ಸಿಎಂ-ಡಿಸಿಎಂ ಡಿಶುಂ ಡಿಶುಂ ನಡುವೆಯೂ ಕೈ ಪಟ್ಟಿ ಇಂದೇ ಹೊರಕ್ಕೆ ಸಾಧ್ಯತೆ
ಬೆಂಗಳೂರು: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದ ನಡುವೆಯೇ ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಉಳಿದ ಪಟ್ಟಿ ಇಂದೇ ಪ್ರಕಟಗೊಳ್ಳಲಿದೆ.
ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಅತೃಪ್ತಗೊಂಡಿರುವ ನಾಯಕರುಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡುವ ಬಗ್ಗೆ ಉಭಯ ನಾಯಕರಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ.
ಸಿಎಂ-ಡಿಸಿಎಂ ನಡುವೆ ತಿಕ್ಕಾಟ
ಯಾರನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳೋಣ. ಅವರಿಗೆ ಟಿಕೆಟ್ ನೀಡುವುದು ಬೇಡ, ಅಧಿಕಾರದ ಹಿಂದೆ ಬಿದ್ದವರಿಗೆ ಮಣೆ ಹಾಕಿದರೆ ನಮಗೆ ಲಾಭವಿಲ್ಲ ಎಂದು ಮುಖ್ಯಮಂತ್ರಿ ಅವರು ವರಿಷ್ಠರ ಮುಂದೆ ವಾದಸಿದ್ದಾರೆ ಎಂದು ಗೊತ್ತಾಗಿದೆ.
ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದಗದಕ್ಕೆ ಹೇಗೆ ಲಾಭವಾಯಿತೋ ಅದೇ ರೀತಿ ಬಿಜೆಪಿಯಿಂದ ಅತೃಪ್ತರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಪಕ್ಷಕ್ಕೆ ಸೇರಿಕೊಂಡು ಚುನಾವಣೆಯಲ್ಲಿ ಸ್ಪರ್ಧೆಗಿಳಿಸಿದರೆ ಬಿಜೆಪಿಯ ಒಕ್ಕಲಿಗ ಮತಗಳನ್ನು ಕಸಿಯಲು ನಮಗೆ ಇದು ಸದವಕಾಶ ಎಂದು ಡಿ.ಕೆ.ಶಿವಕುಮಾರ್ ಅವರು ವಾದ ಮಂಡಿಸಿದ್ದಾರೆ.
ಸದಾನಂದಗೌಡರನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸಿದರೆ ಮೂಲ ಕೊಡವ ಮತ್ತು ಕೊಡವಗೌಡ ಮತಗಳಿಂದ ಕ್ಷೇತ್ರವನ್ನು ನಾವು ಮತ್ತೆ ನಮ್ಮದಾಗಿಸಿಕೊಳ್ಳಬಹುದು ಎಂಬುದು ಶಿವಕುಮಾರ್ ಅವರ ವಾದ..
ಇದೇ ರೀತಿ ತುಮಕೂರು, ಕೊಪ್ಪಳ, ಹಾವೇರಿ ಸೇರಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರಲ್ಲಿ ಅಸಮಾಧಾನವಿದೆ. ಈಗಾಗಲೇ ಹಾವೇರಿ, ತುಮಕೂರು ಅಭ್ಯರ್ಥಿಗಳ ಆಯ್ಕೆ ಆಗಿದ್ದರೂ ಅಭ್ಯರ್ಥಿಗಳ ಬದಲಾವಣೆ ಮಾತು ಈ ನಾಯಕರ ಗುಂಪಿನಿಂದ ಬಂದಿದೆ.
