ಸುಭಾಶ್ ಹುಗಾರ್
ಇದೊಂದು ಮಾನಸಿಕ ರೋಗವಲ್ಲದೇ ಬೇರೇನೂ ಅಲ್ಲ. ದಿಢೀರ್ ಪ್ರಸಿದ್ಧಿ ಮತ್ತು ಏನಕೇನ ಯಶಸ್ಸು ಸಾಧಿಸಬೇಕೆಂಬ ಹುಚ್ಚುತನ ಮನುಷ್ಯನನ್ನು ಎಲ್ಲೆಲ್ಲಿಗೋ ಎಳೆದುಕೊಂಡು ಹೋಗಿ ದಿಕ್ಕು ತಪ್ಪಿಸಿಬಿಡುತ್ತಿದೆ. ಲೈಕು, ಕಾಮೆಂಟು ಮತ್ತು ಶೇರುಗಳ ಪ್ರಸಕ್ತ ಸೋಷಿಯಲ್ ಮೀಡಿಯಾದ ಯುಗದಲ್ಲಂತೂ ಈ ಹುಚ್ಚು ಮೇರೆ ಮೀರಿದೆ. ಕೆಲವೊಮ್ಮೆ ಪ್ರಚಾರದ ಮುಂಬೆಳಕಿನಲ್ಲಿ ಮಿರಿ ಮಿರಿ ಮಿಂಚಿಸಿ ತಾತ್ಕಾಲಿಕವಾಗಿ ಭ್ರಮಾ ಲೋಕದಲ್ಲಿ ತೇಲಿಸಿಯೂ ಬಿಡುತ್ತದೆ. ಆದರೆ, ಮುಂದೊಮ್ಮೆ ವಾಸ್ತವದ ಅರಿವಾದಾಗ ಎಲ್ಲವೂ ಠುಸ್ ಆಗಿ, ಮಾನಸಿಕ ಖಿನ್ನತೆ ಉಂಟಾಗಿ ಊಹಿಸಲಸಾಧ್ಯವಾದ ಅನಾಹುತಗಳೂ ಸಂಭವಿಸಿಬಿಡುತ್ತವೆ.
ಜಾಗತಿಕ ತಾಪಮಾನದ ಬಗ್ಗೆ ದನಿ ಎತ್ತಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಮಣಿಪುರದ ಏಳು ವರ್ಷದ ಬಾಲ ಕಾರ್ಯಕರ್ತೆ ಲಿಸಿಪ್ರಿಯಾ ಕಂಗಜುಮ್ ಕಥೆ ನೀವು ಕೇಳಿರಬಹುದು. ಈಗ ಒಂಬತ್ತು ವರ್ಷದ ಬಾಲಕಿಯಾಗಿರುವ ಈ ಲಿಸಿಪ್ರಿಯಾ, 2019ರ ಮೇ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಸಂಯುಕ್ತ ರಾಷ್ಟ್ರಗಳ ಸಂಘಟನೆ (UNO) Disaster Risk Reduction ಕುರಿತು ಆಯೋಜಿಸಿದ್ದ ಜಾಗತಿಕ ಸಮ್ಮೇಳನದಲ್ಲಿ ಭಾಷಣ ಮಾಡಲಿದ್ದಾಳೆ ಎಂಬ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಳು. ಈ ಬಾಲಕಿಯ ಜನಪ್ರಿಯತೆ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಈಕೆಯನ್ನು #SheinspiresUs ಅಭಿಯಾನಕ್ಕೆ ನಾಮಕರಣ ಮಾಡಿದ್ದರು.
ಆದರೆ, ಪ್ರಧಾನಿಯ ಆಫರ್ ತಿರಸ್ಕರಿಸಿದ್ದ ಈ ಬಾಲ ಕಾರ್ಯಕರ್ತೆ, ಶಾಲಾ ಪಠ್ಯದಲ್ಲಿ ಪರಿಸರ ಜಾಗೃತಿಯ ಪಾಠಗಳನ್ನು ಸೇರಿಸಬೇಕೆಂಬ ನನ್ನ ಬೇಡಿಕೆಯನ್ನು ನೀವು ಈಡೇರಿಸಿಲ್ಲ. ಹೀಗಾಗಿ #SheinspiresUs ಕುರಿತು ನಿಮ್ಮ ಆಹ್ವಾನವನ್ನು ನಾನು ತಿರಸ್ಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಳು. ವಿರೋಧ ಪಕ್ಷಗಳ ಮುಖಂಡರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಸಿಕ್ಕ ಈ ಅವಕಾಶವನ್ನು ಕೈ ಚೆಲ್ಲಲಿಲ್ಲ. ವಿಪಕ್ಷಗಳ ಘಟಾನುಘಟಿ ನಾಯಕರೆಲ್ಲರೂ ಈ ಬಾಲಕಿಯನ್ನು ಕೊಂಡಾಡಿ, ಪ್ರಧಾನಿ ಮೇಲೆ ಟೀಕಾಪ್ರಹಾರ ನಡೆಸಿದ್ದರು.
