ದಲಿತರ ಪ್ರವೇಶಕ್ಕೆ ನಿರ್ಭಂಧ ಹೇರಿದ ಹಿನ್ನಲೆಯಲ್ಲಿ ಮುಚ್ಚಲ್ಪಟ್ಟಿದ್ದ ದೇವಾಲಯ
ಮೈಸೂರು: 11 ವರ್ಷಗಳ ನಂತರ ಶ್ರೀ ಮಾರಮ್ಮನ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು ಭಕ್ತಾದಿಗಳು ಸಂತಸ ಪಟ್ಟಿದ್ದಾರೆ.
ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಶುಕ್ರವಾರ ಬಾಗಿಲು ತೆರೆದು ವಿಶೇಷ ಪೂಜೆ ನೆರವೇರಿಸಲಾಯಿತು.
ಮೈಸೂರು ತಾಲೂಕು ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.ಸುಮಾರು 11 ವರ್ಷಗಳ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಭಂಧ ಹೇರಿದ ಹಿನ್ನಲೆಯಲ್ಲಿ ಭಾರಿ ವಿವಾದ ಉಂಟಾಗಿ ಬಾಗಿಲಿಗೆ ಬೀಗ ಹಾಕಲಾಗಿತ್ತು.
ದೇವಾಲಯದ ಬಾಗಿಲು ತೆರೆಸಲು ಸಾಕಷ್ಟು ಬಾರಿ ಸಂಧಾನ ಸಭೆಗಳು ನಡೆದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ನಿನ್ನೆ ಶಾಂತಿ ಸಭೆ ಕರೆದಿದ್ದರು.
ಎಲ್ಲಾ ಕೋಮಿನ ಐವರುಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು.ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯ ಬಾಗಿಲು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು.
ಎಲ್ಲಾ ಸಮುದಾಯದ ಮುಖಂಡರು ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ದೇವಾಲಯದ ಬೀಗ ತೆರೆದು ಒಳ ಪ್ರವೇಶಿಸಿ ಗ್ರಾಮದ ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಯಿತು.