ಅದೇ ಹನ್ನೊಂದು ವರ್ಷಗಳ ಹಿಂದಿನ ಮತ್ತೊಂದು ಕಥೆ. ಇದು 2009 ಜೂನ್ 30, ನನ್ನ ಹಣೆಬರಹವನ್ನು ಅತಿ ನಿಷ್ಠುರವಾಗಿ ಬದಲಿಸಿದ ದಿನ. ಆವತ್ತು ಮಂಗಳವಾರ, ಆಷಾಢ ಏಕಾದಶಿಯ ಹಿಂದಿನ ದಿನ. ಇವತ್ತೂ (30 ಜೂನ್ 2020) ಅದೇ ಮಂಗಳವಾರ, ಜತೆಗೆ, ಅದೇ ಪವಿತ್ರ ಆಷಾಢ ಏಕಾದಶಿಯ ಹಿಂದಿನ ದಿನ.
ಸಾಮಾನ್ಯ ನಂಬಿಕೆಯಂತೆ ಆಷಾಢದಲ್ಲಿ ಒಳ್ಳೆಯದೇನೂ ನಡೆಯುವುದಿಲ್ಲ. ನನ್ನ ಲೈಫಿನಲ್ಲಿ ಆಷಾಢವೊಂದು ಮೈಲುಗಲ್ಲು. ಹೊಸಭವಿಷ್ಯಕ್ಕೆ ನಾಂದಿ ಹಾಡಿದ ತಿಂಗಳು. ಬರೋಬ್ಬರಿ 7 ತಿಂಗಳು ವನವಾಸಕ್ಕೆ ದೂಡಿದ ಮಾಸ. ಹತಾಶೆ, ನೋವು, ಸಂಕಟ, ಕೊನೆಗೆ ಸಾವಿನ ಬಗ್ಗೆಯೂ ಒಂದುಕ್ಷಣ ಯೋಚನೆ ಮಾಡುವಂತೆ ಮಾಡಿಬಿಟ್ಟ ಆಷಾಢ ಅದೇ ಏಳು ತಿಂಗಳ ನಂತರ ನನ್ನ ಬದುಕಿಗೆ ಬಹದೊಡ್ಡ ಬೆಳಕು ತೋರಿಸಿತು. ಪುರುಷಾರ್ಥಕ್ಕೆ ಆವತ್ತಿನ ಮರುದಿನ (ಜುಲೈ 1) ಪತ್ರಿಕಾ ದಿನಾಚರಣೆ. ಪುಣ್ಯಕ್ಕೆ ಇವತ್ತೂ ಅದೇ ದಿನ. ಅದೃಷ್ಟಕ್ಕೆ ಬದುಕಿದ್ದೇನೆ.
***
ಆವತ್ತಿನವರೆಗೂ ನಾನು ಡಾ.ರಾಜಕುಮಾರ್ ರಸ್ತೆಯ ’ಈ ಸಂಜೆ’ ಎಂಬ ಸಂಜೆ ಪತ್ರಿಕೆಯಲ್ಲಿ ಅತ್ತ ವರದಿಗಾರಿಕೆ ಮಾಡದ ಚೀಪ್ ರಿಪೋರ್ಟರ್ ಆಗಿಯೂ, ಇತ್ತ ನನ್ನ ಟೀಮಿನಲ್ಲಿದ್ದವರೆಲ್ಲ ಬರೆಯುವ ಸುದ್ದಿಗಳನ್ನು ಗಮನಿಸಿ ಪೇಜಿಗೆ ಹಾಕಿ ಇಡೀ ಪ್ರಾಡಕ್ಟ್ ಹೊರತರುವ ಸುದ್ದಿ ಸಂಪಾದಕನಾಗಿಯೂ ಕೆಲಸ ಮಾಡುತ್ತಿದ್ದೆ. ಮೊದಲ ಡಿಸಿಗ್ನೇಷನಿಗಿಂತ ಎರಡನೆಯದರಲ್ಲಿ ಖುಷಿ ಕಂಡಿದ್ದೆ ನಾನು. ಪತ್ರಿಕೆಯ ಲೇಔಟು, ಪುಟ ವಿನ್ಯಾಸ, ಸೊಗಸಾದ ಹೆಡ್ಡಿಂಗು, ಆಕರ್ಷಕ ಬಣ್ಣಗಳು ನನ್ನನ್ನು ಬಹಳ ಪ್ರಭಾವಿತಗೊಳಿಸಿದ್ದವು. ಎಲ್ಲರೂ ಬರೆದಿದ್ದು ನನ್ನದೇ ಎಂದು ಭಾವಿಸಿ ಅದಕ್ಕೊಂದು ಚೆಂದದ ರೂಪಕೊಟ್ಟು ಓದುಗರಿಗೆ ಕೊಡುತ್ತಿದ್ದ ನನಗೆ ಅದೊಂದು “ಥ್ಯಾಂಕ್ಲೆಸ್ ಜಾಬ್” ಎಂದು ಅರ್ಥ ಆಗಿದ್ದು ತೀರಾ ಇತ್ತೀಚೆಗೆ. ಡೆಸ್ಕಿನಲ್ಲಿ ಕೆಲಸ ಮಾಡುವ ಜರ್ನಲಿಸ್ಟುಗಳೆಂಬ ಅಸಹಾಯಕ ನಿತ್ಯನಾರಕಿಗಳ ಪಾಡು ಹೇಳುವ ಹಾಗೂ ಇಲ್ಲ, ಹೇಳದೇ ಸುಮ್ಮನಿರಲೂ ಆಗುವುದಲ್ಲ. ಕೋವಿಡ್ ಕಾಲದಲ್ಲಿ ಬಹುತೇಕ ಎಲ್ಲ ಮ್ಯಾನೇಜುಮೆಂಟುಗಳು ಅವರನ್ನು ನಿರ್ದಾಕಿಣ್ಯವಾಗಿ “ಸ್ಯಾಕ್” ಎಂಬ ಗಿಲೋಟಿನ್ ಯಂತ್ರಕ್ಕೆ ಹಾಕುತ್ತಿವೆ. ಅದಕ್ಕೆ ಇರಬೇಕು, ಕೆಲ ಪತ್ರಿಕೆಗಳಲ್ಲಿ ರಿಪೋರ್ಟರ್ ಆಗಿ ಸೇರಿದರೆ ಅವನು ರಿಪೋರ್ಟರ್ ಆಗಿಯೇ ಸಾಯುತ್ತಿದ್ದ, ಇಲ್ಲವೇ ನಿವೃತ್ತನಾಗುತ್ತಿದ್ದ. ಡೆಸ್ಕಿನಲ್ಲಿದ್ದವನೂ ಜೀವನ ಪರ್ಯಂತ ಪೇಜುಗಳ ಮುಖ ನೋಡಿಕೊಂಡು ನನ್ನದೇ ಪತ್ರಿಕೆ ಎಂದು ಬೀಗುತ್ತಿದ್ದ!! (ಈಗ ಮೀಡಿಯಾದಲ್ಲಿ ನಿವೃತ್ತಿ ಎಂಬುದಕ್ಕೆಇತಿಶ್ರೀ ಹಾಡಿ ಅದರ ಮಿತಿಯನ್ನು ೪೫ ರಿಂದ ೫೦ಕ್ಕೆ ಇಳಿಸಲಾಗಿದೆ.)
