ರಾಜ್ಯ ಸರಕಾರಕ್ಕೆ ಹೊಸ ಪೀಕಲಾಟ
ಬೆಂಗಳೂರು:ವಾಲ್ಮೀಕಿ ಹಗರಣದ ತನಿಖೆಯನ್ನು ಎಸ್‌ಐಟಿಯಿಂದ ಸಿಬಿಐಗೆ ವರ್ಗಾವಣೆ ಮಾಡುವಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದೆ.
ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಮೊತ್ತದ ಹಗರಣವನ್ನು ಸಿಬಿಐಗೆ ವರ್ಗಾವಣೆ ಮಾಡುವಂತೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಸಿಬಿಐಗೆ ನೋಟಿಸ್ ಜಾರಿ ನೀಡಿದೆ.
50 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ಹಗರಣ
ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಯೂನಿಯನ್ ಬ್ಯಾಂಕ್ ಪರ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಹಾಜರಾಗಿ, ಯಾವುದೇ ಪ್ರಕರಣದಲ್ಲಿ 50 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ಹಗರಣ ಕಂಡುಬಂದರೆ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕಾಗುತ್ತದೆ.
ಆದರೆ, ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರೇ ತನಿಖೆ ನಡೆತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಹಗರಣದ ತನಿಖೆಗೆ ಅಂತಾರಾಷ್ಟ್ರೀಯ ಪ್ರಾಮುಖ್ಯತೆ ಇದೆ, ಸ್ಥಳೀಯ ಪೊಲೀಸರು ಇಂತಹ ಪ್ರಕರಣಗಳ ತನಿಖೆ ನಡೆಸಬಾರದು ಎಂದು ಕೆಲವು ದಾಖಲೆಗಳನ್ನು ಪೀಠದ ಮುಂದೆ ಮಂಡಿಸಿ ಸಿಬಿಐಗೆ ವಹಿಸುವಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಸಿಬಿಐ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದರು.
ಎಫ್‌ಐಆರ್ ರದ್ದುಪಡಿಸಲು ಮನವಿ
ರಾಜ್ಯ ಪೊಲೀಸರು ಇ.ಡಿ. ಅಧಿಕಾರಿಗಳ ವಿರುದ್ಧ ಮಾಡಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಹೈಕೋರ್ಟ್ ಮೆಟ್ಟಿಲೇರಿದೆ.
ನಿಗಮದಲ್ಲಿ ನಡೆದಿರುವ 94.73 ಕೋಟಿ ರೂ. ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಲು ಒತ್ತಡ ಹೇರುತ್ತಿರುವ ಆರೋಪದಡಿ ಇ.ಡಿ. ಅಧಿಕಾರಿಗಳ ವಿರುದ್ಧ ನಿನ್ನೆ ನಗರದ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ಜಾರಿ ನಿರ್ದೇಶನಾಲಯ ಪರ ವಕೀಲ ಮಧುಕರ್ ದೇಶಪಾಂಡೆ, ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಮನವಿ ಸಲ್ಲಿಸಿದರು.