ತನಿಖೆ ಮುಗಿದು ಸತ್ಯಾಂಶ ಹೊರಬರಲಿ ಎಂದ ಮಾಜಿ ಮುಖ್ಯಮಂತ್ರಿ; ಎಸ್ಐಟಿಗೆ ಬಿ.ಜಯಕುಮಾರ್ ಸಿಂಗ್ ನೇತೃತ್ವ
ಬೆಂಗಳೂರು: ಹಾಸನ ಜಿಲ್ಲೆಯ ಪ್ರಕರಣದ ತನಿಖೆಗೆ ಮುಖ್ಯಮಂತ್ರಿಗಳು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನ ಪ್ರಕಾರ ಯಾರೇ ತಪ್ಪು ಮಾಡಿರಲಿ.. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು ಅವರು.
ತನಿಖೆಯ ಮೂಲಕ ಎಲ್ಲಾ ಸತ್ಯಾಂಶಗಳು ಹೊರಗೆ ಬರಲಿ. ಯಾರೇ ತಪ್ಪೆಸಗಿದ್ದರೂ, ಅವರು ಯಾರೇ ಆಗಿದ್ದರೂ ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವ ಪ್ರಶ್ನೆ ಬರುವುದಿಲ್ಲ. ಆದ್ದರಿಂದ ತನಿಖೆಯ ವರದಿ ಸಂಪೂರ್ಣವಾಗಿ ಹೊರ ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದರು ಅವರು.
ಎಸ್ಐಟಿಗೆ ಬಿ.ಜಯಕುಮಾರ್ ಸಿಂಗ್ ನೇತೃತ್ವ
ವೀಡಿಯೋ ಪ್ರಕರಣ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಂಗಳೂರಿನ ಎಡಿಜಿಪಿ ಬಿ.ಜಯಕುಮಾರ್ ಸಿಂಗ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ. ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.
ಬಿ.ಜಯಕುಮಾರ್ ಸಿಂಗ್ ತಂಡದ ಮುಖ್ಯಸ್ಥರು ಎಂದು ಸರಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಖಾಸಗಿ ವೀಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕವಾಗಿ ಹರಿಬಿಟ್ಟ ವ್ಯಕ್ತಿಗಳನ್ನು ಪತ್ತೆ ಹಚ್ಚಿ ತನಿಖೆಗೆ ಒಳಪಡಿಸುವುದು ಮತ್ತು ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ಈ ವಿಶೇಷ ತನಿಖಾ ತಂಡ ರಚಿಸಲಾಗಿದೆ.