ರಾಜ್ಯದಲ್ಲಿ ಎಷ್ಟು ಹಂತ? ರಾಜಕೀಯ ಪಕ್ಷಗಳಿಗೆ ಕುತೂಹಲ
ಬೆಂಗಳೂರು: ಕರ್ನಾಟಕದ 28 ಕ್ಷೇತ್ರಗಳೂ ಸೇರಿದಂತೆ ಭಾರತದ 543 ಲೋಕಸಭೆ ಕ್ಷೇತ್ರಗಳಿಗೆ ಶನಿವಾರ ಅಪರಾಹ್ನ ಕೇಂದ್ರ ಚುನಾವಣೆ ಆಯೋಗ ವೇಳಾಪಟ್ಟಿ ಪ್ರಕಟಿಸಲಿದೆ. ಚುನಾವಣೆ ದಿನಾಂಕ ಪ್ರಕಟವಾದ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.
ಚುನಾವಣೆ ಆಯೋಗಕ್ಕೆ ಹೊಸದಾಗಿ ಇಬ್ಬರು ಆಯುಕ್ತರು ನೇಮಕಗೊಳ್ಳುತ್ತಿದ್ದಂತೆ ಚುನಾವಣೆಗೆ ಅಧಿಸೂಚನೆ ಹೊರಡಿಸಲು ಆಯೋಗ ಮುಂದಾಗಿದೆ.
ರಾಜ್ಯದಲ್ಲಿ ಎಷ್ಟು ಹಂತಗಳಲ್ಲಿ ಮತದಾನ ನಡೆಯಬಹುದು ಎನ್ನುವ ಕುತೂಹಲ ಎಲ್ಲಾ ಪಕ್ಷಗಳಿಗೂ ಇದೆ. ಎರಡು ಹಂತಗಳಲ್ಲಿ ಮತದಾನ ನಡೆಯಬಹುದು ಎಂದು ಚುನಾವಣೆ ವಿಶ್ಲೇಷಕರು ಹೇಳುತ್ತಿದ್ದಾರೆ.
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಸದನ ರಚನೆ ಆಗಬೇಕಿದೆ. 2019ರಲ್ಲಿ ಲೋಕಸಭೆ ಚುನಾವಣೆಗೆ ಮಾರ್ಚ್ 10ರಂದು ಅಧಿಸೂಚನೆ ಹೊರಡಿಸಿ, ಮೇ 27ಕ್ಕೆ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಐದು ದಿನ ತಡವಾಗಿ ದಿನಾಂಕ ಘೋಷಣೆ
ಈ ಬಾರಿ ಇಬ್ಬರು ಚುನಾವಣೆ ಆಯುಕ್ತರ ನೇಮಕಾತಿ ಹಿನ್ನೆಲೆಯಲ್ಲಿ ಐದು ದಿನ ತಡವಾಗಿ ದಿನಾಂಕ ಘೋಷಣೆಯಾಗುತ್ತಿದೆ. ಇಷ್ಟಾದರೂ ಪ್ರಕ್ರಿಯೆಯನ್ನು ಮೇ ಅಂತ್ಯಕ್ಕೆ ಮುಗಿಸಿ, ಹೊಸ ಸರಕಾರದ ಅಸ್ತಿತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ. ಕಳೆದ ಚುನಾವಣೆಯಲ್ಲಿ ರಾಷ್ಟ್ರಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಕರ್ನಾಟಕದ 28 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಅಂದರೆ, ಏಪ್ರಿಲ್ 18 ಹಾಗೂ 23 ರಂದು ಮತದಾನ ನಡೆದಿತ್ತು.
ಫಲಿತಾಂಶಕ್ಕಾಗಿ ತಿಂಗಳು ಕಾಯುವ ಸ್ಥಿತಿ
ರಾಜ್ಯದಲ್ಲಿ ಏಪ್ರಿಲ್ 23ಕ್ಕೆ ಮತದಾನ ಮುಗಿದಿದ್ದರೂ ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಒಂದು ತಿಂಗಳು ಕಾಯುವ ಪರಿಸ್ಥಿತಿ ಒದಗಿತ್ತು. ಕಳೆದ ಬಾರಿ ಮೇ 19ರಂದು ಮತದಾನ ಅಂತ್ಯಗೊಂಡು, ಮೇ 23 ರಂದು ಆಯೋಗ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿತು.
ಬಿಜೆಪಿಗೆ 51.75% ಮತ
ಕರ್ನಾಟಕದ ಮಟ್ಟಿಗೆ 28 ಕ್ಷೇತ್ರಗಳ ಪೈಕಿ ಬಿಜೆಪಿ 27ರಲ್ಲಿ ಸ್ಪರ್ಧಿಸಿ 25 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು, ಒಟ್ಟಾರೆ ರಾಜ್ಯದ ಜನತೆ ಬಿಜೆಪಿಗೆ ಶೇಕಡ 51.75ರಷ್ಟು ಮತ ಚಲಾಯಿಸಿದ್ದರು.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿ, ಒಂದು ಸ್ಥಾನದ ಹೆಚ್ಚಿನ ಗೆಲುವು ಸಾಧಿಸಿತ್ತು, ನಂತರ ಅವರು ಬಿಜೆಪಿ ಸೇರ್ಪಡೆಯಾದರು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಕ್ಷೇತ್ರ ಹೊಂದಾಣಿಕೆ ಮಾಡಿಕೊಂಡು, ಇಬ್ಬರೂ ಕೇವಲ ತಲಾ ಒಂದೊಂದು ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರು.
ಕಾಂಗ್ರೆಸ್‌ಗೆ 32.11%, ಜೆಡಿಎಸ್‌ಗೆ 9.74% ಮತ
ಅಂದು ಕಾಂಗ್ರೆಸ್ ಶೇಕಡ 32.11ರಷ್ಟು, ಜೆಡಿಎಸ್‌ಗೆ ಶೇಕಡ 9.74ರಷ್ಟು ಮತ ಗಳಿಸಿದ್ದವು. 2024 ರಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಚಿತ್ರಣವೇ ಬದಲಾಗಿದ್ದು, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 25-3 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿವೆ.
ಬಿಜೆಪಿ ಈಗಾಗಲೇ 20 ಕ್ಷೇತ್ರಗಳಿಗೆ, ಕಾಂಗ್ರೆಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದರೆ, ಜೆಡಿಎಸ್ ಇನ್ನು ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. ಆದರೆ ಮೂರೂ ಪಕ್ಷಗಳು ಚುನಾವಣಾ ಸಿದ್ಧತೆ ಮಾಡಿಕೊಂಡು ಹೋರಾಟಕ್ಕೆ ಅಣಿಯಾಗಿವೆ.
ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್, ಸರಕಾರಿವೆಚ್ಚದಲ್ಲೇ ಗ್ಯಾರಂಟಿ ಯೋಜನೆಗಳ ಸಮಾವೇಶವನ್ನು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ನಡೆಸುತ್ತಿರುವ ಜೊತೆಗೆ ಸುದ್ದಿ ಮಾಧ್ಯಮಗಳಿಗೆ ಸರ್ಕಾರದ ಜಾಹೀರಾತುಗಳ ಸುರಿಮಳೆಯೇ ಆಗುತ್ತಿದೆ.
ಈ ಬಾರಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್‌ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯಲಿದೆ. ಕಾಂಗ್ರೆಸ್ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದರೆ, ಮೈತ್ರಿಕೂಟ ಎಲ್ಲಾ 28 ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದೆ.
Comments 1