ಪ್ರಧಾನಿ ನರೇಂದ್ರ ಮೋದಿ ಪ್ರಚಾರ, ವೇದಿಕೆ ಹಂಚಿಕೊಂಡ ಮಾಜಿ ಪ್ರಧಾನಿ; ಡಾ.ಕೆ.ಸುಧಾಕರ್, ಎಂ.ಮಲ್ಲೇಶ್ ಬಾಬು ಅವರ ಪರವಾಗಿ ಪ್ರಚಾರ
ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಬಗ್ಗೆ ಪತ್ರಿಕೆಗಳಿಗೆ ನೀಡಿದ್ದ ಚೊಂಬಿನ ಜಾಹೀರಾತಿನ ಬಗ್ಗೆ ಬೆಂಕಿ ಉಗುಳಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಹತ್ತು ವರ್ಷ ಆಡಳಿತ ನಡೆಸಿ ತಮ್ಮ ಕೈಗೆ ಕೊಟ್ಟ ಖಾಲಿ ಚೊಂಬನ್ನು ಮೋದಿ ಅವರು ಅಕ್ಷಯ ಪಾತ್ರೆ ಮಾಡಿದರು ಎಂದು ಗುಡುಗಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಬಿಜೆಪಿ-ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರೊಂದಿಗೆ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಕೋಲಾರದ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು; ಹತ್ತು ವರ್ಷಗಳ ಆಡಳಿತದಲ್ಲಿ ಅನೇಕ ಹಗರಣಗಳನ್ನು ನಡೆಸಿ ಮೋದಿ ಅವರ ಕೈಗೆ ಕಾಂಗ್ರೆಸ್ ಖಾಲಿ ಬೊಂಬನ್ನೇ ಕೊಟ್ಟಿತ್ತು. ಅದನ್ನು ತಮ್ಮ ಸಮರ್ಥ ನಾಯಕತ್ವದ ಮೂಲಕ ಅವರು ಅಕ್ಷಯ ಪಾತ್ರೆ ಮಾಡಿದ್ದಾರೆಂದು ಹೇಳಿದರು.
ಹತ್ತು ವರ್ಷಗಳಲ್ಲಿ ಖಾಲಿ ಚೊಂಬಿಗೆ ಸಂಪತ್ತು ತುಂಬಿ ದೇಶವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಪ್ರಧಾನಿಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಕ್ಷುಲ್ಲಕವಾಗಿ ಮಾತನಾಡುತ್ತಿರುವುದು ಅಕ್ಷಮ್ಯ ಎಂದು ಮಾಜಿ ಪ್ರಧಾನಿಗಳು ಕುಟವಾಗಿ ಟೀಕಿಸಿದರು.
ಯುಪಿಎ ಸರಕಾರ ದೇಶವನ್ನು ಲೂಟಿ ಮಾಡಿ,ಹಲವು ಯೋಜನೆಗಳಲ್ಲಿ ಭಾರೀ ಭ್ರಷ್ಟಾಚಾರ ಮಾಡಿ ದೇಶದ ಖಜಾನೆ ಲೂಟಿ ಮಾಡಿ ೨೦೧೪ರಲ್ಲಿ ಪ್ರಧಾನಿ ಆಗಿದ್ದ ನರೇಂದ್ರ ಮೋದಿ ಕೈಗೆ ಖಾಲಿ ಚೊಂಬನ್ನು ಕೊಟ್ಟಿದ್ದರು. ಅಂತಹ ಕಾಂಗ್ರೆಸ್ ಪಕ್ಷದವರು ಯಾವ ಉದ್ದೇಶಕ್ಕೆ ಚೊಂಬನ್ನು ಜಾಹೀರಾತಿನಂತೆ ಬಳಸಿದ್ದಾರೋ ಅದನ್ನೇ ನಾವು ಮೋದಿ ನೇತೃತ್ವದಲ್ಲಿ ಅಕ್ಷಯ ಪಾತ್ರೆ ಮಾಡುತ್ತೇವೆ ಎಂದು ಅವರು ಘೋಷಿಸಿದರು.
ದೇಶದ ಪ್ರಧಾನಿಯ ಬಗ್ಗೆ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ನಾಯಕರು ಕೀಳು ಅಭಿರುಚಿಯ ಟೀಕೆಗಳನ್ನು ಮಾಡುತ್ತಿರುವುದು ಸರಿಯಲ್ಲ. ಇದಕ್ಕೆ ನಾಡಿನ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ 28 ಲೋಕಸಭೆ ಸ್ಥಾನಗಳಲ್ಲಿ ೨೮ರಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದು ಸತ್ಯ ಎಂದರು. ಚಿಕ್ಕಬಳ್ಳಾಪುರ ಕೋಲಾರದ ಅಭ್ಯರ್ಥಿಗಳಾದ ಡಾ.ಕೆ.ಸುಧಾಕರ್, ಮಲ್ಲೇಶ್‌ಬಾಬು ಗೆಲ್ಲಿಸುವ ಮೂಲಕ ಮೋದಿ ಕೈ ಬಲಪಡಿಸಿ ಎಂದು ಅವರು ಮನವಿ ಮಾಡಿದರು.
ಕಳೆದ 10 ವರ್ಷಗಳಲ್ಲಿ ದೇಶದ ಪ್ರಾಚೀನ ರಾಷ್ಟೀಯ ಪಕ್ಷವಾಗಿದ್ದ ಕಾಂಗ್ರೆಸ್‌ಗೆ ವಿರೋಧಿ ಪಕ್ಷದ ನಾಯಕನ ಸ್ಥಾನ ಪಡೆಯುವ ಯೋಗ್ಯತೆ ಇಲ್ಲ.400 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಘೋಷಣೆ ಮಾಡಿರುವ ಮೋದಿ ತಾಕತ್ತು ಅರ್ಥ ಮಾಡಿಕೊಳ್ಳಿ. ಎರಡೂ ಕ್ಷೇತ್ರದಲ್ಲಿ ಗೆಲುವು ತಂದು ಕೊಟ್ಟರೆ ಕೃಷ್ಣಾ ನದಿ ನೀರು ಜಿಲ್ಲೆಗೆ ಹರಿಸಲು ಪ್ರಧಾನಿಗಳನ್ನು ನಾನು ಒಪ್ಪಿಸುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು.