ಬೆಂಗಳೂರು: ಹಲವು ಸಲ ಕೈತಪ್ಪಿಹೋಗಿದ್ದ ಕೆಪಿಸಿಸಿ ಅಧ್ಯಕ್ಷಗಾದಿಯ ಮೇಲೆ ಕೊನೆಗೂ ಬಂದು ಕೂತ ಡಿ.ಕೆ.ಶಿವಕುಮಾರ್, ತಮ್ಮ ಅಧಿಕಾರ ಸ್ವೀಕಾರ ಸಮಾರಂಭದ ಮೂಲಕ ಕೊಟ್ಟ ಸಂದೇಶವೇನು ಎಂಬ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ. ಪ್ರತಿಪಕ್ಷಗಳ ಮೇಲೆ ’ಪೂರ್ವಯೋಜಿತ’ ದಾಳಿ ನಡೆಸಿದ ಅವರು ಪಕ್ಷದಲ್ಲಿನ ’ಕೆಲವರ’ ವಿರುದ್ಧ ಅನಿರೀಕ್ಷಿತ ಸರ್ಜಿಕಲ್ ದಾಳಿ ನಡೆಸಿದರಾ? ಎಂಬುದು ಇದೀಗ ಕೈ ಪಾಳೆಯದಲ್ಲಿ ಹೆಚ್ಚು ಟ್ರೆಂಡಿಂಗಿನಲ್ಲಿರುವ ಸುದ್ದಿ.
ತಮ್ಮ ಪದಗ್ರಹಣದ ವೇಳೆ ಏನೇನಿರಬೇಕು? ಯಾರಾರಿರಬೇಕು? ಯಾರು ಏನು ಮಾತನಾಡಬಹುದು? ಅದರ ವಿರುದ್ಧ ತಾವು ಹೇಗೆ ರಿವರ್ಸ್ ಸ್ಟ್ರೈಕ್ ಮಾಡಬೇಕು ಎಂಬ ಬಗ್ಗೆ ಡಿಕೆಶಿ ಭರ್ಜರಿಯಾಗಿಯೇ ಹೋಮ್ ವರ್ಕ್ ಮಾಡಿಕೊಂಡಿದ್ದರು. ಅದು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಇಡೀ ಪಕ್ಷವನ್ನು ಅವರು ಹಿಡಿತಕ್ಕೆ ತೆಗೆದುಕೊಂಡಿದ್ದರು ಮಾತ್ರವಲ್ಲದೆ, ಇನ್ನು ಮುಂದೆ ರಾಜ್ಯ ಕಾಂಗ್ರೆಸ್ಸಿನಲ್ಲಿ ವ್ಯಕ್ತಿಪೂಜೆ, ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡಲು ಅವಕಾಶವಿಲ್ಲ ಎಂದು ನೇರವಾಗಿಯೇ ಹೇಳಿದರು. ತಮ್ಮ ಎದುರಿಗೆ ಕೂತಿದ್ದ ಕೆಲ ’ಹಿರಿಯ’ರಿಗೆ ಇದರಿಂದ ಇರಿಸುಮುರಿಸು ಉಂಟಾಗುತ್ತದೆ ಎಂಬ ಬಗ್ಗೆ ಡಿಕೆಶಿ ತಲೆ ಕೆಡಿಸಿಕೊಂಡ ಹಾಗೆ ಕಾಣಲಿಲ್ಲ.
ತಮ್ಮ ಭಾಷಣದಲ್ಲಿ ಏನು ಹೇಳಬೇಕು? ಯಾರಿಗೆ ಹೇಳಬೇಕು? ಹೇಗೆ ಹೇಳಬೇಕು ಎಂಬುದನ್ನು ಅವರು ಮೊದಲೇ ನಿರ್ಧರಿಸಿದ್ದರು. ಕೋವಿಡ್ 19 ಹಿನ್ನಲೆಯಲ್ಲಿ ಬಹುತೇಕ ಮನೆಯಲ್ಲೇ ಉಳಿದಿದ್ದ ಡಿಕೆಶಿ, ಸದಾಶಿವನಗರದ ನಿವಾಸದಿಂದಲೇ ಇಡೀ ಪಕ್ಷವನ್ನು ಪದಗ್ರಹಣಕ್ಕೆ ಮುನ್ನವೇ ನಿಯಂತ್ರಿಸುತ್ತಿದ್ದರು. ಜತೆಗೆ, ತಮ್ಮ ನೇಮಕಾತಿ ಪ್ರಕಟಣೆ ಹೊರಬಿದ್ದ ಮೇಲೆ ಪಕ್ಷದೊಳಗೆ ಏನೆಲ್ಲ ನಡೆಯುತ್ತಿದೆ, ಯಾರು ಯಾವ ದಾಳ ಉರಳಿಸಿದರು ಎಂಬುದು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಇದೆಲ್ಲವನ್ನೂ ಡಿಕೆಶಿ ಮತ್ತು ಡಿಕೆಶಿ ಬ್ರಿಗೇಡ್ ಪಕ್ಕಾ ವಾಚ್ ಮಾಡುತ್ತಿದೆ ಎಂಬ ’ಜಾಣ’ ಅರಿವು ಅವರ ವಿರೋಧಿ ಗ್ಯಾಂಗಿನಲ್ಲೂ ಇತ್ತು ಎಂಬುದು ಸುಳ್ಳಲ್ಲ.
ತಮ್ಮ ಭಾಷಣದಲ್ಲಿ ಡಿಕೆಶಿ ಬಿಟ್ಟ ಬಾಣಗಳ ಸ್ಯಾಂಪಲ್ಲುಗಳು ಇಲ್ಲಿವೆ…
*ನನಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲ ಇರಲಿಲ್ಲ. ಆದರೆ ಯಾವುದೇ ಸವಾಲು ಎದುರಿಸುವ ಉತ್ಸಾಹವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬುದೇ ನನ್ನ ಗುರಿ.
*ಕೆಲ ಜನ ನನ್ನನ್ನು ಕನಕಪುರ ಬಂಡೆ ಎಂದು ಕರೆಯುತ್ತಾರೆ. ಅದು ಹಾಗಲ್ಲ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆಗೆ ಉಳಿ ಪೆಟ್ಟುಬಿದ್ದರೆ ಮನೆಯ ಅಡಿಪಾಯದ ಕಲ್ಲಾಗುತ್ತದೆ. ಇನ್ನೂ ಜಾಸ್ತಿ ಪೆಟ್ಟು ಬಿದ್ದರೆ ಚಪ್ಪಡಿ ಆಗುತ್ತದೆ. ಮತ್ತಷ್ಟು ಪೆಟ್ಟು ಬಿದ್ದರೆ ಬಾಗಿಲ ಕಂಬವಾಗುತ್ತದೆ ಹಾಗೂ ಮತ್ತೂ ಏಟು ಬಿದ್ದರೆ ದೈವಶಿಲೆ ಆಗುತ್ತದೆ. ನಾನು ಶಿಲೆಯಾಗಲು ಬಯಸುವುದಿಲ್ಲ. ಬದಲಿಗೆ ವಿಧಾನಸೌಧದ ಮೆಟ್ಟಿಲಿನ ಕಲ್ಲಾಗುತ್ತೇನೆ. ಅದರ ಮೇಲೆ ನೀವೆಲ್ಲ (ಕಾರ್ಯಕರ್ತರು, ಎದುರು ಕೂತಿದ್ದ ನಾಯಕರಲ್ಲ!!) ನಡೆದು ಆ ಶಕ್ತಿಕೇಂದ್ರದ ಮೂರನೇ ಮಹಡಿಗೆ ಹೋಗಬೇಕು. ಅದರಲ್ಲಿಯೇ ನಾನು ತೃಪ್ತಿಪಡುತ್ತೇನೆ.
*ಅವರು (ಬಿಜೆಪಿ) ಷಡ್ಯಂತ್ರ ಮಾಡಿ ನನ್ನನ್ನು ತಿಹಾರ್ ಜೈಲಿಗೂ ಕಳಿಸಿದರು. ’ಕೆಲವರಿಗೆ’ ಸಂತೋಷವಾಯಿತು. ಸುಳ್ಳು ಆರೋಪ ಮಾಡಿದರು. ಈ ವೇಳೆ ಡಿ.ಕೆ.ಶಿವಕುಮಾರನ ರಾಜಕೀಯ ಜೀವನ ಮುಗಿದೇ ಹೋಯಿತು ಎಂದರು ಕೆಲವರು. ಆದರೆ, ನನ್ನ ನಾಯಕಿ ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ಧೈರ್ಯ ತುಂಬಿದರು. ಅರ್ಧ ಗಂಟೆ ನನ್ನ ಜತೆ ಮತನಾಡಿದರು. ರಾಜ್ಯದಲ್ಲಿ ಪಕ್ಷದ ನಾಯತ್ವಕ್ಕೆ ಸಿದ್ಧರಾಗಿ ಎಂದರು. ಅವರು ಆ ಸಂದರ್ಭವನ್ನು ಮರೆಯಲು ಸಾಧ್ಯವಿಲ್ಲ. ಈಗ ಇಲ್ಲಿಯವರೆಗೆ ಬಂದು ನಿಲ್ಲಲು ಅವರೇ ಕಾರಣ.
