ಕಾಂಗ್ರೆಸ್ಸಿನಲ್ಲಿ ಬಿರುಸಿನ ಚರ್ಚೆಗೆ ಕಾರಣವಾದ ಡಿಕೆಶಿ ಹೇಳಿಕೆ; ಸಿದ್ದರಾಮಯ್ಯ ಪಾಳೆಯದಲ್ಲಿ ತಳಮಳಡಿಸಿಎಂ ಯಾವಾಗ ಒದೆಯುತ್ತಾರೆ ಎನ್ನುವ ಬಗ್ಗೆ ಶುರುವಾದ ಚರ್ಚೆ
ಬೆಳಗಾವಿ/ಬೆಂಗಳೂರು: ಅಧಿಕಾರ ಬೇಕು ಎಂದರೆ ಒದ್ದು ಕಿತ್ತುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ, ಅದರಲ್ಲಿಯೂ ಸಿದ್ದರಾಮಯ್ಯ ಅವರ ಪಾಳೆಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಖ್ಯವಾಗಿ ಇಂತಹ ಹೇಳಿಕೆ ಉದ್ಧಟತನದ ಪರಮಾವಧಿ ಎಂದು ಸಿದ್ದರಾಮಯ್ಯ ಅವರ ಕೆಲ ಆಪ್ತರು ಅತೃಪ್ತಿ ವ್ಯಕ್ತಪಡಿಸಿದ್ದು, ಡಿಕೆಶಿ ಮಾಡಲಿರುವ ಅಂತಹ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಬಿರುಸಿನ ಚಟುವಟಿಕೆ ಶುರು ಮಾಡಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿದೆ ಎಂದಿದ್ದರು ಡಿಕೆಶಿ. ಅಂತಹ ಒಪ್ಪಂದ ಆಗಿಯೇ ಇಲ್ಲ ಎಂದು ಟಾಂಗ್ ನೀಡಿದ್ದರು ಸಿಎಂ. ಇದು ಕಾಂಗ್ರೆಸ್ ಪಕ್ಷದಲ್ಲಿ ಬಣ ಬಡಿದಾಟಕ್ಕೆ ಹೊಸ ವೇದಿಕೆ ಸೃಷ್ಟಿ ಮಾಡಿಕೊಟ್ಟಿತ್ತು. ಕೊನೆಗೆ, ಅದರ ತೀವ್ರತೆ ಅರ್ಥ ಮಾಡಿಕೊಂಡಿದ್ದ ಡಿಕೆಶಿ, ಅಧಿಕಾರ ಹಂಚಿಕೆಯ ಬಗ್ಗೆ ಯಾರೂ ತುಟಿ ಬಿಚ್ಚಬಾರದು ಎಂದು ತಾಕೀತು ಮಾಡಿದ್ದರು.
ಅದಾದ ಮೇಲೆ ಬೂದಿ ಮುಚ್ಚಿದ ಕೆಂಡದಂತೆ ಇದ್ದ ವಿವಾದ ಇದೀಗ ಡಿಕೆಶಿ ಅವರು, ಒದ್ದು ಅಧಿಕಾರ ಕಿತ್ತುಕೊಳ್ಳಬೇಕು ಎಂದು ಸದನದಲ್ಲಿ ನೀಡಿದ ಹೇಳಿಕೆ ಹಿನ್ನೆಲೆ, ಅದರ ಒಳಮರ್ಮದ ಬಗ್ಗೆ ಪಕ್ಷದಲ್ಲಿ ತಳಮಳ ಶುರುವಾಗಿದೆ.
ಮೇಲಾಗಿ, ನಾನು ಎಸ್.ಎಂ.ಕೃಷ್ಣ ಅವರ ಮನೆ ಬಾಗಿಲನ್ನು ಒದ್ದಿದ್ದೆ. ಅದಕ್ಕೆ ಟಿ.ಬಿ.ಜಯಚಂದ್ರ ಅವರೇ ಸಾಕ್ಷಿ ಎಂದು ಹೇಳಿದ್ದು, ಸಿಎಂ ಪಾಳೆಯದಲ್ಲಿ ಸಿಟ್ಟಿನ ವಾತಾವರಣ ಉಂಟು ಮಾಡಿದೆ.ಕಾಲೆಳೆದಿದ್ದ ಅಶೋಕ್!ಜನವರಿ ನಂತರ ನಿಮ್ಮ ಗ್ರಹಗತಿ ಸರಿಯಿಲ್ಲ, ಒದ್ದು ಮುಖ್ಯಮಂತ್ರಿ ಸ್ಥಾನ ಕಿತ್ತುಕೊಳ್ಳಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಡಿಕೆಶಿ ಕಾಲೆಳೆದಿದ್ದಾರೆ.
