ರಾಜ್ಯ ರಾಜ್ಯಗಳನ್ನು ದಾಟಿ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದರು
ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ರಾಮೇಶ್ವರಂ ಕೆಫೆ (Rameshwaaram cafe) ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಎನ್‌ಐಎ (NIA) ಅಧಿಕಾರಿಗಳು ಭಾರೀ ಮುನ್ನಡೆ ಸಾಧಿಸಿದ್ದಾರೆ.
ಈ ಸ್ಫೋಟ ಪ್ರಕರಣದ ಪ್ರಮುಖ ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹನನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾ ನಗರದಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ; ಈ ಪ್ರಕರಣದಲ್ಲಿ ಇವರಿಬ್ಬರಿಗೆ ಸಹಾಯ ಮಾಡಿದ್ದ ಎನ್ನಲಾದ ಮುಜಾಮೀಲ್ ಷರೀಫ್ ಎಂಬ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ತೀರ್ಥಹಳ್ಳಿಯ ಮುಸಾವೀರ್ ಹಾಗೂ ಅಬ್ದುಲ್ ತಾಹ ಬಾಂಬ್ ಸ್ಫೋಟ ಘಟನೆ ನಂತರ ತಲೆಮರೆಸಿಕೊಂಡಿದ್ದರು. ಕಲಬುರಗಿ ಮಾರ್ಗವಾಗಿ ಪಶ್ಚಿಮ ಬಂಗಾಳ ತಲುಪಿ ಅಲ್ಲೇ ಅಡಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‍ಐಎ ವ್ಯಾಪಕ ಶೋಧ ನಡೆಸಿತ್ತು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಮತ್ತು ಮಸಾವೀರ್ ಬಗ್ಗೆ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಘೋಷಿಸಿತ್ತು. ಈ ಇಬ್ಬರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿ ತೀವ್ರ ತನಿಖೆ ನಡೆಸಿತ್ತು.
ವಿದೇಶಗಳಿಂದ ಹಣದ ಹರಿವು
ಅಬ್ದುಲ್ ಮತೀನ್ ತಾಹ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ರಾಮೇಶ್ವರಂ ಬಾಂಬ್ ಪ್ರಕರಣದ ಪ್ರಮುಖ ರೂವಾರಿಯೂ ಈತನೇ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಈತ ಎನ್‌ಐಎ ಮೋಸ್ಟ್ ವಾಂಟೆಡ್‌ಗಳ ಪಟ್ಟಿಯಲ್ಲಿದ್ದ.
ಅಬ್ದುಲ್ ಮತೀನ್ ವಿದೇಶಗಳಿಂದ ಹಣ ತರಿಸಿಕೊಂಡು ಅದನ್ನು ವಿಧ್ವಂಸಕ ಕೃತ್ಯ ನಡೆಸಲು, ಯುವಕರನ್ನು ಜಿಹಾದಿಗಳನ್ನಾಗಿ ತಯಾರು ಮಾಡಲು ಬಳಸುತ್ತಿದ್ದ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಈತ ಅಲ್ ಹಿಂದ್ ಸಂಘಟನೆಯಲ್ಲಿದ್ದು, ತೀರ್ಥಹಳ್ಳಿ ಬಿಡುವುದಕ್ಕೂ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ನಂತರ ಬಿಹಾರದ ಪಟನಾದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ, ಅಲ್ ಹಿಂದ್ ಸಂಘಟನೆ ಸೇರಿದ ನಂತರ ಕುಕ್ಕರ್ ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದ ಎಂದು ಗೊತ್ತಾಗಿದೆ.
ಅಡಗಿಕೊಳ್ಳಲು ಸಹಾಯ
ಅಲ್ ಹಿಂದ್ ಸಂಘಟನೆ ಸದಸ್ಯರಿಗೆ ಅಬ್ದುಲ್ ಮತೀನ್ ತಾಹ ಅಡಗಿಕೊಳ್ಳಲು ಸಹಾಯ ಮಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನವನ್ನೂ ಎನ್‌ಐಎ ಘೋಷಿಸಿತ್ತು.
ಮಂಗಳೂರಿನಲ್ಲಿ ಈತ ನಡೆಸಿದ ಮೊದಲ ಪ್ರಯೋಗ ವಿಫಲವಾದ ನಂತರ ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ. ಅದಕ್ಕಾಗಿ ಬೆಂಗಳೂರು ಐಟಿ ವಲಯದಲ್ಲಿರುವ ಮಾರತ್ ಹಳ್ಳಿ ಸಮೀಪದ ಕುಂಡಲಹಳ್ಳಿ ಗೇಟ್ ಬಳಿ ಇರುವ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿಕೊಂಡಿದ್ದ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿ ಆ ಮೂಲಕ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ತರುವುದು ಹಾಗೂ ಐಟಿ ಉದ್ಯಮದಲ್ಲಿ ಭಯಭೀತಿ ಉಂಟು ಮಾಡುವುದು ಆರೋಪಿಗಳ ದುರುದ್ದೇಶ ಆಗಿತ್ತು ಎನ್ನಲಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ನಂತರ ಈ ಇಬ್ಬರು ಅಸ್ಸಾಂ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿ ಕೊಲ್ಕತಾದ ಮನೆಯೊಂದರಲ್ಲಿ ಅಡಗಿಕೊಂಡಿದ್ದರು.
ನಕಲಿ ದಾಖಲೆ ಬಳಸಿಕೊಂಡು ಪರಾರಿ
ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹ ಇಬ್ಬರೂ ನಕಲಿ ದಾಖಲೆಗಳೊಂದಿಗೆ ತಲೆಮರೆಸಿಕೊಂಡಿದ್ದರು. ಈ ದಾಖಲೆಗಳ ಸಹಾಯದಿಂದಲೇ ಪಶ್ಚಿಮ ಬಂಗಾಳದ ತಮಿಳುನಾಡು, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಾಂಬ್ ಸ್ಫೋಟ ಆರೋಪಿಗಳಿಗಾಗಿ ಎನ್‌ಐಎ ಶೋಧನೆ ನಡೆಸಿತ್ತು. ಅಧಿಕಾರಿಗಳಿಗೆ ದೊರೆತ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರ ನೆರವಿನಿಂದ ಇವರನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಬೆಂಗಳೂರಿಗೆ ಕರೆತರಲಾಗಿದೆ.