ಕಾಂಗ್ರೆಸ್, ಜೆಡಿಎಸ್ಸಿನಲ್ಲಿ ಅಪಮಾನವಾಗಿದೆ, ಬಿಜೆಪಿಯಲ್ಲೂ ಹಾಗೇ ಆದರೆ ಸೀದಾ ಮನೆಗೆ ಹೋಗುತ್ತೇನೆ: ಅಡಗೂರು ವಿಶ್ವನಾಥ್
ಅಡಗೂರು ವಿಶ್ವನಾಥ್ ಮತ್ತೆ ಬರೆಯುತ್ತಿದ್ದಾರೆ. ರಾಜಕೀಯದ ಕಷ್ಟಕಾಲದಲ್ಲಿರುವ ಅವರಿಗೆ ತಾವು ನಂಬಿದ ಅಕ್ಷರಗಳೇ ಅವರಿಗೆ ಸಾಂತ್ವನ ಹೇಳುತ್ತಿವೆ. ಅವರು ಮತ್ತೊಂದು ಪುಸ್ತಕ ಬರೆಯುತ್ತಿದ್ದಾರೆ ಎಂಬ ಸಂಗತಿ ಕೆಲವರನ್ನಂತೂ ತುದಿಗಾಲ ಮೇಲೆ ನಿಲ್ಲಿಸಿದೆ. ಇನ್ನು ಕೆಲವರಿಗೆ, ಯಾವ ಪುಟದಲ್ಲಿ ತಮ್ಮ ಪಟ ಬಿಚ್ಚಿಕೊಳ್ಳಲಿದದೆಯೋ ಎಂಬ ಆತಂಕವೂ ಇದೆ. ಇದಾವುದರ ಗೊಡವೆಯೇ ಇಲ್ಲದೆ ಅಡಗೂರು ಮಾತ್ರ ಬಾಂಬೇ ಡೇಸ್ ನೈಜಕಥೆಗೆ ಅಕ್ಷರ ರೂಪ ಕೊಡುತ್ತಿದ್ದಾರೆ. ಜಸ್ವ್, ವೇಯ್ಟ್ ಅಂಡ್ ಸೀ…, ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದ್ದಾರೆ.
Q:ಎಲ್ಲರೂ ಹೇಳ್ತಾ ಇದ್ದಾರೆ. ನೀವು ಹಣ ಮತ್ತು ಅಧಿಕಾರಕ್ಕಾಗಿಯೇ ಬಿಜೆಪಿಗೆ ಹೋದ್ರಿ ಅಂತ. ಈಗ ನಾನೂ ಕೇಳ್ತಾ ಇದ್ದೇನೆ. ನಿಮ್ಮ ಅಂತರಾತ್ಮವನ್ನು ಕೇಳಿ ಸತ್ಯ ಹೇಳಿ..
A: ನನ್ನಅಂತರಾತ್ಮವನ್ನು ಕೇಳಿಯೇ ಆತ್ಮಸಾಕ್ಷಿಯಾಗಿ ಹೇಳ್ತೇನೆ ನೋಡಿ. ನಾನು ಅಥವಾ ನನ್ನ ಜತೆ ಬಂದ ಇತರೆ ಯಾರೇ ಆಗಲಿ ಹಣಕ್ಕಾಗಿಯೋ ಅಥವಾ ಅಧಿಕಾರಕ್ಕಾಗಿಯೋ ಬಿಜೆಪಿಗೆ ಹೋದವರಲ್ಲ. ನಾವಿದ್ದ ಪಕ್ಷದಲ್ಲಿಅನುಭವಿಸಿದ ಯಾತನೆ, ನೋವು, ಸಂಕಟವೇ ಈ ನಿರ್ಧಾರಕ್ಕೆ ಬರಲು ಕಾರಣ. ನನ್ನ ಮಟ್ಟಿಗೆ ಹೇಳುವುದಾದರೆ, ಇದ್ದ ಅಧಿಕಾರವನ್ನು ಬಿಟ್ಟು ಹೋದವನು ನಾನು. ಶಾಸಕ ಸ್ಥಾನ ಮತ್ತು ಪಕ್ಷದ ಅಧ್ಯಕ್ಷ ಸ್ಥಾನವನ್ನು ಸ್ವಾಭಿಮಾನಕ್ಕಾಗಿ ತ್ಯಜಿಸಿದೆ. ಜೆಡಿಎಸ್ ತಾನು ನಂಬಿದ್ದ ಸಿದ್ದಾಂತ, ತತ್ತ್ವಗಳನ್ನು ಗಾಳಿಗೆ ತೂರಿದ್ದು ಇನ್ನೊಂದು ಬೇಸರ. ಅದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಇದರಲ್ಲಿ ಲವಲೇಷದಷ್ಟು ಅನುಮಾನ ಬೇಡ ನಿಮಗೆ.
