ಜೆಡಿಎಸ್ ಕಚೇರಿಯಿಂದ ಪ್ರೀಡಂ ಪಾರ್ಕ್’ವರೆಗೂ ಪಾದಯಾತ್ರೆ ನಡೆಸಿದ ಕೇಂದ್ರ ಸಚಿವರು
ಸ್ಟಿಂಗ್ ಆರೋಪಿ ರಾಕೇಶ್ ಶೆಟ್ಟಿ, ಸಹಚರ ಬಂಧನಕ್ಕೆ ಒತ್ತಾಯ; ಡಿಜಿ ಸಲೀಂಗೆ ದೂರು
ಬೆಂಗಳೂರು: ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಒಳಸಂಚು ಹೂಡಿ ಅವರ ಪದಚ್ಯುತಿಗೆ ಕಾರಣನಾದ ರಾಕೇಶ್ ಶೆಟ್ಟಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ದಿಢೀರ್ ರಸ್ತೆಗಿಳಿದು ಪಾದಯಾತ್ರೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು.
ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ ಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಸಂಬಂಧ ಗುರುವಾರ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ ನಡೆಸಿ ರಾಕೇಶ್ ಶೆಟ್ಟಿ ಹಾಗೂ ಆತನ ಸಹಚರನ್ನು ಬಂಧಿಸಲು ಎರಡು ದಿನಗಳ ಗಡುವು ನೀಡಿದ್ದರು. ಆದರೆ ಪೊಲೀಸರು ಸ್ಟಿಂಗ್ ಸಂಚುಕೋರರನ್ನು ಬಂಧಿಸಲು ವಿಫಲವಾಗಿದ್ದರು. ಆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಶಾಸಕರು ಹಾಗೂ ಮುಖಂಡರ ಜತೆ ಸಭೆ ನಡೆಸಿದ ಕೇಂದ್ರ ಸಚಿವರು, ಡಿಜಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡರು.
ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಿಂದ ಪಾದಯಾತ್ರೆ ಆರಂಭಿಸಿದ ಕೇಂದ್ರ ಸಚಿವರು; ಅಸಂಖ್ಯಾತ ಕಾರ್ಯಕರ್ತರು, ಮುಖಂಡರೊಂದಿಗೆ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಪಾದಯಾತ್ರೆ ಹೊರಟರು.
ನಡುವೆ ಹೆಜ್ಜೆಹೆಜ್ಜೆಗೂ ಸಚಿವರ ಪಾದಯಾತ್ರೆಗೆ ಅಡ್ಡಿಪಡಿಪಡಿಸಿದ ಪೊಲೀಸರು, ಪಾದಯಾತ್ರೆಯನ್ನು ಕೈಬಿಡುವಂತೆ ಸಚಿವರ ಮನವೊಲಿಸಲು ವಿಫಲ ಪ್ರಯತ್ನ ನಡೆಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ನಡೆಸಿದ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವ ರಾಕೇಶ್ ಶೆಟ್ಟಿ, ಬಾಗೇಪಲ್ಲಿ ಪ್ರಶಾಂತ್ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ನಾಯಕರು ಈ ಸಂದರ್ಭದಲ್ಲಿ ಒತ್ತಾಯ ಮಾಡಿದರು.
ಅಂತಿಮವಾಗಿ ಪ್ರೀಡಂ ಪಾರ್ಕ್ ವರೆಗೂ ಹತ್ತು ಹಲವು ಬಾರಿ ಪಾದಯಾತ್ರೆಗೆ ಅಡ್ಡಿಪಡಿಸಿದ ಪೊಲೀಸರು, ಫ್ರೀಡಂ ಪಾರ್ಕನಿಂದ ಮುಂದಕ್ಕೆ ಹೋಗಲು ಅವಕಾಶ ಆಗದಂತೆ ಬಸ್ಸುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದರು. ಅಷ್ಟೇ ಅಲ್ಲದೆ, ಇಡೀ ಪ್ರದೇಶದಲ್ಲಿ ಪೊಲೀಸ್ ಕೋಟೆಯನ್ನು ನಿರ್ಮಾಣ ಮಾಡಿದ್ದರು. ಆದರೆ ಯಾವುದೇ ಕಾರಣಕ್ಕೂ ಅಶಾಂತಿಗೆ ಅವಕಾಶ ಕೊಟ್ಟು ಪಾದಯಾತ್ರೆ ಹಳಿ ತಪ್ಪುವುದು ಬೇಡ ಎಂದು ಮುಖಂಡರು ಮತ್ತು ಕಾರ್ಯಕರ್ತರ ಮನವೊಲಿಸಿದ ಕೇಂದ್ರ ಸಚಿವರು; ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸಿ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು; ರಾಜ್ಯದ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬ್ಲಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸಂಘಟಿತ ಸಂಚು ನಡೆಸಿ ಸಿದ್ದರಾಮಯ್ಯ ಅವರು ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಯುವಂತೆ ಮಾಡಿದರು ಎಂದು ಗುರುತರ ಆರೋಪ ಮಾಡಿದರು.
ಕಿಡಿಗೇಡಿ ಸ್ಟಿಂಗ್ ಆರೋಪಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರಂತರವಾಗಿ ಭೇಟಿಯಾಗುತ್ತಿದ್ದರು. ಸಿದ್ದರಾಮಯ್ಯ ವಿರುದ್ಧ ನಾನೇ ವೀಡಿಯೋ ಮಾಡಿದ್ದೇನೆ, ಅವರ ವಿರುದ್ಧ ಸ್ಟಿಂಗ್ ನಡೆಸಿದ್ದು ನಾನೇ, ಅದರಲ್ಲಿರುವ ಧ್ವನಿಯು ನನ್ನದೇ ಎಂದು ಅಪರಾಧಿ ಒಪ್ಪಿಕೊಂಡಿದ್ದಾನೆ. ತಾನು ನಡೆಸುವ ಸುದ್ದಿವಾಹಿನಿಯಲ್ಲಿ ಈ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ನನ್ನ ಹೋರಾಟ ವೈಯಕ್ತಿಕವಲ್ಲ. ವಿಜಯದಶಮಿ ಹಬ್ಬದ ಬಳಿಕ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.
ಇದಾದ ಮೇಲೆ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರನ್ನು ಭೇಟಿಯಾದ ಕೇಂದ್ರ ಸಚಿವರು, ಎರಡು ದಿನಗಳ ಹಿಂದೆ ಸ್ಟಿಂಗ್ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಗಡುವು ನೀಡಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ. ನೀವು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದರು.

ಜೆಡಿಎಸ್ ದೂರಿನಲ್ಲಿ ಏನಿದೆ?
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ನೇತೃತದ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹಿ ಮಾಡಿ ಸಲ್ಲಿಸಿರುವ ಈ ದೂರಿನಲ್ಲಿ ಅನೇಕ ಗಂಭೀರ ಅಂಶಗಳು ಒಳಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಯಲ್ಲಿರುವ ಅತ್ಯಂತ ಗಂಭೀರ ಹಾಗೂ ಆತಂಕಕಾರಿ ವಿಡಿಯೋ ಒಂದರ ಕುರಿತು ಈ ದೂರನ್ನು ದಾಖಲಿಸುತ್ತಿದ್ದೇವೆ.
ಈ ಘಟನೆಯು ಸಮಾಜದ ಶಾಂತಿ, ಮಹಿಳೆಯರ ಭದ್ರತೆ ಹಾಗೂ ರಾಜ್ಯದ ರಾಜಕೀಯ ಸ್ಥಿರತೆಗೆ ತೀವ್ರ ಬೆದರಿಕೆಯನ್ನು ಒಡ್ಡಿದೆ ಎಂದು ಹೇಳಲಾಗಿದೆ.ಈ ವಿಡಿಯೋದಲ್ಲಿ ವರದಿಗಾನೆಂದು ಹೇಳಿಕೊಳ್ಳುವ ರಾಕೇಶ್ ಶೆಟ್ಟಿ ಮಹಿಳೆಯ ಯಾವುದೇ ಪೂರ್ವ ಅನುಮತಿಯಿಲ್ಲದೆ ಮತ್ತು ಆಕೆಯ ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದಾರೆ.
ಇದು ಭಾರತೀಯ ಸಂವಿಧಾನದ ವಿಧಿ 21ರ ಅಡಿಯಲ್ಲಿ ನೀಡಲಾದ ವ್ಯಕ್ತಿಯ ಗೌಪ್ಯತೆ ಹಕ್ಕಿನ ನೇರ ಉಲ್ಲಂಘನೆ. ಅಲ್ಲದೇ ವಿಡಿಯೋ ಸಂಭಾಷಣೆಯ ನಡುವೆ ಸದರಿ ಮಹಿಳೆಯು ತಾನು ಅತ್ಯಂತ ಗಂಭೀರವಾದ ಘಟನೆಯನ್ನು ಎದುರಿಸಿದ್ದೇನೆ ಎಂದು ಆರೋಪಿಸುತ್ತಾ, ಒಬ್ಬ ರಾಜಕೀಯ ನಾಯಕರು ತನ್ನನ್ನು ತಮ್ಮ ಲೈಂಗಿಕ ಅಗತ್ಯಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವಿಡಿಯೋದಲ್ಲಿ ದಾಖಲಾಗಿದೆ. ಇಷ್ಟು ಸೂಕ್ಷ್ಮ ಹಾಗೂ ವೈಯಕ್ತಿಕ ವಿಚಾರವನ್ನು ವರದಿಗಾರ ಹಾಗೂ ನಿರೂಪಕ ಯಾವುದೇ ಅಧಿಕೃತ ದೂರು ಅಥವಾ ಕಾನೂನು ಪ್ರಕ್ರಿಯೆಗೆ ಒಳಪಡಿಸದೆ ಕೇವಲ ತನ್ನ ಚಾನೆಲ್ನ ಪ್ರಚಾರಕ್ಕಾಗಿ ಹಾಗೂ ರಾಜಕೀಯ ದುರುದ್ದೇಶಕ್ಕಾಗಿ ಮತ್ತು ಬ್ಲಾಕ್ಮೇಲ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ಅಕ್ಷಮ್ಯ ಅಪರಾಧವಾಗಿದೆ.
ಮಹಿಳೆಗೆ ಮಾಧ್ಯಮಗಳ ಮುಂದೆ ಬರುವಂತೆ ನಿರಂತರವಾಗಿ ಒತ್ತಡ ಹೇರುತ್ತಿರುವುದು ಕಂಡು ಬರುತ್ತದೆ. “ನೀವು ಸಿದ್ದರಾಮಯ್ಯ ಅವರ ವಿರುದ್ದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದೀರಾ? ನೀವು ಮಾಧ್ಯಮಗಳ ಮುಂದೆ ಬಂದರೆ ನಿಮಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತೇವೆ ಎಂದು ಆಕೆಗೆ ಅಮಿಷ ಒಡ್ಡಿ ಪ್ರಚೋದಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ಆಕೆಯ ಅನುಮತಿಯಿಲ್ಲದೆ ಮತ್ತು ಆಕೆಯ ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಲಾಗಿದ್ದು, ಇದು ಆ ಮಹಿಳೆಯ ಆತ್ಮಗೌರವ, ಗೌಪ್ಯತೆ ಮತ್ತು ಸುರಕ್ಷತೆಗೆ ತೀವ್ರ ಧಕ್ಕೆ ತರುವಂತದಾಗಿದ್ದು, ಅಲ್ಲದೇ ಇಡೀ ಸಂಭಾಷಣೆಯು ಇಂಗ್ಲಿಷ್ನಲ್ಲಿ ನಡೆಯುತ್ತಿದ್ದು, ಮಧ್ಯವರ್ತಿಯೊಬ್ಬ ತುಳು ಮತ್ತು ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇಬ್ಬರ ನಡುವೆ ಸಂವಹನ ನಡೆಸುತ್ತಿರುವುದು ಕಂಡು ಬರುತ್ತದೆ ಹಾಗೂ ಈ ವಿಡಿಯೋ ಸಂಭಾಷಣೆಯಲ್ಲಿ ಪ್ರಸ್ತಾಪಿಸಲಾದ ‘ಸಿದ್ದರಾಮಯ್ಯ’ ಎಂಬ ಹೆಸರು ರಾಜ್ಯದ ಮುಖ್ಯಮಂತ್ರಿಗಳನ್ನು ಹಾಗೂ ಉನ್ನತ ಮಟ್ಟದ ರಾಜಕಾರಣಿಗಳನ್ನು ಉದ್ದೇಶಿಸಿ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದೆ.
