನ್ನೇ ಅತಿಯಾಗಿ ಮುಂದುವರಿಸಿದೆ ಎಂದು ಆರೋಪ ಮಾಡಿದೆ.