*ನಾನು ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ಎಲ್ಲವೂ ಪಕ್ಷಕ್ಕೊಸ್ಕರವೇ. ನಾನು ಯಾರಿಗಾದರೂ ಅನ್ಯಾಯ ಮಾಡಿಲ್ಲ. ಮಾಡಿದ್ದರೆ ಶಿಕ್ಷೆಗೆ ಸಿದ್ಧ. ನನಗೆ ಅಧಿಕಾರ ಕೊಡದಿದ್ದಾಗಲೂ ಪಕ್ಷದ ಬಗ್ಗೆ ಚಕಾರ ಎತ್ತಲಿಲ್ಲ. ಅದು ನನ್ನ ಬದ್ಧತೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕೊಟ್ಟಿರುವ ಶಕ್ತಿ ನನ್ನ ರಕ್ತದ ಕಣ, ಕಣದಲ್ಲಿ ತುಂಬಿದೆ.
*ಬಂಗಾರಪ್ಪ, ಎಸ್.ಎಂ.ಕೃಷ್ಣ, ಧರಂಸಿಂಗ್, ಸಿದ್ದರಾಮಯ್ಯ ಸರ್ಕಾರ ಹಾಗೂ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಆದರೆ ನಾನು ಯಾರಿಗೂ ದ್ರೋಹ ಬಗೆದಿಲ್ಲ. ಪ್ರತಿ ಸಂದರ್ಭದಲ್ಲೂ ಪಕ್ಷ ನೀಡಿದ ಜವಾಬ್ದಾರಿಯನ್ನು, ಕೆಲಸವನ್ನು ನಿಷ್ಠೆಯಿಂದ ಮಾಡಿದ್ದೇನೆ.
*ಪಕ್ಷದಲ್ಲಿ ವ್ಯಕ್ತಿಪೂಜೆ ಬಿಟ್ಟು ಪಕ್ಷಪೂಜೆ ಮಾಡೋಣ. ಗುಂಪುಗಾರಿಕೆ ಮೇಲೆ ನನಗೆ ನಂಬಿಕೆ ಇಲ್ಲ. ಪಕ್ಷದಲ್ಲಿ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ನಾನು ನಂಬುವುದು ಕಾಂಗ್ರೆಸ್ ಧರ್ಮವನ್ನು ಮಾತ್ರ. ಒಟ್ಟಾಗಿ ಕೆಲಸ ಮಾಡಬೇಕು. ಐದು ಬೆರಳು ಸೇರಿದರೆ ಮಾತ್ರ ಹಸ್ತ. ಇದನ್ನು ಮರೆತರೆ ಕಷ್ಟ.
*ಈವರೆಗೂ ನಮ್ಮ ಪಕ್ಷ ಮಾಸ್ ಬೇಸಿನಿಂದ ಕೂಡಿತ್ತು. ಇನ್ನು ಮುಂದೆ ಕೇಡರ್ ಬೇಸ್ ಪಾರ್ಟಿಯಾಗಿ ಬೆಳೆಯಲಿದೆ. ಯಾವುದೇ ನಾಯಕನಾದರೂ ಆತ ಬೂತ್ ಮಟ್ಟದಿಂದ ಬರಬೇಕು. ಇದಕ್ಕೆ ಕೇರಳ ಮಾದರಿಯೇ ಪ್ರೇರಣೆ.
ಬಂಡೆಯಂತೆ ನಿಂತಿದೆ ಹೈಕಮಾಂಡ್:
ಇಷ್ಟನ್ನು ಹೇಳಿದ ಡಿಕೆಶಿಗೆ ಕಾರ್ಯಕ್ರಮ ನಡೆಯುವಾಗಲೇ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮೊಬೈಲ್ ಕರೆ ಶುಭಹಾರೈಸಿದ್ದು ಎಲ್ಲರಿಗೂ ವಿದ್ಯುತ್ ಸಂಚಾರ ಉಂಟು ಮಾಡಿದ್ದಂತೂ ಹೌದು. ಕೆಲವರಿಗೆ ಕಿವಿ ಕಚ್ಚಿದಂತೆ ಆಗಿದ್ದು ಕೂಡ ಸುಳ್ಳಲ್ಲ. ಇಡೀ ಹೈಕಮಾಂಡ್ ಮಾತ್ರವಲ್ಲ, ಗಾಂಧಿ ಕುಟುಂಬವೂ ಡಿಕೆಶಿ ಬೆನ್ನಿಗೆ ನಿಂತಿದೆ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ನೀಡಲಾಯಿತು.
‘ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ’ ಎಂದು ರಾಹುಲ್ ಗಾಂಧಿ ಹೇಳಿದರು.