Q: ಅಪಮಾನ ಅಂದ್ರಿ. ಯಾವ ರೀತಿಯ ಅಪಮಾನ? ಮಾಡಿದವರು ಯಾರು?
A: ಎಚ್.ಡಿ. ಕುಮಾರಸ್ವಾಮಿ. ಆ ಸಂದರ್ಭದಲ್ಲಿ ನಾನು ಉಸಿರುಗಟ್ಟುವ ವಾತಾವರಣದಲ್ಲಿದ್ದೆ ಎಂಬುದು ನಿಜ. ಆಡಳಿತ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಖ್ಯಮಂತ್ರಿ ಯನ್ನುನೋಡಬೇಕಾದರೆ ನಾನು ಎಲ್ಲಿಗೆ ಹೋಗಬೇಕು ಸ್ವಾಮಿ? ವಿಧಾನಸೌಧದ 3ನೇ ಮಹಡಿಗೆ ಹೋಗಬೇಕು ಅಥವಾ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾಗೆ, ಇಲ್ಲವೇ ಮುಖ್ಯಮಂತ್ರಿ ಅಧಿಕೃತ ನಿವಾಸ ಅನುಗ್ರಹಕ್ಕೆ ಹೋಗಬೇಕು. ಅದೂ ಇಲ್ಲದಿದ್ದರೆ ಮುಖ್ಯಮಂತ್ರಿ ಗೊಂದು ಖಾಸಗಿ ನಿವಾಸ ಅಥವಾ ಮನೆ ಅಂತ ಇರುತ್ತದಲ್ಲ, ಅಲ್ಲಿಗಾದರೂ ಹೋಗಬೇಕು. ಆದರೆ, ನಾನು ಫೈವ್’ಸ್ಟಾರ್ ಹೋಟೆಲ್ ಬಾಗಿಲು ಕಾಯಬೇಕಾಗಿತ್ತು. ವೆಸ್ಟ್ ಎಂಡ್ ಹೋಟೆಲಿನ ಮುಂದೆ ಕೈಕಟ್ಟಿ ನಿಲ್ಲಬೇಕಾಗಿತ್ತು. ಹೊಸ ಶಾಸಕರು ಅಹವಾಲು ತೆಗೆದುಕೊಂಡು ನನ್ನ ಬಳಿ ಬರುತ್ತಿದ್ದರೆ, ಅವರ ಪರವಾಗಿ ಹೋಗಿ ನಾನು ಬಾಗಿಲು ಕಾಯಬೇಕಿತ್ತು. ನಾನೆಲ್ಲಿ ಮುಖ್ಯಮಂತ್ರಿಯನ್ನು ಹುಡುಕಲಿ? ಜನ ನೋಡಿದವರು ಏನಂತಾರೆ? ಕಾಂಗ್ರೆಸ್ ನಮ್ಮ ಜತೆ ಅಧಿಕಾರ ಹಂಚಿಕೊಂಡಿತ್ತು, ಆ ಪಕ್ಷದ ನಾಯಕರು ಏನು ತಿಳಿದುಕೊಳ್ತಾರೆ? ಜನರಿಗೆ ನೀಡುವ ಸಂದೇಶವಾದರೂ ಏನು? ಇದೆಲ್ಲ ನನಗೆ ಅಸಹ್ಯ, ಬೇಸರ ತರಿಸಿತ್ತು. ಅವರ ತಂದೆ ದೇವೇಗೌಡರಿಗೂ ಈ ಬಗ್ಗೆ ಬೇಸರವಿತ್ತು. ಕೆಲ ಎಮ್ಮೆಲ್ಲೆಗಳು ತಮ್ಮ ಮಗನನ್ನು ಹಾಳು ಮಾಡುತ್ತಿದ್ದಾರೆ ಎಂಬ ಭಾವನೆ ಇತ್ತು ಅವರಿಗೆ.
