ಬಣ್ಣಬಣ್ಣ ಜಾಹೀರಾತುಗಳು ಹೇಸಿಗೆ ತರಿಸುತ್ತಿವೆ ಎಂದ ಕುಮಾರಸ್ವಾಮಿ; ನಿಗೂಢ ಕಂಪನಿಗಳಿಗೆ ಹಣ ಕೊಟ್ಟಿದ್ದು ಯಾಕೆಂದು ಪ್ರಶ್ನಿಸಿದ ಬಿಜೆಪಿಯ ಎನ್.ರವಿಕುಮಾರ್
ಬೆಂಗಳೂರು: ಪೂರಕ ಅಂದಾಜಿನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳ ಭರ್ಜರಿ ಪ್ರಚಾರಕ್ಕೆ ₹200 ಕೋಟಿ ಒದಗಿಸಿರುವ ಸಿದ್ದರಾಮಯ್ಯ ಸರಕಾರದ ಕ್ರಮ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನಸಭೆ ಒಪ್ಪಿಗೆ ನೀಡಿರುವ ₹4,078.85 ಕೋಟಿ ಪೂರಕ ಅಂದಾಜಿನಲ್ಲಿ ಪ್ರಚಾರಕ್ಕೆ ₹200 ಕೋಟಿ ಕೊಟ್ಟಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾ ಪ್ರಚಾರ, ವಾಟ್ಸಾಪ್ ಪ್ರಚಾರ ಹಾಗೂ ಗ್ಯಾರಂಟಿಗಳ ಸಮೀಕ್ಷೆ ಎಂದೆಲ್ಲಾ ಕಾರಣಗಳನ್ನು ಕೊಟ್ಟು ಜನರ ತೆರಿಗೆ ಹಣವನ್ನು ಕೋಟಿ ಕೋಟಿ ಲೂಟಿ ಮಾಡುತ್ತಿರುವ ಬಗ್ಗೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಪ್ರಶ್ನೆ ಮಾಡಿದ್ದ ಬೆನ್ನಲ್ಲಿಯೇ ಭೀಕರ ಬರವನ್ನೂ ಕಡೆಗಣಿಸಿದ ಸರಕಾರವು ಅನಾಮತ್ತಾಗಿ ₹200 ಕೋಟಿಯನ್ನು ಪ್ರಚಾರಕ್ಕೆ ತೆಗೆದಿಟ್ಟಿದೆ!! ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಮೊದಲ ಪೂರಕ ಅಂದಾಜು ಮಂಡಿದ್ದ ಸರಕಾರವು, ನಂತರ ಪ್ರಸಕ್ತ ಅಧಿವೇಶನದಲ್ಲಿ ಎರಡನೇ ಪೂರಕ ಅಂದಾಜು ಮಂಡಿಸಿದೆ. ರಾಜ್ಯದಲ್ಲಿ ಹಿಂದೆಂದೂ ಕಾಣದಿದ್ದ ಭೀಕರ ಬರ ಉಂಟಾಗಿದ್ದರೂ ಸಿದ್ದರಾಮಯ್ಯ ಸರಕಾರ ಬರೀ ಪ್ರಚಾರಕ್ಕೆ ಕೋಟಿ ಕೋಟಿ ವೆಚ್ಚ ಮಾಡುತ್ತಿರುವುದು ಎರಡೂ ಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ.