***
ಹೀಗಿರಬೇಕಾದರೆ, ನನ್ನ ಹಿರಿಯ ಗೆಳೆಯರೂ ಇ-ನಾರದ.ಕಾಂ ಸಂಪಾದಕ ಗುರು ಪ್ರಸಾದ್ ಆ ದಿನಕ್ಕೆ ಕೆಲ ದಿನದ ಹಿಂದೆ ಪಂಢರಪುರಕ್ಕೆ ಹೋಗೋಣವೇ, ಬರ್ತೀರಾ? ಎಂದು ಕೇಳಿದ್ದರು. ಇಲ್ಲವೆನ್ನುವುದು ಹೇಗೆ? ಆದಿಯಿಂದಲೂ ಟೆಂಪನ್ ರನ್ ಇಷ್ಟ ನನಗೆ. ಅದುವರೆಗೂ ಪಾಂಡುರಂಗನನ್ನು ನೋಡಿರಲೇ ಇಲ್ಲ. ಹೀಗಾಗಿ ಆಯಿತು ಅಂದಿದ್ದೆ. ಯಾವಾಗ ಹೋಗೋದು ಅಂದುಕೊಂಡು ಜೂನ್ 20ರ ಸಂಜೆ ಹೊರಡುವುದು ಎಂದಾಯಿತು. ಮರುದಿನ ಆಷಾಢ ಏಕಾದಶಿ, ದೈವ ದರ್ಶನಕ್ಕೆ ಒಳ್ಳೆಯ ದಿನವೆಂದು ಗುರು ಹೇಳಿದ್ದರು. ನಾನು ಆವತ್ತು 9 ಗಂಟೆಯ ಆಫೀಸನ್ನು ಏಳೂಮುಕ್ಕಾಲಿಗೇ ಹೊಕ್ಕು ಬೇಗಬೇಗನೆ ಕೆಲಸ ಮುಗಿಸಿ ಎರಡು ಗಂಟೆ ಹೊತ್ತಿಗೆ ಸಿಟಿ ಎಡಿಷನ್ ಪ್ರಿಂಟಿಗೆ ಬಿಟ್ಟು ಫಸ್ಟ್ ಕಾಪಿ ಬಂದೊಡನೆ ನೋಡಿ ಹೊರಡಲು ಅಣಿಯಾದೆ. ಹೊರಡುವ ಮುನ್ನ ಹಿರಿಯ ಸಹೋದ್ಯೋಗಿಗಳಿಬ್ಬರನ್ನು ಕರೆದು, “ನಾನು ಮೂರುದಿನ ರಜೆ ಇರುತ್ತೇನೆ. ಎಡಿಷನ್ ನೋಡಿಕೊಳ್ಳಿ. ಬಾಸ್ ಗೂ ಹೇಳಿದ್ದೇನೆ” ಎಂದು ತಿಳಿಸಿದೆ. ಅವರು “ಹಾಯಾಗಿ, ಸುಖವಾಗಿ ಹೋಗಿಬನ್ನಿ” ಎಂದರು. ನಮ್ಮ ಸಂಪಾದಕರಾಗಿದ್ದ ಟಿ. ವೆಂಕಟೇಶ್ ಅವರನ್ನು ನಾವೆಲ್ಲರೂ ಬಾಸ್ ಎಂದೇ ಕರೆಯುತ್ತಿದ್ದೆವು. ಬಳಿಕ ಅವರ ಕ್ಯಾಬಿನ್ನಿಗೆ ಹೋಗಿ “ಪಂಢರಪುರಕ್ಕೆ ಹೋಗುತ್ತಿದ್ದೇನೆ ಸರ್” ಎಂದು ಹೇಳಿ ವಾಪಸ್ ಹೊರಟವನನ್ನು ಅವರು ಹಿಂದಕ್ಕೆ ಕರೆದು ಜೇಬಿನಿಂದ ಐದು ಸಾವಿರ ರೂಪಾಯಿ ತೆಗೆದುಕೊಟ್ಟು “ಖರ್ಚಿಗಿಟ್ಟುಕೋ” ಎಂದರು. “ದೇವರಿದ್ದಾನೆ, ಅವನು ದೊಡ್ಡವನು” ಎಂದು ಅವರ ಬಾಗಿಲು ದಾಟಿ ಸೀದಾ ಆಟೋ ಹಿಡಿದು ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಫ್ಲಾಟ್ ಫಾರಂಗೆ ಹೆಜ್ಜೆ ಇಟ್ಟೆ. ಅಷ್ಟೊತ್ತಿಗೆ ಬಸವ ಎಕ್ಸ್ ಪ್ರೆಸ್ ಹಳಿಗಳ ಮೇಲೆ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿತ್ತು. ರೈಲು ಹೊರಡಲು ಇನ್ನೂ ಸಮಯ ಉಳಿದಿತ್ತು. ಗುರು ಪ್ರಸಾದ್ “ಟೀ ಕುಡೀತೀರಾ” ಅಂದರು. ನಾನು “ಟೀಪಾಯಿ” ಅನ್ನುವುದು ಅವರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ನಾನು ಟೀ ಕಪ್ ಹಿಡಿದರೆ, ಅವರು ಜ್ಯೂಸಿಗೆ ಕಾದುನಿಂತರು. ಅಷ್ಟರಲ್ಲಿ ನನ್ನ ಮೊಬೈಲು ರಿಂಗಾಯಿತು. ಕಾಲ್ ಪಿಕ್ ಮಾಡಿದರೆ ಆ ಕಡೆ ಬಾಸ್ ದನಿಯಿತ್ತು. ಜೋರು ದನಿಯಲ್ಲಿ ಅವರು ನನಗೇನನ್ನಬೇಕೆಂದುಕೊಂಡಿದ್ದರೋ ಅದನ್ನೆಲ್ಲವನ್ನೂ ಅಂದುಬಿಟ್ಟರು. ನಾನು ಎಲ್ಲವನ್ನೂ ಕೇಳಿಸಿಕೊಂಡು ಅಂತಿಮವಾಗಿ, “ಧನ್ಯವಾದಗಳು ಸರ್, ಇಷ್ಟು ದಿನ ಕೆಲಸ ಕೊಟ್ಟಿದ್ದಕ್ಕೆ. ನಮಸ್ಕಾರ” ಎಂದು ಹೇಳಿ ಕಾಲ್ ಕಟ್ ಮಾಡಿದೆ.
ಕ್ಷಣಮಾತ್ರದಲ್ಲಿ ನನ್ನ ಮುಖ ಬಾಡಿಹೋಗಿತ್ತು. ಅದೆಷ್ಟು ಖುಷಿಯಾಗಿ ಟೀ ಕಪ್ ಹಿಡಿದಿದ್ದೆನೋ ಕೆಲಕ್ಷಣಗಳಲ್ಲಿ ಅದು ನೆಲದ ಪಾಲಾಗಿತ್ತು. ಗುರು, ಏನಾಯಿತು ಎಂದರು. ಏನು ಹೇಳುವುದು? ಇದ್ದಿದ್ದನ್ನೇ ಹೇಳಿದೆ. “ನನ್ನ ಕೆಲಸ ಹೋಯಿತು” ಎಂದೆ. ಅವರು ನನ್ನ ಮುಖವನ್ನೇ ತೀವ್ರ ಶಾಕಾಗಿ ನೋಡಿದರು. “ನಿಜ ಗುರೂಜಿ, ಆಫೀಸಿನಲ್ಲಿ ಕ್ಷಿಪ್ರಕ್ರಾಂತಿ” ಅಂತ ಹೇಳಿದೆ. ಅವರು ನನಗಿಂತ ಹೆಚ್ಚು ಬೇಸರಗೊಂಡರು. “ಸರ್, ವಾಪಸ್ ಹೋಗೋಣ ನಡೆಯಿರಿ. ಇನ್ನೊಮ್ಮೆ ಹೋದರೆ ಆಯಿತು” ಎಂದರು. “ಬೇಡ, ಹೋಗಿಬರೋಣ, ಗಾಡಿ ಹತ್ತಿ” ಅಂದೆ. ಒಂದು ಸಿಂಗಲ್ ಕಾಲಂ ಸುದ್ದಿ ನನ್ನ ಗಮನಕ್ಕೆ ಬಾರದೇ ಪತ್ರಿಕೆಗೆ ಹೋಗಿತ್ತು. ಅದು ನನ್ನನ್ನು ಫ್ಲಾಟ್ ಫಾರಂ ಮೇಲೆ ಹೀಗೆ ನಿಲ್ಲಿಸಿತ್ತು. ಅಟ್ಲೀಸ್ಟ್, ಅದನ್ನು ಬರೆದವರೂ ಸತ್ಯ ಹೇಳಲಿಲ್ಲ.
