ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರು & ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿ ಮೀಸಲಾತಿ
ಬೆಂಗಳೂರು: ಕಡೆಗೂ ಮರಳು ನೀತಿ ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ಇಂದಿನಿಂದಲೇ ಸಾಮಾನ್ಯ ಮರಳಿನ ಪ್ರತಿ ಮೆಟ್ರಿಕ್ ಟನ್‌ಗೆ 300 ರೂ. ಹಾಗೂ ಉತ್ತಮ ದರ್ಜೆಯ ಮರಳಿಗೆ 850 ರೂ.ನಂತೆ ದರ ನಿಗದಿ ಮಾಡಿದೆ.
ನದಿ ಪಾತ್ರದಲ್ಲಿ ದೊರಕುವ ಮರಳನ್ನು ಉತ್ತಮ ದರ್ಜೆ ಎಂದು ಪ್ರತಿ ಟನ್‌ಗೆ 850 ರೂ. ನಿಗದಿಪಡಿಸಿರುವ ಸರಕಾರ, ಪಂಚಾಯತಿ ಮಟ್ಟದ ಹಳ್ಳಕೊಳ್ಳದಲ್ಲಿ ತೆಗೆಯುವ ಮರಳಿಗೆ ಪ್ರತಿ ಟನ್‌ಗೆ 300 ರೂ.ನಂತೆ ದರ ನಿಗದಿ ಮಾಡಿದೆ.
ಕೈಗೆಟಕುವ ಬೆಲೆಗೆ
ಈ ಸಂಬಂಧ ತೋಟಗಾರಿಕೆ ಹಾಗೂ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟಕುವ ದರದಲ್ಲಿ ಮರಳು ಸಿಗಲಿ ಎಬ ಉದ್ದೇಶದಿಂದ ಮರಳು ನೀತಿ ಜಾರಿಗೆ ತಂದಿದ್ದೇವೆ. ಸಾರ್ವಜನಿಕ ಹಾಗೂ ಸ್ಥಳೀಯ ಸರಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ಬೆಲೆಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮರಳು ಪೂರೈಸಲು ಮೂರು ಶ್ರೇಣಿಗಳಾಗಿ ವಿಂಗಡಿಸಲಾಗಿದೆ ಎಂದಿದ್ದಾರೆ.
ಹಳ್ಳ-ಕೊಳ್ಳದಲ್ಲಿ ಲಭ್ಯವಿರುವ ಮರಳು ತೆಗೆದು ವಿಲೇವಾರಿ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ವಹಿಸಿ ಪ್ರತಿ ಮೆಟ್ರಿಕ್ ಟನ್ ಬೆಲೆಯನ್ನು 300 ರೂ.ಗೆ ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಖಾಸಗಿ ಗಣಿಗಾರಿಕೆ
ನದಿ ಹಾಗೂ ಅದರ ಪಾತ್ರಗಳಲ್ಲಿ ಲಭ್ಯವಿರುವ ಬ್ಲ್ಯಾಕ್‌ಗಳನ್ನು 4 ಮತ್ತು 5ನೇ ಉನ್ನತ ಶ್ರೇಣಿಯೆಂದು ಗುರುತಿಸಿ ಅಂತಹ ಪ್ರದೇಶ ಅಥವಾ ಗುಡ್ಡಗಳನ್ನು ಖಾಸಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಟೆಂಡರ್ ಮೂಲಕ ಈ ಬ್ಲ್ಯಾಕ್‌ಗಳನ್ನು ಪಡೆದು ಸರಕಾರಕ್ಕೆ ರಾಯಲ್ಟಿ ನೀಡಿ ಗಣಿಗಾರಿಕೆ ಮಾಡಬಹುದಾಗಿದೆ. ಹೊಸ ನೀತಿಯಂತೆ ಮರಳು ಬ್ಲ್ಯಾಕ್‌ಗಳ ಟೆಂಡರ್ ಅನ್ನು ಆಯಾ ಜಿಲ್ಲಾ ಸಮಿತಿಯಿಂದ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟರಿಗೆ ಮೀಸಲಾತಿ
ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲ್ಯಾಕ್‌ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿ ಮೀಸಲಾತಿ ಕಲ್ಪಿಸಲಾಗಿದೆ. ಈ ಉನ್ನತ ಶ್ರೇಣಿಯ ಮರಳಿಗೆ ರಾಜ್ಯದ್ಯಾಂತ ಪ್ರತಿ ಮೆಟ್ರಿಕ್ ಟನ್ ಮರಳಿಗೆ 850 ರೂ. ನಿಗದಿಪಡಿಸಲಾಗಿದೆ.
ಸರಕಾರ ನಿಗದಿಪಡಿಸುವ ಮಾರಾಟ ಬೆಲೆ ಮೊತ್ತದ ಶೇಕಡ 50ರಷ್ಟನ್ನು ಮಾರಾಟ ಬೆಲೆ ಎಂಬುದಾಗಿ ಹಾಗೂ ಇದರಲ್ಲಿ ಶೇಡಕ 60ರಷ್ಟನ್ನು ಕಟ್ ಆಫ್ ಬೆಲೆಯೆಂದು ನಿಗದಿಪಡಿಸಲಾಗಿರುತ್ತದೆ.
ಸೆಲ್ಲಿಂಗ್, ಕಟ್ ಆಫ್ ದರ
ಸೆಲ್ಲಿಂಗ್ ಮತು ಕಟ್ ಆಫ್ ಬೆಲೆಗೆ ಸಮನಾದ ಅಥವಾ ನಡುವೆ ಸಲ್ಲಿಸುವ ಕಡಿಮೆ ಟೆಂಡರ್ ಮೊತ್ತ ನಮೂದಿಸುವವರಿಗೆ ಯಶಸ್ವಿ ಬಿಡ್‌ದಾರರೆಂದು ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚು ಟೆಂಡರ್‌ದಾರರು ಏಕರೂಪ ಟೆಂಡರ್ ದರ ನಮೂದಿಸಿದಲ್ಲಿ ಲಾಟರಿ ಮೂಲಕ ಯಶಸ್ವಿ ಬಿಡ್‌ದಾರರನ್ನು ಆಯ್ಕೆ ಮಾಡಲಾಗುವುದು. ಗುತ್ತಿಗೆ ಪ್ರಕ್ರಿಯೆಯನ್ನು ಇ-ಪೋರ್ಟಲ್‌ನಲ್ಲಿ ಆಸಕ್ತ ವ್ಯಕ್ತಿ ಇಲ್ಲವೇ ಖಾಸಗಿ ಕಂಪನಿಗಳವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿ ಮಾಡಲಾಗುವುದು. ಇಂದಿನಿಂದಲೇ ಜಿಲ್ಲಾಧಿಕಾರಿಗಳು ಹೊಸ ನೀತಿಯಡಿ ಮರಳು ಗುತ್ತಿಗೆ ನೀಡಿ ಗ್ರಾಹಕರಿಗೆ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡಬಹುದು ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.