ಚಿಕ್ಕಬಳ್ಳಾಪುರ, ಕೋಲಾರ ಸೇರಿ 14 ಕ್ಷೇತ್ರಗಳಲ್ಲಿ ಅಧಿಸೂಚನೆ
ಬೆಂಗಳೂರು: ಚಿಕ್ಕಬಳ್ಳಾಪುರ, ಕೋಲಾರ ಸೇರಿ ರಾಜ್ಯದ 14 ಲೋಕಸಭೆ ಕ್ಷೇತ್ರಗಳಿಗೆ ಇಂದಿನಿಂದಲೇ (ಮಾರ್ಚ್ 28) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳ ವ್ಯಾಪ್ತಿಯ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಚುನಾವಣಾ ಪ್ರಕ್ರಿಯೆ ಆರಂಭಕ್ಕೆ ಅಧಿಸೂಚನೆ ಹೊರಡಿಸಲಿದ್ದಾರೆ.
ಅಧಿಸೂಚನೆ ಹೊರಬೀಳುತ್ತಿದ್ದಂತೆ ಸ್ಪರ್ಧಾ ಕಣಕ್ಕಿಳಿಯುವ ಆಕಾಂಕ್ಷಿಗಳು ಆಯೋಗದ ನಿಯಮಾನುಸಾರ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ.
ಮೈಸೂರು-ಕೊಡಗು, ಮಂಡ್ಯ ಅಲ್ಲದೆ, ಚಾಮರಾಜನಗರ, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದೆ.
ಏಪ್ರಿಲ್ 4 ಕೊನೆ ದಿನ
ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ, ಏಪ್ರಿಲ್ 5 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಏಪ್ರಿಲ್ 26 ರಂದು ಎಲ್ಲಾ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮತದಾನ ನಡೆದ 38 ದಿನಗಳ ನಂತರ ಅಂದರೆ, ಜೂನ್ 4 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ರಾಜ್ಯವನ್ನು ಉತ್ತರ ಮತ್ತು ದಕ್ಷಿಣ ಕರ್ನಾಟಕವಾಗಿ ವಿಭಜಿಸಿರುವ ಆಯೋಗ ತಲಾ 14 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸುತ್ತಿದೆ.
ಚಾಮರಾಜನಗರ, ಕೋಲಾರ, ಚಿತ್ರದುರ್ಗ ಮೂರು ಮೀಸಲು ಕ್ಷೇತ್ರಗಳಾಗಿದ್ದು, ಉಳಿದವು ಸಾಮಾನ್ಯ ಕ್ಷೇತ್ರಗಳಾಗಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ರಾಜವಂಶಸ್ತ ಯದುವೀರ್ ಶ್ರೀಕೃಷ್ಣದತ್ತ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಪ್ರತಿಷ್ಠೆಯ ಕ್ಷೇತ್ರಗಳು
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್‌ನಿಂದಲೂ, ಎನ್‌ಡಿಎ ಅಭ್ಯರ್ಥಿಯಾಗಿ ಹೃದಯ ತಜ್ಞ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಇವು ಪ್ರತಿಷ್ಠೆಯ ಕ್ಷೇತ್ರಗಳಾಗಿವೆ.
ಈ 14 ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಉಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಒಂದು ಕ್ಷೇತ್ರದಲ್ಲೂ, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ್ದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದವು, ಆದರೆ ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್, ಎನ್‌ಡಿಎ ಮೈತ್ರಿ ಕೂಟದ ಪಾಲುದಾರನಾಗಿದ್ದು, ಈ ಬಾರಿ ಬಿಜೆಪಿ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತಿವೆ.
ಮೊದಲ ಹಂತದ ಎಲ್ಲಾ 14 ಕ್ಷೇತ್ರಗಳಲ್ಲೂ ಕಾಗ್ರೆಸ್ ಸ್ಪರ್ಧಿಸಲಿದ್ದು, ಬಿಜೆಪಿ 11 ರಲ್ಲೂ, ಜೆಡಿಎಸ್ ಮೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಹೋರಾಟ ನಡೆಸುತ್ತಿವೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇಲ್ಲ
ಕಾಂಗ್ರೆಸ್ ಇನ್ನು ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿಲ್ಲ, ಬಿಜೆಪಿ ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸಿಲ್ಲ. ಆದರೆ, ನಾಳೆಯಿಂದಲೇ ಈ ಎಲ್ಲಾ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದೆ.
ಈ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎನ್‌ಡಿಎ ಮಿತ್ರ ಪಕ್ಷಗಳು ಬಹಳ ಪ್ರತಿಷ್ಠೆಯಾಗಿ ತೆಗದುಕೊಂಡಿವೆ.
ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ಕಾಂಗ್ರೆಸ್‌ಗೆ ಬಲ ತರಬೇಕೆಂದು ಸಿದ್ದರಾಮಯ್ಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಇನ್ನು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ರಾಜ್ಯದಿಂದ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿ ದೆಹಲಿಗೆ ಉಡುಗೊರೆಯಾಗಿ ಕೊಡಲು ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ವಿರುದ್ಧ ಸೆಣಸಾಟಕ್ಕೆ ಇಳಿದಿವೆ.