ಆರೋಪಿಯು ಈ ಹಿಂದೆಯೂ ಇಂತಹ ಕಟ್ಟುಕಥೆ ಕಟ್ಟಿ ನಕಲಿ ವಿಡಿಯೋಗಳನ್ನು ಬಳಸಿ ಪ್ರಭಾವಿ ನಾಯಕರನ್ನು ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡುವ ದೊಡ್ಡ ಜಾಲವನ್ನೇ ಸೃಷ್ಟಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು ನಡೆದಿದೆ. ಈ ವಿಡಿಯೋದ ಹಿಂದೆ ಬಹುದೊಡ್ಡ ಆರ್ಥಿಕ ಮತ್ತು ರಾಜಕೀಯ ಲಾಭದ ಸಂಚು ಅಡಗಿದೆ.
ಈ ವರದಿಗಾರ ಈ ವಿಡಿಯೋದಲ್ಲಿ ಮಹಿಳೆಯನ್ನು ಪ್ರಚೋದಿಸುತ್ತಾ, ಆಕೆಗೆ ಸಿದ್ದರಾಮಯ್ಯನವರ ಜತೆ ಮೀಟಿಂಗ್ ಏರ್ಪಡಿಸಿಕೊಡುವುದಾಗಿ ಹೇಳುತ್ತಿರುವ ವ್ಯಕ್ತಿಯ ಧ್ವನಿಯು ಖಾಸಗಿ ನ್ಯೂಸ್ ಚಾನೆಲ್ ಒಂದರ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿರೂಪಕ ಆಗಿರುವ ರಾಕೇಶ್ ಶೆಟ್ಟಿ ಅವರ ಧ್ವನಿಗೆ ಸಾಮ್ಯತೆ ಹೊಂದಿರುತ್ತದೆ ಹಾಗೂ ಇಂಥ ಯಾವುದೇ ಮಾಧ್ಯಮ ಅಥವಾ ವ್ಯಕ್ತಿ ನಡೆಸುವ ಕುಟುಕು ಕಾರ್ಯಾಚರಣೆ, ಅಂತಹ ಕಾರ್ಯಾಚರಣೆಯಲ್ಲಿ ಲಭ್ಯವಾಗುವ ಇಂತಹ ಗಂಭೀರ ಸ್ವರೂಪದ ಮಾಹಿತಿಯನ್ನು ತಕ್ಷಣವೇ ಸಂಬಂಧಿತ ಪೊಲೀಸ್ ಇಲ್ಲವೇ ನ್ಯಾಯಾಂಗ ಸಂಸ್ಥೆಗಳ ಗಮನಕ್ಕೆ ತರುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಪೊಲೀಸ್ ಇಲಾಖೆಯ ಕಾನೂನುಬದ್ದ ಕರ್ತವ್ಯವಾಗಿದೆ.
ಆದರೆ, ಈ ಘಟನೆಯಲ್ಲಿ ಆರೋಪಿ ವರದಿಗಾರನು ಹಲವು ವರ್ಷಗಳು ಕಳೆದರೂ ಯಾವುದೇ ಸರ್ಕಾರಿ ಅಥವಾ ಕಾನೂನು ಸಂಸ್ಥೆಗೆ ಮಾಹಿತಿ ನೀಡದೆ, ಸ್ವಹಿತಾಸಕ್ತಿಗಾಗಿ ಈ ವಿಡಿಯೋವನ್ನು ಮುಚ್ಚಿಟ್ಟು ದುರುದ್ದೇಶಪೂರಿತವಾಗಿ ಬಳಸಿಕೊಂಡಿರುವುದು ಕಾನೂನಿನ ಅಡಿಯಲ್ಲಿ ದೊಡ್ಡ ಅಪರಾಧವಾಗಿರುತ್ತದೆ.