ಸಂಜೆ 5.40ಕ್ಕೆ ಸರಿಯಾಗಿ ರೈಲು ಕೂಗಿತು. ಸೀಟಿನಲ್ಲಿ ಕೂತಿದ್ದ ನಾನು, ಗುರು ಇಬ್ಬರೂ ಮೌನವಾಗಿದ್ದೆವು. ಸರ್ರ ಸರ್ರ ಅಂತ ಸದ್ದು ಮಾಡಿಕೊಂಡು ಗಾಲಿಗಳು ಮುಂದಕ್ಕೆ ಹೊರಳುವ ಹೊತ್ತಿಗೆ ಸರಿಯಾಗಿ ಅದೇ ಫ್ಲಾಟ್ ಫಾರಂ ಮೇಲೆ ಹುಡುಗನೊಬ್ಬ “ಈ ಸಂಜೆ.. ಈ ಸಂಜೆ.. ಪೇಪರ್..” ಎಂದು ಕೂಗುತ್ತಿದ್ದ. ಕಟ್ಟಕಡೆಯದಾಗಿ ನಾನು ಹಾಕಿದ ಹೆಡ್ಡಿಂಗು, ಮಾಡಿಸಿದ ಪೇಜೂ, ಲೇಔಟೂ ನನ್ನನ್ನೇ ಕಚ್ಚಿದ ಹಾಗನಿಸಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಪ್ರತಿದಿನವೂ ನನ್ನ ಕಣ್ಣಲ್ಲೇ ತುಂಬಿರುತ್ತಿದ್ದ ನೀಲಿಬಣ್ಣದ ಮಾಸ್ಟ್ ದೂರ ಸರಿಯುತ್ತಿದ್ದ ನನ್ನನ್ನು ಅಣಕ ಮಾಡಿದಂತಿತ್ತು. ತುಂಬಿದ ಕಣ್ಣುಗಳಿಗೆ ಮಸುಕು ಕವಿದಂತಾಗಿ ತಾಳಲಾರದೆ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ. ಗುರು ಗಟ್ಟಿಯಾಗಿ ನನ್ನ ಕೈ ಹಿಡಿದಿದ್ದರೆ, ಪಕ್ಕದಲ್ಲಿದ್ದ ಪ್ರಯಾಣಿಕರೊಬ್ಬರು “ಏನಾತ್ ರೀ ಸರ” ಅಂತ ಕೇಳಿದರು. ನಾನು ಏನೂ ಹೇಳಲಿಲ್ಲ, ಗುರು ಕೂಡ ಮೌನವಾಗಿದ್ದರು. ರೈಲು ಐದಾರು ಕಿಲೋಮೀಟರ್ ಕ್ರಮಿಸುವಷ್ಟೊತ್ತಿಗೆ ಕಣ್ಣೀರು ನಿಂತಿತ್ತು. ಆ ಹಿರಿಯ ಪ್ರಯಾಣಿಕರು ಮತ್ತೆ ಕೇಳಿದರು. “ಏನಾತ್ ರೀ”. ನಾನು ಉತ್ತರಿಸಿದೆ. “ಸ್ವಲ್ಪ ಹೊತ್ತಿನ ಹಿಂದೆ ಒಂದು ಸಾವಾಯಿತು” ಎಂದು. ಅವರು ಮತ್ತೆ ಏನೂ ಕೇಳಲಿಲ್ಲ. ಗುರು ಕೂಡ ಮಾತಾಡಲಿಲ್ಲ.
ರೈಲು ಯಲಹಂಕ, ದೊಡ್ಡಬಳ್ಳಾಪುರ ದಾಟಿಕೊಂಡು ಆರು ಗಂಟೆ ಸುಮಾರಿಗೆ ಗೌರಿಬಿದನೂರು ನಿಲ್ದಾಣಕ್ಕೆ ಬಂದು ನಿಂತಿತು. ನಮ್ಮಗುಡಿಬಂಡೆ ಪಕ್ಕದ ತಾಲ್ಲೂಕು ಅದು. ಒಂದೇ ಜಿಲ್ಲೆ. ಬೆಂಗಳೂರಿನ ಬೇಸರ ಕಳೆದು ಹೊಸಗಾಳಿ ಮೈಗೆ ಸೋಕಿದ ಹಾಗಾಯಿತು. ನಲ್ಲಿಯಲ್ಲಿ ಮುಖ ತೊಳೆದು ಮತ್ತೊಂದು ಚಹ ಹಿಡಿದು ಬೋಗಿಯ ಬಾಗಿಲಲ್ಲಿ ಇಣುಕಿ ಗೌರಿಬಿದನೂರನ್ನು ಕಣ್ತುಂಬಿಕೊಂಡೆ. ಹತ್ತಾರು ತೆಲುಗು ಸಿನಿಮಾಗಳನ್ನು ನೋಡಿದ್ದೇ ಇಲ್ಲಿ. ನನ್ನ ಮೊದಲ ಕನ್ನಡಕವನ್ನು ಖರೀದಿಸಿದ್ದೂ ಅಲ್ಲೇ. ಬಹಳ ಹಿತವೆನಿಸಿತು. ಅಭಿಲಾಶ. ಪುಷ್ಪಾಂಜಲಿ ಟಾಕೀಸುಗಳು ನೆನಪಾದವು. 1991-92ರ ನೆನಪುಗಳು ಹಾಗೆ ಹಾದುಹೋದವು..
ಸೀಟಿಗೆ ಬಂದು ಕೂತಾಗ ಗುರು ಜಪ ಮಾಡುತ್ತಿದ್ದರು. ನಾನು ಅವರು ಕಣ್ಣುಬಿಡುವಷ್ಟೊತ್ತಿಗೆ ನಿದ್ರೆಗೆ ಜಾರಿದ್ದೆ. ಪುನಾ ನಾನು ಕಣ್ಣುಬಿಟ್ಟಾಗ ಗಂಟೆ ಸುಮಾರು ಏಳೂವರೆ. ಹಿಂದೂಪುರ ನಿಲ್ದಾಣದಲ್ಲಿ ರೈಲು ನಿಂತಿತ್ತು. ಗಾಢ ಸೆಖೆ ನನ್ನ ನಿದ್ರೆಯನ್ನು ಹಾಳು ಮಾಡಿತ್ತು. ಕಣ್ಬಿಟ್ಟ ಕೂಡಲೇ ಗುರು ತಮ್ಮ ಎಂದಿನ ಪ್ರಕಾಶ್ ರೈ ಸ್ಟೈಲಿನ ನಗೆಬೀರಿ, “ಸರ್, ಇನ್ನೊಂದು ಟೀ” ಎಂದರು. “ಆಗಬಹುದು” ಎಂದೆ. ಮತ್ತೆ ನಮ್ಮ ನಡುವೆ “ಆ” ವಿಷಯ ಬರಲೇ ಇಲ್ಲ.