Q: ನಿಮಗೆ ಈ ರೀತಿಯ ಅನುಭವ ಆಯಿತಾ? ಎಲ್ಲಿ?
A: ಹೌದು. ಅಂಥ ಕೆಟ್ಟ ಅನುಭವ ಆಗಿದ್ದಕ್ಕೆ ನಾನು ಜಾತ್ಯತೀತ ಜನತಾ ದಳ ಬಿಟ್ಟು ಹೊರಬಂದೆ. ಒಂದು ದಿನ ನಾನು ವೆಸ್ಟ್ ಎಂಡ್ ಹೋಟೆಲಿನ ಮುಂದೆ ಮುಖ್ಯಮಂತ್ರಿಗಾಗಿ ಒಂದೂವರೆ ಗಂಟೆ ಕಾದೆ. ಅಷ್ಟೊತ್ತಾದ ಮೇಲೆ ಬಾಗಿಲು ತೆರೆದು ಒಬ್ಬ ಬಂದು ನನ್ನನ್ನು ಒಳಕ್ಕೆ ಕರೆದುಕೊಂಡು ಹೋದ. ಹಾಗೆ ಕರೆದುಕೊಂಡು ಹೋಗಲಿಕ್ಕೆಂದೇ ಒಬ್ಬನಿದ್ದ. ಮೊದಲೇ ಕುದಿಯುತ್ತಿದ್ದ ನಾನು ಇಷ್ಟವಿಲ್ಲದಿದ್ರೂ ಒಳಗೆ ಹೋದೆ. ನಾನು ನೇರವಾಗಿ ಕುಮಾರಸ್ವಾಮಿಗೇ ಹೇಳಿಬಿಟ್ಟೆ. ’ನೀವು ಇರುವ ಜಾಗ ಇದಲ್ಲ. ಅನುಗ್ರಹ, ಕೃಷ್ಣಅಥವಾ ನಿಮ್ಮದೇ ಮನೆಯಲ್ಲಿ ಆದರೂ ಇರಬೇಕು. ಅದು ಬಿಟ್ಟರೆ ವಿಧಾನಸೌಧದಲ್ಲಿ ಇರಬೇಕು. ಅದುಬಿಟ್ಟು ಹೀಗೆ ಫೈವ್’ಸ್ವಾರ್ ಹೋಟೆಲಿನಲ್ಲಿದ್ದರೆ ಹೇಗೆ” ಎಂದು ಖಾರವಾಗಿ ಕೇಳಿಯೇಬಿಟ್ಟೆ. ಅವರಿಗೆ ಹರ್ಟ್ ಆಯಿತು. ನನ್ನ ಮಾತಿಗೆ ಪ್ರತಿಯಾಗಿ ಕುಮಾರಸ್ವಾಮಿ ನನ್ನನ್ನು ಒಂದು ಮಾತು ಅಂದುಬಿಟ್ಟರು. ನೀವು ನನ್ನ ಋಣದಲ್ಲಿ ಇದ್ದೀರಿ ಅಂತ ಮಾತು ಜಾರಿಬಿಟ್ಟರು. ನಾನು ತಕ್ಷಣ ಪ್ರತ್ಯುತ್ತರ ಕೊಟ್ಟೆ. ನಾನು ಖಂಡಿತಾ ನಿಮ್ಮ ಋಣದಲ್ಲಿ ಇಲ್ಲ. ನಿಮ್ಮ ತಂದೆಯವರ ಋಣದಲ್ಲಿ ಇರಬಹುದು. ಹುಣಸೂರು ಮತದಾರರ ಋಣದಲ್ಲಿ ಖಂಡಿತಾ ಇದ್ದೇನೆ ಅಂತ ಹೇಳಿ ಹೊರಬಂದೆ. ಆ ಮಾತನ್ನು ಒಳಗಿನಿಂದ ಹೇಳಿದ್ದೆ. ಅದರ ಬಗ್ಗೆ ಮತ್ತೆ ಯೋಚಿಸಲಿಲ್ಲ. ಅದೇ ಕೊನೆ, ಆವತ್ತಿನಿಂದ ಇವತ್ತಿನವರೆಗೂ ನಾನು ಅವರ ಮುಖ ನೋಡಿಲ್ಲ. ಇಷ್ಟು ಅಪಮಾನ ಆದ ಮೇಲೆ ಅವರ ಜತೆ ಇರುವುದಾರೂ ಹೇಗೆ? ಅವರ ಪಕ್ಷದ ಅಧ್ಯಕ್ಷನಾಗಿ ಹೇಗೆ ಮುಂದುವರೆಯಲಿ? ಅತ್ಯಂತ ನೋವು, ದುಃಖದಿಂದ ಜೆಡಿಎಸ್ ಬಿಡುವ ನಿರ್ಧಾರ ಮಾಡಬೇಕಾಯಿತು.
