-ವರದಿ, ಚಿತ್ರಗಳು: ಸೋಮಶೇಖರ ಗೌಡ
ಧರ್ಮಸ್ಥಳ/ಕುಕ್ಕೆ ಸುಬ್ರಮಣ್ಯ:
ಮಳೆಗಾಲದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಟೂರ್ ಮಾಡುವುದು ಬಹಳ ಮಜವಾಗಿರುತ್ತದೆ. ಅದರಲ್ಲೂ ಕೆಲವರು ಇದೇ ವೇಳೆ ಟೆಂಪಲ್ ಟ್ರಾವೆಲ್ ಮಾಡುತ್ತಾರೆ. ಸೋನೆ ಮಳೆ ಮತ್ತು ತಣ್ಣನೆಯ ವಾತಾವರಣದಲ್ಲಿದೇವರ ದರ್ಶನ ಮಾಡುವುದು ಹಿತವಾಗಿರುತ್ತದೆ ಎಂದು ಭಕ್ತರು ಹೇಳಿದ್ದಾರೆ.
ಕೋವಿಡ್ 19 ರಾಜ್ಯಾದ್ಯಂತ ತಾಂಡವವಾಡುತ್ತಿದ್ದರೂ ಭಕ್ತರು ಮಾತ್ರ ತಮ್ಮ ನೆಚ್ಚಿನ ದೇವರನ್ನು ಮೊರೆಹೋಗುತ್ತಿದ್ದಾರೆ. ಈ ಸೋಂಕಿನ ಕಾಯಿಲೆ ಹೊತ್ತಿನಲ್ಲಿ ಪುಣ್ಯಕ್ಷೇತ್ರಗಳಿಗೆ ಏಕೆ ಹೋದಿರಿ ಅಂತ ಕೇಳಿದರೆ, “ಹೋಗಬೇಕು ಅನಿಸಿತು. ಹೋದೆವು. ಮನಸ್ಸಿಗೆ ತೃಪ್ತಿಯಾಗುವಷ್ಟು ದರ್ಶನವಾಯಿತು” ಎಂದು ತಿಳಿಸಿದರು.
ಈ ಸೀಸನ್ನಿನಲ್ಲಿ ಯಾತ್ರಿಕರು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಸೌತಡ್ಕ, ಶೃಂಗೇರಿ, ಹೊರನಾಡು, ಕೊಲ್ಲೂರು, ಉಡುಪಿ ಮುಂತಾದ ದೈವತಾಣಗಳ ಕಡೆ ಹೋಗುವುದು ಹೆಚ್ಚು.
ದೈವದ ಜತೆಗೆ ಪ್ರಕೃತಿಯ ಪೂಜೆ:
ಮಳೆಗಾಲ ಆರಂಭವಾಗಿರುವ ಕಾರಣಕ್ಕೆ ಮಲೆನಾಡು ಮತ್ತು ಕರಾವಳಿ ಭಾಗದ ದೇಗುಲಗಳತ್ತ ಬೆಂಗಳೂರು ಮತ್ತಿತರೆ ಕಡೆಯಿಂದ ಭಕ್ತರು ದೇಗುಲಗಳತ್ತ ಹೆಚ್ಚೆಚ್ಚು ಧಾವಿಸುತ್ತಿದ್ದಾರೆ. ಮುಖ್ಯವಾಗಿ ಭಕ್ತರ ಸಂದಣಿ ಇರುವುದಿಲ್ಲ ಹಾಗೂ ಪ್ರಕೃತಿಯ ಸೊಬಗು ಸವಿಯಬೇಕಾದರೆ ಇದೇ ಸುಸಮಯ ಎಂಬುದು ಯಾತ್ರಿಕರು ನೀಡುವ ಕಾರಣ.
ಬುಧವಾರವಷ್ಟೇ ಧರ್ಮಸ್ಥಳ, ಸೌತಡ್ಕ ಮತ್ತು ಕುಕ್ಕೆಗೆ ಹೋಗಿಬಂದ ಹಿರಿಯ ಪತ್ರಕರ್ತ ಗುರು ಪ್ರಸಾದ್ ಹೇಳಿದ್ದು ಇಷ್ಟು.. “ದೇವರ ದರ್ಶನಕ್ಕೆ ಇದು ಸರಿಯಾದ ಸಮಯ. ಮಳೆಗಾಲ, ಎಲ್ಲಿ ನೋಡಿದರೂ ಮಳೆ, ಇಳೆ ತುಂಬಾ ನೀರು. ಪ್ರಕೃತಿ ನಿತ್ಯಹಸಿರಿಗೆ ಮತ್ತಷ್ಟು ಮೆರಗು ಬರುವ ಕಾಲವಿದು. ಆ ಸೋನೆ ಮಳೆಯಲ್ಲಿ ತೊಯ್ದು ದೇವರ ದರ್ಶನ ಮಾಡುವುದರಲ್ಲಿ ಅದೊಂದು ರೀತಿಯ ಆನಂದವಿದೆ. ಕೋವಿಡ್ ಇಲ್ಲದಿದ್ದರೆ ಇಡೀ ರಾಜ್ಯದ ದೇವಾಲಯಗಳನ್ನು ಒಂದು ಸುತ್ತು ಹಾಕುವ ಆಸೆ ಇತ್ತು” ಎಂದು ಹೇಳುತ್ತಾರೆ.
