ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಕುಟುಕಿದ ಹೆಚ್.ಡಿ.ಕುಮಾರಸ್ವಾಮಿ; ಡಿಕೆಶಿಯಿಂದ ಶ್ರೀ ರಾಜರಾಜೇಶ್ವರ ದೇವರಿಗೆ ಅಪಪ್ರಚಾರ
ಬೆಂಗಳೂರು: ಕೇರಳದಲ್ಲಿ ಕೇರಳ ಕುರಿ, ಕೋಳಿ, ಮೇಕೆ, ಎಮ್ಮೆ ಬಲಿಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಇನ್ನೊಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಇವರು ಪ್ರತಿಯೊಂದಕ್ಕೂ ಎಸ್ ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಾರೆ, ಅಲ್ಲವೇ? ಬಲಿ ವಿಷಯಕ್ಕೂ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಇದು ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ನೀಡಿಕೆ ಅಲ್ಲವೇ? ನಾನು ಮಾಧ್ಯಮಗಳ ಮೂಲಕವೇ ಗಮನಿಸಿದೆ. ಸಿಎಂ ಮತ್ತು ನನ್ನ ವಿರುದ್ಧ ಮಾಡಿಸುತ್ತಿರುವ ಶತ್ರು ಭೈರವಿ ಯಾಗ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ವಾಮಾಚಾರ ಎಂದರೆ ಸಾಮಾನ್ಯವೇ? ಹಾಗಾಗಿ ಅದರ ತನಿಖೆಗೂ ಒಂದು ಎಸ್ಐಟಿ ರಚನೆ ಮಾಡಲಿ ಎಂದು ಅವರು ಹೇಳಿದರು.
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು
ಡಿಸಿಎಂ ಅವರು ಹೇಳಿದ್ದಾರೆ. ಇದು ಮಾಟ ಮಂತ್ರ ಎಂದು ಕಥೆ ಕಟ್ಟಿದ್ದಾರೆ. ಅವರ ಅಷ್ಟೂ ಹೇಳಿಕೆಯನ್ನು ಗಮನಿಸಿದ್ದೇನೆ. ಒಂದು ಮಾತನ್ನು ಹೇಳಲು ಬಯಸುತ್ತೇನೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು.’ ಎಂದು. ದಾಸಶ್ರೇಷ್ಠ ಪುರಂದರದಾಸರು ರಚಿಸಿರುವ ಪದವಿದು. ಅವರು ಹೇಳಿಕೆ ಕೊಡುವ ಮುನ್ನ ತಾವು ಅಲಂಕರಿಸಿರುವ ಹುದ್ದೆಯ ಘನತೆ ಅರಿಯಬೇಕಿತ್ತು. ಅವರಿಗೆ ಆ ಸ್ಥಾನದ ಮೌಲ್ಯ ಇನ್ನೂ ಅರ್ಥವಾಗಿಲ್ಲ ಎಂದು ಅವರು ಟೀಕಿಸಿದರು.
ಶ್ರೀ ರಾಜರಾಜೇಶ್ವರ ಸನ್ನಿಧಾನ
ರಾಜರಾಜೇಶ್ವರ ದೇವರಿಗೆ ಅಪಚಾರ
‘ಲೋಕದ ಡೊಂಕ ನೀವೇಕೆ ತಿದ್ದುವಿರಿ..’ ಎಂದು ಈ ಹಿಂದೆ ಡಿಕೆಶಿ ಹೇಳಿದ್ದ ವಚನವನ್ನು ಉಲ್ಲೇಖಿಸಿ ಟಾಂಗ್ ಕೊಟ್ಟ ಕುಮಾರಸ್ವಾಮಿ ಅವರು; ನಾನು ಅವರ ಮಾತನ್ನು ಅವರಿಗೇ ಹೇಳಲು ಬಯಸುತ್ತೇನೆ. ಮೊದಲು ನಿಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಿ. ಅದೆಂತದೋ ಶತ್ರು ಭೈರವಿ ಯಾಗವಂತೆ. ಅವರಿಗೆ ಭಕ್ತಿ ಇದೆಯಂತೆ. ಪವಿತ್ರ ಪುಣ್ಯಕ್ಷೇತ್ರ ಶ್ರೀ ರಾಜರಾಜೇಶ್ವರ ಸನ್ನಿಧಾನಕ್ಕೆ ಅವರೂ ಹೋಗಿದ್ದಾರೆ. ಅವರಿಗೆ ಈ ಯಾಗದ ಬಗ್ಗೆ ಪೂರ್ಣ ಮಾಹಿತಿ ಇರಬೇಕು. ಅಲ್ಲಿ ಯಾವ ರೀತಿಯ ಪೂಜೆ ನಡೆಯುತ್ತದೆ? ಆ ಕ್ಷೇತ್ರ ಮಹಿಮೆ ಏನು ಎನ್ನುವುದು ಅವರಿಗೆ ತಿಳಿದಿರುತ್ತದೆ ಅಲ್ಲವೇ? ಹಾಗಿದ್ದರೂ ಅವರು ಸುಳ್ಳು ಹೇಳಿ ಶ್ರೀ ರಾಜರಾಜೇಶ್ವರ ದೇವರಿಗೆ ಅಪಪ್ರಚಾರ ಎಸಗಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕುಟುಂಬದ ಕೋಣ, ಮೇಕೆ ಕಡಿಯಲ್ಲ
ಅವರು ನಮ್ಮ ಕುಟುಂಬದ ಮೇಲೆ ಏನೆಲ್ಲಾ ಚಿತಾವಣೆ ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನಮ್ಮ ಕುಟುಂಬದಲ್ಲಿ ಕುರಿ, ಮೇಕೆ, ಎಮ್ಮೆ, ಕೋಣ ಕಡಿಯೋದು ಯಾವತ್ತೂ ನಡೆದಿಲ್ಲ. ಅಂತಹ ಸಂಪ್ರದಾಯ ನಮ್ಮ ಕುಟುಂಬದಲ್ಲಿ ಇಲ್ಲ. ಪ್ರತಿ ತಿಂಗಳು ನಾನು ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ನಮ್ಮ ತಂದೆಯವರು ಪೂಜೆ ಮಾಡಿಸುತ್ತಾರೆ. ನಮ್ಮಿಬ್ಬರ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪೂಜೆ ಮಾಡಿ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇನ್ನೊಬ್ಬರಿಗೆ ಕೇಡು ಬಯಿಸಲು ಪೂಜೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು ಕುಮಾರಸ್ವಾಮಿ ಅವರು.
ಕೋಣ, ಹಂದಿ ಕೂಯ್ದು ಕೇಡು ಬಯಸಲ್ಲ ನಾವು, ಕೇಡು ಬಯಸೋದು ಅವರ ಸಂಸ್ಕೃತಿ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ ಅವರು; ದೇವೇಗೌಡರ ಅರವತ್ತು ವರ್ಷಗಳ ರಾಜಕೀಯ ಜೀವನದಲ್ಲಿ 3-4 ವರ್ಷ ಬಿಟ್ಟರೆ ಉಳಿದದ್ದು ಎಲ್ಲಾ ವಿರೋಧ ಪಕ್ಷದಲ್ಲೇ. ಒಂದು ವೇಳೆ ಕುರಿ, ಕೋಣ ಬಲಿ ಕೊಟ್ಟರೆ ಅಧಿಕಾರ ಸಿಗುತ್ತದೆ ಎನ್ನುವುದಾದರೆ ಇಷ್ಟೆಲ್ಲಾ ಕಷ್ಟ ಏನಕ್ಕೆ ಪಡಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.