ನಂದಮೂರಿ ತಾರಕ ರಾಮಾರಾವು. ಈ ಹೆಸರು ಸಮಸ್ತ ತೆಲುಗು ಪ್ರಜೆಗಳ ಸಾಕ್ಷೀಪ್ರಜ್ಞೆ. ಸ್ವಾಭಿಮಾನದ ಸಂಕೇತ. ಆತ್ಮಗೌರವದ ಪ್ರತೀಕ.
ತೆಲುಗರ ಇತಿಹಾಸ ಅಧ್ಯಯನ ಮಾಡಬೇಕಾದರೆ ಎನ್ಟಿಆರ್ ಅವರಿಗೂ ಮೊದಲು ಹಾಗೂ ಅವರ ನಂತರ ಎಂದು ವಿಭಾಗಿಸಿಯೇ ನೋಡಬೇಕು ಈಗ. ಅಷ್ಟರಮಟ್ಟಿಗೆ ಅವರು ಅನಿವಾರ್ಯ, ನಿರ್ಣಾಯಕ. ಜನರ ಪಾಲಿಗೆ ಅವರೊಬ್ಬ ಅಚ್ಚಳಿಯದ ಕಥಾನಾಯಕ. ತೆಲುಗುನೆಲವೆಂದೂ ಮರೆಯಲು ಸಾಧ್ಯವೇ ಆಗದ ಮಹಾನಾಯಕ. ನಟನೆಯಲ್ಲಿ ದೈವತ್ವವನ್ನು ಸಾಕ್ಷಾತ್ಕರಿಸಿದ ಮಹಾನಟ.
ಅತ್ತ ಸಿನಿಮಾ, ಇತ್ತ ರಾಜಕೀಯದಲ್ಲಿ ಭಾರತವಷ್ಟೇ ಅಲ್ಲ, ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು ಎನ್ಟಿಆರ್. ಜನರ ಮನೆಮನಗಳಲ್ಲಿ ಅವರು ಧರಿಸಿದ್ದ ರಾಮ, ಕೃಷ್ಣ, ವೆಂಕಟೇಶ್ವರ ಸ್ವಾಮಿ ಮುಂತಾದ ದೈವೀ ಪಾತ್ರಗಳ ಪಟಗಳೇ ತುಂಬಿಹೋಗಿದ್ದವು. ದೇವರ ಪಟಗಳ ಜತೆಗೆ ಅವರ ಪಟಕ್ಕೂ ಪೂಜೆ ಸಲ್ಲುತ್ತಿತ್ತು ಎಂದರೆ ಜನರಿಗೆ ಅವರ ಮೇಲಿದ್ದ ಆರಾಧನೆ ಎಂಥದ್ದು ಎಂಬುದನ್ನು ಅರಿಯಬಹುದು. ತಿರುಮಲಕ್ಕೆ ಬಾಲಾಜಿ ದರುಶನಕ್ಕೆ ಹೋಗುತ್ತಿದ್ದ ಭಕ್ತರು, ಹಾಗೆಯೇ ಚೆನ್ನೈವರೆಗೂ (ಆಗಿನ ಮದರಾಸ್) ಹೋಗಿ ಕ್ಯೂನಲ್ಲಿ ನಿಂತು ತಮ್ಮ ನೆಚ್ಚಿನ ನಟನ ದರುಶನ ಮಾಡಿ ಊರುಗಳಿಗೆ ವಾಪಸ್ ಹೋಗುತ್ತಿದ್ದರು!!
ಇನ್ನು ರಾಜಕೀಯ ಅಂತೀರಾ, ಹೊಸಪಕ್ಷ ಕಟ್ಟಿದ ಹತ್ತೇ ತಿಂಗಳಲ್ಲಿ ವಿಶಾಲವಾದ ಅವಿಭಜಿತ ಆಂಧ್ರಪ್ರದೇಶಕ್ಕೆ ಮುಖ್ಯಮಂತ್ರಿಯಾಗಿಬಿಟ್ಟರು ಎನ್ಟಿಆರ್. ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಇದೊಂದು ಪ್ರಮಖ ಅಧ್ಯಾಯ. ರಾಜಕೀಯ ವಿದ್ಯಾರ್ಥಿಗಳು ಓದಲೇಬೇಕಾದ ಚಾಪ್ಟರ್. ಉಕ್ಕನ ಮಹಿಳೆ ಇಂದಿರಾ ಗಾಂಧಿ ವಿರುದ್ಧ ಎದ್ದ ಮಹಾಸುನಾಮಿಯ ರಥ ಸಾರಥಿ ಇವರೇ.
