ಆತ್ಮಸಾಕ್ಷಿ @ ಅಡ್ಡಮತದ ಜನಕ ಕಾಂಗ್ರೆಸ್!; ಈ ಅಡ್ಡ ಕಸುಬಿಗೆ ಇದೆ 55 ವರ್ಷಗಳ ಇತಿಹಾಸ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ ಬೆನ್ನಲ್ಲಿಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 55 ವರ್ಷಗಳ ಹಿಂದೆ ನೀಲಂ ಸಂಜೀವರೆಡ್ಡಿ ಅವರಿಗೆ ಆತ್ಮಸಾಕ್ಷಿ ಮತದ ಹೆಸರಿನಲ್ಲಿ ಎಸಗಿದ ವಂಚನೆಯನ್ನು ಮುನ್ನೆಲೆಗೆ ತಂದಿದ್ದಾರೆ.
ಈ ಮೂಲಕ ಕೈ ಪಕ್ಷಕ್ಕೆ ಗತಕಾಲದ ನೆನಪುಗಳನ್ನು ಮತ್ತೆ ಮತ್ತೆ ನೆನಪಾಗುವಂತೆ ಮಾಡಿ ಕುಟುಕುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಚುನಾವಣೆ ವ್ಯವಸ್ಥೆಯಲ್ಲಿ ಅಡ್ಡ ಮತದಾನಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಎಂದು ಟೀಕಾಪ್ರಹಾರ ನಡೆಸಿರುವ ಅವರು; ದೇಶ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ದೊಡ್ಡ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಮಾಡಿಸಿದ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು; ಆತ್ಮಸಾಕ್ಷಿ ಮತದಿಂದ ಅಲ್ಲ, ಅಡ್ಡ ಮತದಾನದಿಂದ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಎಂದೆಲ್ಲ ಭಜನೆ ಮಾಡುವ ಪಕ್ಷ ಮಾಡುವ ಕೆಲಸವೇ ಎಂದು ಕೇಳಿದ್ದಾರೆ.
ಆತ್ಮಸಾಕ್ಷಿ ಮತ ಎಂದರೆ ಅಡ್ಡಮತ
ಆತ್ಮಸಾಕ್ಷಿ ಮತ ಎನ್ನುವ ಪದವನ್ನು ದೇಶದಲ್ಲಿ ಮೊದಲು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಆತ್ಮಸಾಕ್ಷಿ ಮತ ಎಂದರೆ ಅಡ್ಡಮತ ಎಂದೇ ಅರ್ಥ. 1969ರಲ್ಲಿ ಅಂದಿನ ಪ್ರಧಾನಿಗಳಾದ ಇಂದಿರಾಗಾಂಧಿ ಅವರು ತಮ್ಮ ಕೈಗೊಂಬೆ ರಾಷ್ಟ್ರಪತಿ ಬೇಕೆಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ಅವರ ವಿರುದ್ಧ ವಿ.ವಿ.ಗಿರಿ ಅವರನ್ನು ಕಣಕ್ಕೆ ಇಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಂದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ಅವರು ಆತ್ಮಸಾಕ್ಷಿ ಅಲಿಯಾಸ್ ಅಡ್ಡಮತಗಳಿಂದ ಸೋತರು. ಅಡ್ಡಮತ ಪರಿಕಲ್ಪನೆಯ ಜನಕನೇ ಕಾಂಗ್ರೆಸ್ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಏನಿದು ನೀಲಂ ಸಂಜೀವರೆಡ್ಡಿ ಪ್ರಕರಣ?