***
ಅದು ವಿಚಿತ್ರ ರೈಲು. ಕರ್ನಾಟಕದಿಂದ ಹೊರಟು ಗೌರಿಬಿದನೂರು ಆದ ಮೇಲೆ ಆಂಧ್ರದೊಳಕ್ಕೆ ಹೊಕ್ಕು ಪುನಾ ರಾಯಚೂರು ಮೂಲಕ ಕರ್ನಾಟಕಕ್ಕೆ ಬರುತ್ತದೆ. ಮತ್ತೆ ಮಹಾರಾಷ್ಟ್ರಕ್ಕೆ ಪ್ರವೇಶಿಸಿ ಸೊಲ್ಲಾಪುರ ಬಿಟ್ಟು ಇಂಡಿ ಮೂಲಕ ನಮ್ಮ ರಾಜ್ಯಕ್ಕೇ ಬರುತ್ತದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬರೋದು ಅನ್ನುವ ಮಾತಿದೆಯಲ್ಲ, ಹಾಗೆ. ನಮ್ಮ ದೇಶದಲ್ಲಿ ರೈಲ್ವೆ ಯೋಜನೆಗಳು ಜಾರಿಯಾಗಿರುವ ಕರ್ಮದ ಕಥೆ ಇದು.
***
ನಾವಿಬ್ಬರೂ ಸೊಲ್ಲಾಪುರದಲ್ಲಿ ಇಳಿದು, ಒಂದು ಹೋಟೆಲಿನಲ್ಲಿ ರೂಂ ಹಾಕಿ ಸ್ನಾನ ಎಲ್ಲ ಮುಗಿಸಿ ಪಂಢರಪುರಕ್ಕೆ ಹೊರಟೆವು. ಅಲ್ಲಿಂದ ವಿಠ್ಠಲನ ಸನ್ನಿಧಿಗೆ ಕ್ಷಣಕ್ಕೊಂದು ಬಸ್ಸು. ನಮ್ಮಲ್ಲಿ ಎಂಬತ್ತರ ದಶಕದಲ್ಲಿದ್ದ ಕೆಂಪುಬಸ್ಸುಗಳಂತೆ ಇದ್ದವು ಮಹಾರಾಷ್ಟ್ರದ ಬಸ್ಸುಗಳು. ನಾವತ್ತಿದ ಬಸ್ಸು ಪಂಢರಪುರಕ್ಕೆ ಬರುವಷ್ಟರಲ್ಲಿ ಅಲ್ಲಿನ ದೃಶ್ಯ ನೋಡಿ ಗಾಬರಿಯಾಯಿತು. ಇರುವೆಗಳ ಸಾಲುಗಳಂತೆ ಭಕ್ತರು ನಡೆದುಹೋಗುತ್ತಿದ್ದರು. ಅದು ಅವರ ನಂಬಿಕೆಯ ವಾರಿಕೆ. ಅವರೆಲ್ಲರ ಗುರಿ ಒಂದೇ, ಅದು ಪಾಂಡುರಂಗನ ದರ್ಶನ. ಬಸ್ಸು ಅದ್ಯಾವ ಜಾಗದಲ್ಲಿ ನಮ್ಮನ್ನು ಬಿಟ್ಟಿತೋ ಗೊತ್ತಿಲ್ಲ. ನಾವೂ ಅವರೊಂದಿಗೆ ನಡೆಯತೊಡಗಿದೆವು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ, ಎತ್ತಿನ ಗಾಡಿಗಳನ್ನು ನಿಲ್ಲಿಸಿಕೊಂಡು ಅಲ್ಲೇ ಭಜನೆ, ಅಲ್ಲೇ ಪ್ರಾರ್ಥನೆ, ಕೊನೆಗೆ ಅಲ್ಲೇ ಊಟ ಇತ್ಯಾದಿ. ನೋಡನೋಡುತ್ತಾ ಹೋದರೆ ನಮ್ಮ ದುಗುಡ ಮತ್ತೂ ಹೆಚ್ಚಾಯಿತು.
***
ಆಷಾಢ ಏಕಾದಶಿ ಎಂದರೆ ಮರಾಠಿಗರಿಗೆ ಬಹುಮುಖ್ಯ ದಿನ. ಆ ದಿನ ವಿಠ್ಠಲನ ದರ್ಶನಭಾಗ್ಯ ಸಿಕ್ಕರೆ ಸ್ವರ್ಗ ಎಂಬ ನಂಬಿಕೆ. ನಮ್ಮಲ್ಲಿ ವೈಕುಂಠ ಏಕಾದಶಿ ಇದೆಯಲ್ಲ, ಹಾಗೆ. ನಾನಂತೂ ಜನರನ್ನು ನೋಡಿ ಸುಸ್ತಾಗಿಹೋದೆ. ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಎಲ್ಲ ವಯೋಮಾನದ ಲಕ್ಷೋಪಲಕ್ಷ ಜನರಿದ್ದರು. ನಮಗೆ ವಿಠ್ಠಲನ ದರ್ಶನ ಸಿಗುತ್ತಾ ಎಂಬ ಅನುಮಾನ ಜಾಸ್ತಿಯಾಯಿತು. ಹಾಗೆ ನಡೆದುಕೊಂಡು ಚಂದ್ರಭಾಗ ನದಿ ತೀರಕ್ಕೆ ಬಂದು ನೋಡಿದರೆ ನಮ್ಮಿಬ್ಬರಿಗೆ ಮೂರ್ಛೆಯೊಂದೇ ಬಾಕಿ. ಅಷ್ಟೂ ಜನರ ನಡುವೆ ನದಿಗೆ ಇಳಿಯುವುದಾದರೂ ಹೇಗೆ? ಇಳಿದೆವು. ನೀರಿನೊಳಗೇನಿದೆ ಅಂತ ನೋಡದೇ ಸ್ನಾನ ಮಾಡಿ ಸೀದಾ ಪಂಢರಪುರದ ರಾಜಬೀದಿಗೆ ಬಂದರೆ, ನಮಗೆ ಹತ್ತು ಹೆಜ್ಜೆ ಮುಂದೆ ಹೋಗುವುದು ಪ್ರಯಾಸವೆನಿಸಿತು. ಮರಳು ಚೆಲ್ಲಿದರೆ ಕೆಳಕ್ಕೆ ಬೀಳದಷ್ಟು ಜನಸಂದಣಿ. ವಿಠ್ಠಲನ ಭಕ್ತರ ಮಹಾಸಾಗರವದು. ನನಗೆ ಪಕ್ಕಾ ಆಯಿತು, ಸ್ವಾಮಿಯ ದರ್ಶನ ಆಗಲ್ಲ ಎಂದು. “ಸರ್ ಬನ್ನಿ, ದರ್ಶನ ಖಂಡಿತಾ ಆಗುತ್ತೆ” ಎಂದರು ಗುರು. ಅವರು ಯಾರೋ ಮಂತ್ರಿ ಕೊಟ್ಟಿದ್ದ ಪತ್ರವನ್ನು ಜೇಬಿನಲ್ಲಿಟ್ಟುಕೊಂಡಿದ್ದರು. ಅದು ಸಹಾಯಕ್ಕೆ ಬರುತ್ತದೆ ಎಂಬ ನಂಬಿಕೆ ಅವರದ್ದು.