ಬಣ್ಣಬಣ್ಣ ಜಾಹೀರಾತುಗಳು ಹೇಸಿಗೆ ತರಿಸುತ್ತಿವೆ ಎಂದ ಕುಮಾರಸ್ವಾಮಿ
ಸಿದ್ದರಾಮಯ್ಯ ಸರಕಾರ ಪ್ರಚಾರಕ್ಕಾಗಿಯೇ ಪ್ರಚಾರಕ್ಕೆ ಪೂರಕ ಅಂದಾಜಿನಲ್ಲಿ ₹200 ಕೋಟಿಗೆ ಒಪ್ಪಿಗೆ ಪಡೆದಿರುವುದು ನಾಚಿಕೆಗೇಡಿನ ಸಂಗತಿ. ಇದು ಅಸಹ್ಯ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೋಲಾರದಲ್ಲಿ ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
₹4,078.85 ಕೋಟಿ ಪೂರಕ ಅಂದಾಜು ಮಂಡನೆ ಮಾಡಲಾಗಿದೆ. ಅದರಲ್ಲಿ ಸರಕಾರದ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೇ ₹200 ಕೋಟಿ ಒದಗಿಸಲಾಗಿದೆ. ಬರದಿಂದ ತತ್ತರಿಸಿರುವ ರೈತರಿಗೆ ಈ ಸರಕಾರ ₹2,000 ಪರಿಹಾರ ಘೋಷಣೆ ಮಾಡಿದೆ. ಅದಕ್ಕೆ ₹620 ಕೋಟಿ ತೆಗೆದಿತ್ತಿದ್ದಾರೆ. ಈ ₹620 ಕೋಟಿಯಲ್ಲಿ 75% ಕೇಂದ್ರ ಸರಕಾರದ್ದು. ಉಳಿದ 25% ರಾಜ್ಯ ಸರಕಾರದ್ದು. ಇಂಥ ದುರಿತ ಕಾಲದಲ್ಲಿಯೂ ದಿನನಿತ್ಯ ಸರ್ಕಾರದ ಜಾಹೀರಾತುಗಳನ್ನು ನೋಡಿದರೆ ಹೇಸಿಗೆ ಆಗುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಪ್ರತಿ ದಿನವೂ ಬಣ್ಣ ಬಣ್ಣದ ಚಿತ್ರಗಳನ್ನು ಹಾಕಿಕೊಂಡು ಸರಕಾರ ನೀಡುತ್ತಿರುವ ಜಾಹೀರಾತುಗಳು, ಅದಕ್ಕೆ ಮಾಡುತ್ತಿರುವ ದುಂದುವೆಚ್ಚ ಆಘಾತಕಾರಿ. ಜನರಿಗೆ ಕುಡಿಯಲು ನೀರಿಲ್ಲ, ದನಗಳಿಗೆ ಮೇವು ಇಲ್ಲ. ಆದರೂ ಇವರು ಜಾಹೀರಾತುಗಳಿಗೆ ಪೂರಕ ಅಂದಾಜಿನಲ್ಲಿ ₹200 ಕೋಟಿ ತೆಗೆದುಕೊಂಡಿದ್ದಾರೆ.
ಯಾರಪ್ಪನ ದುಡ್ಡು ಇದು?
ಕಾಂಗ್ರೆಸ್ ನವರು ಕೇಳ್ತಾರಲ್ಲ, ಯಾರಪ್ಪನ ದುಡ್ಡು ಎಂದು. ಈಗ ಅವರನ್ನು ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಯಾರಪ್ಪನ ದುಡ್ಡಿನಲ್ಲಿ ಬಣ್ಣಬಣ್ಣದ ಜಾಹೀರಾತು ಕೊಟ್ಟುಕೊಂಡು ಜನರ ದುಡ್ಡು ಪೋಲು ಮಾಡ್ತಾ ಇದ್ದೀರಲ್ಲ? ಇದು ನಿಮ್ಮಪ್ಪನ ಮನೆಯ ದುಡ್ಡಾ? ರಾಜ್ಯದ ಜನರು ಕಟ್ಟಿರುವ ತೆರಿಗೆ ಹಣ ಅದು. ನಾನು ರಾಜ್ಯದ ರೈತರಿಗೆ 25,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಅದನ್ನು ದಿನವೂ ಬಣ್ಣಬಣ್ಣದ ಜಾಹೀರಾತು ಕೊಟ್ಟುಕೊಂಡು ಜನರ ಹಣ ಪೋಲು ಮಾಡಲಿಲ್ಲ ನಾನು ಎಂದು ಕುಮಾರಸ್ವಾಮಿ ಅವರು ಗುಡುಗಿದ್ದಾರೆ.
ಇವರು ಬರೀ ಗ್ಯಾರಂಟಿಗಳನ್ನು ಕನವರಿಕೆ ಮಾಡಿಕೊಂಡು ರಾಜ್ಯದ ಅಭಿವೃದ್ಧಿಯನ್ನು ಗಾಳಿಗೆ ಬಿಟ್ಟಿದ್ದಾರೆ. ಇವರಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ. ಒಂದು ಕಡೆ ಅಭಿವೃದ್ಧಿ ಕುಂಠಿತವಾಗಿದೆ, ಇನ್ನೊಂದೆಡೆ ಖಜಾನೆ ಖಾಲಿ ಆಗುತ್ತಿದೆ, ಮತ್ತೊಂದೆಡೆ ಅದೇ ಜನರ ಮೇಲೆ ತೆರಿಗೆಗಳನ್ನು ಹೇರಿ ಅವರ ರಕ್ತ ಹಿಂಡುತ್ತಿರುವುದು ನಡೆಯುತ್ತಿದೆ.