ಅದು 1969ನೇ ಇಸವಿ. ಅಂದಿನ ಭಾರತದ ರಾಷ್ಟ್ರಪತಿ ಡಾ.ಜಾಕೀರ್ ಹುಸೇನ್ ಅವರ ನಿಧನದ ನಂತರ ನೀಲಂ ಸಂಜೀವರೆಡ್ಡಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಪಕ್ಷದ ಅಭ್ಯರ್ಥಿಯಾಗಿ ಸಂವಿಧಾನದ ಅತ್ಯುನ್ನತ ಹುದ್ದೆಗೆ ಸ್ಪರ್ಧಿಸುವಾಗ, ಸದ್ಯ ಇರುವ ಹುದ್ದೆಯ ಲಾಭ ಪಡೆಯಬಾರದೆಂಬ ನೈತಿಕ ನಿಲುವಿನಿಂದ ಅವರು ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆಗೆ ಮೊದಲೇ ರಾಜೀನಾಮೆ ನೀಡಿದ್ದರು. ಆದರೆ; ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿ ಬೇಕಾಗಿತ್ತು ಎನ್ನುವ ಕಾರಣಕ್ಕೆ ನೀಲಂ ಸಂಜೀವರೆಡ್ಡಿ ಪಕ್ಷದ ಅಧಿಕೃತ ಅಭ್ಯರ್ಥಿ ಆಗಿದ್ದರೂ ಇಂದಿರಾ ಗಾಂಧಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕುವಂತೆ ಕೇಳುವ ಬದಲು ತಮ್ಮ ಆತ್ಮಸಾಕ್ಷಿಯ ಪ್ರಕಾರ ಮತದಾನ ಮಾಡಲು ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡರು. ಇದರ ಗೂಡಾರ್ಥವೆಂದರೆ, ತಮ್ಮ ಮಾತು ಕೇಳದ ನೀಲಂ ಅವರ ವಿರುದ್ಧವಾಗಿ ಸ್ಪರ್ಧಿಸಿದ್ದ ವಿ.ವಿ.ಗಿರಿ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಹೀಗಾಗಿ ಆ ಚುನಾವಣೆಯಲ್ಲಿ ನೀಲಂ ಸಂಜೀವ ರೆಡ್ಡಿ ಅವರು ಸೋತರು. ಇದರಿಂದ ಬೇಸತ್ತ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿ ತಮ್ಮ ಸ್ವಗ್ರಾಮಕ್ಕೆ ಮರಳಿ ತಮ್ಮ ಪೂರ್ವಜರಿಂದ ನಡೆದುಕೊಂಡು ಬಂದಿದ್ದ ಕೃಷಿಯಲ್ಲಿ ತೊಡಗಿಕೊಂಡರು.
ಹೀಗೆ ಆತ್ಮಸಾಕ್ಷಿ ಮತ ಎಂಬ ಹೊಸ ಪರಿಕಲ್ಪನೆಯನ್ನು ಇಂದಿರಾ ಗಾಂಧಿ ಅವರು ಹುಟ್ಟು ಹಾಕಿದ್ದರು. ಆತ್ಮಸಾಕ್ಷಿಯ ಮತ ಎಂದರೆ; ಅಡ್ಡಮತ ಅಥವಾ ಆತ್ಮ ವಂಚನೆಯ ಮತ ಎನ್ನುವುದು ಪ್ರಚಲಿತಕ್ಕೆ ಬಂದಿದೆ. ಈ ಅಡ್ಡಮತದ ಬಲೆಗೆ ಲೋಕಸಭೆ, ವಿಧಾನಸಭೆಗಳಲ್ಲಿ ಈವರೆಗೆ ಅನೇಕ ಜನ ಪ್ರತಿನಿಧಿಗಳು ಬಿದ್ದಿದ್ದಾರೆ. ಕರ್ನಾಟಕದಲ್ಲಿ ಇದು ಬಹಳ ಜನಜನಿತವಾಗಿ ನಡೆದುಕೊಂಡು ಬಂದಿದೆ.
ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಇಬ್ಬರು ಶಾಸಕರು (ಗುಬ್ಬಿ ಶ್ರೀನಿವಾಸ್ ಹಾಗೂ ಶಿವಲಿಂಗೇಗೌಡ) ಕಾಂಗ್ರೆಸ್ ಪರವಾಗಿ ಅಡ್ಡಮತ ಹಾಕಿದ್ದರು. ಆಗಲೂ ಡಿ.ಕುಪೇಂದ್ರ ರೆಡ್ಡಿ ಅವರೇ ಸ್ಪರ್ಧೆ ಮಾಡಿದ್ದರು. 2016ರ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್, ತನ್ನ ಅಧಿಕೃತ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಮತ ಹಾಕುವಂತೆ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಆಗ ಪಕ್ಷದ ಎಂಟು ಶಾಸಕರು ( ಜಮೀರ್ ಅಹಮ್ಮದ್ ಖಾನ್, ಚೆಲುವರಾಯ ಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ಅಖಂಡ ಶ್ರೀನಿವಾಸ ಮೂರ್ತಿ, ಕೆ.ಗೋಪಾಲಯ್ಯ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಹೆಚ್.ಸಿ.ಬಾಲಕೃಷ್ಣ ) ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತ ಹಾಕಿ ಪಕ್ಷಕ್ಕೆ ಕೈಕೊಟ್ಟಿದ್ದರು.
ಒಟ್ಟಾರೆಯಾಗಿ ಅಡ್ಡಮತಕ್ಕೆ ಜನ್ಮ ನೀಡಿದ ಕಾಂಗ್ರೆಸ್ ಅದರಿಂದ ಅನೇಕ ಸಂದರ್ಭದಲ್ಲಿ ರಾಜಕೀಯ ಲಾಭ ಮಾಡಿಕೊಂಡಿದೆ.
ಈಗ ಸೋಮವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರು ಸ್ವಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಪಕ್ಷದ ಪರವಾಗಿ ಅಡ್ಡಮತ ಚಲಾಯಿಸಿದ್ದಾರೆ.