ಕೊಲೆ ಸಂಚಿನಲ್ಲಿ ಕುಸುಮಾ ತಂದೆ ಹನುಮಂತರಾಯಪ್ಪ ಕೂಡ ಭಾಗಿ ಆಗಿದ್ದಾರೆ ಎಂದ ಶಾಸಕ
ಮೂವರು ದಾಳಿಕೋರರನ್ನು ಬಂಧಿಸಿದ್ದೇವೆ ಎಂದ ಪೊಲೀಸರು
ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಿದೇವಿನಗರ ವಾರ್ಡ್ ನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆಯಲಾಗಿದೆ. ಆ ದೃಶ್ಯದ ವಿಡಿಯೋ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿಯೇ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಲು ಯತ್ನ ನಡೆಸಿದ ಕೆಲ ದಿನಗಳ ನಂತರ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಮುನಿರತ್ನ ಮೇಲೆ ದಾಳಿ ನಡೆದಿದೆ. ಈ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಇನ್ನೊಂದೆಡೆ; ಕುಸುಮಾ ಹನುಮಂತರಾಯಪ್ಪ ಅವರನ್ನು ಶಾಸಕಿಯನ್ನಾಗಿ ಮಾಡಲು ಮಾಜಿ ಸಂಸದ ಡಿ.ಕೆ.ಸುರೇಶ್, ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಕಡೆಯವರಿಂದ ನನ್ನ ಮೇಲೆ ಆಸೀಡ್ ದಾಳಿ ಮಾಡಿಸಿದ್ದಾರೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ 100ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾನು ತೆರಳುತ್ತಿದ್ದಾಗ ಏಕಾಏಕಿ ಕಲ್ಲು ಮತ್ತು ಮೊಟ್ಟೆಯಿಂದ ದಾಳಿ ಮಾಡಲಾಗಿದೆ. ಅಲ್ಲದೆ ಕಾರಿನ ಗಾಜಿನ ಮೇಲೆ ಕಲ್ಲು ಬಿದ್ದಿವೆ ಎಂದು ಶಾಸಕರು ದೂರಿದ್ದಾರೆ.


ಈ ಕೃತ್ಯ ನನ್ನನ್ನು ಕೊಲ್ಲುವ ಪ್ರಯತ್ನವೇ ಆಗಿದೆ. ನನ್ನನ್ನು ಮುಗಿಸಲು 150ಕ್ಕೂ ಹೆಚ್ಚು ಜನರನ್ನು ಕರೆಸಿದ್ದಾರೆ. ನನ್ನ ಬೆಂಬಲಿಗರು ಮತ್ತು ಪೊಲೀಸರು ಇಲ್ಲದಿದ್ದರೆ ನನ್ನನ್ನು ಹತ್ಯೆ ಮಾಡುತ್ತಿದ್ದರು. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಹನುಮಂತರಾಯಪ್ಪ ಸೇರಿದಂತೆ ಇನ್ನೂ ಹಲವಾರು ಮಂದಿ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಡಿಕೆಶಿ ಜತೆ ಕುಸುಮಾ ಹನುಮಂತರಾಯಪ್ಪ / ಸಂಗ್ರಹ ಚಿತ್ರ
ಮೊಟ್ಟೆಯ ಒಳಗಡೆ ಆಸಿಡ್ ತುಂಬಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ. ಡಿ.ಕೆ ಸುರೇಶ್ ಅವರಿಗೆ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಬೇಕು ಎಂಬ ಆಸೆ ಇದೆ. ಈ ಕಾರಣಕ್ಕೆ ನನ್ನ ಮೇಲೆ ದಾಳಿ ನಡೆದಿದೆ ಎಂದು ಮುನಿರತ್ನ ನೇರವಾಗಿ ಆರೋಪಿಸಿದ್ದಾರೆ.