ವಾಸ್ತವವಾಗಿ UNO ದಿಂದ ಈ ಬಾಲೆಗೆ ಆಹ್ವಾನ ಬಂದಿದ್ದೇ ದೊಡ್ಡ ಸುಳ್ಳು. ಪ್ರಸಿದ್ಧಿ ಮತ್ತು ಯಶಸ್ಸಿನ ಹಪಾಹಪಿತನದಿಂದಾಗಿ ಈಕೆಯ ತಂದೆ ಈ ಎಲ್ಲಾ ಸುಳ್ಳುಗಳನ್ನು ಹೆಣೆದು ಜಗತ್ತಿಗೆ ಮೋಸ ಮಾಡಿದ್ದ. ಈಕೆಯ ಹೆಸರಿನಲ್ಲಿ ಇರುವ ಟ್ವಿಟರ್ ಅಕೌಂಟ್ ನ್ನು ಆಕೆಯ ತಾಯಿಯೇ ಹ್ಯಾಂಡಲ್ ಮಾಡುತ್ತಿದ್ದರು. 42 ಸಾವಿಕ್ಕೂ ಅಧಿಕ ಫಾಲೋವರ್ಸ್ ಇದ್ದ ಈ ಅಕೌಂಟನ್ನೂ ನಂತರ ಟ್ವಿಟರ್ ಸ್ಥಗಿತಗೊಳಿಸಿತ್ತು. ಸುಳ್ಳು ಮತ್ತು ಅಡ್ಡದಾರಿಯ ಮೂಲಕವಾದರೂ ಸರಿ, ಪ್ರಸಿದ್ಧಿ ಮತ್ತು ಯಶಸ್ಸು ಪಡೆಯಬೇಕೆಂಬ ಈ ಕಾಲದ ಮಾನಸಿಕ ಸ್ಥಿತಿಯ ಫಲಶ್ರುತಿ ಈ ಲಿಸಿಪ್ರಿಯಾ.
ಅಂತಾರಾಷ್ಟ್ರೀಯ ಖ್ಯಾತಿಯ ಹವಾಮಾನ ಬದಲಾವಣೆಯ ಕಾರ್ಯಕರ್ತೆ ಸ್ವಿಡನ್ನಿನ ಗ್ರೆಟಾ ಥನ್ಬರ್ಗ್ ಮತ್ತು ಮಹಿಳಾ ಹಾಗೂ ಮಕ್ಕಳ ಶಿಕ್ಷಣ ಕಾರ್ಯಕರ್ತೆಯೂ ಆದ ಪಾಕಿಸ್ತಾನದ ಯೂಸುಫಾ ಮಲಾಲಾ ಅವರಿಂದ ಪ್ರೇರಣೆ ಪಡೆದು ಜಗತ್ತಿನಾದ್ಯಂತ ಈಗ ಅನೇಕ Child Activistಗಳು ಸಕ್ರಿಯರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಜಗತ್ತನ್ನು ಬಾಧಿಸುವ ಸಮಸ್ಯೆಗಳ ಬಗ್ಗೆ ಕಾಳಜಿ ತೋರುವುದು ಮತ್ತು ಅವುಗಳ ಪರಿಹಾರಕ್ಕಾಗಿ ಹೋರಾಟ ನಡೆಸುವುದು ಸ್ವಾಗತಾರ್ಹ ಬೆಳವಣಿಗೆಯೇ.
ಆದರೆ, ಅದಕ್ಕೆ ಬೇಕಿರುವ ಶ್ರಮ, ತಾಳ್ಮೆ, ಬದ್ಧತೆ ಮತ್ತು ಪ್ರಾಮಾಣಿಕತೆ ಇಲ್ಲದೇ ಕೇವಲ ಸುಳ್ಳು ಮತ್ತು ಅಡ್ಡದಾರಿಗಳ ಮೂಲಕ ಯಶಸ್ಸಿನ ಕನಸು ಕಾಣುವುದು ದುರಂತಕ್ಕೆ ಕಾರಣವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಪಾಲಕರೇ ಇಂಥ ಅನಾಹುತಗಳಿಗೆ ಹೊಣೆಯಾಗಿರುತ್ತಾರೆ.