ಅಭ್ಯರ್ಥಿಗಳ ಪಟ್ಟಿ ಇಂದೇ ಹೊರಕ್ಕೆ
ಈ ನಡುವೆ ಉಳಿದಿರುವ 21 ಕ್ಷೇತ್ರಗಳ ಪೈಕಿ ಕಗ್ಗಂಟಾಗಿರುವ ಒಂದೆರಡು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂದು ಹೊರಬೀಳುವುದು ಬಹುತೇಕ ಖಚಿತ.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚಿಸಲು ಮತ್ತು ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಪಕ್ಷದ ಸಂಸದೀಯ ಮಂಡಳಿ ಸಭೆಗೂ ಮುನ್ನ ಉಭಯ ನಾಯಕರು ಪಕ್ಷದ ಮುಖಂಡರೊಂದಿಗೆ ಪ್ರತೇಕವಾಗಿ ಚರ್ಚೆ ಮಾಡಿದ್ದಾರೆ. ಆದರೆ, ಸಿಎಂ ಮತ್ತು ಡಿಸಿಎಂ ಅವರು ತಮಗೆ ಬೇಕಾದವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಗೆಲ್ಲುವ ಅಭ್ಯರ್ಥಿಗಳ ಆಯ್ಕೆ
ರಾಜ್ಯ ಚುನಾವಣಾ ಸಮಿತಿ ನೀಡಿರುವ ವರದಿ ಹಾಗೂ ಚುನಾವಣಾ ಸಮೀಕ್ಷೆ ವರದಿಗಳನ್ನು ಆಧಾರವಾಗಿ ಇಟ್ಟುಕೊಂಡು ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ರಾಜಕೀಯದ ಆಳ, ಅಗಲದ ಅರಿವಿರುವುದರಿಂದ, ಅವರು ತಮ್ಮ ಪಕ್ಷದ ಮುಖಂಡರನ್ನು ನಿಭಾಯಿಸಿ ರಾಜ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಲಿದ್ದಾರೆ.
ಎಐಸಿಸಿ ಅಧ್ಯಕ್ಷರಿಗೆ ಪ್ರತಿಷ್ಠೆ ವಿಷಯ
ಎಲ್ಲದಕ್ಕೂ ಮಿಗಿಲಾಗಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವುದು ಎಐಸಿಸಿ ಅಧ್ಯಕ್ಷರೂ ಆಗಿರುವ ಖರ್ಗೆ ಅವರಿಗೆ ಪ್ರತಿಷ್ಠೆಯಾಗಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಸಿಗದ 10 ಕ್ಕೂ ಹೆಚ್ಚು ಮುಖಂಡರು ಹಾಗೂ ಹಾಲಿ ಸಂಸದರು ಕಾಂಗ್ರೆಸ್ ಟಿಕೆಟ್ ಪಡೆಯಬೇಕೆಂದು ತೆರೆಮರೆಯಲ್ಲಿ ಭಾರೀ ಲಾಬಿ ನಡೆಸಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಅವರ ಹೆಚ್ಚು ವಿಶ್ವಾಸ ಯಾರಿಗಿದೆಯೋ ಅಂತಹವರ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದ್ದಾರೆ.
ಒಂದೆಡೆ ನಂಬಿಕೆ, ಇನ್ನೊಂದೆಡೆ ಶಂಕೆ
ಬಿಜೆಪಿ ಅತೃಪ್ತ ನಾಯಕರಿಗೆ ಗಾಳ ಹಾಕುವುದಕ್ಕೆ ಕಾಂಗ್ರೆಸ್ ವರಿಷ್ಠರಿಗೆ ಸಮಸ್ಯೆ ಇಲ್ಲ. ಆದರೆ, ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಚುನಾವಣೆಗೆ ಮೊದಲು ಪಕ್ಷಕ್ಕೆ ಬಂದರು. ಟಿಕೆಟ್ ಅನ್ನೂ ಪಪಡೆದು ಸೋತರು. ಆದರೆ, ಸೋತರು. ಅಷ್ಟಾದರೂ ಕಾಂಗ್ರೆಸ್ ಪಕ್ಷ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಆದರೆ, ಕೆಲ ದಿನಗಳ ಹಿಂದೆ ಅವರು ಏಕಾಎಕಿ ಬಿಜೆಪಿಗೆ ವಾಪಸ್ ಹೋದರು.
ಈಗ ಸದಾನಂದಗೌಡರೂ ಸೇರಿ ಬಿಜೆಪಿಯ ಹಲವಾರು ನಾಯಕರು ಕಾಂಗ್ರೆಸ್ ಹೊಸ್ತಿಲಲ್ಲಿ ನಿಂತಿದ್ದಾರಾದರೂ, ಅವರ ಬಂದಷ್ಟೇ ವೇಗದಲ್ಲಿ ಕೈಕೊಟ್ಟು ಬಿಜೆಪಿಗೆ ವಾಪಸ್ ಹೋಗಬಹುದು ಎನ್ನುವ ಅನುಮಾನ ಕೈ ಪಾಳೆಯದ್ದಾಗಿದೆ. ಈ ಅಂಶವನ್ನು ಸಿದ್ದರಾಮಯ್ಯ ಅವರು ಒತ್ತಿ ಹೇಳಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದೇ ಅನುಮಾನವನ್ನು ಮಲ್ಲಿಕಾರ್ಜುನ ಖರ್ಗೆ ಅವರೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.