ಎಲ್ಲರ ಕೈಗೂ ಸುಲಭವಾಗಿ ಸಿಗದಂತೆ ಕ್ರಮ; ಮುಕ್ತ ಮಾರುಕಟ್ಟೆಯಲ್ಲಿ ಮಾರುವಂತಿಲ್ಲ
ಬೆಂಗಳೂರು: ಒಂದೆರಡು ದಿನದಲ್ಲಿ ಆಸಿಡ್ ನಿಷೇಧ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ಇತ್ತೀಚಿನ ದಿನಗಳಲ್ಲಿ ಆಸಿಡ್ ದುರ್ಬಳಕೆ ಹಾಗೂ ಮಹಿಳೆಯರ ಮೇಲೆ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಕೈಗೂ ಸುಲಭವಾಗಿ ಆಸಿಡ್ ಸಿಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚೆಗೆ ಮಹಿಳೆಯರು, ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿಗಳು ಹೆಚ್ಚಾಗುತ್ತಿವೆ. ಇದು ಕಳವಳಕಾರಿ. ಯುವಕರಿಗೆ ಇಂಥ ಆಸಿಡ್ ಸುಲಭವಾಗಿ ಸಿಗುವುದನ್ನು ತಪ್ಪಿಸಬೇಕು. ಹೀಗಾಗಿ ಅದನ್ನು ನಿಷೇಧ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ತೀರಾ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಅನುಮತಿ ಮೇಲೆ ಆಸಿಡ್ ಪಡೆದುಕೊಳ್ಳುವಲ್ಲಿ ಕಟ್ಟುನಿಟ್ಟಿನ ನಿಯಮ ರೂಪಿಸಲಾಗುವುದು. ಆಸಿಡ್ ಲಭ್ಯತೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕೈಗಾರಿಕೆಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗುವುದು, ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಆ್ಯಸಿಡ್ ದುರ್ಬಳಕೆಯಾಗುತ್ತಿದೆ. ಇದರಿಂದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಲ್ಲರ ಕೈಗೂ ಸುಲಭವಾಗಿ ಆ್ಯಸಿಡ್ ಸಿಗಬಾರದು. ಅಗತ್ಯತೆ ಇರುವರಿಗೆ ಮಾತ್ರ ಸಿಗಬೇಕು. ಈ ಕುರಿತು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಇನ್ನೆರಡು ದಿನದಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಇಂಡಸ್ಟ್ರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲಿದ್ದಾರೆ
ಡಾ. ಜಿ.ಪರಮೇಶ್ವರ್, ಗೃಹ ಸಚಿವರು
ಆಸಿಡ್ ಸುಲಭವಾಗಿ ಕೈಗೆ ಸಿಗಬಾರದು. ಹಾಗಾಗಿ ರಾಸಾಯನಿಕಗಳನ್ನು ಅಧಿಕೃತವಾಗಿ ಮಾರಾಟ ಮಾಡುವವರ ಮೂಲಕವಷ್ಟೇ ಆಸಿಡ್ ಖರೀದಿ ಮತ್ತು ಮಾರಾಟ ವಹಿವಾಟು ನಡೆಯಬೇಕು. ಈ ನಿಟ್ಟಿನಲ್ಲಿ ಕಡಿವಾಣವು ಅಗತ್ಯವಿದೆ ಎಂದು ಅವರು ತಿಳಿಸಿದರು.
ರಾಮೇಶ್ವರಂ ಕೆಫೆ; ಮಹತ್ವದ ಸುಳಿವು
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕುರಿತು ಕೆಲವು ಮಹತ್ವದ ಸುಳಿವು ಸಿಕ್ಕಿವೆ, ಘಟನೆ ನಂತರ ಆರೋಪಿ ಬಟ್ಟೆ ಬದಲಿಸಿಕೊಂಡು ಬಸ್‌ನಲ್ಲಿ ಪರಾರಿಯಾಗಿರುವ ಖಚಿತ ಮಾಹಿತಿ ಲಭ್ಯವಿದೆ, ಪ್ರಕರಣದ ಎಲ್ಲ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಆದಷ್ಟು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದರು.
ಈವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಬಂಧಿಸಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ಇದೆ. ಮುಖ್ಯಮಂತ್ರಿಯವರೂ ಕೂಡ ಅಸ್ಪಷ್ಟ ಮಾಹಿತಿಯಿಂದ ಐದು ಮಂದಿ ಆರೋಪಿಗಳ ಬಂಧನವಾಗಿದೆ ಎಂದು ಹೇಳಿಬಿಟ್ಟಿದ್ದಾರೆ. ಆದರೆ ಯಾರನ್ನೂ ಬಂಧಿಸಿಲ್ಲ ಎಂದರು. ಶಂಕಿತರನ್ನು ಕರೆದು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಮಾಹಿತಿ ಕಲೆ ಹಾಕುವ ಸಲುವಾಗಿ ಕರೆತಂದವರನ್ನು ಬಂಧಿಸಿಲ್ಲ.
ರಾಷ್ಟ್ರೀಯ ತನಿಖಾ ದಳ ನಿನ್ನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನ ಭಾವಚಿತ್ರವನ್ನು ಬಹಿರಂಗಪಡಿಸಿ ಆರೋಪಿಯ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದೆ. ತನಿಖೆ ಮಹತ್ವದ ಹಂತದಲ್ಲಿದ್ದು, ಶೀಘ್ರವಾಗಿಯೇ ಆರೋಪಿಯನ್ನು ಸೆರೆ ಹಿಡಿಯಲಾಗುವುದು ಎಂದರು.