ಸಿನಿಮಾಗೆ ಸಂಬಂಧಿಸಿ ಹೇಳುವುದಾದರೆ ಎನ್ಟಿಆರ್, ಎಎನ್ನಾರ್ ಅವರ ಅವಧಿ ತೆಲುಗು ಚಿತ್ರರಂಗದ ಸುವರ್ಣಯುಗ ಎಂದೇ ಹೇಳಬಹುದು. ಅದರಲ್ಲೂ ಎನ್ಟಿಆರ್, ಜನರ ಪಾಲಿಗೆ ತೆರೆಯ ಮೇಲಿನ ಶ್ರೀ ವೆಂಕಟೇಶ್ವರ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ, ಸಕಲ ಸದ್ಗುಣಗಳ ಶ್ರೀಕೃಷ್ಣ ಪರಮಾತ್ಮ. ಇನ್ನು ರಾಜಕೀಯವಾಗಿ, ಇಡೀ ಇಂಡಿಯಾಕ್ಕೆ ಹೊಸ ಟ್ರೆಂಡ್ ಕಲಿಸಿಕೊಟ್ಟ ಲೀಡರ್. ಕಾಂಗ್ರೆಸ್ಸೇತರ ಪಾಲಿಟಿಕ್ಸಿಗೆ ದಕ್ಷಿಣ ಭಾರತದಲ್ಲಿ ಶಕ್ತಿತುಂಬಿದ ಧೀಮಂತ. ಬದುಕಿದ್ದಷ್ಟು ದಿನವೂ ಜನಪರ ರಾಜಕೀಯ ನೇತಾರನಾಗಿಯೇ ಉಳಿದು, ಕುತ್ಸಿತ-ನಂಬಿಕೆ ದ್ರೋಹಿ ಬೆಂಬಲಿಗರ ಬೆನ್ನಿಗಿರಿಯುವ ಸ್ವಾರ್ಥಕ್ಕೆ ಬಲಿಯಾದ ದುರಂತ ನಾಯಕ. ಗಾಢವಾಗಿ ನಂಬಿದ್ದ ವ್ಯಕ್ತಿಯಿಂದಲೇ ರಾಜಕೀಯ ಚರಮಗೀತೆ ಹಾಡಿಸಿಕೊಂಡ ಭಾರತ ರಾಜಕಾರಣದ ಜೂಲಿಯಸ್ ಸೀಜರ್.
ಎನ್ಟಿಆರ್ ಜನ್ಮದಿನ
ಎನ್ಟಿಆರ್ ಜನ್ಮತಾಳಿ 97 ವರ್ಷ. ಅವರು ಹುಟ್ಟಿದ್ದು ಮೇ 28, 1923. ಆಂಧ್ರರೆಲ್ಲರಿಂದ ‘ಅನ್ನಗಾರು’ (ಅಣ್ಣನವರೇ) ಎಂದೇ ಅಭಿಮಾನದಿಂದ ಕರೆಯಲ್ಪಡುತ್ತಿದ್ದ ಅವರು ಎರಡು ರಾಜ್ಯಗಳ (ತೆಲಂಗಾಣ- ಆಂಧ್ರ ಪ್ರದೇಶ) ತೆಲುಗು ಪ್ರಜೆಗಳೆಲ್ಲರ ಪಾಲಿನ ಪ್ರಾತಃಸ್ಮರಣೀಯರು. ಅವರು ತೀರಿಹೋಗಿ 24 ವರ್ಷಗಳೇ (ಜನವರಿ 18, 1996) ಸಂದಿವೆ. ಆಗಷ್ಟೇ ನನ್ನ ಮೀಡಿಯಾ ಜರ್ನಿ ಶುರುವಾಗಿತ್ತು. (1994ರ ನವೆಂಬರ್ ತಿಂಗಳಿಂದ 1995 ಏಪ್ರಿಲ್ ವರೆಗೆ ನಾನು ಲಕ್ಷ್ಮೀಪತಿ ಕೋಲಾರ ಸಂಪಾದಕತ್ವದ, ಸಿ.ಎಂ. ಮುನಿಯಪ್ಪ ಅವರ ಮಾಲೀಕತ್ವದ ’ಸಂಚಿಕೆ’ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇರಿಕೊಂಡೆ. ಆ ಮೇಲೆ ಕೆ.ಪ್ರಹ್ಲಾದರಾಯರ ’ಕೋಲಾರ ಪತ್ರಿಕೆ’ಯಲ್ಲಿ ನಾನು ’ಸಂಯುಕ್ತ ಕರ್ನಾಟಕ’ ಸೇರುವವರೆಗೆ, ಅಂದರೆ 1996 ಮಾರ್ಚ್ 6ರಂದು ನನಗೆ ಸಂಕ ಆಫರ್ ಲೆಟರ್ ಬರುವ ತನಕ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರನಾಗಿದ್ದೆ.)
ಆವತ್ತು ಬೆಳಗ್ಗೆಯೇ, ಅಂದರೆ 1996 ಜನವರಿ 18ರಂದು ನಾನು ಚಿಕ್ಕಬಳ್ಳಾಪುರದಿಂದ ಬೆಂಗಳೂರು ಬಸ್ ಹಿಡಿಯಲು ನಿಂತಿದ್ದೆ. ಬರುವ ಬಸ್ಸುಗಳು ಬರುತ್ತಿದ್ದವು, ಹೋಗುವ ಬಸ್ಸುಗಳು ಹೋಗುತ್ತಿದ್ದವು. ನಾನು ಆಗ ಚಿಕ್ಕಬಳ್ಳಾಪುರದ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ವರದಿಗಾರರಾಗಿದ್ದ ಜಯರಾಮ್ ಅವರ ಬಜಾಜ್ ಚೇತಕ್ ಗಾಡಿಯಲ್ಲಿ ಬಂದು ಅವರ ಜತೆಯಲ್ಲೆ ಬೆಂಗಳೂರಿಗೆ ಹೋಗಲಿದ್ದ ನಾನ್ ಸ್ಟಾಪ್ ಬಸ್ಸಿಗಾಗಿ ಕಾದುನಿಂತಿದ್ದೆ. ಅಷ್ಟರಲ್ಲಿಯೇ ಎನ್ಟಿಆರ್ ನಿಧನರಾದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಸ್ಥಳೀಯ ಎನ್ಟಿಆರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಅಲ್ಲಲ್ಲಿ ತಮ್ಮ ನೆಚ್ಚಿನ ನಟರ ಪೋಸ್ಟರುಗಳನ್ನು ಅಂಟಿಸಿ ಶ್ರದ್ಧಾಂಜಿಲಿ ಸಲ್ಲಿಸಿದ್ದರು. ಕೆಲ ವೀರಾಭಿಮಾನಿಗಳಂತೂ ಅಲ್ಲಿಯೇ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯಗಳು ನನ್ನ ಮೇಲೆ ಗಾಢ ಪ್ರಭಾವ ಬೀರಿದ್ದವು. ಯಾಕೆಂದರೆ. ಆಂಧ್ರ ಗಡಿಗೆ ಅಂಟಿಕೊಂಡಿರುವ ನಮ್ಮ ಪ್ರದೇಶದಲ್ಲಿ ಕನ್ನಡವೆಂಬುದು ನಮ್ಮ ಜನರೇಷನ್ನಿನಿಂದ ಶುರುವಾದ ಭಾಷೆಯಾಗಿತ್ತು! ಬೆಂಗಳೂರಿಗೆ ಅರವತ್ತು ಕಿ.ಮೀ ದೂರದಲ್ಲಿದ್ದ ಚಿಕ್ಕಬಳ್ಳಾಪುರವನ್ನು ಬಿಟ್ಟರೆ ಆ ಉಪ ವಿಭಾಗದ ವ್ಯಾಪ್ತಿಯಲ್ಲಿದ್ದ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಕನ್ನಡವೆಂಬುದು ಪರಕೀಯ ಭಾಷೆಯಂತಾಗಿತ್ತು. ನಮ್ಮ ಕುಟುಂಬದಲ್ಲಿ ಕನ್ನಡವನ್ನು ಕಲಿತ, ಮಾತನಾಡಿದ ಮೊದಲ ಕುಡಿ ನಾನೇ ಎಂದರೆ ನೀವು ಗಡಿಯಲ್ಲಿನ ಕನ್ನಾಡಾಭಿವೃದ್ಧಿ ಹೇಗಾಗಿತ್ತು ಆಗ ಎಂಬುದು ಅರ್ಥವಾದೀತು. ಕನ್ನಡವೆಂದರೆ ಬ್ರಾಹ್ಮಣರ ಭಾಷೆ, ಸಾಹುಕಾರರ ಭಾಷೆ ಎಂಬ ಪರಿಸ್ಥಿತಿ ನಾನು ಹೈಸ್ಕೂಲು ಮುಗಿಸುವ ತನಕವೂ ಇತ್ತು. ಕನ್ನಡ ಮಾತನಾಡುವವರು ಎದುರಾದರೆ ಅಡ್ಡಡ್ಡ ಉದ್ದುದ್ದ ಸಾಷ್ಠಾಂಗವಾಗಿ ಮಲಗಿಬಿಡುತ್ತಿದ್ದ ದೃಶ್ಯಗಳನ್ನು ನಾನಿನ್ನೂ ಮರೆತಿಲ್ಲ. ಇನ್ನು ನಮ್ಮ ಊರಿನ ಹೆಸರು ಈಗಲೂ ’ಪೋಲಂಪಲ್ಲಿ’. ಪಲ್ಲಿ ಎಂಬುದು ಕನ್ನಡದಲ್ಲಿ ಹಳ್ಳಿ ಎಂದರ್ಥ. ನಮ್ಮೂರು ’ಪೋಲಂಹಳ್ಳಿ’ಯಾಗಿ ಬದಲಾಗಲೇ ಇಲ್ಲ. ಹೀಗಾಗಿ ತೆಲುಗುಮಯವಾಗಿದ್ದ ಆ ಭಾಗದಲ್ಲಿ ಆ ಭಾಷೆಯ ಸಿನಿಮಾಗಳೇ ಮನರಂಜನೆಯ ಸೆಲೆಗಳಾಗಿದ್ದವು. ಈ ಕಾರಣಕ್ಕಾಗಿಯೇ ಎನ್ಟಿಆರ್, ಎಎನ್ನಾರ್ ಮುಂತಾದವರು ಜನರಿಗೆ ಅಚ್ಚುಮೆಚ್ಚಿನ ನಟರಾಗಿದ್ದರು. ಈಗಲೂ ಅದೇ ಪರಿಸ್ಥಿತಿ, ಸ್ವಲ್ಪ ಪರವಾಗಿಲ್ಲ ಅಷ್ಟೇ. ನಮ್ಮ ಅಣ್ಣಾವ್ರ ನೇತೃತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿಯೂ ಗೋಕಾಕ್ ಮಾದರಿಯ ಒಂದು ಚಳವಳಿ ನಡೆಯಬೇಕಾಗಿತ್ತು.
