ಎಚ್.ಬಿ. ದಿನೇಶ್, ಕನ್ನಡ ಪತ್ರಿಕೋದ್ಯಮ ಮಾತ್ರವಲ್ಲದೆ ಓರ್ವ ಅಧಿಕಾರಿಯಾಗಿ, ನಾಲ್ವರು ಮುಖ್ಯಮಂತ್ರಿಗಳ ಸಕ್ಸಸ್ಸಿನ ಹಿಂದಿನ ತೆರೆಮರೆಯ ಹೀರೋ ಆಗಿ ಮಿಂಚಿದವರು. ಸದಾ ಅಜ್ಞಾತದಲ್ಲೇ ಇದ್ದು ಕೆಲಸಗಳ ಮೂಲಕವೇ ಸದ್ದಿಲ್ಲದ ಛಾಪು ಮೂಡಿಸಿದವರು. 2020 ಜೂನ್ 30ರಂದು ಅವರು ವಾರ್ತಾ ಇಲಾಖೆಯಿಂದ ನಿವೃತ್ತರಾದರು. ಕಾಕತಾಳೀಯವೆಂದರೆ, ಕನ್ನಡ ಪತ್ರಿಕಾ ದಿನಕ್ಕೆ ಒಂದೇ ದಿನಕ್ಕೆ ಮುನ್ನ ತಮ್ಮ ಬದುಕಿನ ಮತ್ತೊಂದು ಪಥಕ್ಕೆ ಹೆಜ್ಜೆ ಇಟ್ಟರು. ಮುಂದೆ ಓದಿ..
***
ಅನೇಕ ಉತ್ತಮ ಘಟನೆಗಳು ಆಕಸ್ಮಿಕವಾಗಿಯೇ ಆಗುತ್ತವೆ ಎಂಬ ಮಾತಿದೆ. ನನ್ನ ಜೀವನದಲ್ಲೂ ಈ ಮಾತು ನಿಜವಾಗಿದೆ. ಪತ್ರಕರ್ತನಾಗಿದ್ದು, ವಾರ್ತಾ ಇಲಾಖೆಗೆ ಬಂದಿದ್ದು, ನಾಲ್ವರು ಮಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದು, ಮೀಡಿಯಾ ಅಕಾಡೆಮಿಗೆ ಬಂದು ನನಗೆ ಭವಿಷ್ಯದ ಹಾದಿ ತೋರಿ ಮುನ್ನಡೆಸಿದ ಮಾಧ್ಯಮದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು.. ಹೀಗೆ ಎಲ್ಲವೂ..
ಈಗ ಬರೆದಿರುವ ಈ ಲೇಖನವೂ ಸೇರಿ..
ಇವತ್ತು ಜುಲೈ 1. ನಿನ್ನೆಯಷ್ಟೇ, ಅಂದರೆ ಜೂನ್ 30ರಂದು ನಾನು ವಾರ್ತಾ ಇಲಾಖೆಯಿಂದ ನಿವೃತ್ತನಾದೆ. ಆದರೆ ಮಾಧ್ಯಮದಿಂದ ಅಲ್ಲ. ಅದು ನಿರಂತರವಾಗಿ ನನ್ನಲ್ಲಿ ಸ್ಥಾಪಿತವಾಗಿರುವ ಚೈತನ್ಯಸೆಲೆ ಮತ್ತೂ ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದು. ಹೀಗಾಗಿ ಮಾಜಿ ಅಧಿಕಾರಿ ಜತೆಗೆ ಮಾಜಿ ಪತ್ರಕರ್ತನೆಂಬ ಟ್ಯಾಗ್ಲೈನಿಗೆ ನಾನು ಸಿದ್ಧನಿಲ್ಲ. ಬರೆಯಬೇಕೆಂಬ ಉತ್ಕಟತೆಯ ಜತೆಗೆ ಹಾಗೇ ಇರುವುದು ಕೂಡ ನನಗೆ ಹಿತ. ಹೀಗಾಗಿ ನನ್ನ ಜರ್ನಿ ಶುರುವಾದ ಮೊದಲ ಪಾಯಂಟಿನಲ್ಲೇ ನಿಂತು ಮತ್ತೆ ಎಲ್ಲವನ್ನೂ ರೀಕಾಲ್ ಮಾಡಿಕೊಳ್ಳುತ್ತಿದ್ದೇನೆ.
