ಅನರ್ಹರಿಗೆ ಮಣೆ; ಸ್ವಜನರಿಗೆ ರತ್ನಗಂಬಳಿ ಹಾಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನರ್ಹರನ್ನು ತಂದು ಕೂರಿಸುವ ರಾಜ್ಯ ಸರಕಾರದ ಪರಿಪಾಠಕ್ಕೆ ರಾಜ್ಯ ಹೈಕೋರ್ಟ್ ಪದೇಪದೆ ಚಾಟಿ ಬೀಸಿದ ನಂತರವೂ ಎಮ್ಮೆ ಚರ್ಮದ ಆಡಳಿತಗಾರರು ಪುನಾ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ.
ಪರಿಸರಕ್ಕೆ ಸಂಬಂಧಪಟ್ಟ ಯಾವುದೇ ಸಮಿತಿಗೆ ಅರ್ಹರು, ಸೇವಾನಿಷ್ಠೆ ಹೊಂದಿರುವವರು, ಅದರಲ್ಲೂ ವಿಷಯತಜ್ಞರನ್ನೇ ನೇಮಕ ಮಾಡಬೇಕು ಎಂದು ನಿಯಮವಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಹಿಂದಿನ ಬಿಜೆಪಿ ಸರಕಾರದ ಹಾದಿಯನ್ನೇ ತುಳಿದು ಅನರ್ಹರು ಹಾಗೂ ಸ್ವಜನರಿಗೆ ರತ್ನಗಂಬಳಿ ಹಾಸಿದೆ. ಈ ನೇಮಕಾತಿಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿಯೇ ರಾಜಕೀಯ ಬಿರುಗಾಳಿ ಸೃಷ್ಟಿಸಿವೆ.
ನಿಯಮಗಳನ್ನು ಗಾಳಿಗೆ ಬಿಟ್ಟ ಸರಕಾರ!
ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ (State Environmental Impact Assessment Authority -SEIAA) ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿ (State Expert Appraisal Committee -SEAC) ಗಳ ನೇಮಕಾತಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿದೆ ಹಾಗೂ ಸ್ವಜನ ಪಕ್ಷಪಾತಕ್ಕೆ ರತ್ನಗಂಬಳಿ ಹಾಸಿರುವ ಅಂಶವು ದಾಖಲೆಗಳ ಸಮೇತ ಬಹಿರಂಗವಾಗಿದೆ. ಈ ದಾಖಲೆಗಳು ಸಿಕೆನ್ಯೂಸ್ ನೌ ಗೆ ಲಭ್ಯವಾಗಿವೆ.
ಪರಿಸರ ಸಂರಕ್ಷಣೆಗೆ ಸಂಬಂಧಿಸಿ ಈ ಎರಡೂ ಸಮಿತಿಗಳು ಮಹತ್ವದ್ದಾಗಿವೆ. ಕಳೆದ ಮೂರು ತಿಂಗಳಿಂದ ಇವುಗಳಿಗೆ ಸದಸ್ಯರ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಆದರೆ, ರಾಜಕೀಯ ಮತ್ತು ಸ್ವಜನಪಕ್ಷಪಾತದ ಒತ್ತಡದ ಹಿನ್ನೆಲೆಯಲ್ಲಿ ಎರಡೂ ಸಮಿತಿಗಳ ಸದಸ್ಯ ಸ್ಥಾನಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿರುವ ಬಹುತೇಕ ಹೆಸರುಗಳನ್ನು ಕೇಂದ್ರ ಸರಕಾರ ನೇರವಾಗಿ ತಿರಸ್ಕಾರ ಮಾಡಿದೆ.
ತಿರಸ್ಕೃತಕ್ಕೆ ಕಾರಣ; ಸಿದ್ದರಾಮಯ್ಯ ಅವರ ಸರಕಾರದಿಂದ ಶಿಫಾರಸು ಮಾಡಲ್ಪಟ್ಟಿರುವ ಬಹುತೇಕರಿಗೆ SEIAA, SEAC ಗಳಿಗೆ ನೇಮಕಗೊಳ್ಳುವ ಅರ್ಹತೆಯೇ ಇಲ್ಲ! ಅಂದರೆ; ರಾಜ್ಯ ಸರಕಾರ ಅನರ್ಹರನ್ನೇ ಶಿಫಾರಸು ಮಾಡಿದೆ!!