ಇಂಥ ಸ್ಥಿತಿಯಲ್ಲಿ ಎನ್ಟಿಆರ್ ಸಿನಿಮಾಗಳು ನಮ್ಮ ಕಡೆ ಜನಪ್ರಿಯವಾಗಿದ್ದವು. ನಾನು ನೋಡಿದ ಮೊತ್ತಮೊದಲ ಸಿನಿಮಾ ತೆಲುಗು ಸಿನಿಮಾ ಎಂದು ವಿಧಿ ಇಲ್ಲದೇ ಹೇಳಲೇಬೇಕಾಗಿದೆ. ಕನ್ನಡ ಸಿನಿಮಾಗಳು ಚಿಕ್ಕಬಳ್ಳಾಪುರದ ಗಡಿ ಬರುತ್ತಿರಲಿಲ್ಲ. ಹೀಗಾಗಿ ನಮಗೆ ಬಾಲ್ಯದಲ್ಲಿ ತೆಲುಗು ಚಿತ್ರಗಳನ್ನೇ ನೋಡುವುದಾಗಿತ್ತು.
ಇನ್ನು ಎನ್ಟಿಆರ್ ಬಗ್ಗೆ ಹೇಳುವುದಾದರೆ, ನಮಗೆ ಹಿಂದೂಪುರ ತುಂಬಾ ಹತ್ತಿರ. 1985ರ ಅಸೆಂಬ್ಲಿ ಚುನಾವಣೆಯಲ್ಲಿ ಅವರು ಅಲ್ಲಿಂದಲೇ ಸ್ಫರ್ಧಿಸಿ ಗೆದ್ದಿದ್ದರು. ಆಗ ಅವರ ಚುನಾವಣಾ ಪ್ರಚಾರಗಳನ್ನು ನೋಡಲು ಗುಡಿಬಂಡೆ, ಬಾಗೇಪಲ್ಲಿಯಿಂದ ನಮ್ಮ ಜನ ಹಿಂದೂಪುರಕ್ಕೆ ಜಾತ್ರೆಗೆ ಹೋಗುವಂತೆ ಹೋಗುತ್ತಿದ್ದರು. 1995ರವರೆಗೂ ಅವರು ಹಿಂದೂಪುರ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಚಿಂತಾಮಣಿ ಮುಂತಾದ ಕಡಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪ್ರಚಾರ ಮಾಡಲು ಅವರನ್ನು ತಪ್ಪದೇ ಕರೆಸಲಾಗುತ್ತಿತ್ತು. ಆ ಸಭೆಗಳಲ್ಲಿ ಜನಜಾತ್ರೆಯೋ ಜನಜಾತ್ರೆ.
ಸಿನಿಮಾ ಬಗ್ಗೆ ಒಂದಿಷ್ಟು
ಎನ್ಟಿಆರ್ ಅವರು ಸಿನಿಮಾಕ್ಕೆ ಸಂಬಂಧಿಸಿ ಬಹುಮುಖ ಪ್ರತಿಭೆ. ನಟ, ನಿರ್ದೇಶಕ, ನಿರ್ಮಾಪಕ, ಸ್ಟುಡಿಯೋ ನಿರ್ಮಾತೃ, ರಂಗಕರ್ಮಿ. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದವರು. ಸಾಮಾಜಿಕ, ಪೌರಾಣಿಕ, ಜಾನಪದ ಸೇರಿ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿ ತಮ್ಮ ಛಾಪು ಮೂಡಿಸಿದ್ದರು. ಬುತೇಕ ಎವರ್ ಗ್ರೀನ್ ಚಿತ್ರಗಳೆಂದೇ ಪಟ್ಟಿ ಮಾಟಲ್ಪಟ್ಟಿರುವ 16 ಚಿತ್ರಗಳನ್ನು ಅವರು ಡೈರೆಕ್ಟ್ ಮಾಡಿದ್ದರು. ಇವುಗಳಲ್ಲಿ ‘ದಾನವೀರ ಶೂರ ಕರ್ಣ’, ’ಸೀತಾರಾಮ ಕಲ್ಯಾಣಂ’, ’ಶ್ರೀಕೃಷ್ಣ ಪಾಂಡವೀಯಂ’, ’ಚಾಣಕ್ಯ ಚಂದ್ರಗುಪ್ತ’ ಸೇರಿ ಅಷ್ಟೂ ಸಿನಿಮಾಗಳು ಈಗಲೂ ರೀ ರಿಲಿಸ್ ಆಗುತ್ತಲೇ ಇವೆ. ’ದಾನವೀರ ಶೂರ ಕರ್ಣ’ ಚಿತ್ರದಲ್ಲಂತೂ ಅವರು ಒಟ್ಟಿಗೆ ಶ್ರೀಕೃಷ್ಣ, ದುರ್ಯೋದನ ಹಾಗೂ ಕರ್ಣನ ಪಾತ್ರಗಳನ್ನು ನಿರ್ವಹಿಸಿದ್ದರು. ತೆಲುಗು ಚಿತ್ರರಂಗದ ಮಟ್ಟಿಗೆ ಆ ಚಿತ್ರವೊಂದು ಮೈಲುಗಲ್ಲು. ಜತೆಗೆ, 24 ಆಲ್ಟೈಮ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದರು. ಸಿನಿಮಾಕ್ಕಾಗಿ ಅವರೆಷ್ಟು ಬದ್ಧರಾಗಿದ್ದರೆಂದರೆ, ಸೆಟ್ಟಿಗೆ ಒಂದು ನಿಮಿಷವೂ ತಡವಾಗಿ ಬರುತ್ತಿರಲಿಲ್ಲವಂತೆ. ತೆಲುಗು ಸಾಹಿತ್ಯವನ್ನು ಆಮೂಲಾಗ್ರವಾಗಿ ಓದಿಕೊಂಡಿದ್ದರಂತೆ. ತಮ್ಮ ಗಂಭೀರವಾದ ಸ್ವರವನ್ನು ಹಾಗೆಯೇ ಕಾಪಾಡಿಕೊಳ್ಳಲು ಮೆರೀನಾ ಬೀಚಿನಲ್ಲಿ ಪ್ರಾಕ್ಟೀಸು ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ, ತಮ್ಮ ’ನರ್ತನಶಾಲ’ ಚಿತ್ರದಲ್ಲಿ ಬೃಹನ್ನಳೆ ಪಾತ್ರಕ್ಕಾಗಿ ಕೂಚಿಪೂಡಿ ನೃತ್ಯವನ್ನು ಕಲಿತುಕೊಂಡಿದ್ದರು.
ನನಗೆ ಎನ್ಟಿಆರ್ ಅದೆಷ್ಟು ಫೇವರೀಟ್ ಆಗಿದ್ದರೆಂದರೆ, 1993 ಏಪ್ರಿಲ್ 23ರಂದು ಅವರ ಕೊನೆಯ ಚಿತ್ರ ’ಮೇಜರ್ ಚಂದ್ರಕಾಂತ್’ ಸಿನಿಮಾ ಚಿಂತಾಮಣಿಯ ಎಸ್ಸೆಲ್ಲೆನ್ ಟಾಕೀಸಿನಲ್ಲಿ ರಿಲೀಸ್ ಆಗಿತ್ತು. ಅದೇ ವೇಳೆ ನಾನು ಸಮೀಪದ ಕೈವಾರದಲ್ಲಿ ಯುನಿವರ್ಸಿಟಿ ಮಟ್ಟದ ಎನ್ನೆಸ್ಸೆಸ್ ಕ್ಯಾಂಪಿನಲ್ಲಿದ್ದೆ. ಈ ಸಿನಿಮಾ ಚಿಂತಾಮಣಿಗೆ ಬಂದಿದೆ ಅಂತ ಗೊತ್ತಾದ ಕೂಡಲೇ ಕ್ಯಾಂಪಿಗೆ ಅರ್ಧದಿನ ಚಕ್ಕರ್ ಹಾಕಿ ಬಂದು ಸಿನಿಮಾ ನೋಡಿದ್ದೆ. ಆ ಸಿನಿಮಾದಲ್ಲಿ ಅವರು ಸಿಂಹದಂತೆ ಘರ್ಜಿಸಿದ್ದರು.
