ಬೆಂಗಳೂರು: ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆ ನಿರ್ಮಿಸಿದ ಬೆಂಗಳೂರು ಮಹಾನಗರ, ಶನಿವಾರ ಐತಿಹಾಸಿಕ ಮತ್ತು ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು.
ನಾಡಪ್ರಭುಗಳ 511ನೇ ಜಯಂತಿ ಅಂಗವಾಗಿ ಸರಳ, ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮದಲ್ಲಿ ಅಖಂಡ ವೇದ ಮಂತ್ರಘೋಷಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ವಿಧ್ಯುಕ್ತವಾಗಿ ಭೂಮಿಪೂಜೆ ನೆರವೇರಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಶ್ರೀಗಳು, ವಿಶ್ವ ಒಕ್ಕಲಿಗರ ಪೀಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾದಾರ ಚೆನ್ನಯ್ಯ ಶ್ರೀಗಳು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂತಾದವರು ಮುಖ್ಯಮಂತ್ರಿಗಳ ಜತೆ ಭೂಮಿಪೂಜೆಯಲ್ಲಿ ಪಾಲ್ಗೊಂಡು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದ ದೃಶ್ಯವು ನಾಡಿನ ಗಮನ ಸೆಳೆಯಿತು.
ಈ ಕಾರ್ಯಕ್ರಮ ಆನ್‌ಲೈನ್ ನಲ್ಲಿ ನೇರ ಪ್ರಸಾರವಾಗಿ ಲಕ್ಷಾಂತರ ಕನ್ನಡಿಗರು ತಾವಿದ್ದ ಸ್ಥಳದಲ್ಲಿಯೇ ಆ ಸುಂದರ ಕ್ಷಣಗಳನ್ನುಕಣ್ತುಂಬಿಕೊಂಡರಲ್ಲದೆ, ನಾಡಪ್ರಭುವಿಗೆ ಇದ್ದಲ್ಲಿಂದಲೇ ನಮನ ಸಲ್ಲಿಸಿದರು. ಶಾಸಕರು, ಸಂಸದರು ಮತ್ತು ರಾಜ್ಯದ ಕೇಂದ್ರ ಸಚಿವರು ಕೂಡ ದೂರದಿಂದಲೇ ಕಣ್ತುಂಬಿಕೊಂಡರು.
ಮನಮುಟ್ಟಿದ ಭೂಮಿಪೂಜೆ:
ಮುಖ್ಯವಾಗಿ ಭೂಮಿಪೂಜೆ ಎಲ್ಲರ ಮನಸೂರೆಗೊಂಡಿತು. ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಮಸ್ತ ಪೂಜಾ ಕೈಂಕರ್ಯವನ್ನು ಸಾಂಗೋಪಾಂಗವಾಗಿ ನೆರೆವೇರಿಸಲು ಮುಂದೆ ನಿಂತು ಮಾರ್ಗದರ್ಶನ ನೀಡಿದರಲ್ಲದೆ, ಇತರೆ ಎಲ್ಲ ಶ್ರೀಗಳೂ ಭಾಗಿಯಾಗಿ ಶುಭಹಾರೈಸಿದರು. ಇವರೆಲ್ಲರೂ ಹಾರೆ-ಗುದ್ದಲಿ ಹಿಡಿದು ಒಟ್ಟಾಗಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಯೋಜನೆ ಯಶಸ್ವಿಯಾಗಿ ಮುಗಿಯಲಿ ಎಂದು ಪ್ರಾರ್ಥಿಸಿದರು.
ಮೇಲೆದ್ದು ಬಂದ ಕೆಂಪೇಗೌಡರು:
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಂಪೇಗೌಡರ ಮಾದರಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಭೂಗರ್ಭದಿಂದ ಮೇಲೆದ್ದು ಬರುವಂತೆ ಅನಾವರಣ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿತ್ತು. ಸಿಎಂ ತಮ್ಮ ಕೈಯ್ಯಲ್ಲಿದ್ದ ಬಟನ್ ಒತ್ತಿದ ಕೂಡಲೇ ಮೇಲೆದ್ದು ಬಂದ ನಾಡಪ್ರಭುಗಳ ತೇಜೋಪ್ರಭೆಯ ವಿರಾಜಮಾನ ಪ್ರತಿಮೆಯನ್ನು ಕಂಡು ಪ್ರತಿಯೊಬ್ಬರೂ ಪುಳಕಿತರಾದರು. ನೆರೆದಿದ್ದ ಎಲ್ಲ ಗಣ್ಯರು ಆ ಕ್ಷಣ ಮೈಮರೆತರಲ್ಲದೆ, ನಾಡಪ್ರಭುವಿಗೆ ಮೌನ ನಮನ ಸಲ್ಲಿಸಿದರು. ಎಲ್ಲೆಲ್ಲೂ ಕೆಂಪೇಗೌಡರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ನೆರೆದಿದ್ದ ಗಣ್ಯರೆಲ್ಲರೂ ಮಾದರಿ ಪ್ರತಿಮೆ ಅದ್ಭುತವಾಗಿದೆ ಎಂದು ಕೊಂಡಾಡಿದರು.