ಪರಿಸರ ಸಚಿವಾಲಯ ಸೈಡ್‌ಲೈನ್!!
ರಾಜ್ಯ ಸರಕಾರ ಶಿಫಾರಸು ಮಾಡಿರುವ ವ್ಯಕ್ತಿಗಳ ಹೆಸರುಗಳು ಭಾರೀ ಅಚ್ಚರಿಗೆ ಕಾರಣವಾಗಿವೆ. ಅಲ್ಲದೆ, ಈ ಹೆಸರುಗಳ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿಯೂ ತೀವ್ರ ಅಸಮಾಧಾನವಿದೆ. ರಾಜ್ಯ ಅರಣ್ಯ ಮತ್ತು ಪರಿಸರ ಸಚಿವಾಲಯವನ್ನೇ (ಸಚಿವ ಈಶ್ವರ ಖಂಡ್ರೆ) ಸೈಡ್ ಲೈನ್ ಮಾಡಿ ಮುಖ್ಯಮಂತ್ರಿಗಳ ಕಾರ್ಯಾಲಯವೇ ಈ ಹೆಸರುಗಳಲ್ಲಿ ಅಂತಿಮಗೊಳಿಸಿ ಕೇಂದ್ರಕ್ಕೆ ಕಳಿಸಿದೆ ಎಂಬ ಅಂಶ ಉನ್ನತ ಮೂಲಗಳಿಂದ ಸಿಕೆನ್ಯೂಸ್ ನೌ ಗೆ ಗೊತ್ತಾಗಿದೆ.
ಶಿಫಾರಸುಗೊಂಡವರಿಗೆ ಅರ್ಹತೆ, ವಿದ್ಯಾರ್ಹತೆಯೇ ಇಲ್ಲ!
ಕಳೆದ 2023 ಡಿಸೆಂಬರ್ 27ರಂದು ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ಸಿದ್ದರಾಮಯ್ಯ ಅವರ ಸರಕಾರದಿಂದ ಶಿಫಾರಸು ಮಾಡಲ್ಪಟ್ಟ ಪಟ್ಟಿಯಲ್ಲಿ ಆರು ಜನರ ಹೆಸರುಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಅದಕ್ಕೆ ಪೂರಕವಾಗಿ ಅನರ್ಹತೆ ಕಾರಣವನ್ನೂ ಸ್ಪಷ್ಟವಾಗಿ ನಮೂದಿಸಿತ್ತು. ಈ ಪೈಕಿ ಶಿಫಾರಸುಗೊಂಡ ಇತರೆ ಏಳು ಸದಸ್ಯರು ಅರ್ಹತೆಯ ಮಾನದಂಡಕ್ಕೆ ಸರಿ ಹೊಂದುತ್ತಾರೆ ಎಂದೂ ತಿಳಿಸಿದೆ.
2023 ಡಿಸೆಂಬರ್ 27 ರಂದು ಕೇಂದ್ರ ಸರಕಾರ ಬರೆದಿರುವ ಪತ್ರ
ನಂತರ, ಅಂದರೆ; 2024 ಫೆಬ್ರವರಿ 9ರಂದು ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ಸಿದ್ದರಾಮಯ್ಯ ಅವರ ಸರಕಾರ ಎರಡೂ ಸಮಿತಿಗಳಿಗೆ ಶಿಫಾರಸು ಮಾಡಿದ್ದ ಇತರೆ ಆರು ಮಂದಿ ಹೆಸರುಗಳನ್ನೂ ತಿರಸ್ಕರಿಸಿತ್ತು. ಕೇಂದ್ರ ಸರಕಾರವು ಶಿಫಾರಸುಗೊಂಡಿದ್ದ ವ್ಯಕ್ತಿಗಳ ವಿದ್ಯಾರ್ಹತೆ, ಅರ್ಹತೆ ಮಾನದಂಡ ಇತ್ಯಾದಿಗಳ ಬಗ್ಗೆ ತೀವ್ರ ಪರಿಶೀಲನೆ ನಡೆಸಿತ್ತು. ಆ ಪೈಕಿ ಕೆಲವರ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳು (FIR) ಬಾಕಿ ಇದ್ದವು ಹಾಗೂ ಕೆಲವರ ಸೇವಾ ದಾಖಲೆಗಳು ತೃಪ್ತಿಕರವಾಗಿರಲಿಲ್ಲ, ಬಹಳಷ್ಟು ನಕಾರಾತ್ಮಕ ಅಂಶಗಳು ಅದರಲ್ಲಿ ನಮೂದಾಗಿದ್ದವು. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಪಟ್ಟಿಯನ್ನು ತಿರಸ್ಕಾರ ಮಾಡಿತ್ತು.