ನಿರೂಪಕ ರಾಕೇಶ್ ಶೆಟ್ಟಿ ಈ ವಿಡಿಯೋವನ್ನು ತನಗೆ ಬೇಕಾದಂತೆ ಎಡಿಟ್/ತಿದ್ದುಪಡಿ ಮಾಡಿ ರಾಜ್ಯದ ಉನ್ನತ ಮಟ್ಟದ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಅಧಿಕಾರಿಗಳು, ಉದ್ದಿಮೆದಾರನ್ನು ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡುವ ಅಕ್ರಮ ಎಸಗುವ ಬಹುದೊಡ್ಡ ವ್ಯವಸ್ಥಿತ ಸಂಚು ರೂಪಿಸಿರುವುದು ಕಂಡು ಬಂದಿರುತ್ತದೆ.
ಈ ಕೃತ್ಯ ಎಸಗಿರುವ ರಾಕೇಶ್ ಶೆಟ್ಟಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದು, ಅವರ ಕುಮ್ಮಕ್ಕಿನಿಂದ ಸರ್ಕಾರದಿಂದ ಉನ್ನತ ಮಟ್ಟದ ಪೊಲೀಸ್ ರಕ್ಷಣೆಯನ್ನು ಅಕ್ರಮವಾಗಿ ಪಡೆದುಕೊಂಡಿರುತ್ತಾರೆ.
ಈ ರಕ್ಷಣೆಯ ಮರೆಯಲ್ಲೇ ರಾಜಕೀಯ ವ್ಯಕ್ತಿಗಳ ಜತೆ ಸೇರಿ ಈ ಆಳವಾದ ಷಡ್ಯಂತ್ರ ಹಣೆದಿರುವುದು ವ್ಯಕ್ತವಾಗಿರುತ್ತದೆ. ಇಂತಹ ವಿಡಿಯೋಗೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವುದು ಮಾಜಿ ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಅವರು ಸಹ ತಮ್ಮ ತಂದೆಯ ತೇಜೋವಧೆ ಮಾಡಲು ನಕಲಿ ವಿಡಿಯೋ ಹರಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವುದು ಈ ದೂರಿಗೆ ಪುಷ್ಟಿ ನೀಡುತ್ತದೆ.
ರಾಕೇಶ್ ಶೆಟ್ಟಿಯ ಬಳಿ ಇಂತಹ ಹಲವು ರಾಜಕೀಯ ವ್ಯಕ್ತಿಗಳ, ಗಣ್ಯ ವ್ಯಕ್ತಿಗಳ ವಿಡಿಯೋಗಳಿದ್ದು ಬ್ಲಾಕ್ಮೇಲ್ ದಂಧೆಯಲ್ಲಿ ತೊಡಗಿದ್ದಾರೆ. ಇಂತಹ ಅತ್ಯಂತ ಗಂಭೀರ ಹಾಗೂ ಸ್ಪಷ್ಟ ಸಾಕ್ಷಾಧಾರಗಳು ಕಣ್ಣ ಮುಂದೆಯೆ ಇದ್ದರೂ ಸಹ ಈವರೆಗೆ ಸ್ಟಿಂಗ್ ವಿಡಿಯೋ ಸೃಷ್ಟಿಸಿ ಸ್ವಹಿತಾಸಕ್ತಿಗೆ ಬಳಸಿಕೊಂಡ ಮೂಲ ರೂವಾರಿಯನ್ನು ಬಂಧಿಸಲು ಪೊಲೀಸ್ ಇಲಾಖೆ ಯಾವುದೇ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳದಿರುವುದು ಅತ್ಯಂತ ದುರದುಷ್ಟಕರ ಹಾಗೂ ಸಂಶಯ ಉಂಟು ಮಾಡಿರುತ್ತದೆ.
