ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಬಾಗೇಪಲ್ಲಿ ಕ್ಷೇತ್ರದಲ್ಲಿ ಅನೇಕ ಯೋಜನೆಗಳಿಗೆ ಗುದ್ದಲಿಪೂಜೆ ಭಾಗ್ಯ
,
by GS Bharath Gudibande
ಗುಡಿಬಂಡೆ/ಬಾಗೇಪಲ್ಲಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲಿಯೇ ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಭಾಗ್ಯ ದೊರೆಯುತ್ತಿದೆ.
ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಗುಡಿಬಂಡೆ ಮತ್ತು ಬಾಗೇಪಲ್ಲಿಯಲ್ಲಿ ನಾಳೆ ಇಡೀ ದಿನ ಮಿಂಚಿನ ಸಂಚಾರದ ಜತೆಗೆ ಜನತಾ ದರ್ಶನವನ್ನೂ ಹಮ್ಮಿಕೊಂಡಿದ್ದು, ಅದರ ಜತೆಗೆ ಹಲವು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.
ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಾಳೆ (ಬುಧವಾರ) ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಶಾಸಕರ ಕಚೇರಿಯಲ್ಲಿ ಸಾರ್ವಜನಿಕ ಜನತಾ ದರ್ಶನವನ್ನು ಶಾಸಕರು ಹಮ್ಮಿಕೊಂಡಿದ್ದಾರೆ.
ಅಲ್ಲದೆ, ಜನತಾದರ್ಶನ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜನರನ್ನು ಕೋರಲಾಗಿದೆ. ಬಾಗೇಪಲ್ಲಿ ಪಟ್ಟಣದಲ್ಲಿ ಕೂಡ ಜನತಾದರ್ಶನ ನಡೆಯಲಿದ್ದು, ಜನರ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿರೀಕ್ಷೆ ಇದೆ.
ಶಾಸಕರು ಹಮ್ಮಿಕೊಂಡಿರುವ ಗುದ್ದಲಿ ಪೂಜೆ ಕಾರ್ಯಕ್ರಮಗಳ ಕಾಮಗಾರಿ ಲೋಕಸಭೆ ಚುನಾವಣೆ ಮುಗಿದ ನಂತರವಷ್ಟೇ ಆಗಬೇಕು. ಆದರೆ, ಸರಕಾರದ ಅಷ್ಟೂ ಹಣ ಗ್ಯಾರಂಟಿಗಳ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನದ ಕೊರತೆ ಇದೆ.
ಕಳೆದ ಬಜೆಟ್ ಅಧಿವೇಶನಕ್ಕೆ ಮೊದಲು ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ತಲಾ ₹25 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ಬಗ್ಗೆ ಭರವಸೆ ನೀಡಲಾಗಿತ್ತು. ಈ ಬಾಬತ್ತಿನ ಹಣ ಬಾಗೇಪಲ್ಲಿ ಕ್ಷೇತ್ರಕ್ಕೆ ಬಂದಿದೆಯಾ? ಇಲ್ಲವಾ? ಎನ್ನುವ ಮಾಹಿತಿ ಇಲ್ಲ.
ಶಾಸಕರ ಕಾರ್ಯಕ್ರಮಗಳ ವಿವರ
- 1. ಬೆಳಗ್ಗೆ 9.30 ಗಂಟೆಗೆ ಬಾಗೇಪಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 3.40 ಕೋಟಿ ವೆಚ್ಚದಲ್ಲಿ ಲ್ಯಾಬ್ ಹಾಗೂ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ
- 2. ಬೆಳಗ್ಗೆ 10 ಗಂಟೆಗೆ ಬಾಗೇಪಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1.20 ಕೋಟಿ ವೆಚ್ಚದಲ್ಲಿ ಮೊದಲ ಮಹಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ
- 3. ಬೆಳಗ್ಗೆ 10.30 ಗಂಟೆಗೆ ಬಾಗೇಪಲ್ಲಿ ಪಟ್ಟಣದ ದೇವರಾಜ ಅರಸು ಭವನದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- 4. ಬೆಳಗ್ಗೆ 11.30 ಗಂಟೆಗೆ ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಣೆ
- 5. ಅಪರಾಹ್ನ 3 ಗಂಟೆಗೆ ಗುಡಿಬಂಡೆ ತಾಲ್ಲೂಕು ದಪ್ಪರ್ತಿ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಗುದ್ದಲಿ ಪೂಜೆ
- 6. ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಬಾಗೇಪಲ್ಲಿ ಪಟ್ಟಣದ ಶಾಸಕರ ಮನೆಯ ಬಳಿ ಜನತಾ ದರ್ಶನ
- 7. ರಾತ್ರಿ 8 ಗಂಟೆಗೆ ಗುಡಿಬಂಡೆ ತಾಲ್ಲೂಕು ಯರ್ರಲಕ್ಕೇನಹಳ್ಳಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಬುಧವಾರ ಇಡೀ ದಿನ ಶಾಸಕರು ಗುಡಿಬಂಡೆ ಮತ್ತು ಬಾಗೇಪಲ್ಲಿಯಲ್ಲಿ ಮಿಂಚಿನ ಸಂಚಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.