ಇನ್ನು ಅವರ ರಾಜಕೀಯ ಜೀವನದ ಬಗ್ಗೆ ಬರೆಯದಿದ್ದರೆ ಈ ಲೇಖನ ಅಪೂರ್ಣ. ಆರಂಭಕ್ಕೇ ದೇಶದಲ್ಲಿ ಭಾರೀ ಅಲೆಯನ್ನೇ ಎಬ್ಬಿಸಿ ಕಾಂಗ್ರೆಸ್ ವಿರೋಧಿ ರಾಜಕೀಯವನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು ಎನ್ಟಿಆರ್. ಹಾಗೆ ನೋಡಿದರೆ ಅವರು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ಪೂರ್ವನಿರ್ಧಾರಿತವಲ್ಲ. 1978ರಲ್ಲಿ ಆಂಧ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಒಳಜಗಳದಿಂದ ಎಕ್ಕುಟ್ಟಿಹೋಗಿತ್ತು. ಇಂದಿರಾ ಗಾಂಧಿ ಆಧಿಪತ್ಯದಲ್ಲಿ 5 ವರ್ಷಗಳಲ್ಲಿ ಐವರು ಮುಖ್ಯಮಂತ್ರಿಗಳು ಬಂದುಹೋದರು. ಮುಖ್ಯಮಂತ್ರಿ ಯಾರು ಎಂಬುದನ್ನು ದಿಲ್ಲಿಯಲ್ಲಿ ನಿರ್ಧರಿಸಿ ಶಾಸಕರನ್ನು ನಾಮಕಾವಸ್ಥೆ ಮಾಡಲಾಗಿತ್ತು. 1978ರ ಚುನಾವಣೆಯಲ್ಲಿ ಜಲಗಂ ವೆಂಗಲರಾವ್ ಮೊದಲು ಮುಖ್ಯಮಂತ್ರಿಯಾದರು. ಬಳಿಕ ಬಿಕ್ಕಟ್ಟು ಬಂದು ಮರ್ರಿ ಚೆನ್ನಾರೆಡ್ಡಿ ಬಂದರು. ಆಮೇಲೆ ಟಂಗಟೂರಿ ಅಂಜಯ್ಯ, ಅವರಾದ ಮೇಲೆ ಭವನಂ ವೆಂಕಟರಾಮರೆಡ್ಡಿ, ಕೊನೆಯದಾಗಿ ಕೋಟ್ಲ ವಿಜಯ ಭಾಸ್ಕರ ರೆಡ್ಡಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು. ಇಷ್ಟೂ ಹೆಸರುಗಳು ದಿಲ್ಲಿಯಲ್ಲೇ ಡಿಸೈಡ್ ಆಗಿ ಬಳಿಕ ಕವರಿಂಗ್ ಲೆಟರಿನಲ್ಲಿ ಹೈದರಾಬಾದಿಗೆ ಬರುತ್ತಿದ್ದವು. ಇದೆಲ್ಲವನ್ನು ಕಂಡು ತೆಲುಗರು ರೋಸಿಹೋಗಿದ್ದರು. ಅಪಮಾನ, ಆಕ್ರೋಶದಿಂದ ಕೆರಳಿದ್ದರು. ಆಗ ಆ ಜನರ ಸ್ವಾಭಿಮಾನದ ಸಂಕೇತವಾಗಿ ಎಂಟ್ರಿ ಕೊಟ್ಟವರೇ ಎನ್ಟಿಆರ್. 1982 ಮಾರ್ಚ್ 29ರಂದು ಅವರು ತಮ್ಮ ರಾಜಕೀಯ ಆರಂಗೇಟ್ರಮ್ ಅನೌನ್ಸ್ ಮಾಡಿಬಿಟ್ಟರು. ತೆಲುಗುದೇಶಂ ಎಂಬ ಪಕ್ಷ ಹುಟ್ಟಿದ್ದು ಹೀಗೆ. ದಿನಮಾತ್ರವೂ ವ್ಯರ್ಥ ಮಾಡದೆ ತಮ್ಮ ಮನೆಯ ಶೆಡ್ಡಿನಲ್ಲಿದ್ದ ಹಳೆಯ ಚಾರ್ವೋಲೇಟ್ ವ್ಯಾನಿಗೆ ಹೊಸರೂಪ ನೀಡಿ ಅದನ್ನು ಚೈತನ್ಯ ರಥವನ್ನಾಗಿ ಸಿದ್ಧಪಡಿಸಿದರು. ಇಡೀ ರಾಜ್ಯದ ಮೂಲೆಮೂಲೆಯನ್ನು ರಥಯಾತ್ರೆ ಮೂಲಕ ಸುತ್ತಿದರು. ಆ ನಂತರ ದೇಶದಲ್ಲಿ ನಡೆದ ರಥಯಾತ್ರೆಗಳಿಗೆ ಅವರೇ ಮೂಲಪುರುಷರಾದರು. ’ತೆಲುಗುದೇಶಂ ಕರೆಯುತ್ತಿದೆ, ಬಾ! ಹೊರಟು ಬಾ!!’ ಈ ನಿನಾದ ವೋಟುಗಳ ಮಹಾಪ್ರವಾಹವನ್ನೇ ಹರಿಸಿತು. ಮೊತ್ತಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಾಮಾವಶೇಷವಾಗಿ ಭರ್ಜರಿ ಮೆಜಾರಿಟಿಯೊಂದಿಗೆ ಎನ್ಟಿಆರ್ ಮುಖ್ಯಮಂತ್ರಿಯಾಗಿಬಿಟ್ಟರು.