Q: ಸರಿ. ಅದಕ್ಕೂ ಹಿಂದೆ ಕಾಂಗ್ರೆಸ್ಸಿನಲ್ಲಿ ಏನಾಯಿತು? ಅಲ್ಲಿ ಯಾರು ನಿಮ್ಮನ್ನು ಅಪಮಾನಿಸಿದರು? ಆ ಪಕ್ಷ ಬಿಡಲು ಯಾರು ಕಾರಣವೇನು?
A: ಸಿದ್ದರಾಮಯ್ಯ ನೇರ ಕಾರಣ. ನನ್ನ ನಂಬಿಕೆ ಮತ್ತು ಭಾವನೆಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು ಅಲ್ಲಿಯೇ. ಕಾಂಗ್ರೆಸ್ಸಿನಲ್ಲಿ ರೋಷನ್ ಬೇಗ್ ಅವರಿಗೂ ಹೀಗೆಯೇ ಆಯಿತು. ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು. ಕೆಟ್ಟದಾಗಿ ನಡೆಸಿಕೊಂಡರು. ಅವರು ಹೇಳಿದ್ದಕ್ಕೆಲ್ಲ ವರಿಷ್ಠರು ಕುಣಿಯುತ್ತಿದ್ದರು. ಅವರ ನಂತರ ನನ್ನನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದರು. ಕೆ.ಸಿ. ವೇಣುಗೋಪಾಲ್ ಅವರ ಹೆಗಲ ಮೇಲೆ ಬಂದೂಕು ಇಟ್ಟು ನನಗೆ ಗುರಿ ಇಟ್ಟರು ಸಿದ್ದರಾಮಯ್ಯ. ನನ್ನ ವಿರುದ್ಧ ಅವರಿಗೆಷ್ಟು ಹಗೆತನವಿತ್ತೆಂದರೆ ಸಿಎಲ್ಪಿ ಸಭೆಯಲ್ಲೆ ನನ್ನ ವಿರುದ್ಧ ಕೆ.ಸಿ. ವೇಣುಗೋಪಾಲ್ ಅವರಿಂದ ಭಾಷಣ ಮಾಡಿಸಿದರು. ಹೇಗಾದರೂ ಮಾಡಿ ನನ್ನನ್ನು ಪಕ್ಷದಿಂದ ತೆಗೆಯಲು ಎಐಐಸಿ ಮೇಲೆ ಒತ್ತಡ ತಂದರು. ಹೀಗೆ ಪ್ರತಿ ಹಂತದಲ್ಲೂ ನನ್ನ ವಿರುದ್ಧ ಪಿತೂರಿ ಹೆಚ್ಚಾದಾಗ ಪಕ್ಷದಿಂದ ಸಸ್ಪೆಂಡ್ ಮಾಡುವುದು ಪಕ್ಕಾ ಅಂತ ನನಗೆ ಖಚಿತವಾಯಿತು. ಆಗಲೇ ನಾನು ಕಾಂಗ್ರೆಸ್ ಬಿಟ್ಟು ಹೊರಬಂದೆ.
Q: ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗೆ ಬರಲು ನೀವೂ ಕಾರಣವಲ್ಲವೇ? ಯಾಕೆ ಹೀಗಾಯಿತು?