ನಿಜಕ್ಕಾದರೆ ನಾನು ಬರೆದಿದ್ದು ಕಡಿಮೆ. ಬರೆಸಿದ್ದೇ ಹೆಚ್ಚು. ಆದರೆ ಈ ಪುಟ್ಟ ಬರಹವನ್ನು ಬರೆಯಲು ಕಾರಣವಿದೆ. ಇನ್ನು ಮುಂದೆಯೂ ಆಗಾಗ ಬರೆಯುತ್ತೇನೆ. ಆಗಾಗ ಎನ್ನವುದು ಆಕಸ್ಮಿಕವಲ್ಲ. ನನ್ನ ಪೇಸ್ಬುಕ್ ಗೋಡೆಯ ಬಂದ ಈ ಬರವಣಿಗೆ ಮಾಧ್ಯಮ ಅಕಾಡೆಮಿಯಲ್ಲಿ ಹಾಗೂ ನನ್ನ ಇಷ್ಟದ ಪತ್ರಕರ್ತರಲ್ಲಿ ಒಬ್ಬರು, ಹಿರಿಯರೂ ಆದ ಶ್ರೀಧರ ಆಚಾರ್ ಅವರ ಜತೆಯಲ್ಲಿ ಇಟ್ಟ ಕೆಲ ಮಹತ್ವದ ಹೆಜ್ಜೆಗಳನ್ನು ಸಂಕ್ಷಿಪ್ತವಾಗಿ ಹೇಳುತ್ತದೆ.
ಇವತ್ತು ಪತ್ರಿಕಾ ದಿನಾಚರಣೆ (ಜುಲೈ 1). ದೇಶದಲ್ಲಿ ಹಾಗೂ ನಾಡಿನ ಉದ್ದಗಲಕ್ಕೂ ಮೀಡಿಯಾ ಗೆಳೆಯರು ಈ ದಿನಕ್ಕೆ ಬಹಳ ಮಹತ್ವ ಕೊಡುತ್ತಾರೆಂಬುದು ನನಗೆ ಗೊತ್ತು. ಹಾಗಾದರೆ ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆ ಎಂಬುದು ಹೇಗೆ ಬಂತು? ಮೊದಲು ಆಚರಿಸಿದ್ದು ಎಲ್ಲಿ? ಅದರ ಹಿಂದಿನ ಹಿರೋ ಯಾರು? ನನ್ನದೆಷ್ಟು ಪಾತ್ರವಿತ್ತು? ಈ ಕಥೆ ಗೊತ್ತಾಗಬೇಕಾದರೆ ಕೊಂಚ ಹಿಂದಕ್ಕೆ ಹೋಗಬೇಕು. ಕೆಲವನ್ನು ನೆನಪು ಮಾಡಿಕೊಳ್ಳಬೇಕು. ಕೆಲವರನ್ನು ಸ್ಮರಿಸಲೇಬೇಕು.
ಟರ್ನಿಂಗ್ ಪಾಯಂಟ್:
ನನ್ನ ವೃತ್ತಿ ಜೀವನದಲ್ಲಿ, ಅದರಲ್ಲಿ ಪತ್ರಿಕೋದ್ಯಮವಿರಬಹುದು ಅಥವಾ ಸರಕಾರಿ ಸೇವೆ ಇರಬಹುದು. ಎರಡೂ ಕಡೆ ಬಹುಮುಖ್ಯ ಪಾತ್ರ ವಹಿಸಿದವರು ಶ್ರೀಧರ ಆಚಾರ್ ಅವರು. 1983ರಲ್ಲಿ ಮುಂಜಾನೆಯಲ್ಲಿ ಮೀಡಿಯಾ ಜರ್ನಿ ಶುರು ಮಾಡಿದ ನನಗೆ ಮೊದಲು ಸಂಪಾದಕರಾಗಿದ್ದವರು ಜಯಶೀಲರಾಯರು. ಅದು ಅದ್ಭುತವಾಗಿ ಬರುತ್ತಿದ್ದ ಪತ್ರಿಕೆ. ನನ್ನ ಕರಿಯರಿಗೆ ಅಲ್ಲಿ ಉತ್ತಮ ಬೇಸ್ ಬಿತ್ತೆಂದೇ ಹೇಳಬೇಕು. ಇವತ್ತಿನ ಹಿರಿಯ ಪತ್ರಕರ್ತರಾದ ಶಶಿಧರ ಭಟ್, ಹುಣಸವಾಡಿ ರಾಜನ್, ಮನೋಹರ ಯಡವಟ್ಟಿ ಮುಂತಾದವರೆಲ್ಲ ಅಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ ಕಾರಣಾಂತರಗಳಿಂದ ಆ ಪತ್ರಿಕೆ ಮುಚ್ಚಿಹೋಯಿತು.
ಹಿರಿಸಾವೆ ಬಿಟ್ಟು ಬೆಂಗಳೂರು ಬೆನ್ಹತ್ತಿದ್ದ ನನಗೆ ಮೀಡಿಯಾದಲ್ಲೇ ಮುಂದುವರಿಯಬೇಕೆಂಬ ಉತ್ಕಟತೆ ಬಹಳವಾಗಿತ್ತು. ಹೀಗಾಗಿ ’ಮುಂಜಾನೆ’ಯಿಂದ ’ಸಂಜೆವಾಣಿ’ಗೆ ಬಂದೆ. ಅಲ್ಲಿ ಅ.ಚ.ಶಿವಣ್ಣ ಅವರು ನನಗೆ ಹೆಗಲುಕೊಟ್ಟು ಬೆಳೆಸಿದರು. ಆ ನಂತರ ನಾನು ಮತ್ತೋರ್ವ ಹಿರಿಯ ಪತ್ರಕರ್ತ ರಾಜಾರಾಯರ ಕಣ್ಣಿಗೆ ಬಿದ್ದೆ. ಅವರು ನನ್ನನ್ನು ’ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಸೇರಿಸಿದರು. ಅದು 1984-85ರ ಹೊತ್ತು. ಅಲ್ಲಿ ನಾನು ಬಹಳ ವರ್ಷ ಕೆಲಸ ಮಾಡಿದೆ. ಶಾಮರಾಯರ ಪಾಲಿಗೆ ನಾನು ಬ್ಲೂಬಾಯ್. ನಾನೆಂದರೆ ಅವರಿಗೆ ಬಹಳ ಅಚ್ಚುಮೆಚ್ಚು. ಈ ಸಂದರ್ಭದಲ್ಲಿ ನನಗೆ ಪರಿಚಯವಾದವರು ಶ್ರೀಧರ ಆಚಾರ್. ಆ ಪರಿಚಯ ನನ್ನ ಪಾಲಿನ ಭಾಗ್ಯವೆನ್ನಬಹುದು. ನನ್ನ ಕರಿಯರಿನ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದ್ದು ಆ ಭೇಟಿ, ಆ ಪರಿಚಯವೇ. ಆಗಾಗ ಅವರನ್ನು ಭೇಟಿಯಾಗುವುದು ಇದ್ದೇಇತ್ತು. ಇದು ನನ್ನ ವೃತ್ತಿಜೀವನದ ಪ್ರಮುಖವಾದ ಟರ್ನಿಂಗ್ ಪಾಯಂಟ್.