‘ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿಯನ್ನು ನೀವು ವಹಿಸಿಕೊಂಡಿದ್ದೀರಿ. ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ನೀವು ಧೈರ್ಯದಿಂದ ಮುನ್ನುಗ್ಗಿ. ಪಕ್ಷವನ್ನು ಗಟ್ಟಿಯಾಗಿ ಸಂಘಟಿಸಿ’ ಎಂದು ಪ್ರಿಯಾಂಕಾ ಗಾಂಧಿ ಧೈರ್ಯ ತುಂಬಿದರು.
ಅಹಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗುವಾಗ ರಾಜ್ಯಕ್ಕೆ ಬಂದ ಗುಜರಾತ್ ಶಾಸಕರನ್ನು ರಕ್ಷಿಸುವ ಪ್ರಶ್ನೆ ಬಂದಾಗ ರಾಜ್ಯದ ಘಟಾನುಘಟಿಗಳೆಲ್ಲ ಕೈಎತ್ತಿಬಿಟ್ಟಿದ್ದರು. ಕೊನೆಗೆ ಹೈಕಮಾಂಡ್ ಹೇಳಿದ ಕೆಲಸವನ್ನು ದೊಡ್ಡ ರಿಸ್ಕ್ ಎಂದು ಗೊತ್ತಿದ್ದದರೂ ಡಿಕೆಶಿ ಹೆಗಲ ಮೇಲೆ ಹಾಕಿಕೊಂಡರು. ಪರಿಣಾಮ, ಅಹಮದ್ ಪಟೇಲ್ ಗೆದ್ದು ರಾಜ್ಯಸಭೆಗೆ ಹೋದರೆ ಡಿಕೆಶಿ ಜೈಲಿಗೆ ಹೋಗುವಂತಾಯಿತು. ಗುಜರಾತ್ ಶಾಸಕರು ಬೆಂಗಳೂರಿನ ರೆಸಾರ್ಟಿನಲ್ಲಿ ಇದ್ದಾಗಲೇ ಅವರ ಮನೆ ಮೇಲೆ ಐಟಿ ದಾಳಿ ನಡೆಯಿತು.
ಇದಾದ ಮೇಲೆ ಎಚ್.ಡಿ. ಕುಮಾರಸ್ವಾಮಿ 2.0 ಸರಕಾರ ರಚನೆ ವೇಳೆ ಹೈಕಮಾಂಡ್ ಹಚ್ಚಿದ ಎಲ್ಲ ಕೆಲಸಗಳನ್ನು ಮಾಡಿದ್ದು ಇದೇ ಡಿಕೆಶಿ. ಬಹಳ ವರ್ಷಗಳಿಂದ ಅಧಿಕಾರಕ್ಕೆ ಅಂಟಿಕೊಂಡು, ಜಲ್ಸಾ ಪಾಲಿಟಿಕ್ಸ್ ಮಾಡುತ್ತ ಪಕ್ಷದ ಕೆಲಸವನ್ನು ಬೇಖಾತರ್ ಮಾಡಿದ್ದ ಗ್ಯಾಂಗ್ ಮೇಲೆ ಈಗ ಸೋನಿಯಾ, ಡಿಕೆಶಿ ಎಂಬ ಆಯುಧವನ್ನು ಪ್ರಯೋಗಿಸಿದ್ದಾರೆ. ಅಂದರೆ, ಇಷ್ಟವಿದ್ದರೆ ಪಕ್ಷದಲ್ಲಿರಬಹುದು, ಇಲ್ಲದಿದ್ದರೆ ಹೊರನಡೆಯಬಹುದು. ಈ ಸಂದೇಶವನ್ನು ಸ್ಪಷ್ಟವಾಗಿದೆ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಆರ್.ಟಿ. ವಿಠ್ಠಲಮೂರ್ತಿ ಹೇಳುತ್ತಾರೆ.
ಒಟ್ಟಾರೆ ಕಾಂಗ್ರೆಸ್ಸಿನಲ್ಲಿ ಡಿಕೆಶಿಪರ್ವ ಆರಂಭವಾಗಿದೆ. ವಿಧಾನಸಭೆ ಚುನಾವಣೆಗೆ ಮೂರು ವರ್ಷವಿದೆ. ಪಕ್ಷವನ್ನು ಕಟ್ಟುವುದು ಮತ್ತು ಅದರಲ್ಲಿ ಹುದುಗಿರುವ ಬೇಗುದಿಯನ್ನು ಹತ್ತಿಕ್ಕುವುದು ಸದ್ಯಕ್ಕೆ ಮಾತ್ರವಲ್ಲ, ಮುಂದಿನ ಮೂರು ವರ್ಷಗಳ ಸವಾಲು ಕೂಡ ಆಗಿದೆ.