ಧರ್ಮಸ್ಥಳ ಹೇಗಿದೆ?:
ಈ ವಾತಾವರಣದಲ್ಲಿ ಧರ್ಮಸ್ಥಳ ಬಹಳ ಸೊಗಸಾಗಿದೆ. ವಿರಳ ಜನ ಸಾಂದ್ರತೆಯಿಂದ ದೇವರ ದರ್ಶನ ಅರ್ಧ ಗಂಟೆಯಲ್ಲಿ ಆಯಿತು. ಬೀದಿಗಳು, ರಸ್ತೆಗಳು ಖಾಲಿ ಖಾಲಿ. ಕಡಿಮೆ ಹೋಟೆಲ್, ಅಂಗಡಿಗಳು ತೆರೆದಿದ್ದವು. ದೇಗುಲದಲ್ಲಿ ಸ್ವಾಮಿಯ ಪ್ರಸಾದ ಸಿಗುತ್ತಿತ್ತಾದರೂ, ಅನ್ನಪೂರ್ಣ ಭೋಜನ ಶಾಲೆಯನ್ನು ಮುಚ್ಚಲಾಗಿತ್ತು. ಹಾಗೆಯೇ ಬಹುತೇಕ ಎಲ್ಲ ವಸತಿ ಗೃಹಗೃಹಗಳು ಖಾಲಿ ಇದ್ದವು. ನೇತ್ರಾವತಿಯಲ್ಲಿ ಸಮೃದ್ಧ ನೀರಿದ್ದರೂ ಸ್ನಾನದ ಘಟ್ಟಗಳಲ್ಲಿ ಭಕ್ತರ ದಟ್ಟಣಿ ಕಂಡುಬರಲಿಲ್ಲ. ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿತ್ತು ಹಾಗೂ ಸಾಮಾಜಿಕ ಅಂತರ ಪಾಲಿಬೇಕಾಗಿತ್ತು. ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕೋವಿಡ್ ಬಗ್ಗೆ ಎಲ್ಲ ರೀತಿಯ ಕಟ್ಟೆಚ್ಚರಗಳನ್ನು ವಹಿಸಲಾಗಿತ್ತು. ದರ್ಶನ ಮುಗಿದ ನಂತರ ಜನರು ತಮ್ಮ ಊರುಗಳಿಗೆ ತಡಮಾಡದೇ ಹೊರಡುತ್ತಿದ್ದರು ಎಂದು ಚಿಕ್ಕಬಳ್ಳಾಪುರದ ಸೋಮಶೇಖರ್ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಿಳಿಸಿದರು.
ಕುಕ್ಕೆಯಲ್ಲೂ ಇದೇ ನೋಟ:
ಪ್ರತಿದಿನವೂ ಸಾವಿರಾರು ಭಕ್ತರು ಭೇಟಿ ನೀಡುವ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲೂ ಭಕ್ತರು ವಿರಳವಾಗಿದ್ದರು. ಮಳೆಯ ಕಾರಣಕ್ಕೆ ಕಉಮಾರಧಾರ ನದಿಯಲ್ಲಿ ನೀರು ಚೆನ್ನಾಗಿದೆ. ಆದರೆ ಸ್ನಾನಘಟ್ಟಗಳಲ್ಲಿ ಭಕ್ಕರು ವಿರಳವಾಗಿದ್ದರು. ಕೆಲ ಭಕ್ತರು ಸುರಿಯುವ ಮಳೆಯಲ್ಲೇ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದರು. ನಾವೂ ಮಾಡಿದೆವು ಎಂದು ಅವರು ಮಾಹಿತಿ ನೀಡಿದರು.