ಹೀಗಿರಬೇಕಾದರೆ ಒಂದು ದಿನ ಶ್ರೀಧರ ಆಚಾರ್ ಅವರು ’ಪ್ರಜಾವಾಣಿ’ ಸೇರ್ತೀರಾ ಅಂತಾ ಕೇಳಿದರು. ಆ ಕಾಲಕ್ಕೆ ಎಲ್ಲ ಯುವಪತ್ರಕರ್ತರ ಪಾಲಿಗೆ ’ಪ್ರಜಾವಾಣಿ’ ಗಗನಕುಸುಮ. ಹೀಗಾಗಿ ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಯಿತು. ಅಲ್ಲಿಗೆ ಅರ್ಜಿ ಹಾಕಿಕೊಂಡೆ. ಹರಿಕುಮಾರ್ ಅವರು ನನ್ನನ್ನು ಇಂಟರ್ವ್ಯೂ ಮಾಡಿದರು. ನಾನು ಸೆಲೆಕ್ಟ್ ಆದೆ, ಅಲ್ಲಿಗೆ ನಾನು ಕನ್ನಡ ಪತ್ರಿಕೊದ್ಯಮದ ಸಮುದ್ರವೊಂದರಲ್ಲಿ ಲ್ಯಾಂಡ್ ಆಗಿದ್ದೆ. ಘಟಾನುಘಟಿಗಳ ಜತೆ ಕೆಲಸ ಮಾಡುವ ಸವಾಲು ನನ್ನದು.
ಹೀಗೆ ’ಪ್ರಜಾವಾಣಿ’ಯಲ್ಲಿ ನಾನು ವರದಿಗಾರನಾಗಿ ನೇಮಕಗೊಂಡೆ, ಶ್ರೀಧರ ಆಚಾರ್ ನನಗೆ ಅಲ್ಲಿ ಮುಖ್ಯ ವರದಿಗಾರರು. ಮೊದಲೇ ಇದ್ದ ಒಡನಾಟ ಅವರೊಂದಿಗೆ ಮತ್ತಷ್ಟು ಗಾಢವಾಯಿತಲ್ಲದೆ, ಎಲ್ಲ ರೀತಿಯಲ್ಲೂ ಅವರು ನನಗೆ ಮಾರ್ಗದರ್ಶಕರಾಗಿದ್ದರು. ವರದಿಗಾರಕೆಯ ಪಟ್ಟುಗಳು, ಸುದ್ದಿಮೂಲದ ಮಹತ್ವ ಇತ್ಯಾದಿಗಳ ಬಹಳಷ್ಟು ತಿಳಿವಳಿಕೆ ನೀಡಿದರು. ಜತೆಗೆ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಎಚ್.ಡಿ, ದೇವೇಗೌಡರಿಂದ ಮೊದಲಾಗಿ ಬಹುತೇಕ ಎಲ್ಲ ರಾಜಕಾರಣಿಗಳ ಜತೆಯೂ ಅವರು ಅತ್ಯಂತ ಸೌಹಾರ್ದತೆಯನ್ನು ಹೊಂದಿದ್ದರು. ಅವರ ಪಾಲಿಗೆ ’ಸುದ್ದಿಮೂಲ’ ಎಂಬುದು ಬಹಳ ಮುಖ್ಯವಾಗಿರುತ್ತಿತ್ತು, ಮತ್ತೂ ಅಂತಹ ಮೂಲಗಳನ್ನು ಬಗ್ಗೆ ತುಂಬಾ ಗೌರವದಿಂದ ಕಾಪಾಡಿಕೊಂಡಿದ್ದರು.
