ರಣಬಿಸಿಲನ್ನು ತಡೆಯುವ ಶಕ್ತಿ ಕೇವಲ ಮರಗಿಡಗಳಿಗೆ ಮಾತ್ರ ಇದೆ
by GS Bharath Gudibande
ಗುಡಿಬಂಡೆ: ಇತ್ತೀಚಿನ ಸಮೀಕ್ಷೆ ಪ್ರಕಾರ ದೇಶಕ್ಕೆ ಅತ್ಯಂತ ದೊಡ್ಡ ನಷ್ಟ ಭ್ರಷ್ಟಾಚಾರದಿಂದ ಆಗುತ್ತಿಲ್ಲ. ಬದಲಿಗೆ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯೇ ಪ್ರಮುಖ ಕಾರಣ ಹಾಗಾಗಿ ಎಲ್ಲರೂ ಪರಿಸರ ಉಳಿಸಲು ಮುಂದಾಗಬೇಕು ಎಂದು ಸ್ಟಾರ್ ಫೋರ್ಡ್ ಸಂಸ್ಥೆ ಮಾಲೀಕ ಹಾಗೂ ಪ್ರೊ.ಸುರೇಶ್ ಅವರು ತಿಳಿಸಿದರು.
ಗುಡಿಬಂಡೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪರಿಸರ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾತಾವರಣ ಬದಲಾವಣೆಯಿಂದ ಪ್ರವಾಹಗಳು, ಭೂಕಂಪಗಳು ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಜಗತ್ತು ಎದುರಿಸಬೇಕಾಗುತ್ತದೆ. 250 ಬಿಲಿಯನ್ ಡಾಲರ್ ಅಷ್ಟು ಹಣ ಪ್ರಪಂಚಕ್ಕೆ ನಷ್ಟವಾಗುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ ಎಂದರು.
ಗಿಡ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಿ
ಹಬ್ಬ ಹರಿದಿನಗಳಲ್ಲಿ ಕುಟುಂಬಸ್ಥರು ಎಲ್ಲಾ ಒಂದು ಕಡೆ ಸೇರುತ್ತೇವೆ. ಅಂತಹ ಸಂತೋಷ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಗಿಡಗವನ್ನು ಹಾಕುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಮಹತ್ವದ ಕೆಲಸಕ್ಕೆ ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಹುಡುಗರು ಪಾಸ್ ಆದರೂ ಕುಡಿಯುತ್ತಾರೆ, ಫೇಲಾದರೂ ಕುಡಿಯುತ್ತಾರೆ. ಅದೇ ರೀತಿ ಗುಂಪುಮರದ ಆನಂದ್ ಅವರು ಯಾವ ಸಂದರ್ಭದಲ್ಲಿ ಗಿಡ ಹಾಕಬಹುದು ಎಂಬ ಸಮಯಕ್ಕೆ ಕಾಯುತ್ತಿರುತ್ತಾರೆ. ಅದೇ ರೀತಿ ನಾವೆಲ್ಲರೂ ಗಿಡ ಹಾಕಬೇಕು ಎಂದು ಅವರು ಹೇಳಿದರು.
ಬಿಸಿಲನ್ನು ತಡೆಯುವುದು ಮರ-ಗಿಡ ಮಾತ್ರ
ಪರಿಸರ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗುಂಪುಮರದ ಆನಂದ್ ಮಾತನಾಡಿ; ಗುಡಿಬಂಡೆಯಲ್ಲಿ ಶೇ.40ಕ್ಕೂ ಹೆಚ್ಚು ಉಷ್ಣಾಂಶ ಹೆಚ್ಚಾಗಿದೆ. ಬಿಸಿಲಿನ ಬೇಗೆಗೆ ತತ್ತರಿಸುತ್ತಿದ್ದೇವೆ. ಗಿಡ ಮರಗಳು ಇಲ್ಲದಿದ್ದರೆ ಮನುಷ್ಯರು ಸತ್ತುಹೋಗುತ್ತಾರೆ. ಈ ರಣ ಬಿಸಿಲನ್ನು ತಡೆಯುವ ಶಕ್ತಿ ಗಿಡ ಮರಗಳಿಗೆ ಮಾತ್ರ ಇದೆ. ವಾಹನಗಳು, ಕಾರುಗಳನ್ನು ನಿಲ್ಲಿಸಲು ನಮಗೆ ನೆರಳಿನ ಅವಶ್ಯಕತೆ ಎಷ್ಟು ಇದೆಯೋ. ಹಾಗಾಗಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಪರಿಸರ ಉಳಿಸಬೇಕು. ಮನೆಯಲ್ಲಿ ಇರುವ ಪೋಷಕರು ಇದರ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಕರೆ ನೀಡಿದರು.
ಗಿಡನೆಡುವ ಕಾರ್ಯಕ್ರಮದಲ್ಲಿ ಪರಿಸರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ನವೀನ್ ರಾಜ್ ಕನ್ನಡಿಗ, ತಾಲ್ಲೂಕು ಅಧ್ಯಕ್ಷ ಬಿ.ಮಂಜುನಾಥ್, ಖಂಜಾಚಿ ಶ್ರೀನಾಥ್ ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ಎಸ್.ಎನ್ ಟೆಲಿಲಿಂಕ್ಸ್ ಮಾಲೀಕ ಮಂಜುನಾಥ್, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಪರಿಸರವಾದಿಗಳಾದ ವೆಂಕಟೇಶಪ್ಪ, ವೇಣುಗೋಪಾಲ, ಪರಮೇಶ್, ಮಧು, ಅನುಪಮ ವೆಂಕಟೇಶ್, ಮೂರ್ತಿ, ನಾಗೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.