ನಾಡಪ್ರಭುಗಳ ದಾರಿಯಲ್ಲೇ ನಮ್ಮ ಹೆಜ್ಜೆ: ಸಿಎಂ
ಐದು ಶತಮಾನಗಳ ಹಿಂದೆ ವೈಜ್ಞಾನಿಕವಾಗಿ ಬೆಂಗಳೂರು ಮಹಾನಗರವನ್ನು ಕಟ್ಟಿದ ಕೆಂಪೇಗೌಡರಿಗೆ ಈ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದಕ್ಕೆ ಖುಷಿಯಾಗಿದೆ. ಒಂದು ವರ್ಷದಲ್ಲಿಯೇ ಈ ಯೋಜನೆಯನ್ನು ಮುಗಿಸಿ ಲೋಕಾರ್ಪಣೆ ಮಾಡಲಾಗುವುದು. ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಸರಕಾರ ಮುಂದೆ ನಿಂತು ಮಾಡಲಿದೆ ಎಂದು ಯಡಿಯೂರಪ್ಪ ಹೇಳಿದರು.
ಬೆಂಗಳೂರು ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾಲಿನ್ಯ ನಿಯಂತ್ರಣ, ಸಂಚಾರ ದಟ್ಟಣಿ ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುವುದು. ಜತೆಗೆ, ನಾಡಪ್ರಭುಗಳ ಪರಿಕಲ್ಪನೆಯಂತೆ ಇಡೀ ನಗರವನ್ನು ಮತ್ತಷ್ಟು ಉತ್ತಮಪಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರಲ್ಲದೆ, ಇವೆಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಅಭಿನಂದಿಸಿದರು.
ಇದು ಮಹತ್ಕಾರ್ಯ ಎಂದ ಗೌಡರು:
ಪ್ರತಿಮೆ ಸ್ಥಾಪನೆ, ಸೆಂಟ್ರಲ್ ಪಾರ್ಕ್ ನಿರ್ಮಾಣ ಕೆಂಪೇಗೌಡರ ಹೆಸರಿನಲ್ಲಿ ಆಗುತ್ತಿರುವ ಮಹತ್ಕಾರ್ಯಗಳು ಎಂದು ಶ್ಲಾಘಿಸಿದ ಮಾಜಿ ಪ್ರಧಾನಿ ದೇವೇಗೌಡರು, ಸರಕಾರವನ್ನು ಮುಕ್ತಕಂಠದಿಂದ ಹಾಡಿಹೊಗಳಿದರು. ಜತೆಗೆ, ಪಕ್ಷಾತೀತವಾಗಿ ಇಷ್ಟೆಲ್ಲ ನಾಯಕರು, ಸ್ವಾಮೀಜಿಗಳೆಲ್ಲರೂ ಇಲ್ಲಿ ಸೇರಿರುವುದಕ್ಕೆ ಬಹಳ ಸಂತೋಷವಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿ ನಮ್ಮ ಕಾಲದಲ್ಲಿಯೇ ಉದ್ಘಾಟನೆಯೂ ಅಗಬೇಕು ಎಂದು ಅವರು ಆಶಿಸಿದರು.
ಶ್ಲಾಘನೀಯ ಕಾರ್ಯ ಎಂದ ಡಿಕೆಶಿ:
ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಂಥ ಮಹಾನ್ ನಾಯಕನಿಗೆ ಸಲ್ಲುತ್ತಿರುವ ಗೌರವದ ವೇಳೆ ದೇವನಹಳ್ಳಿ ಸುತ್ತಮುತ್ತಲಿನ ರೈತರನ್ನು ಸ್ಮರಿಸಲೇಬೇಕು. ಆ ದಿನ ಅವರೆಲ್ಲರೂ ಕಡಿಮೆ ಮೊತ್ತಕ್ಕೆ ಭೂಮಿ ನೀಡದಿದ್ದರೆ ಈ ವಿಮಾನ ನಿಲ್ದಾಣವೇ ಬರುತ್ತಿರಲಿಲ್ಲ ಎಂದರು.