ಇನ್ನು ಅಲ್ಲಿ ದರ್ಶನಕ್ಕೆ ಒಂದೇ ಕ್ಯೂ. ಅದು ಚಂದ್ರಭಾಗ ತೀರ ದಾಟಿತ್ತು. ನಾವು ನೋಡಿದರೆ ಕ್ಯೂ ಬಿಟ್ಟು ಸೀದಾ ದೇಗುಲದ ಮುಂದಕ್ಕೆ ಬಂದಿದ್ದೆವು. ಅಲ್ಲಿ ಬೃಹತ್ತಾದ ಪರಿಕ್ರಮ ನಡೆಯುತ್ತಿತ್ತು. ಕ್ಯೂ ಹೀಗೆ ಹೋಗುವುದೇನೋ ಎಂದು ನಂಬಿ ನಾವೂ ಪರಿಕ್ರಮಕ್ಕೆ ಹೋದೆವು. ಅದು ಹೇಗಿತ್ತೆಂದರೆ, ಉಕ್ಕಿಹರಿಯುವ ನದಿಯ ನಡುಭಾಗದಲ್ಲಿ ದೊಡ್ಡ ಸುಳಿ ಎದ್ದರೆ ಹೇಗಿರುತ್ತದೋ ಹಾಗಿತ್ತು. ಗುರು ಬಲವಾಗಿದ್ದರು. ಅವರ ಕೈ ಗಟ್ಟಿಯಾಗಿ ಹಿಡಿದಿದ್ದ ನನಗೆ ಒಮ್ಮೊಮ್ಮೆ ಉಸಿರು ನಿಂತ ಹಾಗಾಗುತ್ತಿತ್ತು. ಅವರು ಕೈಬಿಟ್ಟರೆ ಕಥೆ ಮುಗಿದಂತೆ. ಜನರ ಕಾಲುಗಳ ಕೆಳಗೆ ಸಿಕ್ಕಿದರೆ ಅಪ್ಪಚ್ಚಿ ಖಚಿತ. ಇಷ್ಟೆಲ್ಲ ಭಯದ ನಡುವೆ ನನಗೆ ಇಡೀ ಮೈ ಒದ್ದೆಯಾಗಿಬಿಟ್ಟಿತ್ತು. ಅದೆಷ್ಟೋ ಹೊತ್ತು ತಳ್ಳಿಕೊಂಡು ಬಂದರೆ ಗುಡಿಯ ಪ್ರವೇಶದ್ವಾರದ ಮುಂದೆ ನೀರೆಲ್ಲ ಚೆಲ್ಲಿ ಜನ ಜಾರಿ ಜಾರೀ ಬೀಳುತ್ತಿದ್ದರು. ಕೆಲವರನ್ನು ಜನ ತುಳಿಯುತ್ತಿದ್ದರು. ಆರ್ತನಾದ, ಚೀರಾಟ, ಆದರೂ ವಿಠ್ಠಲ ಎನ್ನುವ ಘೋಷ. ನಾನೂ ಬಿದ್ದೆ, ಎದ್ದೆ. ಅದ್ಹೇಗೆ ಮೇಲೆದ್ದೆನೋ ಗೊತ್ತಿಲ್ಲ. ಆ ವಿಠ್ಠಲನ ಮೆಲಾಣೆ, ನಾನು ಬದುಕುವ ಆಸೆ ಕಳೆದುಕೊಂಡಿದ್ದೆ. ಆವತ್ತು ಹನ್ನೊಂದರಿಂದ ಹದಿನೈದು ಲಕ್ಷ ಭಕ್ತರಿದ್ದರಂತೆ ಅಲ್ಲಿ. ಅನೇಕರು ಸ್ವಾಮಿಯ ದರ್ಶನ ಭಾಗ್ಯ ಸಿಗದೇ ಗೋಪುರಕ್ಕೆ ನಮಿಸಿ ವಾಪಸ್ ಹೊರಡುತ್ತಿದ್ದರು. ಅದಕ್ಕೆ ನಾವಿಬ್ಬರೂ ತಯಾರಿರಲಿಲ್ಲ.