ಹೀಗಿರಬೇಕಾದರೆ, 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಗಳಾದರು. ಈ ಸಂದರ್ಭದಲ್ಲಿ ಗೌಡರು, ಶ್ರೀಧರ ಆಚಾರ್ ಅವರನ್ನು ಪತ್ರಿಕಾ ಅಕಾಡೆಮಿ (ಅದಿನ್ನೂ ಮಾಧ್ಯಮ ಅಕಾಡೆಮಿ ಆಗಿರಲಿಲ್ಲ) ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆದರೆ ಅವರಿನ್ನೂ ಪ್ರಜಾವಾಣಿಯಲ್ಲೇ ಇದ್ದರು. ಅದಕ್ಕೂ ಹಿಂದೆ 1990ರಲ್ಲಿ ನಾನು ಕೂಡ ಪ್ರಜಾವಾಣಿ ಬಿಟ್ಟು ವಾರ್ತಾ ಇಲಾಖೆ ಸೇರಿದ್ದೆ. ಆದಾದ ಮೇಲೂ ಶ್ರೀಧರ ಆಚಾರರ ಜತೆ ನನ್ನ ಒಡನಾಟಕ್ಕೆ ಯಾವುದೇ ಮುಕ್ಕಾಗಿರಲಿಲ್ಲ. ಗೌಡರಿಗೆ ಜಯಶೀಲರಾಯರು ಮಾಧ್ಯಮ ಸಲಹೆಗಾರರಾಗಿ ನಿಯುಕ್ತರಾದರು. ನಾನು ಮಾಧ್ಯಮ ಅಧಿಕಾರಿಯಾಗಿ ನಿಯೋಜನೆಗೊಂಡೆ. ಸ್ವತಃ ಜಯಶೀಲರಾಯರೇ ಆಸಕ್ತಿ ವಹಿಸಿ ನನ್ನನ್ನು ಮುಖ್ಯಮಂತ್ರಿ ಕಚೇರಿಗೆ ಕರೆಸಿಕೊಂಡರು. ಹಾಗೆ ನೋಡಿದರೆ ಪತ್ರಿಕೋದ್ಯಮದಲ್ಲಿ ನನಗೆ ಅಕ್ಷರಾಭ್ಯಾಸ ಮಾಡಿಸಿದವರೇ ಜಯಶೀಲರಾಯರು. ಮತ್ತೆ ಇಲ್ಲಿ ಅವರೇ ನನ್ನನ್ನು ಸಿಎಂ ಕಚೇರಿ ಅಂಗಳಕ್ಕೆ ತಂದುಬಿಟ್ಟಿದ್ದರು. ಎಲ್ಲ ಹೀಗೆ ಸುಸೂತ್ರವಾಗಿದೆ ಅಂತ ಇರಬೇಕಾದರೆ ದೇವೇಗೌಡರು 1996 ಜೂನ್ 1ರಂದು ಪ್ರಧಾನಮಂತ್ರಿಗಳಾದರು. ಆಗ ಸಿಎಂ ಕಚೇರಿಯಿಂದ ನಾನು ಹೊರಬರಬೇಕಾಯಿತು. ಇಂಥ ಹೊತ್ತಿನಲ್ಲಿ ಪುನಾ ನನ್ನ ಕೈಹಿಡಿದವರು ಇದೇ ಶ್ರೀಧರ ಆಚಾರ್.
ನನ್ನನ್ನು ಅವರು ವಾರ್ತಾ ಇಲಾಖೆಗೆ ಹೋಗಲೂಬಿಡದೆ ಪತ್ರಿಕಾ ಅಕಾಡೆಮಿಗೆ ಕಾರ್ಯದರ್ಶಿಯಾಗಿ ಕರೆಸಿಕೊಂಡರು. ಅದು 1996 ಜೂನ್ 6. ಆವತ್ತೇ ನಾನು ಅಕಾಡೆಮಿಯೊಳಕ್ಕೆ ಕಾಲಿಟ್ಟಿದ್ದು. ನನ್ನ ವೃತ್ತಿ ಬದುಕಿಗೆ ಇನ್ನೊಂದು ಮೈಲುಗಲ್ಲು ಜೋಡಿಸಿದ ಘಟನೆ ಅದರು. ನನಗೆ ಮೊದಲಿನಿಂದಲೂ ಶ್ರೀಧರ ಆಚಾರ್ ಅವರ ಜತೆ ಉತ್ತಮ ಬಾಂಧವ್ಯ ಇದ್ದ ಕಾರಣಕ್ಕೆ ಅಕಾಡೆಮಿಯಲ್ಲಿ ಕೆಲಸ ಮಾಡುವುದು ಹೆಚ್ಚು ಕಷ್ಟವಾಗಲಿಲ್ಲ. ಅವರು ನನಗೆ ಮಾರ್ಗದರ್ಶನ ನೀಡುವುದರ ಜತೆಗೆ ನನ್ನ ಅನುಭವಕ್ಕೂ ಬಹಳ ಮನ್ನಣೆ ನೀಡುತ್ತಿದ್ದರು. ಜತೆಗೆ ಅನೇಕ ಹಿರಿಯ ಪತ್ರಕರ್ತರು ಸದಸ್ಯರಾಗಿದ್ದರು. ಅಂಥ ಹೊತ್ತಿನಲ್ಲಿ ಏನಾದರೂ ಹೊಸದಾಗಿ, ಪತ್ರಿಕೋದ್ಯಮದ ಆಸ್ಮಿತೆಯನ್ನು ಎತ್ತಿಹಿಡಿಯುವಂಥ ಕಾರ್ಯ ಮಾಡಬೇಕು ಎಂದು ನಾವೆಲ್ಲರೂ ತೀವ್ರವಾಗಿ ಯೋಚಿಸಿದೆವು. ಇದೇ ವೇಳೆ ಶ್ರೀಧರ ಆಚಾರ್ ಅವರು ಇಡೀ ಕನ್ನಡ ಪತ್ರಿಕೋದ್ಯಮವು ನಿರಂತರವಾಗಿ ನೆನಪು ಮಾಡಿಕೊಳ್ಳುವಂಥ ಒಂದು ದಿನವನ್ನು ಪ್ರಕಟಿಸಬೇಕೆಂದು ಚಿಂತನೆ ನಡೆಸಿದರು. ಆಗ ಪರಸ್ಪರ ಚರ್ಚೆ ನಡೆದು ಮಂಗಳೂರಿನಲ್ಲಿ ಬಾಸಲ್ ಮಿಷನ್ ವತಿಯಿಂದ ’ಮಂಗಳೂರು ಸಮಾಚಾರ್’ ಪತ್ರಿಕೆಯನ್ನು 1843 ಜುಲೈ 1ರಂದು ಆರಂಭಿಸಿದ್ದು ಗಮನಕ್ಕೆ ಬಂತು. ಜರ್ಮನಿಯಿಂದ ಕರಾವಳಿಗೆ ಬಂದಿದ್ದ ಕ್ರೈಸ್ತಪಾದ್ರಿ ಹರ್ಮನ್ ಫ್ರೆಡಿರಿಕ್ ಅವರು ಈ ಪತ್ರಿಕೆಯ ಪ್ರಥಮ ಸಂಪಾದಕರಾಗಿದ್ದರು. ಇದು ಕನ್ನಡದ ಮೊದಲ ಪತ್ರಿಕೆ. ಈ ಘಟನೆ ಚರಿತ್ರಾರ್ಹವೆಂದೇ ಪರಿಗಣಿಸಿ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಜುಲೈ 1ನ್ನು ಕನ್ನಡ ಪತ್ರಿಕೋದ್ಯಮದ ಪಾಲಿನ ಜನ್ಮದಿನವೆಂದು ತೀರ್ಮಾನಿಸಲಾಯಿತು.
ಇವತ್ತಿಗೆ 177 ವರ್ಷಗಳ ಹಿಂದಿನ ದಿನವನ್ನು ಹೀಗೆ ಶ್ರೀಧರ್ ಆಚಾರ್ ಅವರ ನೇತೃತ್ವದಲ್ಲಿ 156 ವರ್ಷಗಳ ನಂತರ ಸಾರ್ಥಕಗೊಳಿಸಲಾಯಿತು. 1996ರ ಜುಲೈ 1ರಂದು ಅಕಾಡೆಮಿ ವತಿಯಿಂದ ಕನ್ನಡದ ಮೊದಲ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯರಾದ ಪಾಟೀಲ ಪುಟ್ಟಪ್ಪ, ಸಂತೋಷಕುಮಾರ ಗುಲ್ವಾಡಿ, ಅರ್ಜುನದೇವ, ಕೆ.ಎಸ್. ಸದಾಶಿವ, ಅಚ್ಯುತನ್, ಬಾಬು ಪ್ರಸಾದ್, ಪಿ.ರಾಮಯ್ಯ ಮುಂತಾದ ದಿಗ್ಗಜರೆಲ್ಲೂ ಪಾಲ್ಗೊಂಡಿದ್ದರು.