A: ಸಿದ್ದರಾಮಯ್ಯ ಬಹಳ ಅಪನಂಬಿಕೆಯ ಮನುಷ್ಯ. ಯಾರನ್ನೂ ನಂಬುವುದಿಲ್ಲ. ಇಡೀ ರಾಜಕೀಯ ಜೀವನದಲ್ಲಿ ತಮ್ಮ ಉನ್ನತಿಗೆ ಯಾರು ಯಾರು ನೆರವಾಗಿದ್ದಾರೋ ಅವರೆಲ್ಲರನ್ನು ಅವರು ನಾಶ ಮಾಡಲೆತ್ನಿಸಿದ್ದಾರೆ. ನನ್ನ ವಿಷಯದಲ್ಲೂ ಹಾಗೆಯೇ ಆಯಿತು. ಆ ಮನುಷ್ಯ ಕಾಂಗ್ರೆಸ್ಸಿಗೆ ಬರಲು ನಾನು ಮುಖ್ಯ ಕಾರಣ. ನನ್ನಷ್ಟೇ ಶ್ರೀನಿವಾಸ್ ಪ್ರಸಾದ್, ಎಚ್.ಎಂ. ರೇವಣ್ಣ, ಕೊಪ್ಪಳ ಕಡೆಯ ಒಬ್ಬ ಮುಖಂಡರು ಕಾರಣ. ಕ್ಷಮಿಸಿ, ನನಗೆ ಅವರ ಹೆಸರು ನೆನಪಾಗುತ್ತಿಲ್ಲ. ಆವತ್ತು ನಾವೆಲ್ಲ ಕೈ ಹಿಡಿಯದೇ ಹೋಗಿದ್ದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್ ಮೆಟ್ಟಿಲು ಹತ್ತಲು ಸಾಧ್ಯವಿರಲಿಲ್ಲ. ಆದರೂ ನನ್ನ ವಿರುದ್ಧ ಕತ್ತಿ ಮಸೆದರು. ಪಕ್ಷ ಬಿಡುವಂತೆ ಮಾಡಿದರು.
Q: ಬಿಜೆಪಿಯಲ್ಲಿ ಈಗ ನಿಮಗೆ ಎಲ್ಲ ಸರಿ ಇದೆಯಾ? ಬೆನ್ನಹಿಂದೆ ಹಳ್ಳತೋಡುವ ಕೆಲ್ಸ ಆಗುತ್ತಿಲ್ಲ ತಾನೆ? ನಿಮ್ಮೊಂದಿಗೆ ಬಿಜೆಪಿ ಸೇರಿದ ಗೆಳೆಯರೆಲ್ಲ ಇತ್ತೀಚೆಗೆ ಮೌನವಾಗಿದ್ದಾರಲ್ಲ..? ಏನಿದರ ಮರ್ಮ?
A: ಮರ್ಮವೂ ಇಲ್ಲ, ಕರ್ಮವೂ ಇಲ್ಲ. ಬಿಜೆಪಿ ಪಕ್ಷದೊಳಗೆ ಏನೇನು ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ. ಆದರೆ, ಕಷ್ಟಕಾಲದಲ್ಲಿ ಕೈ ಹಿಡಿದ ಪಕ್ಷವನ್ನು ಅನುಮಾನದಿಂದ ನೋಡಲಾರೆ. ಅಷ್ಟೇ ಅಲ್ಲ, ಎಲ್ಲ ಮುಖಂಡರೂ ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿದ್ದಾರೆ. ಈ ಸರಕಾರ ಬರಲು ಕಾರಣ ನಾವೇ ಎಂಬ ಅಭಿಮಾನವೂ ಅವರಲ್ಲಿದೆ, ಅದೇ ರೀತಿ ಬಲಿಷ್ಠವಾದ ಪಕ್ಷದಲ್ಲಿ ನಾವಿದ್ದೇವೆ ಎಂಬ ಹೆಮ್ಮೆಯೂ ನನಗಿದೆ, ನಮ್ಮೆಲ್ಲರಿಗೂ ಇದೆ. ನನ್ನ ಜತೆ ಬಿಜೆಪಿಗೆ ಸೇರಿದ ಎಲ್ಲ ಗೆಳೆಯರೂ ನನಗಾಗಿ ಪಕ್ಷದ ನಾಯಕತ್ವದ ಜತೆ ಮಾತನಾಡುತ್ತಲೇ ಇದ್ದಾರೆ. ವಿಶ್ವನಾಥ್ ಅವರಿಗೆ ಒಂದು ಅವಕಾಶ ನೀಡಲೇಬೇಕು ಎಂದು ಒತ್ತಡ ಹಾಕುತ್ತಲೇ ಇದ್ದಾರೆ. ಮಾಧ್ಯಮಗಳ ಮೂಲಕವೂ ಅವರು ಹೇಳುತ್ತಿದ್ದಾರೆ. ಇಷ್ಟೆಲ್ಲ ಅಗುತ್ತಿದೆ, ಗೆಳೆಯರು ಮೌನವಾಗಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ.