ಅಲ್ಲಿ ಶುರುವಾಯಿತು ನಮ್ಮಿಬ್ಬರ ಸರ್ಕಸ್. ಜೇಬಿನಲ್ಲಿದ್ದ ಪತ್ರವನ್ನು ತೆಗೆದು ಆಪರೇಷನ್ ಶುರು ಮಾಡಿದರು ಗುರು. ಅದ್ಯಾರೋ ಮರಾಠಿ ಪತ್ರಕರ್ತರೊಬ್ಬರಿಗೆ ಕಾಲ್ ಮಾಡಿದರು. ಅವರು ಹೇಗೋ ಅಲ್ಲೇ ಸಿಕ್ಕಿದರು. ಆದರೆ ದೇಗುಲದೊಳಕ್ಕೆ ಕಳಿಸಲು ಅವರ ಪ್ರಭಾವ ಸಾಲದಾಯಿತು. ಮತ್ತೂ ಗುರು ಛಲ ಬಿಡಲಿಲ್ಲ. ಉಪವಾಸವೇ ಇದ್ದ ನಮ್ಮಿಬ್ಬರನ್ನು ವಿಠ್ಠಲ ಕೈಬಿಡಲಿಲ್ಲ. ಹೊರಗಿನ ಹಜಾರದಿಂದ ಸಿಗುವ ದರ್ಶನದ ಕ್ಯೂಗೆ ಹೇಗೋ ನಾವು ನುಸುಳಿಬಿಟ್ಟೆವು. ಆ ಸಾಲಿನಲ್ಲಿ ಬಹಳ ಹೊತ್ತು ಸಾಗಿದ ಮೇಲೆ ವಿಠ್ಠಲನ ಮುಖ ಮಾತ್ರ ಕಾಣಿಸಿತು. ಅದನ್ನು ಅಲ್ಲಿ “ಮುಖ ದರ್ಶನ” ಅಂತ ಕರೀತಾರೆ. ಆ ಅಸ್ಪಷ್ಟ ದರ್ಶನದಿಂದ ನಮ್ಮ ಆಸೆ ತಣಿಯಲಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಹೊಸ ಉತ್ಸಾಹದೊಂದಿಗೆ ಹೇಗೋ ದೇಗುಲದ ಒಳಗಿನ ಮತ್ತೊಂದು ಹಂತಕ್ಕೆ ಎಂಟ್ರಿ ಪಡೆದೆವು. ಒಳಗೆ ದೇವರ ದರ್ಶನಕ್ಕೆ ಭಕ್ತರು ಹೋಗುತ್ತಿದ್ದರೆ ಹೊರಗಿನ ಆ ಪ್ರಾಂಗಣದಲ್ಲಿ ಪೋಲಿಸರು ಲಾಟಿ ಹಿಡಿದು ಪಹರೆ ಕಾಯುತ್ತಿದ್ದರು. ಗುರು ಜೇಬಿನಲ್ಲಿದ್ದ ಪತ್ರ ಅಲ್ಲಿ ಸಹಾಯಕ್ಕೆ ಬಂತು. ನಮ್ಮನ್ನು ಕಂಡ ಡಿಸಿಪಿ ರೇಂಜಿನ ಅಧಿಕಾರಿಯೊಬ್ಬರು, “ಕೌನ್ ಹೇ ಆಪ್, ಈದರ್ ಕೈಸೆ ಆಯೆ” ಅಂತ ಜೋರು ಮಾಡಿದರು. ಗುರು ಮಾತಿಗಿಳಿದರು, “ಸರ್ ನಾವಿಬ್ಬರೂ ಜರ್ನಲಿಸ್ಟುಗಳು. ಬೆಂಗಳೂರಿನಿಂದ ಬಂದಿದ್ದೇವೆ. ನಮ್ಹತ್ರ ಮಿನಿಸ್ಟರ್ ಲೆಟರ್ ಇದೆ. ದೇವಸ್ಥಾನದ ಆಫೀಸ್ ಎಲ್ಲಿದೆ? ನಮಗೆ ವಿಠ್ಠಲನ ದರ್ಶನ ಬೇಕು” ಎಂದು ಪ್ರಾರ್ಥಿಸಿದರು. “ಕ್ಯಾ.. ಮಿನಿಸ್ಟರ್ ಲೆಟರ್..” ಅಂತ ನಮ್ಮನ್ನು ಕೆಕ್ಕರಿಸಿ ನೋಡುತ್ತ ಬಾಯಲ್ಲಿದ್ದ ಜರದಾವನ್ನು ಕಚಪಚ ಅಂತ ಅಗೆಯತೊಡಗಿದರು. ಆದರೆ, ಆ ಅಧಿಕಾರಿಗೆ ನಾವು ಥ್ಯಾಂಕ್ಸ್ ಹೇಳಲೇಬೇಕು. ಅಲ್ಲಿ ಕೂರಲು ಬಿಟ್ಟರು.