ನಿಜಕ್ಕೂ ಅವರಿಗೆ ಅಗ್ನಿಪರೀಕ್ಷೆ ಅಂತ ಶುರುವಾಗಿದ್ದೇ ಅಲ್ಲಿ. ಈ ಸರಕಾರ ಕೇಂದ್ರ ಸರಕಾರಕ್ಕೆ ಅಪಥ್ಯವಾಗಿತ್ತು. ಆದರೆ ಜನಪರವಾಗಿದ್ದ ರಾಮರಾವು ಅವರ ನಿರ್ಧಾರಗಳು ಕಠಿಣವಾಗಿದ್ದವು. ಕಾಂಗ್ರೆಸ್ಸಿನಿಂದ ತೆಲುಗುದೇಶಂಗೆ ಹಾರಿದ್ದ ಹಳೆ ಗಿರಾಕಿಗಳಿಗೆ ಉಸಿರುಕಟ್ಟಿತು. ಅದರ ಪರಿಣಾಮವೇ 1984ರ ಅಗಸ್ಟ್ 16ರ ಬಂಡಾಯ. ಆವತ್ತಿನ ರಾಜ್ಯಪಾಲರು, ಕೇಂದ್ರದ ಕುಮ್ಮಕ್ಕಿನಿಂದ ನಾದೇಂಡ್ಲ ಭಾಸ್ಕರರಾವು ಎಂಬ ಮಾಜಿ ಕೈಪಾರ್ಟಿಯನ್ನು ಸಿಎಂ ಮಾಡಿಬಿಟ್ಟರು. ಆಗ ಇಡೀ ದೇಶದ ಪ್ರತಿಪಕ್ಷಗಳೆಲ್ಲ ಇಂದಿರಾ ಗಾಂಧಿ ವಿರುದ್ಧ ಸಿಡಿದೆದ್ದವು. ಅಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ತೆಲುಗು ದೇಶಂ ಶಾಸಕರನ್ನು ಕಾಂಗ್ರೆಸ್ ಕಣ್ಣಿನಿಂದ ಕಾಪಾಡಿದ್ದರು. ಮತ್ತೆ ಮುಖ್ಯಮಂತ್ರಿಯಾದ ಎನ್ಟಿಆರ್ ಜನಪ್ರಿಯತೆಯ ಮುಗಿಲೆತ್ತರಕ್ಕೆ ಬೆಳೆದರು. ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿ.ಪಿ.ಸಿಂಗ್ ಸರಕಾರವನ್ನು ಅಸ್ತತ್ವಕ್ಕೆ ತಂದ ನ್ಯಾಷನಲ್ ಫ್ರೆಂಟ್ ಸ್ಥಾಪನೆಗೆ ದೊಡ್ಡ ಕಾಣ್ಕೆ ನೀಡದ್ದ ಅವರು, ಬಳಿಕ ಅದರ ಆಧ್ಯಕ್ಷರೂ ಆದರು. ಕ್ರಮೇಣ ಇದು ಸಂಯುಕ್ತ ರಂಗವೂ ಆಯಿತು. ಪ್ರಧಾನಿ ಪದವಿಗೆ ಅತೀ ಸನಿಹಕ್ಕೆ ಹೋಗಿದ್ದರು ಎನ್ಟಿಆರ್.
ತಮ್ಮ ಸರಕಾರದ ಪದಚ್ಯತಿಗೆ ಕಾರಣವಾಗಿದ್ದ ಎನ್ಟಿಆರ್ ಯಾವತ್ತೂ ಇಂದಿರಾ ಗಾಂಧಿಯರನ್ನು ರಾಜಕೀಯವಾಗಿ ಎದುರಿಸಿದಿರೆ ಹೊರತು ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸಲಿಲ್ಲ. ತೆಲುಗು ದೇಶಂ ಸ್ಥಾಪನೆಗೂ ಮುನ್ನ ಒಮ್ಮೆ ಹೈದರಾಬಾದಿಗೆ ಬಂದಿದ್ದ ಇಂದಿರಾ ಅವರು ಕೃಷ್ಣನ ಪಾತ್ರದಲ್ಲಿದ್ದ ಎನ್ಟಿಆರ್ ಅವರ ಬೃಹತ್ ಕಟೌಟಿಗೆ ಕೈಜೋಡಿಸಿ ನಮಸ್ಕಾರ ಮಾಡಿದ್ದರಂತೆ. ಅಂತಹ ಇಂದಿರಾ ಗಾಂಧಿ ಅವರನ್ನು ಅಂಗರಕ್ಷಕರೇ ಹತ್ಯೆ ಮಾಡಿದಾಗ ’ಇದು ಮಾನವೀಯತೆಯ ಮೇಲೆ ನಡೆದ ಕ್ರೂರ ದಾಳಿ’ ಎಂದು ಖಂಡಿಸಿದ್ದರು. ಅದೇ ರೀತಿ ರಾಜೀವ್ ಗಾಂಧಿ ಅವರೊಂದಿಗೂ ಅವರು ಉತ್ತಮ ಸಂಬಂಧ ಹೊಂದಿದ್ದರು.