ಇನ್ನು ಹತ್ತೇ ನಿಮಿಷದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವಾಯಿತು. ಅಲ್ಲಿಯೂ ದೇವರ ಪ್ರಸಾದ ವಿನಿಯೋಗವಾಗುತ್ತಿದ್ದು, ಭೋಜನ ಶಾಲೆಯನ್ನು ಬಂದ್ ಮಾಡಲಾಗಿದೆ. ದೇಗುಲದಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಇದೇ ವೇಳೆ ಕುಕ್ಕೆ ದೇಗುಲದ ಮುಂದಿನ ರಾಜಬೀದಿಯ ಅಗಲೀಕರಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ತಿಳಿಸಿದರು
ಭಕ್ತರು ವಿರಳ:
ಕೋವಿಡ್ ಕಾರಣಕ್ಕೆ ಮತ್ತೆ ಲಾಕ್ ಡೌನ್ ಅಗುತ್ತದೆ ಎಂಬ ಆತಂಕವೂ ಭಕ್ತರನ್ನು ಕಾಡುತ್ತಿದೆ. ಹೀಗಾಗಿ ಮತ್ತೆ ದೇಗುಲಗಳನ್ನು ಮುಚ್ಚಿದರೆ ಮತ್ತೆ ಯವಾಗ ತೆರೆಯುತ್ತಾರೋ ಗೊತ್ತಿಲ್ಲ. ಹೀಗಾಗಿ ಒಮ್ಮೆ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯುವ ಇಚ್ಚೆಯಾಯಿತು. ಏನಾದರಾಗಲಿ ಎಂದು ಬುಧವಾರ ರಾತ್ರಿ ಧರ್ಮಸ್ಥಳಕ್ಕೆ ಬಂದು ಗುರುವಾರ ಬೆಳಗ್ಗೆ
ದೇವರ ದರ್ಶನ ಪಡೆದೆ. ನನ್ನ ಮನಸ್ಸಿಗೆ ಅವರ್ಣನೀಯ ಸಮಾಧಾನವಾಗಿದೆ ಎಂದು ಸೋಮಶೇಖರ್ ಮಾಹಿತಿ ನೀಡಿದರು.
ಕೆಲಸ ಹೋಯಿತು, ದೇವರು ನೆನಪಾದರು:
ಕೋವಿಡ್ ಬಿಕ್ಕಟ್ಟಿನಿಂದ ನನ್ನ ಕೆಲಸ ಹೋಯಿತು ಎನ್ನುವ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿ ಹೇಮಾ ಅವರು, “ಜೀವನ ಕಷ್ಟವಾಗಿದೆ. ಸಂಬಳ ಬರುತ್ತಿಲ್ಲ. ನಮ್ಮ ಖಾಸಗಿ ಶಾಲೆಯಲ್ಲಿ ಕಳೆದ ಮೂರು ತಿಂಗಳಿಂದ ಅರ್ಧ ವೇತನ ನೀಡುತ್ತಿದ್ದಾರೆ. ನನ್ನ ಪತಿಯ ಕೆಲಸವೂ ಹೋಗಿದೆ. ಮಕ್ಕಳ ಫೀಸು ಕಟ್ಟಬೇಕು. ಮುಂದಿನ ಭವಿಷ್ಯ ಹೇಗಪ್ಪ ಎನ್ನುವಂತಾಗಿದೆ. ಅದಕ್ಕೆ ಈ ಕೊರೋನ ಬೇಗ ಕೊನೆಗಾಣಲಿ ಎಂದು ಎಂದು ಪ್ರಾರ್ಥಿಸಲು ಧರ್ಮಸ್ಥಳಕ್ಕೆ ಬಂದಿದ್ದೇನೆ” ಎಂದು ತಿಳಿಸಿದರು.
ಭಕ್ತರೇನು ಮಾಡಬೇಕು?:
*ಆದಷ್ಟು ಜನರು ತಮ್ಮ ಮನೆಗಳಲ್ಲಿಯೇ ಉಳಿದರೆ ಮೇಲು
*ಕೋವಿಡ್ ನಿಯಂತ್ರಣ ಮೀರಿ ವ್ಯಾಪಿಸುತ್ತಿರುವ ಕಾರಣ ಪ್ರವಾಸ ಒಳ್ಳೆಯದಲ್ಲ
*ಪ್ರಯಾಣದ ವೇಳೆ ಅಥವಾ ದೇಗುಲಗಳ ಬಳಿ ಸೋಕಿತರು ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು
*ಮಳೆಗಾಲ, ಜತೆಗೆ ವಾತಾವರಣ ಶೀತವಾಗಿರುವ ಕಾರಣಕ್ಕೆ ಜನ ರಿಸ್ಕ್ ತೆಗೆದುಕೊಳ್ಳದಿರುವುದೇ ಮೇಲು
*ಪೂಜೆ ಪುನಸ್ಕಾರಗಳನ್ನು ಮನೆಗೆ ಸೀಮಿತಗೊಳಿಕೊಂಡರೆ ಉತ್ತಮ