ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ; ಎಲ್ಲವನ್ನೂ ಗುಮಾನಿಯಿಂದಲೇ ನೋಡುತ್ತಿರುವ ಪ್ರಬಲ ಜಾತಿಗಳು
ಬೆಂಗಳೂರು: ಪ್ರಬಲ ಸಮುದಾಯಗಳ ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸ್ವೀಕಾರ ಮಾಡಿದ್ದಾರೆ. ಇದು ಲೋಕಸಭೆ ಚುನಾವಣೆಗೆ ಮುನ್ನವೇ ಹೊಸ ರಾಜಕೀಯ ತಿರುವುಗಳಿಗೆ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರವಾಗುತ್ತಿವೆ.
ವರದಿಗೆ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿ ಜಾತಿಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎರಡೂ ಸಮುದಾಯಗಳ ಮುಖಂಡರು ಆರೋಪ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆ ದಿನಾಂಕ ಇನ್ನು ಕೆಲ ದಿನಗಳಲ್ಲಿಯೇ ಘೋಷಣೆ ಆಗಲಿದ್ದು, ಅದಕ್ಕೆ ಮೊದಲೇ ಈ ವರದಿ ಸ್ವೀಕಾರ ಮಾಡಿರುವ ಮುಖ್ಯಮಂತ್ರಿ ನಡೆಯನ್ನು ಅವರ ಸ್ವಪಕ್ಷೀಯರೇ ಕಟುವಾಗಿ ಟೀಕಿಸಿದ್ದಾರೆ. ಪ್ರಬಲ ಸಮುದಾಯಗಳು ಅವರನ್ನು ಗುಮಾನಿಯಿಂದ ನೋಡುತ್ತಿವೆ.
ಏಕೆಂದರೆ, ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಸಿಎಂ ಆದ ಮೇಲೆ ಅವರು ಇಡುತ್ತಿರುವ ಹೆಜ್ಜೆಗಳು, ಮಿತಿ ಮೀರಿದ ಅಲ್ಪಸಂಖ್ಯಾತರ ಓಲೈಕೆ, ಜಾತಿ ಸಮಾವೇಶಗಳು, ಮೀಸಲಾತಿ ನೆಪದಲ್ಲಿ ಪ್ರಬಲ ಜಾತಿಗಳ ಮೇಲೆ ಬೆಂಕಿ ಉಗುಳುವ ಭಾಷಣಗಳು ಇಂಥ ಗುಮಾನಿಗೆ ಕಾರಣವಾಗಿವೆ.
ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಶೀಲನೆಗಾಗಿ ಸಂಪುಟ ಉಪ ಸಮಿತಿಗೆ ವಹಿಸುವ ಉದ್ದೇಶ ಮುಖ್ಯಮಂತ್ರಿ ಅವರಿಗಿದೆ ಎಂದು ಗೊತ್ತಾಗಿದೆ. ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಂತರಾಜ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಯೋಗದಿಂದ ಸಿದ್ದಪಡಿಸಲಾದ ಮೂಲ ವರದಿಯಲ್ಲಿ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಆಮೂಲಾಗ್ರ ಬದಲಾವಣೆ ಮಾಡಿದ್ದಾರೆ.
ಕಾಂತರಾಜ್ ವರದಿಯಲ್ಲಿನ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಹಾಲಿ ಅಧ್ಯಕ್ಷರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಮತ್ತೊಮ್ಮೆ ಅಗತ್ಯ ಮಾಹಿತಿ ಪಡೆದು ಬೃಹತ್ ಗಾತ್ರದ ವರದಿ ಸಿದ್ಧ ಪಡಿಸಿ ಸಲ್ಲಿಸಲಾಗಿದೆ.
ಅಂದರೆ, ರಾಜ್ಯದಲ್ಲಿರುವ ಪ್ರಮುಖ ಸಮುದಾಯಗಳು ಸಲ್ಲಿಸಿದ್ದ ಮನವಿ ಪತ್ರಗಳನ್ನು ಆಧರಿಸಿ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ತಯಾರಿಸಿದ್ದಾರೆ ಎನ್ನಲಾಗಿದೆ.
ಕಾಂತರಾಜ್ ಅವರ ಅವಧಿಯ ವರದಿಯಲ್ಲಿ ಪ್ರಬಲ ಸಮುದಾಯಗಳನ್ನು ವಿಭಜನೆ ಮಾಡಿ ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗೆ ಅನುಗುಣವಾಗಿ ಜಾತಿ ಮತ್ತು ಉಪ ಪಂಗಡಗಳನ್ನು ವಿಂಗಡಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ಕಾಂತರಾಜ್ ವರದಿಗೆ ವಿರೋಧ
ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಕಾಂತರಾಜ್ ವರದಿಯನ್ನು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದವು. ಅದೇ ಸಮಯಕ್ಕೆ ಸಿದ್ದರಾಮಯ್ಯ ಅವರ ಸಂಪುಟದ ಕೆಲವು ಸಚಿವರು ಸಹ ಆಕ್ಷೇಪ ವ್ಯಕ್ತಪಡಿಸಿ ವೈಜ್ಞಾನಿಕ ಸಮೀಕ್ಷಾ ವರದಿ ತಯಾರಾಗಬೇಕು ಎಂದಿದ್ದರು.
ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ವಿರೋಧವನ್ನು ಮನಗಂಡ ಮುಖ್ಯಮಂತ್ರಿ ಅವರು ಹಾಲಿ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸರಕಾರಕ್ಕೆ ಸಲ್ಲಿಕೆಯಾದ ಮನವಿಗಳನ್ನು ರವಾನಿಸಿ ಕಾಂತರಾಜ್ ಅಧ್ಯಕ್ಷರಾಗಿದ್ದಾಗ ಸಿದ್ಧಪಡಿಸಿದ್ದ ವರದಿಯಲ್ಲಿ ಲೋಪವಾಗಿದ್ದರೆ, ಅದನ್ನು ಸರಿಪಡಿಸುವಂತೆ ಹೇಳಿದ್ದರು ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಹೆಗ್ಡೆ ಅವರ ಕಾಲಾವಧಿ ಮುಗಿದಿದ್ದರೂ ಮತ್ತೆ ಎರಡು ಬಾರಿ ಅವಧಿ ವಿಸ್ತರಿಸಿ ಪರಿಷ್ಕೃತ ವರದಿ ಸಿದ್ಧಪಡಿಸಲು ಅವಕಾಶ ಮಾಡಿಕೊಟ್ಟಿದರು. ಈಗ ಹೆಗ್ಡೆ ಅವರ ನೇತೃತ್ವದ ಆಯೋಗದ ಅವಧಿ ಮುಕ್ತಾಯಗೊಂಡಿದೆ. ಅಧಿಕಾರದಿಂದ ನಿವೃತ್ತರಾಗುವ ಮುನ್ನ ಅವರು ಮುಖ್ಯಮಂತ್ರಿ ಹಾಗೂ ಸರಕಾರದ ಉನ್ನತಾಧಿಕಾರಿಗಳಿಗೆ ಮೂಲ ವರದಿಯನ್ನು ಸಲ್ಲಿಸಿದ್ದಾರೆ.
ವರದಿಯಲ್ಲಿ ಸರಕಾರಕ್ಕೆ ಕೆಲವು ಶಿಫಾರಸು
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015ರ ಸಮಗ್ರ ವರದಿ-01, ಜಾತಿವಾರು ಜನಸಂಖ್ಯೆ ವಿವರ-01, ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು-8 ಸಂಪುಟ. ಪರಿಶಿಷ್ಟಜಾತಿ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ ತಲಾ ಒಂದು ಸಂಪುಟ. ವಿಧಾನಸಭೆ ಕ್ಷೇತ್ರವಾರು ಜಾತಿವಾರು ಸಮೀಕ್ಷೆಗಳ ಅಂಕಿ-ಅಂಶಗಳಿಗೆ ಸಂಬಂಧಿಸಿದ ಎರಡು ಸಿಡಿ ಸಲ್ಲಿಸಿಕೆಯಾದ ವರದಿಯಲ್ಲಿ ಸೇರಿವೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿಯ ಒಂದು ಸಂಪುಟ ಸೇರಿದಂತೆ ಒಟ್ಟು 13 ದಾಖಲೆಗಳನ್ನು ಎರಡು ಬಾಕ್ಸ್ ಗಳಲ್ಲಿ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ತಂದು ಸಲ್ಲಿಸಿದ್ದಾರೆ.
ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಲಾಗಿದೆ : ಹೆಗ್ಡೆ
ವರದಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಪ್ರಕಾಶ್ ಹೆಗ್ಡೆ ಅವರು, ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಅದನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ತೀರ್ಮಾನ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.
ನಾವು ಸರಕಾರಕ್ಕೆ ಕೆಲವು ಶಿಫಾರಸ್ಸು ಮಾಡಿದ್ದೇವೆ. ಆದರೆ, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ವರದಿ ಸ್ವೀಕರಿಸಿರುವ ಮುಖ್ಯಮಂತ್ರಿ ಅವರು ಅನುಷ್ಠಾನ ಮಾಡುವ ಕುರಿತಂತೆ ತಕ್ಷಣದ ತೀರ್ಮಾನ ಕೈಗೊಂಡಿಲ್ಲ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ವರದಿ ಅನುಷ್ಠಾನಗೊಳಿಸಿದರೆ, ಕೆಲವು ಸಮುದಾಯಗಳು ಅಪಸ್ವರ ಎತ್ತಿದರೂ ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆ ಎಂಬ ಭಾವನೆ ಅವರಲ್ಲಿದೆ.
ಹೆಗ್ಡೆ ಅವರು ನೀಡಿರುವ ವರದಿ ಪರಿಶೀಲಿಸಿ ನಂತರ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಹಿರಿಯ ಸಚಿವರ ನೇತೃತ್ವದಲ್ಲಿ ಸಂಪುಟದ ಉಪ ಸಮಿತಿ ನೇಮಿಸಿದ್ದು, ಆ ಸಮಿತಿಗೆ ಕೆಲವು ತಜ್ಞರನ್ನು ನೇಮಕ ಮಾಡಲು ಮುಖ್ಯಮಂತ್ರಿ ಅವರು ಆಸಕ್ತಿ ಹೊಂದಿದ್ದಾರೆ.