***
ಹೀಗೆ ನೋಡ ನೋಡುತ್ತಿದ್ದಂತೆ ವಿಐಪಿಗಳು, ವಿವಿಐಪಿಗಳು ದರ್ಶನ ಮಾಡಿ ಹೋಗುತ್ತಿದ್ದರು. ತಿರುಮಲದಲ್ಲಿದ್ದಷ್ಟು ಶಿಸ್ತಿನ ವ್ಯವಸ್ಥೆ ಅಲ್ಲಿರಲಿಲ್ಲ. ಸಮಯ ಹೋಗುತ್ತಿತ್ತು, ನಮಗೆ ದರ್ಶನದ ಮಾತುಬಿಟ್ಟರೆ ಬೇರೆ ಇರಲಿಲ್ಲ. ಈ ಕಡೆ ಯಾರಾದರೂ ಶಾಸಕರೋ, ಮಂತ್ರಿಯೋ ಬಂದರೆ ಮನವಿ ಮಾಡಬಹುದು ಎಂಬ ಲೆಕ್ಕಾಚಾರ ನಮ್ಮದು. ಎಷ್ಟುಹೊತ್ತು ಕಳೆದರೂ ಆ ರೀತಿಯ ಒಬ್ಬ ಆಸಾಮಿಯೂ ಕಾಣಲಿಲ್ಲ. ಬೆಳಗ್ಗೆ ಹತ್ತೂವರೆಗೆ ಕ್ಯೂಗೆ ಬಿದ್ದ ನಾವು ಸಂಜೆ ಆರಾಗಿದ್ದರೂ ವಿಠ್ಠಲನಿಗಾಗಿ ಪರಿತಪಿಸುತ್ತಿದ್ದೆವು. ಕೊನೆಗೂ ಸ್ವಾಮಿಗೆ ನಮ್ಮ ಮೇಲೆ ಕರುಣೆ ಬಂತೆನೋ. ಫುಲ್ ಬಳಿಬಟ್ಟೆ ಧರಿಸಿದ್ದ ಆಸಾಮಿಯೊಬ್ಬರು ಗೇಟಿನ ಒಳಗಿನಿಂದ ನಮ್ಮತ್ತ ಇಣುಕಿದರು. ಕೂಡಲೇ ಆ ಪೋಲಿಸ್ ಅಧಿಕಾರಿ ನಮ್ಮನ್ನು ಎಚ್ಚರಿಸಿ, “ಅವರು ಟೆಂಪಲ್ ಕಮಿಟಿ ಮೆಂಬರ್. ಹೋಗಿ ರಿಕ್ವೆಸ್ಟ್ ಮಾಡಿಕೊಳ್ಳಿ” ಅಂದರು. ಕ್ಷಣಮಾತ್ರದಲ್ಲಿ ನಾವಿಬ್ಬರೂ ಎರಡೂ ಕೈಗಳನ್ನು ಜೋಡಿಸಿ ಅವರ ಮುಂದೆ ನಿಂತೆವು. ನಮ್ಮನ್ನೇ ದಿಟ್ಟಿಸಿದ ಅವರಿಗೆ ಬೆಳಗಿನಿಂದ ನಾವು ಪಟ್ಟ ಕಷ್ಟಗಳೆಲ್ಲವನ್ನೂ ಹೇಳಿಕೊಂಡೆವು. ಅವರಿಗೆ ಮರುಕವಾಯಿತು. “ಅಂದರ್ ಬೈಟಿಯೇ” ಅಂತ ಒಂದು ಬೆಂಚಿನತ್ತ ಕೈತೋರಿದರು. ನನ್ನ ಕಂಗಳಲ್ಲಿ ನೀರು ತುಂಬಿತ್ತು. ಹತ್ತು ನಿಮಿಷ ಅಲ್ಲಿ ಕೂತೆವು. ಆಮೇಲೆ ಯುವಕನೊಬ್ಬ ಬಂದು, “ಆಪ್, ಸಾಬ್ ಕಾ ಆದ್ಮಿ?” ಅಂತ ಕೇಳಿದ. ನಾವು “ಹೂಂ” ಅಂದೆವು. ಅಲ್ಲಿ ಸಾಗುತ್ತಿದ್ದ ಕ್ಯೂ ಅನ್ನು ಬೇಧಿಸಿ ನಮ್ಮನ್ನು ನೇರ ಕರೆತಂದು ಆ ಪಾಂಡುರಂಗ ವಿಠ್ಠಲನ ಮುಂದೆ ನಿಲ್ಲಿಸಿಯೇಬಿಟ್ಟ!!
ಮೊದಲ ಬಾರಿಗೆ ನಾನು ಪಾಂಡುರಂಗನ್ನು ನೋಡಿದೆ. ಆ ಮಂಗಳಮೂರ್ತಿಯನ್ನು ಕಂಡೆ. ಕಳೆದುಹೋಗಿದ್ದ ಚೈತನ್ಯ ಬಂದ ಹಾಗಾಯಿತು. ನಿಂತೇ ಹೋಯಿತು ಅಂದುಕೊಂಡ ಉಸಿರು ಏದುಸಿರು ಬಿಡತೊಡಗಿತು. ಅಲ್ಲಿ ಬಿಟ್ಟ ಆ ಯುವಕ, “ಹೇ ಸಾಬ್ ಕಾ ಆದ್ಮಿ” ಎಂದು ಅರ್ಚಕರಿಗೆ ಹೇಳಿದ. ಅರ್ಚಕರೋ “ಆಯಿಯೇ” ಎನ್ನುತ್ತ “ಭಗವಾನ್ ಕಾ ದರ್ಶನ್ ಕರೋ” ಎಂದರು. ನಾನು, ಗುರು ಸಾಕ್ಷಾತ್ ಆ ವಿಠ್ಠಲನ ಪಾದಮುಟ್ಟಿ ನಮಸ್ಕರಿಸಿದೆವು. ನಮಗೆ ತೃಪ್ತಿಯಾಗುವಷ್ಟು ಹೊತ್ತು ದೇವರನ್ನು ನೋಡುತ್ತಲೇ ಆ ಪಕ್ಕದಲ್ಲಿ ನಿಂತೆವು. “ನಾನು ಇದ್ದೇನೆ” ಎಂದು ಸ್ವಾಮಿ ಹೇಳಿದಂತಿತ್ತು ನನಗೆ. ಪಂಢರಪುರಕ್ಕೆ ಹೊರಡುವಾಗ ಬಿಕ್ಕಿಬಿಕ್ಕಿ ಅತ್ತಿದ್ದ ನಾನು, ವಿಠ್ಠಲನ ಮುಂದೆ ಆನಂದದಿಂದ ಬಿಕ್ಕಿದ್ದೆ.