ಈ ಎಲ್ಲಾ ಸತ್ಯಾಸತ್ಯಗಳು ಪೊಲೀಸ್ ಇಲಾಖೆಯ ಕಣ್ಣ ಮುಂದೆಯೆ ಹಾಗೂ ಸಾಮಾಜಿಕ ಜಾಲತಾಣದಲ್ಲಿದ್ದರೂ ಇಲಾಖೆ ಈ ಗಂಭೀರ ಪ್ರಕರಣವನ್ನು ಬೇರೆಡೆಗೆ ದಿಕ್ಕು ತಪ್ಪಿಸಲು ಯತ್ನಿಸುತ್ತಾ ಆರೋಪಿಗಳಿಗೆ ಪೊಲೀಸ್ ರಕ್ಷಣೆ ನೀಡುತ್ತಿರುವುದು ಕಾನೂನಿಗೆ ವಿರುದ್ದವಾಗಿರುತ್ತದೆ.
ಆದ್ದರಿಂದ, ಇಲಾಖೆ ತಕ್ಷಣವೇ ತನ್ನ ನಿಷ್ಕ್ರಿಯತೆಯನ್ನು ಬಿಟ್ಟು ಸತ್ಯವನ್ನು ಮರೆಮಾಚುವ ಯತ್ನವನ್ನು ಕೈಬಿಟ್ಟು ಈ ಕೃತ್ಯದ ಹಿಂದೆ ಇರುವ ಎಲ್ಲಾ ಆರೋಪಿಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಿ ಈ ಕುಟುಕು ಕಾರ್ಯಾಚರಣೆಯಲ್ಲಿ ಒಳಗಾಗಿರುವ ಎಲ್ಲರನ್ನೂ ಬಂಧಿಸಬೇಕು.
ಈ ಸಂಶಯಾಸ್ಪದ ವಿಡಿಯೋದ ಮೂಲವನ್ನು ಪತ್ತೆ ಹಚ್ಚಿ ಧ್ವನಿ ಮಾದರಿ ಪರೀಕ್ಷೆ ನಡೆಸಿ ವಿಡಿಯೋದ ಹಿಂದಿರುವ ಅಸಲಿ ಸತ್ಯ, ಸ್ಟಿಂಗ್ ವಿಡಿಯೋ ಸೃಷ್ಟಿಸಿ ಸ್ವಹಿತಾಸಕ್ತಿಗೆ ಬಳಸಿಕೊಂಡ ಎಲ್ಲರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸುತ್ತೇವೆ.ಈ ಕುಟುಕು ಕಾರ್ಯಾಚರಣೆಯ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಲವಾರು ಪ್ರಮುಖ ವಿಷಯ ಹಾಗೂ ವಾಸ್ತವ ಅಂಶಗಳನ್ನು ಬಯಲಿಗೆ ಎಳೆದಿರುತ್ತಾರೆ.
ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಈ ಕುಟುಕು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯಿದೆನ್ವಯ ಸೆಕ್ಷನ್ 65, 66, 67 ಅಡಿಯಲ್ಲಿ ಹಾಗೂ ಬಿಎನ್ಎಸ್ ಕಾಯಿದೆಯ ಸೆಕ್ಷನ್ 38, 61, 77, 79, 336, 338, 356, 239, 308 ಅಡಿಯಲ್ಲಿ ಕೂಡಲೇ ಕ್ರಮ ಜರುಗಿಸಿ ಇವರುಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಮುಂದೆ ವಿಚಾರಣೆಗೆ ಒಳಪಡಿಸಬೇಕಾಗಿದೆ.
ಇಲ್ಲವಾದಲ್ಲಿ ನಮ್ಮ ಪಕ್ಷದ ವತಿಯಿಂದ ರಾಜ್ಯಾದಾದ್ಯಂತ ರಾಜ್ಯ ಸರ್ಕಾರದ ನಿರ್ಲಕ್ಷತೆ ಮತ್ತು ನಿಷ್ಕ್ರಿಯತೆ ವಿರುದ್ದ ಉಗ್ರ ಪ್ರತಿಭಟನೆ ಮತ್ತು ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.















