ವಿಜ್ಞಾನದಲ್ಲಿ ವಿದ್ಯಾಲಕ್ಷ್ಮಿ ಪ್ರಥಮ
ಬೆಂಗಳೂರು: ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಹೆಣ್ಣು ಮಕ್ಕಳೇ ಮುಂದಿದ್ದಾರೆ.
ರಾಜ್ಯದಲ್ಲಿ ಒಟ್ಟು ಶೇಕಡ 81.15ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಬಾರಿ 6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 5,52,690 ಮಂದಿ ತೇರ್ಗಡೆಯಾಗಿದ್ದಾರೆ.
ಬಾಲಕಿಯರು ಶೇ. 84.87ರಷ್ಟು ತೇರ್ಗಡೆ ಹೊಂದಿದ್ದರೆ, ಬಾಲಕರು ಶೇ. 76.98 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
1,53,370 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ, ಶೇ.85ಕ್ಕಿಂತ ಕಡಿಮೆ ಹಾಗೂ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದವರು 2,89,733, ಶೇ. 60ಕ್ಕಿಂತ ಕಡಿಮೆ ಹಾಗೂ ಶೇ.50ಕ್ಕಿಂತ ಹೆಚ್ಚು 72,098, ಶೇ.50ಕ್ಕಿಂತ ಕಡಿಮೆ ಪಡೆದವರು 37,489 ವಿದ್ಯಾರ್ಥಿಗಳು.
ವಿಜ್ಞಾನ ವಿಭಾಗದಲ್ಲಿ 89.96ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 80.94 ರಷ್ಟು, ಕಲಾ ವಿಭಾಗದಲ್ಲಿ 68.36 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ
ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲೆ ಶೇ.97.37ರಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದು, ಗದಗ ಕೊನೆಯ ಸ್ಥಾನಕ್ಕೆ ನಿಂತಿದೆ.
ಉಡುಪಿ ಶೇ.96.80, ವಿಜಯಪುರ ಶೇ.94.89 ತೇರ್ಗಡೆಗೊಂಡು ನಂತರದ ಸ್ಥಾನ ಪಡೆದುಕೊಂಡಿವೆ.
ಇನ್ನು ಕೊಡಗು ಶೇ.92.13, ಹಾಸನ ಶೇ.85.83, ಚಾಮರಾಜನಗರ ಶೇ.84.99, ಮೈಸೂರು ಶೇ. 83.13, ದಾವಣಗೆರೆ ಶೇ.80.96, ಮಂಡ್ಯ ಶೇ.80.56ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಮೂರೂ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ನಗರ ಪ್ರದೇಶದ ಜತೆ ಗ್ರಾಮೀಣ ವಿದ್ಯಾರ್ಥಿಗಳು ಹಂಚಿಕೆ ಮಾಡಿಕೊಂಡಿದ್ದಾರೆ.
ವಿಜ್ಞಾನದಲ್ಲಿ ವಿದ್ಯಾಲಕ್ಷ್ಮಿ ಪ್ರಥಮ
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾನಿಕೇತನದ ವಿದ್ಯಾಲಕ್ಷ್ಮಿ ಗರಿಷ್ಟ 600 ಅಂಕಗಳ ಪೈಕಿ 598 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ.
ನಂತರದಲ್ಲಿ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವೈಷ್ಣವಿ ಹಾಗೂ ಮೈಸೂರು ಆದಿಚುಂಚನಗಿರಿ ಪಿಯು ಕಾಲೇಜಿನ ಕೆ.ಎಚ್.ಉರ್ಮಿಶ್ 597 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ತುಮಕೂರು ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ಶಿವಮೊಗ್ಗದ ಕುಮದ್ವತಿ ಪಿಯು ಕಾಲೇಜಿನ ಪವನ್ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಹರ್ಷಿತ್ 594 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಬೆಂಗಳೂರಿನ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ಮೇಧಾ ಡಿ. 596 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ.
ಕಲಾ ವಿಭಾಗದಲ್ಲಿ ಮೂವರು ಪ್ರಥಮ
ಮೂರೂ ವಿಭಾಗಗಳಲ್ಲಿ ಬಾಲಕಿಯರೇ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬೆಂಗಳೂರು ಜಯನಗರದ ಎನ್‌ಎಂಕೆಆರ್‌ವಿಯ ಮೇಧಾ, ವಿಜಯಪುರದ ಎಸ್‌ಎಸ್ ಪಿಯು ಕಾಲೇಜಿನ ವೇದಾಂತ್ ಹಾಗೂ ಬಳ್ಳಾರಿಯ ಇಂದೂ ಪಿಯು ಕಾಲೇಜಿನ ಕವಿತಾ ಬಿ.ವಿ ತಲಾ 596 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಧಾರವಾಡ ಕೆಇಬಿ ಪಿಯು ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಗಣಿತದಲ್ಲಿ 6,960 ಮಂದಿ, ಜೀವಶಾಸ್ತ್ರದಲ್ಲಿ 5,925 ಮಂದಿ, ಕನ್ನಡದಲ್ಲಿ 2,570 ಮಂದಿ, ಸಂಸ್ಕೃತದಲ್ಲಿ 1,499 ಮಂದಿ, ಅರ್ಥಶಾಸ್ತ್ರದಲ್ಲಿ 1,403 ಮಂದಿ, ಗಣಕ ವಿಜ್ಞಾನದಲ್ಲಿ 2,661 ಮಂದಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಶೇಕಡ 41.98 ಮಂದಿ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದವರಲ್ಲಿ ಶೇಕಡ 48.16 ಮಂದಿ ಉತ್ತೀರ್ಣರಾಗಿದ್ದಾರೆ.
ಮರುಮೌಲ್ಯಮಾಪನ ಹೇಗೆ?
ಅಧಿಕೃತ ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ನೋಡಿಕೊಳ್ಳಬಹುದಾಗಿದೆ, ಇದೇ ವೇಳೆ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ, ಡೌನ್ಲೋಡ್ ಮಾಡಿಕೊಳ್ಳಲು ಹಾಗೂ ಮರುಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನೂ ಕಲ್ಪಿಸಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವಿದೆ, ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ, ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ಪಾವತಿಸಬೇಕಿದ್ದು, ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರೂ. ಆಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿ ಫಲಿತಾಂಶ ಪರಿಶೀಲಿಸಬಹುದಾಗಿದೆ.
Comments 1