ಮಹಿಳೆಯರಿಗೆ ಇನ್ನೂ 2,000 ರೂಪಾಯಿ ಕೊಡಿ, ನಾನು ಬೇಡ ಅನ್ನಲ್ಲ. ಈ ಕಡೆ ಗ್ಯಾರಂಟಿ ಅಂತೀರಿ, ಆ ಕಡೆ ತೆರಿಗೆ ಹಾಕುತ್ತೀರಿ. ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಐದು ಪಟ್ಟು ಏರಿಸಿದ್ದೀರಿ. ಅಬ್ಕಾರಿ ಸೇರಿ ಬೇರೆ ಬೇರೆ ಕಡೆ 28ರಿಂದ 30% ತೆರಿಗೆ ಹೆಚ್ಚಳ ಮಾಡಿದ್ದೀರಿ. ಈ ಪರಿ ಜನರ ರಕ್ತ ಹೀರಿ, ಮತ್ತೆ ಯಾವ ರೀತಿಯಲಿ ಅವರ ಬದುಕಿಗೆ ಗ್ಯಾರಂಟಿ ಕೊಡುತ್ತೀರಿ? ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನಿಸಿದ್ದಾರೆ.
ಕೆಲ ಬೇನಾಮಿ ಕಂಪನಿಗಳು ಸಮೀಕ್ಷೆ ಮಾಡುತ್ತೇವೆ, ಪ್ರಚಾರ ನೀಡುತ್ತೇವೆ ಎಂದು ಸರಕಾರದಿಂದ ಕೋಟಿ ಕೋಟಿ ಲೂಟಿ ಹೊಡೆಯುತ್ತಿವೆ ಎಂದು ಆರೋಪ ಮಾಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು; ದ ಪಾಲಸಿ ಪ್ರಂಟ್ ಎನ್ನುವ ನಿಗೂಢ ಕಂಪನಿಯ ಬಗ್ಗೆ ಕಲಾಪದಲ್ಲಿ ದನಿ ಎತ್ತಿದ್ದರು.
ದ ಪಾಲಸಿ ಪ್ರಂಟ್ ಎನ್ನುವ ನಿಗೂಢ ಕಂಪನಿಗೆ ಸರಕಾರದಿಂದ ₹50 ಕೋಟಿಗಳನ್ನು ಯಾತಕ್ಕಾಗಿ ನೀಡಲಾಗಿದೆ. ಆ ಕಂಪನಿ ಸರಕಾರಕ್ಕೆ ಯಾವ ರೀತಿಯ ಸೇವೆ ಒದಗಿಸುತ್ತದೆ ಎಂಬ ಬಗ್ಗೆ ವಿವರ ನೀಡಿ ಎಂದು ರವಿಕುಮಾರ್ ಅವರು ಸರಕಾರವನ್ನು ಪ್ರಶ್ನೆ ಮಾಡಿದ್ದರು.
ಅಲ್ಲದೆ; ದ ಪಾಲಸಿ ಪ್ರಂಟ್ ಎನ್ನುವ ನಿಗೂಢ ಕಂಪನಿಯ ವಿಳಾಸ ಎಲ್ಲಿದೆ? ಅದರ ಮಾಲೀಕರು, ನಿರ್ದೇಶಕರು ಯಾರು? ಅದು ಎಲ್ಲಿ ಆರಂಭವಾಯಿತು? ಅದರ ಮೂಲ ಬಂಡವಾಳ ಎಷ್ಟು? ಈ ಬಗ್ಗೆ ಸಮಗ್ರ ದಾಖಲೆಗಳನ್ನು ನೀಡಿ ಎಂದು ಅವರು ಕೇಳಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸಂಬಂಧಪಟ್ಟ ಯಾವ ದಾಖಲೆಯನ್ನು ಒದಗಿಸಿಲ್ಲ ಎನ್ನುವುದು ಗೊತ್ತಾಗಿದೆ.
ಈ ರೀತಿಯ ಬೇನಾಮಿ ಮತ್ತು ನಿಗೂಢ ಕಂಪನಿಗಳಿಗೆ ಪ್ರಚಾರದ ಗುತ್ತಿಗೆ ನೀಡಿ ಕೋಟಿ ಕೋಟಿ ಕೊಳ್ಳೆ ಹೊಡೆಯಲು ಪೂರಕ ಅಂದಾಜಿನಲ್ಲಿ ₹200 ಕೋಟಿ ತೆಗೆದಿರಿಸಲಾಗಿದೆಯಾ? ಎನ್ನುವ ಪ್ರಶ್ನೆ ವ್ಯಾಪಕವಾಗಿ ಕಾಡುತ್ತಿದೆ. ಕುಮಾರಸ್ವಾಮಿ ಮತ್ತು ರವಿಕುಮಾರ್ ಅವರು ಎತ್ತಿರುವ ಪ್ರಶ್ನೆಗಳು ಸರಕಾರದ ಸಂಶಯಾಸ್ಪದ ನಡೆಯನ್ನು ಎತ್ತಿ ತೋರಿಸುವಂತೆ ಇದೆ.