2024 ಫೆಬ್ರವರಿ 9 ರಂದು ಕೇಂದ್ರ ಸರಕಾರ ಬರೆದಿರುವ ಪತ್ರ
ವಿಚಿತ್ರವೆಂದರೆ; ಗಂಭೀರ ಕಾರಣಗಳನ್ನು ನೀಡಿ ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ತಿರಸ್ಕರಿಸಿದ್ದ ಹೆಸರುಗಳನ್ನೇ ರಾಜ್ಯ ಸರಕಾರ ಮತ್ತೆ ಶಿಫಾರಸು ಮಾಡಿದೆ! ಇದು ಎಲ್ಲರ ಹುಬ್ಬೆರಿಸಿದೆ ಹಾಗೂ ನಾನಾ ಅನುಮಾನಗಳಿಗೆ ಕಾರಣವಾಗಿದೆ.
ತಿರಸ್ಕರಿಸಲು ಕಾರಣ ಕೊಟ್ಟಿರುವ ಕೇಂದ್ರ ಸರಕಾರವು, ಅದಕ್ಕೆ ಪೂಚರಕವಾದ ಎಲ್ಲಾ ದಾಖಲೆಗಳನ್ನು ರಾಜ್ಯ ಸರಕಾರಕ್ಕೆ ಕಳಿಸಿದೆ. ಸಾಹಿತಿಯೊಬ್ಬರ ಪುತ್ರಿಯೂ ಹೀಗೆ ತಿರಸ್ಕೃತಗೊಂಡ ಪಟ್ಟಿಯಲ್ಲಿ ಇರುವುದು ಗಮನಾರ್ಹ.
ಲೋಕಾಯುಕ್ತ ತನಿಖೆ ಬಾಕಿ
ಮುಖ್ಯಮಂತ್ರಿ ಕಚೇರಿಯಿಂದ ಶಿಫಾರಸುಗೊಂಡಿರುವ ಮುಖ್ಯ ಎಂಜಿನೀಯರ್ ಒಬ್ಬರ ಮೇಲೆ ಲೋಕಾಯುಕ್ತದಲ್ಲಿ ತನಿಖೆ ಬಾಕಿ ಇದೆ. ಉಳಿದ ಮೂವರು ಕಾಂಗ್ರೆಸ್ ಪಕ್ಷದ ಸಕ್ರಿಯ ಪೂರ್ಣಾವಧಿ ಕಾರ್ಯಕರ್ತರು, ಇವರು ಪ್ರಾಧಿಕಾರ ಮತ್ತು ಸಮಿತಿಗೆ ನೇಮಕವಾಗುವ ಯಾವುದೇ ಮಾನದಂಡ ಹೊಂದಿಲ್ಲ ಹಾಗೂ ಮಾನದಂಡಕ್ಕೆ ಅನುಗುಣವಾಗಿ ಅವರು ವಿದ್ಯಾರ್ಹತೆ, ಅನುಭವ ಹೊಂದಿರುವುದಿಲ್ಲ. ಇನ್ನು ಮೂವರು ಹೆಸರುಗಳನ್ನು, ದೊಡ್ಡ ಗಣಿಗಾರಿಕೆ ಕಂಪನಿಗಳ ಜತೆ ಸಂಬಂಧ ಹೊಂದಿರುವ ಕಾರಣಕ್ಕೆ ರಿಜೆಕ್ಟ್ ಮಾಡಲಾಗಿದೆ. ಉಳಿದವರಲ್ಲಿ ಒಬ್ಬರು ವೈದ್ಯರು! ಪರಿಸರಕ್ಕೂ ಅವರಿಗೂ ಸಂಬಂಧವೇ ಇಲ್ಲ. MSW ಹಾಗೂ ಎಂಜಿನೀಯರಿಂಗ್ ಪದವೀಧರರನ್ನು ನೇಮಕಕ್ಕೆ ಪರಿಗಣಿಸುವ ಮಾನದಂಡ ಇಲ್ಲ, ಅವರು ಅರ್ಹ ಮಾನದಂಡ ಹೊಂದಿರುವುದಿಲ್ಲ.
ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿಯೂ ಇಂಥದ್ದೇ ಅನರ್ಹರಿಗೆ ಮಣೆ ಹಾಕುವ ಪ್ರಯತ್ನ ಆಗಿತ್ತು. ಆದರೆ, ಅಲ್ಲಿಯೂ ಅನರ್ಹತೆ ಕಾರಣಕ್ಕೆ ಕಾರಣಕ್ಕೆ ಶಿಪಾರಸುಗೊಂಡಿದ್ದ ವ್ಯಕ್ತಿಗಳು ನಾಮ ನಿರ್ದೇಶನ ಆಗಿರಲಿಲ್ಲ.
ಗುರುತರ ಹೊಣೆಗಾರಿಕೆ, ಪರಿಸರ ಸಂರಕ್ಷಣೆ ಹೊಣೆ
ರಾಜ್ಯ ಅರಣ್ಯ, ಪರಿಸರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅವರು SEIAA ಮತ್ತು SEAC ಅಧ್ಯಕ್ಷ, ಸದಸ್ಯರ ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದರು. ಇವೆರಡೂ ಸಮಿತಿಗಳು ಗುರುತರ ಹೊಣೆಗಾರಿಕೆ ಹೊಂದಿದವುಗಳಾಗಿದ್ದು, ಪರಿಸರಾತ್ಮಕ ಒಪ್ಪಿಗೆ ನೀಡುವ, ಪರಿಸರದ ಮೇಲೆ ಬೀರುವ ಪರಿಣಾಮ ಇನ್ನಿತರೆ ಮಹತ್ವದ ಅಂಶಗಳನ್ನು ಅಧ್ಯಯನ ಮಾಡುವ ಅಧಿಕಾರ ಹೊಂದಿರುತ್ತವೆ. ಹೀಗಾಗಿ ಈ ಎರಡೂ ಸಮಿತಿಗಳಿಗೆ ನಾಮನಿರ್ದೇಶನಗೊಳ್ಳು ವ್ಯಕ್ತಿಗಳು 1986ರ ಅರಣು, ಪರಿಸರ ಸಂರಕ್ಷಣಾ ಕಾಯ್ದೆಯನ್ವಯ ನಿರ್ದಿಷ್ಟ ಮಾನದಂಡಗಳನ್ನು ಹೊಂದಿರಲೇಬೇಕಾಗುತ್ತದೆ. ಬಿ ವರ್ಗದ ಯೋಜನೆಗಳಿಗೆ ಪರಿಸರಾತ್ಮಕ ಅನುಮೋದನೆಯನ್ನು SEACನಿಂದಲೇ ರಾಜ್ಯ ಮಟ್ಟದಲ್ಲಿ ನೀಡಬೇಕಾಗಿದೆ.
ನೇಮಕಾತಿ ಅಧಿಸೂಚನೆಯ ಪ್ರಕಾರ, ಪರಿಸರ ಗುಣಮಟ್ಟ, ಪರಿಸರ ಪ್ರಭಾವ ಮೌಲ್ಯಮಾಪನ ಪ್ರಕ್ರಿಯೆ, ಅಪಾಯದ ಮೌಲ್ಯಮಾಪನ, ಜೀವ ವಿಜ್ಞಾನ ಮತ್ತು ಮುಂತಾದ ವಿಭಾಗಗಳಲ್ಲಿ ಪರಿಣಿತರಾಗಿರಬೇಕು. ಅಂಥ ವ್ಯಕ್ತಿಗಳನ್ನೇ ಈ ಸಮಿತಿಗಳಿಗೆ ಪರಿಗಣಿಸಬೇಕು. Ph.D ಪದವಿ ಹೊಂದಿಲ್ಲದವರಿಗೆ 15 ವರ್ಷಗಳ ಸುದೀರ್ಘ ಅನುಭವ ಮತ್ತು Ph.D ಪದವಿ ಹೊಂದಿರುವವರಿಗೆ 10 ವರ್ಷಗಳ ಅನುಭವ ಕಡ್ಡಾಯವಾಗಿರುತ್ತದೆ. ಆದರೆ, ಕೇಂದ್ರ ಸರಕಾರದಿಂದ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳೆಲ್ಲರೂ ಈ ಅರ್ಹತೆ, ಮಾನದಂಡಕ್ಕೆ ಸರಿ ಹೊಂದುವುದಿಲ್ಲ ಎನ್ನಲಾಗಿದೆ.