Q:ಹಾಗಾದರೆ ನೀವು ಬಿಜೆಪಿಯಲ್ಲಿ ಯಾರನ್ನು ಬಲವಾಗಿ ನಂಬಿದ್ದೀರಿ?
A :ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು. ಅಮಿತ್ ಶಾ ಅವರನ್ನು, ನಡ್ಡಾ ಅವರನ್ನು. ಇನ್ನು ರಾಜಕೀಯ ಎನ್ನುವುದು ಬಾಂಡ್ ಪೇಪರ್ ಮೇಲೆ ನಡೆಯೋದಲ್ಲ. ನಂಬಿಕೆ ಮೇಲೆ ನಡೆಯೋದು. ನನ್ನ ಟೈಮ್ ಬರುತ್ತೆ, ಪ್ಲೀಸ್ ವೇಯ್ಟ್.
Q: ನಿಮ್ಮ ನಾಲಗೆಯೇ ನಿಮ್ಮ ಶತ್ರು ಅಂತ ಕೆಲವರು ಹೇಳ್ತಾ ಇದಾರೆ? ಯಾಕೆ ಹಾಗೆ? ಉದಾ; ಡಿಸಿಎಂ ಅಶ್ವತ್ಥನಾರಾಯಣ ಅವರ ಕುರಿತ ನಿಮ್ಮ ಹೇಳಿಕೆ…
A: ನಾನು ಯಾರ ಬಗ್ಗೆಯೂ ಲಘುವಾಗಿ ಹೇಳಿಕೆ ಕೊಟ್ಟಿಲ್ಲ. ಅಯಾ ಸಂದರ್ಭದಲ್ಲಿ ಯಾರಾದರೂ ಮೀಡಿಯಾದಲ್ಲಿ ಹೇಳಿಕೆ ಕೊಟ್ಟಿದ್ದರೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ ಅಷ್ಟೇ. ನಾನು ಭಾವುಕ ಜೀವಿ. ಯಾರನ್ನೂ ನಾನು ನೋಯಿಸಲ್ಲ. ನೋಯಿಸುವ ಪ್ರಶ್ನೆಯೂ ಇಲ್ಲ. ಇನ್ನು ಡಿಸಿಎಂ ಅವರ ಬಗ್ಗೆ ಕೊಟ್ಟ ಹೇಳಿಕೆ ಆ ಕ್ಷಣದ ಅವರ ಹೇಳಿಕೆಗೆ ಉತ್ತರವಾಗಿತ್ತು. ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಅಂತ ಪಕ್ಷ ಮೊದಲೇ ನಿರ್ಧರಿಸಿ ಟಿಕೆಟ್ ನೀಡುವುದಿಲ್ಲ. ಬದಲಿಗೆ ಎಲ್ಲರೂ ಗೆಲ್ಲಲಿ ಎಂಬುದು ಪಕ್ಷದ ಆಶಯವಾಗಿರುತ್ತದೆ. ಅದರಂತೆ ನಾನು ಉಪ ಚುನಾವಣೆಯಲ್ಲಿ ಸ್ಫರ್ಧಿಸಿದೆ. ಇನ್ನು ಎಲ್ಲರೂ ಗೆಲ್ಲುತ್ತಾರೆ ಎಂದರೆ, ಬಿಜೆಪಿ ಕಳೆದ ಬಾರಿಯೇ 120 ಸೀಟು ಗೆಲ್ಲಬೇಕಾಗಿತ್ತು. 104 ಯಾಕೆ ಗೆದ್ದಿತು? ತರ್ಕ ಅನ್ನುವುದು ನಿಲ್ಲವುದಲ್ಲ. ಇದೆಲ್ಲ ಆದ ಮೇಲೆ ನಾನು ಅಶ್ವತ್ಥನಾರಾಯಣ ಅವರ ಮನೆಗೂ ಹೋಗಿದ್ದಾಯಿತು. ಊಟ ಮಾಡಿ ಬಂದಿದ್ದೂ ಆಯಿತು. ನಾನು ಸ್ನೇಹಜೀವಿ.
