ಬೆಂಗಳೂರಿಗೆ ಬೆಣ್ಣೆ, ಚಿಕ್ಕಬಳ್ಳಾಪುರ -ಕೋಲಾರ, ಬೆಂ. ಗ್ರಾಮಾಂತರಕ್ಕೆ ಸುಣ್ಣ!; ವಿಮಾನ ನಿಲ್ದಾಣ, ಕಬ್ಬನ್ ಪಾರ್ಕ್, ಲಾಲ್ ಬಾಗ್ ಸಸಿಗಳಿಗೆ 3ನೇ ಹಂತದ ಶುದ್ಧೀಕರಿಸಿದ ನೀರು!!
ಎತ್ತಿನಹೊಳೆ ಕೆಲವರ ಪಾಲಿಗೆ ಎಟಿಎಂ ಆಗಿದೆ!!
ಚಿಕ್ಕಬಳ್ಳಾಪುರ: ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಬ್ಬನ್ ಪಾರ್ಕ್, ಲಾಲ್ ಬಾಗ್ ಉದ್ಯಾನವನಗಳ ಸಸಿಗಳಿಗೆ ಮೂರು ಹಂತದ ಶುದ್ಧೀಕರಿಸಿದ ನೀರನ್ನು ಹರಿಸುವ ರಾಜ್ಯ ಸರಕಾರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಕೇವಲ ಎರಡು ಹಂತಗಳ ಶುದ್ಧೀಕರಿಸಿದ ನೀರು ಹರಿಸುತ್ತಿದೆ!
ಬೆಂಗಳೂರು ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಬಯಲು ಸೀಮೆ ಜಿಲ್ಲೆಗಳಿಗೆ ಹರಿಸುವ ಸರಕಾರ, ಅದೇ ಬೆಂಗಳೂರು ವಿಷಯಕ್ಕೆ ಬಂದಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನೂ ವಹಿಸುತ್ತಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಅವರು ಗಂಭೀರ ಆರೋಪ ಮಾಡಿದರು.
ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ 10ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ನೀರಾವರಿಗಾಗಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.
ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಹಾಗೂ ಬಯಲು ಸೀಮೆ ಜನರ ಆರೋಗ್ಯವನ್ನು ಕಡೆಗಣಿಸಿ ಎರಡು ಹಂತದಲ್ಲಿ ಶುದ್ಧೀಕರಿಸಿದ ಬೆಂಗಳೂರಿನ ಅರೆ ಸಂಸ್ಕರಿತ ತ್ಯಾಜ್ಯ ನೀರನ್ನು ಹರಿಸುತ್ತಿರುವುದರಿಂದ ನಮ್ಮ ಭಾಗದ ಕೆರೆಗಳು ಜೀವಕಳೆ ಕಳೆದುಕೊಂಡು ನಿರ್ಜೀವಾಗಿವೆ. ಅಲ್ಲದೆ ಅಪಾಯಕಾರಿ ಅಂಶಗಳು ಅಂತರ್ಜಲ ಸೇರಿ ಅದನ್ನೇ ಸೇವಿಸುವ ದುಸ್ಥಿತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನೀರಾವರಿಯ ವಿಚಾರದಲ್ಲಿ ಬಯಲು ಸೀಮೆಗೆ ಎಲ್ಲಾ ಸರಕಾರಗಳು ಮತ್ತು ಜನಪ್ರತಿನಿಧಿಗಳು ನಿರಂತರವಾಗಿ ಮೋಸವನ್ನು ಮಾಡುತ್ತಿದ್ದಾರೆ. ಏನನ್ನೂ ಮಾತನಾಡದೆ ರಾಜಕಾರಣಿಗಳ ಪೊಳ್ಳು ಮಾತುಗಳಿಗೆ ಚಪ್ಪಾಳೆ ಹೊಡೆಯುತ್ತಿರುವ ನಮ್ಮ ಜನರು ಇನ್ನಾದರೂ ಎಚ್ಚೆತ್ತುಕೊಂಡು ಸರಕಾರಗಳನ್ನು ಪ್ರಶ್ನಿಸಿ ನೀರಿಗಾಗಿ ಲೋಕಸಭೆ ಚುನಾವಣೆ ನಡೆದಲ್ಲಿ ಮಾತ್ರ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಪ್ರತಿಪಾದಿಸಿದರು.
ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗಗಳಿಗೆ ನದಿಗಳ ನೀರು ಸೀಮಿತ ಎಂಬಂತೆ ವರ್ತಿಸುತ್ತಿರುವ ಸರಕಾರಗಳು ಇನ್ನಾದರೂ ಬಯಲು ಸೀಮೆ ಜಿಲ್ಲೆಗಳು ರಾಜ್ಯ ಅವಿಭಾಜ್ಯ ಅಂಗ ಎಂಬುದನ್ನು ಗುರುತಿಸಿ ನೀರಾವರಿ ಯೋಜನೆಗಳನ್ನು ರೂಪಿಸಬೇಕು. ಜತೆಗೆ ಕೆರೆಗಳ ಪುನಶ್ಚೇತನಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡುವುದು, ಸಂಸ್ಕರಿತ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಈ ಜಿಲ್ಲೆಗಳಿಗೆ ಹರಿಸಬೇಕೆಂದು ಅವರು ಒತ್ತಾಯಿಸಿದರು.
