ಸೋಮವಾರದಿಂದಲೇ ಪರೀಕ್ಷೆ; ಹೀಗಿದೆ ವೇಳಾಪಟ್ಟಿ
ಬೆಂಗಳೂರು: ರಾಜ್ಯ ಪಠ್ಯಕ್ರಮ ಬೋಧಿಸುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8 ಮತ್ತು9ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಡಿದ್ದು, ಸೋಮವಾರದಿಂದ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ವೇಳಾ ಪಟ್ಟಿ ಪ್ರಕಟಿಸಿದೆ.
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅನುಮತಿ ನೀಡುತ್ತಿದ್ದಂತೆ ರಾಜ್ಯ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಸೋಮವಾರದಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಇದರೊಂದಿಗೆ 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅಡ್ಡಿಯಾಗದಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ವಿವಿಧ ವಿಷಯಗಳ ಪರೀಕ್ಷೆ ವೇಳಾಪಟ್ಟಿ
ಐದನೇ ತರಗತಿಯ ಎರಡು ವಿಷಯಗಳಿಗೆ ಪರೀಕ್ಷೆ ಬಾಕಿ ಇದ್ದು, ಮಾರ್ಚ್ 25ರ ಸೋಮವಾರ ಮಧ್ಯಾನ್ಹ 2.30ರಿಂದ 4.30 ರವರೆಗೆ ಪರಿಸರ ಅಧ್ಯಯನ ವಿಷಯ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಐದನೇ ತರಗತಿಯ ಗಣಿತ (ದ್ವಿಭಾಷೆ) ಪರೀಕ್ಷೆಯು ಮಾರ್ಚ್ 26ರ ಮಂಗಳವಾರ ಬೆಳಗ್ಗೆ 10 ರಿಂದ 12 ರವರೆಗೆ ನಡೆಯಲಿದೆ.
ಎಂಟನೇ ತರಗತಿಯ ನಾಲ್ಕು ವಿಷಯಗಳ ಮೌಲ್ಯಾಂಕನ ಪರೀಕ್ಷೆ ಬಾಕಿ ಇದ್ದು, ಮಾರ್ಚ್ 25ರ ಸೋಮವಾರ ತೃತೀಯ ಭಾಷೆ ಪರೀಕ್ಷೆ ಮಧ್ಯಾನ್ಹ 2.30 ರಿಂದ 5 ಗಂಟೆಯವರೆಗೆ, ಮಾರ್ಚ್ 26ರ ಮಂಗಳವಾರ ಗಣಿತ ವಿಷಯ ಪರೀಕ್ಷೆಯು ಬೆಳಗ್ಗೆ 10 ರಿಂದ 12.30ರವರೆಗೆ ನಡೆಯಲಿದೆ.
ವಿಜ್ಞಾನ ವಿಷಯದ ಪರೀಕ್ಷೆ ಮಾರ್ಚ್ 27ರ ಬುಧವಾರ ಮಧ್ಯಾನ್ಹ 2.30ರಿಂದ 5 ಗಂಟೆಯವರೆಗೆ, ಮಾರ್ಚ್ 28ರ ಗುರುವಾರದಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಬೆಳಗ್ಗೆ 10 ರಿಂದ 12.30ರವರೆಗೆ ನಡೆಯಲಿದೆ.
ಇನ್ನು ಒಂಭತ್ತನೇ ತರಗತಿಗಳ ನಾಲ್ಕು ವಿಷಯಗಳ ಮೌಲ್ಯಾಂಕನ ಪರೀಕ್ಷೆ ಮಾರ್ಚ್ 25 ರಿಂದ 28 ರವರೆಗೆ ನಡೆಯಲಿವೆ.
ಮಾರ್ಚ್ 25ರ ಸೋಮವಾರದಂದು ತೃತೀಯ ಭಾಷೆ ಪರೀಕ್ಷೆ ಮಧ್ಯಾನ್ಹ 2ರಿಂದ 5 ಗಂಟೆವರೆಗೆ ಹಾಗೂ ಎನ್‌ಎಸ್‌ಕ್ಯೂಎಫ್ ಪರೀಕ್ಷೆಯು ಅಂದೇ ಮಧ್ಯಾನ್ಹ 2 ರಿಂದ 4.15 ರವರೆಗೆ ನಡೆಯಲಿದೆ.
ಗಣಿತ ವಿಷಯ ಪರೀಕ್ಷೆ ಮಾರ್ಚ್ 26ರ ಮಂಗಳವಾರದಂದು ಬೆಳಗ್ಗೆ 10 ರಿಂದ ಮಧ್ಯಾನ್ಹ 1.15 ರವರೆಗೆ, ಮಾರ್ಚ್ 27ರ ಬುಧವಾರದಂದು ವಿಜ್ಞಾನ ವಿಷಯ ಪರೀಕ್ಷೆ ಮಧ್ಯಾನ್ಹ 2ರಿಂದ ಸಂಜೆ 5.15ರವರೆಗೆ ಹಾಗೂ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಮಾರ್ಚ್ 28ರ ಗುರುವಾರದಂದು ಬೆಳಗ್ಗೆ 10ರಿಂದ ಮಧ್ಯಾನ್ಹ 1.15ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.