ಮೆಚ್ಚುಗೆಗೆ ಪಾತ್ರವಾದ ಕಾರ್ಯಕ್ರಮ:
ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿತ್ತು. ಕಡಿಮೆ ಜನರಿಗೆ ಆಹ್ವಾನ ನೀಡಿದ್ದರಿಂದ ಹೆಚ್ಚು ಜನದಟ್ಟಣಿ ಉಂಟಾಗಲಿಲ್ಲ. ಭಾಷಣಗಳ ಬೋರ್ಗರೆತ ಇರಲಿಲ್ಲ. ಭೂಮಿ ಪೂಜೆ ಮತ್ತು ಮಾದರಿ ಪ್ರತಿಮೆ ಅನಾವರಣಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಅಭಿನಂದಿಸಿದರು.
ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಕೆ.ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು, ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ, ಸಂಸದರಾದ ಡಿ.ಕೆ.ಸುರೇಶ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ, ಬಿಬಿಎಂಪಿ ಮೇಯರ್ ಎಂ.ಗೌತಮ ಕುಮಾರ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಟರಾದ ಪುನೀತ್ ರಾಜ್‌ಕುಮಾರ್, ಜಗ್ಗೇಶ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
**
ಹೃದಯ ತುಂಬಿಬಂದಿದೆ ಎಂದ ಡಿಸಿಎಂ:
108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಮತ್ತು ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕಾಗಿ ಶನಿವಾರ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ನಾಯಕರು, ಸ್ವಾಮೀಜಿಗಳೆಲ್ಲರೂ ಧರ್ಮಾತೀತ ಮತ್ತು ಜಾತ್ಯತೀತವಾಗಿ ಭಾಗಿಯಾಗಿದ್ದನ್ನು ಕಂಡು ನನ್ನ ಹೃದಯ ತುಂಬಿಬಂದಿದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ ಎಂದು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಭೂಮಿಪೂಜೆ ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹುದಿನಗಳ ಕನಸು ನನಸಾಗುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಾಡಪ್ರಭುಗಳ ಹೆಸರನ್ನು ನಾಮಕರಣ ಮಾಡಿದ ನಂತರ ಇದೇ ನಿಲ್ದಾಣದ ಮುಂದೆ ಇಷ್ಟು ವಿಶಾಲವಾದ ಜಾಗದಲ್ಲಿ ನಾಡಪ್ರಭುಗಳ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಈ ಕ್ಷಣದಲ್ಲಿ ನಾನು ಭಾವುಕನಾಗಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ವರ್ಚುವಲ್ ಲಿಂಕ್ ಮೂಲಕ ಲಕ್ಷಾಂತರ ಜನರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಇದು ನನ್ನ ಪಾಲಿಗೆ ಪುಣ್ಯಕ್ಷಣ. ನಾಡಪ್ರಭುಗಳ ಆಳಿದ, ಜೀವಿಸಿದ್ದ ಪುಣ್ಯಭೂಮಿಯಲ್ಲಿ ಇದ್ದೇವೆ. 500 ವರ್ಷಗಳ ಹಿಂದೆ ತಮ್ಮ ದಾರ್ಶನಿಕತೆಯಿಂದ ನಮ್ಮ ರಾಜ್ಯಕ್ಕೆ ಸುಸಜ್ಜಿತ ರಾಜಧಾನಿ ಕಟ್ಟಿಕೊಟ್ಟ ಕೆಂಪೇಗೌಡರು ಓರ್ವ ನಗರ ನಿರ್ಮಾತೃವಾಗಿ ಮಾತ್ರವಲ್ಲ, ಆಡಳಿತಗಾರರಾಗಿ, ಜನಪರ ಪಾಳೆಯಗಾರರಾಗಿ ಅದೆಷ್ಟೋ ಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ. ಅವರು ಪ್ರಖರ ದೂರದೃಷ್ಟಿಯವರು, ಅಪ್ರತಿಮ ಆಡಳಿತಗಾರರೂ ಆಗಿದ್ದ ಅವರು ಪ್ರಜೆಗಳ ಪ್ರಭುಗಳಾಗಿದ್ದರು. ಜತೆಗೆ, ಅವರು ನಮ್ಮ ಬೆಂಗಳೂರಿನ ಆಸ್ಮಿತೆ. ನಮ್ಮ ಸ್ಫೂರ್ತಿ. ಅವರು ಹಾಕಿಕೊಟ್ಟ ಅಭಿವೃದ್ಧಿ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಮುಂದಿನ ತಲೆಮಾರುಗಳಿಗೆ ಅವರನ್ನು ಪರಿಚಯಿಸಿ ಅವರ ಸಾಧನೆಗಳನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಸರಕಾರದ ಬಹುದೊಡ್ಡ ಕನಸು. ಇಡೀ ಸ್ಮಾರಕವನ್ನು ಕೆಂಪೇಗೌಡರ ಆಶಯ, ನಾಡಿನ ಬಯಕೆಗೆ ತಕ್ಕಂತೆ ವ್ಯಾಪಕವಾಗಿ ಸಂಶೋಧನೆ ನಡೆಸಿ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.