ಅಶೋಕ್ ಅವರ ಮಾತು ಸ್ವತಃ ಡಿಸಿಎಂ ಅವರಿಗೆ ಕೊಂಚ ಇರಿಸುಮುರಿಸು ಉಂಟು ಮಾಡಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬುಧವಾರದ ದಿನ ಬೆಳಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಅಗಲಿದ ಮಾಜಿ ಶಾಸಕರಿಗೆ ಸಂತಾಪ ಸೂಚನೆ ಕಲಾಪದಲ್ಲಿ ಮಾತನಾಡಿದ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಗುಣಗಾನ ಮಾಡುತ್ತಾ, ಅವರ ಆಡಳಿತಾವಧಿಯಲ್ಲಿ ಧಮ್ಕಿ ಹಾಕಿ ಮಂತ್ರಿ ಸ್ಥಾನ ಪಡೆದುಕೊಂಡೆ ಎನ್ನುವ ಅಂಶವನ್ನು ಬಾಯ್ಬಿಟ್ಟರು.
ಸರಕಾರ ರಚನೆ ಸಂದರ್ಭದಲ್ಲಿ ಕೇವಲ ಎಂಟು ಮಂದಿಯನ್ನು ಮಾತ್ರ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ವರಿಷ್ಠರು ಅವಕಾಶ ನೀಡಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ. ಮುಂದೆ ಅವಕಾಶ ಸಿಗದು ಎನ್ನುವ ಆತಂಕದಿಂದ ನನ್ನ ಗುರುಗಳಾದ ಜ್ಯೋತಿಷಿ ಒಬ್ಬರ ಬಳಿ ವಿಷಯ ಹಂಚಿಕೊಂಡಾಗ, “ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು, ಇಲ್ಲವಾದರೆ ಮುಂದೆ ಅವಕಾಶ ಸಿಗದು” ಎಂದು ಸಲಹೆ ಮಾಡಿದರು.
ಗುರುಗಳ ಮಾತಿನಂತೆ ಜಯಚಂದ್ರ ಅವರೊಂದಿಗೆ ಕೃಷ್ಣ ಅವರನ್ನು ತಡರಾತ್ರಿ ಭೇಟಿ ಮಾಡಿ, ನಮ್ಮನ್ನು ಮಂತ್ರಿಮಂಡಲದಿಂದ ಏಕೆ ಬಿಟ್ಟಿದ್ದೀರಿ? ನಿಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ, ಕೆಪಿಸಿಸಿ ಅಧ್ಯಕ್ಷರನ್ನಾಗಿಸಲು ಹೆಗಲಿಗೆ-ಹೆಗಲು ಕೊಟ್ಟು ದುಡಿಡಿದ್ದೇನೆ. ಸರಕಾರ ರಚನೆಯಲ್ಲಿ ನನಗೆ ಅವಕಾಶ ನೀಡಲಿಲ್ಲವೆಂದರೆ ಜನ ಏನೆಂದುಕೊಳ್ಳುತ್ತಾರೆ? ನಾನೂ ಜತೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಸರಕಾರ, ಇಲ್ಲವಾದರೆ ಸರಕಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ರುದ್ರ ತಾಂಡವ ಮಾಡುತ್ತಿದ್ದೀಯಾ?
ನನ್ನ ಆವೇಶಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಅವರು, “ಏನು? ರುದ್ರ ತಾಂಡವ ಮಾಡುತ್ತಿದ್ದೀಯಾ? ಬೆಳಗ್ಗೆ ನೋಡೋಣ” ಎಂದು ಕೇಳಿದರು.ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿತ್ತು, ಮತ್ತೆ ಬೆಳಗ್ಗೆ ಹೋದಾಗ ನಿನಗೆ ಗ್ರಹಗತಿ ಸರಿಯಿಲ್ಲ, ಮುಂದೆ ಅಕವಾಶ ಸಿಗಲಿದೆ ಎಂದರು. ನಾನು ಜ್ಯೋತಿಷ್ಯ ಕೇಳಿದ್ದೇನೆ, ನನಗೆ ಈ ರೀತಿ ಹೇಳಿದ್ದಾರೆ, ಬೇಕಾದರೆ ಅವರನ್ನೇ ಕೇಳಿ. ನಾನು ಮಂತ್ರಿಯಾಗಬೇಕು ಅಷ್ಟೆ ಎಂದು ಪಟ್ಟು ಹಿಡಿದೆ.ಮಂತ್ರಿಮಂಡಲಕ್ಕೆ ಸೇರ್ಪಡೆನಂತರ ಕೃಷ್ಣ ಅವರು, ಪ್ರಮಾಣ ವಚನ ಸಮಯನ್ನೇ ಮುಂದೂಡಿ ವರಿಷ್ಠರ ಮನವೊಲಿಸಿ, ನನ್ನನ್ನೂ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡರು ಎಂದರು ಡಿಕೆಶಿ.
ಶಿವಕುಮಾರ್ ಅವರ ಹೇಳಿಕೆ ವೇಳೆ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಅಶೋಕ್ ಅವರು, ಈಗಲೂ ಅದೇ ಪರಿಸ್ಥಿತಿ ಇದೆ. ಯಾವಾಗ ಒದ್ದು ಮುಖ್ಯಮಂತ್ರಿ ಹುದ್ದೆ ಕಿತ್ತುಕೊಳ್ಳುತ್ತೀರಾ? ಎಂದು ಮುಖ್ಯಮಂತ್ರಿ ಆಸನ ತೋರಿಸಿ ಕೇಳಿದರು.ನಿಮಗೆ ಯಾರು ಭವಿಷ್ಯ ಹೇಳಿದ್ದಾರೋ, ಅವರು ನನಗೂ ನಿಮಗೆ ಹೇಳಿದ್ದನ್ನೇ ಹೇಳಿದ್ದಾರೆ. ನನಗೂ ವಿಷಯ ಗೊತ್ತು ಎಂದು ಅಶೋಕ್ ಅವರು ಡಿಕೆಶಿ ಕಾಲೆಳೆದರು.
ನಿಮ್ಮ ಗ್ರಹಗತಿ ಸರಿಯಿಲ್ಲ
ಜನವರಿ ನಂತರ ನಿಮ್ಮ ಗ್ರಹಗತಿ ಸರಿಯಿಲ್ಲ, ಅದಕ್ಕೂ ಮೊದಲು ಅಧಿಕಾರ ಪಡೆಯಬೇಕು ಎಂದಿದ್ದಾರೆ ಆ ಗುರುಗಳು. ನಿಮ್ಮ ಹಿಂದಿನ ರೌದ್ರಾವತಾರವನ್ನು ಯಾವಾಗ ತಳೆದು ಅಧಿಕಾರ ಕಿತ್ತುಕೊಳ್ಳುತ್ತೀರಾ ಎಂದು ಮತ್ತೆ ಮತ್ತೆ ಕೇಳಿದರು ಅಶೋಕ್.

ಇಷ್ಟೆಲ್ಲಾ ಚರ್ಚೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಆಸೀನರಾಗಿರಲಿಲ್ಲ. ಸಭಾಧ್ಯಕ್ಷರು, ಅಶೋಕ್ ಮತ್ತು ಶಿವಕುಮಾರ್ ನಡುವಿನ ಸಂವಾದದಲ್ಲಿ ಮಧ್ಯೆ ಪ್ರವೇಶಿಸಿ, ಅಶೋಕ್ ಕೇಳಿದ ಎರಡು-ಮೂರು ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಬೇಡಿ. ನಿಮ್ಮ ಕಚೇರಿಗೆ ಕರೆದು ಮಾತನಾಡಿ ಎಂದು ರೂಲಿಂಗ್ ನೀಡುವುದಾಗಿ ತಿಳಿಸಿದರು.
ಮೇಲ್ನೋಟಕ್ಕೆ ಸದನದಲ್ಲಿ ಒದ್ದು ಕಿತ್ತುಕೊಳ್ಳುವ ವಿಷಯದ ಮೇಲಿನ ಚರ್ಚೆ ಸ್ವಾರಸ್ಯಕರವಾಗಿ ಕಂಡರೂ ಒಳಗೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಬೇಗುದಿಯನ್ನೇ ಸೃಷ್ಟಿ ಮಾಡಿದೆ ಎನ್ನುವುದು ಸುಳ್ಳಲ್ಲ.