‘ಬೆಂಗಳೂರು ಕೊಚ್ಚೆ ನೀರು’ ಕೆರೆಗಳಿಗೆ ತುಂಬಿಸುವ HN ವ್ಯಾಲಿ ಕಾಮಗಾರಿಗಳನ್ನು ಚುರುಕುಗೊಳಿಸಿ ಎಂದು ಸೂಚಿಸಿದ ಸಣ್ಣ ನೀರಾವರಿ ಮಂತ್ರಿ!!
by GS Bharath Gudibande
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಹಾಗೂ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಹೆಚ್.ಎನ್ ವ್ಯಾಲಿಯ ಎರಡನೇ ಹಂತದ ಸಂಸ್ಕರಿಸಿದ ನೀರು ತುಂಬಿಸುವ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಸೂಚನೆ ನೀಡಿದ್ದಾರೆ.
ಬಾಗೇಪಲ್ಲಿ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿನ ಕೆರೆ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು ಸಚಿವರು.
ವೆಂಕಟಗಿರಿಕೋಟೆ ಕೆರೆ, ಕಂದವಾರ ಕೆರೆ ಹಾಗೂ ಪೂರ್ಣಸಾಗರ ಕೆರೆ ಬಳಿ ನಡೆಯುತ್ತಿರುವ ಪಂಪ್ ಹೌಸ್ ಕಾಮಗಾರಿಗಳನ್ನು ಅವರು ವೀಕ್ಷಿಸಿದರು.
HN ವ್ಯಾಲಿ ಕಾಮಗಾರಿಗಳನ್ನು ಚುರುಕುಗೊಳಿಸಿ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ವೃದ್ದಿಗೊಳಿಸುವ ನಿಟ್ಟಿನಲ್ಲಿ ಸಂಸ್ಕರಿಸಿದ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹೆಚ್‌ಎನ್ ವ್ಯಾಲಿಯಿಂದ ಎರಡನೇ ಹಂತದ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ಈ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದಿನ ಬಾರಿ ಭೇಟಿ ನೀಡಿದಾಗ ನೀಡಿದ್ದ ಸೂಚನೆಯನ್ನ ಅನುಷ್ಠಾನಗೊಳಿಸದೇ ಇರುವ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗೋಪಾಲ್ ಅವರನ್ನ ಸಚಿವರು ತರಾಟೆಗೆ ತಗೆದುಕೊಂಡರು. ಕಾಮಗಾರಿ ಪೂರ್ಣಗೊಳಿಸಲು ಇರುವಂತಹ ತೊಡಕುಗಳನ್ನ ನಿವಾರಿಸುವುದು ಅಧಿಕಾರಿಗಳ ಕರ್ತವ್ಯ. ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವುದಾಗಿ ಸೂಚನೆ ನೀಡಿದರು.
ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ನಡೆಯುತ್ತಿರುವ ಸಂಧರ್ಭದಲ್ಲಿ ಗುಣಮಟ್ಟ ಪರಿಶೀಲನೆಯ ಅಧಿಕಾರಿಗಳು ನಿಗಾ ವಹಿಸಬೇಕು. ಕಾಮಗಾರಿ ಪೂರ್ಣಗೊಂಡು ಬಿಲ್ ನೀಡುವುದಕ್ಕೂ ಮುನ್ನ ಧರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಕಡ್ಡಾಯ ಎಂದು ಸಚಿವರು ತಿಳಿಸಿದರು.
ಈ ಸಂಧರ್ಭದಲ್ಲಿ ಇಲಾಖೆಯ ದಕ್ಷಿಣ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನೀಯರ್ ಸಂಜೀವ್ ರಾಜು, ಕಾರ್ಯಪಾಲಕ ಅಭಿಯಂತರರಾದ ವಿಷ್ಣು ಕಾಮತ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನವರಾತ್ರಿ ಪೂಜೆಯಲ್ಲಿ ಸಚಿವರು ಭಾಗವಹಿಸಿದರು.
ಅಚ್ಚರಿ ತಂದ ಸಚಿವರ ನಡೆ
ಸಕಲೇಶಪುರದಿಂದ ಎತ್ತಿನಹೊಳೆ ನೀರು ಹರಿಸುವುದುಗಾಗಿ ಹೇಳಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಅವಿಭಜಿತ ಕೋಲಾರ ಜಿಲ್ಲೆಗೆ ಬೆಂಗಳೂರು ನಗರದ ಕೊಚ್ಚೆ ನೀರನ್ನೇ ಕಾಯಂ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕೇವಲ HN ವ್ಯಾಲಿ ಕಾಮಗಾರಿ ಹಾಗೂ ಕೊಚ್ಚೆ ನೀರು ಬಂದು ತುಂಬಿಕೊಳ್ಳುವ ಕೆರೆಗಳನ್ನು ವೀಕ್ಷಣೆ ಮಾಡಲು ಬಂದ ಸಚಿವ ಬೋಸರಾಜು ಅವರು ಎಲ್ಲಿಯೂ ಎತ್ತಿನಹೊಳೆ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವ ಭರವಸೆಯನ್ನು ಕೊಡಲಿಲ್ಲ.
ಸಚಿವರ ಈ ನಡೆಯ ಬಗ್ಗೆ ಸ್ಥಳೀಯ ಜನರಿಗೆ ತೀವ್ರ ಅಚ್ಚರಿ, ಅಸಮಾಧಾನ ಉಂಟು ಮಾಡಿದೆ. ಅಲ್ಲದೆ, ಎತ್ತಿನಹೊಳೆ ಯೋಜನೆಯ ಕೊನೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಪಶ್ಚಿಮಘಟ್ಟಗಳಿಂದ ನೀರು ಲಭ್ಯವಾಗುವ ಯಾವುದೇ ಸೂಚನೆಯೂ ಇಲ್ಲ. ಇದೊಂದು ಗುತ್ತಿಗೆದಾರರ ಕೇಂದ್ರಿತ ಯೋಜನೆ ಆಗಿದ್ದು, ಬರಪೀಡಿತ ಜಿಲ್ಲೆಗಳಿಗೆ ಹನಿ ನೀರು ಹರಿಯುವುದು ದುರ್ಲಭ. ಈ ಬಗ್ಗೆ ರಾಷ್ಟ್ರೀಯ ಹೈಡ್ರಾಲಜಿ ಸಂಸ್ಥೆ, ಕೇಂದ್ರೀಯ ಜಲಶಕ್ತಿ ಆಯೋಗ ಹಾಗೂ ದೇಶದ ಅಗ್ರಗಣ್ಯ ವೈಜ್ಞಾನಿಕ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆಗಳು ಈಗಾಗಲೇ ಬೆಳಕು ಚೆಲ್ಲಿವೆ. ಆದರೂ ಇವೆಲ್ಲ ಪರಿಣಿತ ಸಂಸ್ಥೆಗಳ ಎಚ್ಚರಿಕೆಯನ್ನು ಧಿಕ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರ ಹೆಸರಿನಲ್ಲಿ ಎತ್ತಿನಹೊಳೆಗೆ ಹಣ ಸುರಿಯುವ ಸರಕಾರಿ ದಂಧೆ ಮುಂದುವರಿದೆ.