ಹಳಿತಪ್ಪಿದ ಅದೃಷ್ಟ
1994ರಲ್ಲಿ ಮತ್ತೆ ಮುಖ್ಯಮಂತ್ರಿಯಾದ ಅವರು ಲಕ್ಷ್ಮೀಪಾರ್ವತಿ ಅವರನ್ನು ಮದುವೆಯಾಗಬೇಕಾಯಿತು. ಅವರ ಜೀವನ ಚರಿತ್ರೆ ಬರೆಯಲು ಬಂದ ಆ ಮಹಿಳೆ ಕೊನೆಗೆ ಅವರ ಆರ್ಧಾಂಗಿಯಾಗಿದ್ದು ವಿಪರ್ಯಾಸವೇ ಸರಿ. ಅದರಿಂದ ಅವರ ಕುಟುಂಬದಲ್ಲಿ ಅಲ್ಲೋಲಕಲ್ಲೋಲವೇ ಉಂಟಾಯಿತು. ಅವರ ಕಷ್ಟಕಾಲ ಆರಂಭವಾಗಿದ್ದೇ ಅಲ್ಲಿಂದ ಎಂದು ಅನೇಕರು ಹೇಳುವ ಮಾತು. 1995 ಸೆಪ್ಟೆಂಬರ್ 1ರಂದು ನಡೆದ ರಾಜಕೀಯ ಕ್ಷಿಪ್ರಕ್ರಾಂತಿಯಲ್ಲಿ ಹೆಣ್ಣುಕೊಟ್ಟ ಪಿತೃಸಮಾನರಾದ ಮಾವನನ್ನೇ ಪಕ್ಕಕ್ಕೆ ತಳ್ಳಿ ಮುಖ್ಯಮಂತ್ರಿ ಗಾದಿಯನ್ನು ಏರಿಬಿಟ್ಟರು ಚಂದ್ರಬಾಬು ನಾಯ್ಡು ಎಂಬ ಮಾಜಿ ಕಾಂಗ್ರೆಸ್ಸಿಗ. ಅಲ್ಲಿಗೆ ಆಂಧ್ರಪ್ರದೇಶದ ರಾಜಕಾರಣದಲ್ಲಿ ಎನ್ಟಿಆರ್ ಎಂಬ ವರ್ಣರಂಜಿತ, ಅಪ್ಪಟ ಜನಪರ, ವಿಲಕ್ಷಣ-ವಿಶಿಷ್ಟ ಅಧ್ಯಾಯವೊಂದಕ್ಕೆ ಅತ್ಯಂತ ದುರಂತಮಯವಾಗಿ ತೆರೆಬಿತ್ತು.
ಈ ನೋವಿನಲ್ಲಿಯೇ ಕೊರಗಿದ ಅವರು 1996 ಜನವರಿ 18ರ ಬೆಳಗಿನ ಜಾವ ಮರಳಿಬಾರದ ಲೋಕಕ್ಕೆ ತೆರಳಿಬಿಟ್ಟರು. ಆ ಬಳಿಕ 8 ವರ್ಷಗಳ ನಂತರ ಲಕ್ಷ್ಮೀ ಪಾರ್ವತಿ ಅವರು ತಮ್ಮ ಪತಿಯ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ವಿಸರ್ಜನೆ ಮಾಡಿದ್ದರು.
ಅತ್ಯಂತ ಅರ್ಥಪೂರ್ಣವಾಗಿ ಆರಂಭವಾಗಿದ್ದ ಎನ್ಟಿಆರ್ ಪೊಲಿಟಿಕಲ್ ಜರ್ನಿ ಅತ್ಯಂತ ದಯನೀಯವಾಗಿ, ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಅಂತ್ಯ ಮಾಡಲ್ಪಟ್ಟಿತು. ಅವರು ಅತಿಯಾಗಿ ನಂಬಿದ್ದವರೆಲ್ಲರೂ ಅವರಿಗೆ ಕೈಕೊಟ್ಟರು. ಅವರಿಂದಲೇ ರಾಜಕೀಯ ಜನ್ಮತಾಳಿದವರು ಅವರ ಮೇಲೆ ಚಪ್ಪಲಿಗಳನ್ನೂ ಎಸೆದರು. ರಾಜಕೀಯವೆಂಬ ಚದುರಂಗದಾಟದಲ್ಲಿ ಅವರಂಥ ಸಜ್ಜನರಿಗೆ ಜಾಗ ಸಿಗೋದು ವಿರಳ. ಅದರೆ ಜನರ ಪುಣ್ಯಕ್ಕೆ ಅವರಿಗೆ ಅಂಥ ಅವಕಾಶ ಸಿಕ್ಕಿತ್ತು. ಆ ಅವಕಾಶವನ್ನು ಎನ್ಟಿಆರ್ ಅವರು ನೂರಕ್ಕೆ ನೂರು ಪಾಲು ಜನರಗೇ ಮೀಸಲಿಟ್ಟರು. ಮುಖ್ಯಮಂತ್ರಿ ಪಟ್ಟದ ಮೇಲೆ ಕೂತಿದ್ದರೂ ಯೋಗಿಯಂತೆ ಬದುಕಿದರು. ಜನರು ಕೇಳಿದ್ದೆಲ್ಲವನ್ನೂ ಮಾಡಿದರು.
ಸಾಧ್ಯವಾದರೆ ಮತ್ತೆ ಹುಟ್ಟಿಬನ್ನಿ ಎನ್ಟಿಆರ್.