ಸಿಇಟಿ ಪರೀಕ್ಷೆಗೆ online ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ
ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳ ನೇಮಕಾತಿ ಅಂಗವಾಗಿ ಜನವರಿ 23ರಂದು ನಡೆಸಿದ್ದ ಮರು ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಪತ್ರಿಕೆ-1 ಮತ್ತು 2ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 545 ಹುದ್ದೆಗಳ ನೇಮಕಕ್ಕೆ KEA ಮರು ಪರೀಕ್ಷೆ ನಡೆಸಿತ್ತು. ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿಯನ್ನು ಸದ್ಯದಲ್ಲೇ ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ನಂತರ ರೋಸ್ಟರ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಅವರು ಪ್ರಕಟಿಸಲಿದ್ದಾರೆ.
ಏಪ್ರಿಲ್ 18 ಮತ್ತು 19ರಂದು ನಡೆಸಲು ಉದ್ದೇಶಿಸಿರುವ ಸಿಇಟಿ ಪರೀಕ್ಷೆಗೆ online ಅರ್ಜಿ ಸಲ್ಲಿಸಲು ಮಾರ್ಚ್ 30ರ ಬೆಳಗ್ಗೆ 11 ಗಂಟೆಯಿಂದ ಏಪ್ರಿಲ್ 1ರ ಸಂಜೆ 4 ಗಂಟೆಯವರೆಗೆ ಮತ್ತೊಂದು ಅವಕಾಶ ಕೊಡಲಾಗಿದೆ.
ಅರ್ಜಿ ಸಲ್ಲಿಸುವವರು ಏಪ್ರಿಲ್ 1ರ ರಾತ್ರಿ 8 ಗಂಟೆಯವರೆಗೂ ಶುಲ್ಕ ಪಾವತಿಸಬಹುದು. ಈ ಅವಕಾಶವನ್ನು ಬಳಸಿಕೊಳ್ಳುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು.
ಈ ವಿಷಯದಲ್ಲಿ ಯಾವುದೇ ತಕರಾರುಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಜನವರಿ 23 ರಂದು 42 ನಾನಾ ವಿಷಯಗಳಿಗೆ ನಡೆಸಲಾಗಿದ್ದ ಕೆಸೆಟ್ ಪರೀಕ್ಷೆಯ ಪೈಕಿ ಆಕ್ಷೇಪಣೆಗಳು ಕಂಡುಬಂದಿದ್ದ 23 ವಿಷಯಗಳಲ್ಲಿ ಮನಃಶಾಸ್ತ್ರವನ್ನು ಹೊರತುಪಡಿಸಿ, ಉಳಿದ 22 ವಿಷಯಗಳ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ರಮ್ಯಾ ಅವರು ತಿಳಿಸಿದ್ದಾರೆ.
ಪದವಿ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಇದು ಅರ್ಹತಾ ಪರೀಕ್ಷೆ ಆಗಿದ್ದು, ಅಭ್ಯರ್ಥಿಗಳ ಆಕ್ಷೇಪಣೆಗಳನ್ನು ಆಧರಿಸಿ, ಪರಿಷ್ಕೃತ ಕೀ ಉತ್ತರಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.