ಎತ್ತಿನಹೊಳೆ ಎಂಬ ಎಟಿಎಂ
ಕಳೆದ 10 ವರ್ಷಗಳ ಹಿಂದೆ ಶಿಲಾನ್ಯಾಸಗೊಂಡ ಎತ್ತಿನಹೊಳೆ ಎಂಬ ಎಟಿಎಂ ಯೋಜನೆಯ ಗಾತ್ರವು ₹8,000 ಸಾವಿರ ಕೋಟಿಯಿಂದ ₹24,000 ಕೋಟಿ ಏರಿಕೆಯಾಗಿರುವುದು ಅದರ ಸಾಧನೆಯೇ ಹೊರತು ಹನಿನೀರು ಹರಿಸುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಅವರು ನೇರ ಆರೋಪ ಮಾಡಿದರು.
ಬಯಲು ಸೀಮೆಗೆ ನೀರು ಒದಗಿಸುವಲ್ಲಿ ಎಲ್ಲಾ ನಾಯರಕರೂ ಹೇಳಿದ್ದ ಮಾತುಗಳು ಸಂಪೂರ್ಣ ಹುಸಿಯಾಗಿವೆ. ಇದನ್ನು ಪ್ರಶ್ನಿಸುವ ಹೋರಾಟಗಾರರ ವಿರುದ್ಧವೇ ದಾವೆಗಳನ್ನು ಹೂಡಿ ಖಳನಾಯಕರಂತೆ ಚಿತ್ರಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಪ್ರದೀಪ್ ಈಶ್ವರ್ ಪ್ರತಾಪ ಎಲ್ಲಿ?
ಶಾಸಕರಾಗುವುದಕ್ಕೆ ಮೊದಲು ಬೆಂಗಳೂರು ತ್ಯಾಜ್ಯ ನೀರು ಅನಾಹುತಕಾರಿ, ವಿಷಕಾರಿ ಎಂದು ವಿಡಿಯೋ ಮೇಲೆ ವಿಡಿಯೋ ಮಾಡಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಮಾಡುತ್ತಿರುವುದೇನು ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಸಂದೀಪ್ ಬಿ.ರೆಡ್ಡಿ ಕಿಡಿಕಾರಿದರು.
ಚುನಾವಣೆಗೆ ಮೊದಲು ಶಾಸಕರು ಮಾತೆತ್ತಿದರೆ ಕೊಳಚೆ ನೀರು, ಬಚ್ಚಲು ನೀರು ಎಂದು ಕೂಗಾಡುತ್ತಿದ್ದವರು ಈಗ ಮೌನವಾಗಿದ್ದಾರೆ, ಏಕೆ? ಕಾಂಗ್ರೆಸ್ ಸರಕಾರದ ಮೊದಲ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಬಯಲು ಸೀಮೆಗೆ ಶುದ್ಧ ನೀರು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಡಾ.ಪರಮಶಿವಯ್ಯ ಅವರು ಪಟ್ಟ ಶ್ರಮ, ಅವರ ಬದ್ಧತೆ, ದೂರದೃಷ್ಟಿ ಬಗ್ಗೆ ಸಭೆಯಲ್ಲಿ ಸ್ಮರಿಸಲಾಯಿತು. ಬಯಲು ಸೀಮೆಗೆ ನದಿ ಮೂಲಗಳಿಂದ ನೀರು ಹರಿದಾಗಲೇ ಡಾ.ಪರಮಶಿವಯ್ಯ ಅವರ ಕನಸು ಸಾಕಾರವಾಗುತ್ತದೆ ಎಂದು ಮುಖಂಡರು ಹೇಳಿದರು.
ಸಭೆ ಆರಂಭ ಆಗುವುದಕ್ಕೂ ಮೊದಲು ಹೋರಾಟಗಾರರು ಬೈಕ್ ಜಾಥಾ ನಡೆಸಿದರು.
ದಲಿತ ಸಂಘಟನೆಯ ಬಿ.ಎನ್.ಗಂಗಾಧರ್, ಶಾಶ್ವತ ನೀರಾವರಿ ಸಮಿತಿಯ ಮಳ್ಳೂರು ಹರೀಶ್, ಸುಷ್ಮಾ ಶ್ರೀನಿವಾಸ್, ಆಯಿಷಾ ಸುಲ್ತಾನ, ಪ್ರಭಾ ನಾರಾಯಣಗೌಡ, ನವೀನ್, ರವಿಕುಮಾರ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮುನಿರೆಡ್ಡಿ, ದೇವರಾಜ್, ಲೋಕೇಶ್‌ಗೌಡ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.