ಯಶಸ್ಸು ಮತ್ತು ಜನಪ್ರಿಯತೆ ಅಳೆಯುವ ವಿಧಾನಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುತ್ತವೆ. ಸೋಷಿಯಲ್ ಮೀಡಿಯಾ ಮತ್ತು ಇಂಟರ್ನೆಟ್‌ನ ಈ ಯುಗವನ್ನು ವಿದ್ವಾಂಸರ ವಲಯದಲ್ಲಿ Likes Economy ಎಂದು ಕರೆಯಲಾಗುತ್ತದೆ. ಲೈಕು, ಕಾಮೆಂಟ್ಸು, ಶೇರ್ಸ್, ವೀವ್ಸ್, ಹಿಟ್ಸ್ ಗಳ ಆಧಾರದಲ್ಲಿ ವ್ಯಕ್ತಿಯ ಜನಪ್ರಿಯತೆ, ವಿಶ್ವಾಸಾರ್ಹತೆಯನ್ನು ಅಳೆಯುವ ವಿಧಾನವನ್ನು Vanity Metrics ಎಂದೂ ಕರೆಯುತ್ತಾರೆ. ವ್ಯಕ್ತಿ ತನ್ನನ್ನು ತಾನೇ ಹೊಗಳಿಕೊಳ್ಳೋದು, ಸುಳ್ಳು, ತಪ್ಪು ಮಾಹಿತಿ ಹರಡಿಯಾದರೂ ಹೆಚ್ಚು ಜನರ ಗಮನ ಸೆಳೆಯುವುದು, ಹೆಚ್ಚು ಲೈಕು, ಕಾಮೆಂಟು, ಶೇರ್ಸ್ ಪಡೆಯುವ ಮೂಲಕ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವುದು. ಆ ವ್ಯಕ್ತಿತ್ವ Fake ಅಂತ ಗೊತ್ತಿದ್ದರೂ ಅದರಿಂದಲೇ ಸುಖ ಅನುಭವಿಸುವುದು ಈ Likes Economy ಕಾಲದ ಸತ್ಯ. ಈ ಪ್ರಕ್ರಿಯೆಯಲ್ಲಿ ಸತ್ಯಕ್ಕೆ ಹೆಚ್ಚು ಬೆಲೆ ಇಲ್ಲ ಅಥವಾ ಬೆಲೆಯೇ ಇಲ್ಲ. ಈ ಕಾಲದಲ್ಲಿ ಸತ್ಯದ ಜಾಗವನ್ನು ಭಾವನಾತ್ಮಕತೆ ಆವರಿಸಿಕೊಂಡಿದೆ.
ನಾವು ಬದುಕುತ್ತಿರುವ ಈ ಕಾಲವನ್ನು Post Truth Era ಎಂದೂ ಸಹ ವಿದ್ವಾಂಸರು ಕರೆಯುತ್ತಾರೆ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತು ಈ ಕಾಲಕ್ಕೆ ಅನ್ವಯಿಸುವುದಿಲ್ಲ. ಅದೆಲ್ಲಾ ಹಳೆಯ ಕಾಲದ, ಹಳಸಲು ವಿಚಾರ ಮಾತ್ರ. ವಿವೇಚನೆ ಇಲ್ಲದೇ, ಸತ್ಯಾಸತ್ಯತೆ ಪರೀಕ್ಷಿಸದೇ ಕಂಡದ್ದು, ಕೇಳಿದ್ದನ್ನೆಲ್ಲಾ ನಂಬುವುದು, ಪರಿಣಾಮಗಳ ಬಗ್ಗೆ ಲೆಕ್ಕಿಸದೇ ಬಂದಿದ್ದನ್ನೆಲ್ಲಾ Forward ಮಾಡುವುದು Post Truth Era ದ ಲಕ್ಷಣಗಳು.
ಡ್ರೋಣ್ ಆವಿಷ್ಕಾರದ ಹೆಸರಿನಲ್ಲಿ ಮಂಡ್ಯದ ಹುಡುಗ ಪ್ರತಾಪ್ ಮಾಡಿರುವ ’ನಂಬಿಕೆ ದ್ರೋಹ’ದ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿರುವಾಗ ಈ ಎಲ್ಲಾ ಸಂಗತಿಗಳು ನೆನಪಿಗೆ ಬಂದವು.
‘ದೂದ್ ಕಾ ಜಲಾ, ಛಾಸ್ ಕೊ ಭೀ ಫೂಂಖ್ ಫೂಂಖ್ ಕೆ ಪೀತಾ ಹೈ’ ಎಂಬಂತೆ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತೆನಾಲಿ ರಾಮಕೃಷ್ಣನ ಬೆಕ್ಕಿನಂತೆ ನಾವೆಲ್ಲರೂ ಅತಿ ಜಾಗರೂಕತೆಯಿಂದ ಇರಲೇಬೇಕು. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ರಸಕ್ಕಿಂತ ಕಸವೇ ಹೆಚ್ಚು.
Lead photo: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪ್ರತಾಪ್. / ಚಿತ್ರಕೃಪೆ: ಫೇಸ್ಬುಕ್
*****
ಸುಭಾಶ್ ಹುಗಾರ್ ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರು. ಮೂಲತಃ ಹುಬ್ಬಳ್ಳಿಯವರಾದ ಅವರು ವಿಜಯ ಕರ್ನಾಟಕ ಮತ್ತಿತರೆ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ವಿಕಕ್ಕಾಗಿ ಅವರು ದಿಲ್ಲಿಯೂ ಕೆಲಸ ಮಾಡಿದ್ದರು. ದಿಗ್ವಿಜಯ ಸುದ್ದಿವಾಹಿನಿಯ ಸಂಪಾದಕರೂ ಆಗಿದ್ದರು.