***
ಇವತ್ತು ಕನ್ನಡ ಪತ್ರಿಕೋದ್ಯಮ ಅಗಾಧವಾಗಿ ಬೆಳೆದಿದೆ ಮತ್ತೂ ಬೆಳೆಯುತ್ತಿದೆ. ಪತ್ರಿಕಾ ಅಕಾಡೆಮಿ ಈಗ ಮೀಡಿಯಾ ಅಕಾಡೆಮಿ ಆಗಿದೆ. ಅನೇಕ ಯುವಕ ಯುವತಿಯರು ಮಾಧ್ಯಮಕ್ಕೆ ಬರುತ್ತಿದ್ದಾರೆ. ಪತ್ರಿಕೆಗಳ ಸಂಖ್ಯೆಯೂ ಹೆಚ್ಚಾಗಿದೆ, ಸುದ್ದಿವಾಹಿನಿಗಳ ಜತೆಗೆ ಡಿಜಿಟಲ್ ಶಖೆಯೂ ಆರಂಭವಾಗಿದೆ. ಕೋವಿಡ್ 19 ನಂತರ ಮಾಧ್ಯಮದ ಸ್ವರೂಪದಲ್ಲೂ ಗುರುತರ ಬದಲಾವಣೆಗಳನ್ನು ಕಾಣುತ್ತಿದ್ದೆವೆ. ಏನೇ ಆದರೂ ಯಾವುದೇ ಜರ್ನಿಯ ಆರಂಭದ ಮೊದಲ ಪಾಯಂಟನ್ನು ಮರೆಯಲು ಸಾಧ್ಯವಿಲ್ಲ. ಮರೆಯಬಾರದಲ್ಲವೇ? ಪತ್ರಿಕಾ ದಿನಾಚರಣೆಯೂ ಹಾಗೆಯೇ.
ಶ್ರೀಧರ ಆಚಾರ್ ಅವರ ದೂರದೃಷ್ಟಿಯ ಫಲವಾಗಿ ಕನ್ನಡ ಮಾಧ್ಯಮಗಳು (ಎಲ್ಲ ರೀತಿಯ ಮಾಧ್ಯಮಗಳೂ ಸೇರಿ) ಇಂದು ಸಂಭ್ರಮಿಸುತ್ತಿವೆ. ಇದು ನಿರಂತರವಾಗಿರಲಿ ಮತ್ತೂ ಅರ್ಥಪೂರ್ಣವಾಗಿರಲಿ ಎಂಬುದಷ್ಟೇ ನನ್ನ ಹಾರೈಕೆ.
****
ಮಂಗಳೂರು ಸಮಾಚಾರ್, ಹರ್ಮನ್ ಫ್ರೆಡಿರಿಕ್, ಎಚ್.ಬಿ. ದಿನೇಶ್
ಮೇಲಿನ ಚಿತ್ರ: 1996 ಜುಲೈ 1ರಂದು ಮಂಗಳೂರಿನಲ್ಲಿ ನಡೆದ ಮೊದಲ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್. ಜತೆಯಲ್ಲಿ ಅಂದಿನ ವಾರ್ತಾ ಮಂತ್ರಿ ಎಂ.ಸಿ.ನಾಣಯ್ಯ, ಶ್ರೀಧರ ಆಚಾರ್ ಮತ್ತು ಹೆಚ್.ಬಿ. ದಿನೇಶ್ ಇದ್ದರು