ಗಡಿ ಪಟ್ಟಣದಲ್ಲಿ ಇಡೀ ದಿನ ನಡೆಯಲಿದೆ ಕನ್ನಡ ಜಾತ್ರೆ
ಭರತ್ ಜಿ.ಎಸ್. ಗುಡಿಬಂಡೆ
ಗುಡಿಬಂಡೆ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ೬ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ.
ಬುಧವಾರ ಇಡೀ ದಿನ ಗುಡಿಬಂಡೆ ಪಟ್ಟಣದಲ್ಲಿ ಕನ್ನಡ ಸಂಭ್ರಮ ಮನೆ ಮಾಡಲಿದ್ದು, ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿದೆ.
ಹಿರಿಯ ಪತ್ರಕರ್ತ ಹಾಗೂ ಇತಿಹಾಸಕಾರ ಸ.ನ.ನಾಗೇಂದ್ರ ಅವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಬೆಳಗ್ಗೆಯಿಂದಲೇ ಸಮ್ಮೇಳನದ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ಟಿ.ಪಿ.ಕೈಲಾಸಂ ರಂಗಮಂದಿರಲ್ಲಿ ನಿರ್ಮಾಣವಾಗಿರುವ ಶ್ರೀ ಕೂರ್ಮಗಿರಿ ವೇದಿಕೆಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಯಪ್ಪ ತಿಳಿಸಿದ್ದಾರೆ.
ಬೆಳಗ್ಗೆ ೮ ಗಂಟೆಗೆ ಗುಡಿಬಂಡೆ ತಹಸೀಲ್ದಾರ್ ಮನೀಶ್ ಮಹೇಶ್ ಪತ್ರಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೈಲಾಂಜನೆಯ ಅವರು ನಾಡಧ್ವಜವನ್ನು ಹಾಗೂ ಪರಿಷತ್ ಅಧ್ಯಕ್ಷ ಸುಬ್ಬರಾಯಪ್ಪ ಅವರು ಸಾಹಿತ್ಯ ಪರಿಷತ್ ಧ್ವಜವನ್ನು ಆರೋಹಣ ಮಾಡುವರು.
ಬೆಳಗ್ಗೆ ೯ ಗಂಟೆಗೆ ಸಮ್ಮೇಳನ ಅಧ್ಯಕ್ಷರು ಹಾಗೂ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಪಟ್ಟಣದ ತಿರುಮಲ ನಗರದಿಂದ ಹೊರಡುವ ಈ ಮೆರವಣಿಗೆಯ ಕಲಾ ದಿಬ್ಬಣದ ನೇತೃತ್ವವನ್ನು ತಾಲೂಕಿನ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಅವರು ವಹಿಸುವರು.
ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಜಿ.ಎನ್.ಆದಿರೆಡ್ಡಿ, ತಾಲೂಕು ಬಿಜೆಪಿ ಅಧ್ಯಕ್ಷ ಗಂಗಿರೆಡ್ಡಿ, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಎನ್.ಮಂಜುನಾಥ ರೆಡ್ಡಿ, ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ಜಯರಾಮ ರೆಡ್ಡಿ ಅವರುಗಳು ಕಲಾ ಮೆರವಣಿಗೆಗೆ ಚಾಲನೆ ಕೊಡಲಿದ್ದಾರೆ.
ಬೆಳಗ್ಗೆ ೧೧ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸಾಹಿತ್ಯ ಸಮ್ಮೇಳನವನ್ಹು ಉದ್ಘಾಟನೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸ.ನ.ನಾಗೇಂದ್ರ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪರಿಷತ್ ಅಧ್ಯಕ್ಷ ಸುಬ್ಬರಾಯಪ್ಪ ಸೇರಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಭಾಗಿಯಾಗುವರು.
ಪ್ರವಾಸೋದ್ಯಮ ಗೋಷ್ಠಿ
ಅಪರಾಹ್ನ ೨ ಗಂಟೆಗೆ ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳು ಮತ್ತು ಸವಾಲುಗಳು ‘ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.
ಬಾಗೇಪಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಅಮೀರ್ ಖಾನ್ ಅವರು ಈ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಯೋಧರಾದ ಕಾರ್ಗಿಲ್ ಲಕ್ಷ್ಮೀನಾರಾಯಣ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೈಯ್ಯದ್ ರಫೀಕ್, ಅಭಿಯಂತರರಾದ ಎಸ್.ಎನ್.ಶ್ರೀನಾಥ್, ಸಾಮಾಜಿಕ ಹೋರಾಟಗಾರ ಜಿ.ವಿ.ಗಂಗಪ್ಪ, ಪತ್ರಕರ್ತರಾದ ನವೀನ್ ಕುಮಾರ್ ಮತ್ತು ಪಿ.ಕೆ.ಚನ್ನಕೃಷ್ಣ ಅವರು ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ ೩ ಗಂಟೆಗೆ ನಡೆಯಲಿರುವ ಕಿವಿಗೋಷ್ಠಿ ಅಧ್ಯಕ್ಷತೆಯನ್ನು ಕವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ಅವರು ವಹಿಸಲಿದ್ದಾರೆ. ಆರ್.ವೆಂಕಟರಾಮಯ್ಯ, ಫಯಾಜ್ ಖಾನ್, ಸಿದ್ದೇಶ್ ಬಂಡಿಮನೆ, ನಂಜರೆಡ್ಡಿ, ಸದಾಶಿವರೆಡ್ಡಿ, ರಫೀಕ್ ಗುಡಿಬಂಡೆ, ಆದಿನಾರಾಯಣಪ್ಪ, ವಾಹಿನಿ ಸುರೇಶ್, ಪ್ರಮೋದ್ ಮಠಪತಿ, ವಿ.ವೆಂಕಟೇಶ್, ದೂರವಾಣಿ ಗಂಗಾಧರ್, ಮಂಜುನಾಥ ಗಣಪತಿ ಹೆಗಡೆ, ವಿ.ಆದಿನಾರಾಯಣಪ್ಪ, ಜಿ.ವಿ.ಚಂದ್ರಶೇಖರ, ಮಂಜು, ಡಿ.ಆರ್.ಅನಿತಾ, ರೋಹಿಣಿ ಮಲ್ಲಿ ಭಾಗವತ್, ಪುನೀತ್ ಕನ್ನಡಿಗ, ಲಕ್ಷ್ಮೀನರಸಮ್ಮ, ವಿ.ರಾಜಶೇಖರ್, ಸನಾವುಲ್ಲಾ ಸೇರಿ ಒಟ್ಟು ೨೧ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಸಂಜೆ ೪ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಭಾಗಿಯಾಗಲಿದ್ದು, ಬಾಹ್ಯಾಕಾಶ ವಿಜ್ಞಾನಿ ಗುರ್ರಪ್ಪ ಸೇರಿದಂತೆ ತಾಲೂಕಿನ ಒಟ್ಟು ೨೫ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.
ಸಾಹಿತ್ಯ ಸಮ್ಮೇಳನದಲ್ಲಿ ಇಡೀ ತಾಲೂಕಿನ ಜನರು ಭಾಗಿಯಾಗಬೇಕು. ಗಡಿ ಪಟ್ಟಣದ ಕನ್ನಡ ಸಂಭ್ರಮದಲ್ಲಿ ಸರ್ವರೂ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು. ಈಗಾಗಲೇ ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬುಧವಾರ ಇಡೀ ದಿನ ಗುಡಿಬಂಡೆ ಪಟ್ಟಣ ಕಂಗೊಳಿಸಲಿದೆ.
ಸುಬ್ಬರಾಯಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷರು, ಗುಡಿಬಂಡೆ
Comments 1