Q: ಹಾಗಾದರೆ ಬಿಜೆಪಿಯಲ್ಲಿ ನಿಮಗೆ ಭವಿಷ್ಯ ಇದೆಯಾ? ಅಕಸ್ಮಾತ್ ಮುಂದಿನ ದಿನಗಳಲ್ಲಿ ಇಲ್ಲಿ ನಿಮಗೆ ಉಲ್ಟಾ ಹೊಡೆದರೆ ಮತ್ತೆ ಎಲ್ಲಿಗೆ ಹೋಗುತ್ತೀರಿ?
A: ನಿಮಗೆ ಯಾಕೆ ಈ ಅನುಮಾನ. 1994-95ರ ಸಂದರ್ಭ ಅನಿಸುತ್ತೆ. ರವಿಬೆಳಗೆರೆ ಅವರು ಹಾಯ್ ಬೆಂಗಳೂರ್ ಆರಂಭ ಮಾಡಲು ಪ್ರಯತ್ನ ಮಾಡುತ್ತಿದ್ರು. ಆವೊತ್ತಿಗೆ ಲಂಕೇಶ್ ಪತ್ರಿಕೆ ಬಹಳ ಪೀಕಿನಲ್ಲಿತ್ತು. ಆದರೂ ಬೆಳೆಗೆರೆ ಒಂದು ಕೈ ನೋಡೇಬಿಟ್ಟರು ಮತ್ತೂ ಗೆದ್ದರು. ಆ ಪತ್ರಿಕೆ ಬಂದಾಗ ಪ್ರತಿ ಬುಧವಾರ ನಾನು ಎಲ್ಲಿಯೇ ಇರಲಿ ತಪ್ಪದೇ ಓದುತ್ತಿದ್ದೆ. ಆಗ ಅದರ ಬೆಲೆ 5 ರೂಪಾಯಿ. ಆಗಲೂ ನಾನು ಬೆಂಗಳೂರು-ಮೈಸೂರಿಗೆ ರೈಲಿನಲ್ಲೇ ಓಡಾಡುತ್ತಿದ್ದೆ. 1994ರಲ್ಲಿ ನಾನು ಸೋತಿದ್ದೆ. ಹೀಗೆ ಓಡಾಡುವಾಗ ಬುಧವಾರವೇನಾದರೂ ರೈಲ್ವೆ ಸ್ಟೇಷನ್ನಿಗೆ ಬಂದರೆ ಒಬ್ಬ ಹುಡುಗನ್ನು ಕರೆದು ಅವನಿಗೊಂದಿಷ್ಟು ಹಣಕೊಟ್ಟು ಆ ಸ್ಟಾಲಿನಲ್ಲಿದ್ದ 50 ಪ್ರತಿ ಹಾಯ್ ಬೆಂಗಳೂರ್ ಪತ್ರಿಕೆಗಳನ್ನು ಖರೀದಿಸಿ ಪ್ರತಿ ಬೋಗಿಗೆ ಎರಡೆರಡು ಪತ್ರಿಕೆಗಳನ್ನು ಹಾಕಿಸುತ್ತಿದ್ದೆ. ಕೆಲವಾದರೂ ಬೆಂಗಳೂರು ವರೆಗೆ ಪತ್ರಿಕೆಯನ್ನು ಓದಿಕೊಂಡು ಹೋಗಲಿ ಅನ್ನವುದು ನನ್ನ ಉದ್ದೇಶ. ನಾನು ಅಷ್ಟೇ, ಒಮ್ಮೆ ಆ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಎಲ್ಲ ಪುಟ ಮುಗಿದ ಮೇಲೆ ಕೆಳಗಿಡುತ್ತಿದ್ದೆ. 2006ರಲ್ಲಿ ಧರ್ಮಸಿಂಗ್ ಸರಕಾರ ಪತನವಾಗಿ ಕುಮಾರಸ್ವಾಮಿ ಸರಕಾರ ಬಂದಿದ್ದನ್ನು ರವಿಬೆಳಗೆರೆ ’ಕ್ಷಿಪ್ರಕ್ರಾಂತಿ’ ಅಂತ ಕರೆದಿದ್ದರು. 2019 ಜುಲೈ ನಲ್ಲಿ ನಡೆದದ್ದು ಅದೇ. ಆದರೆ ಅದು ಕ್ಷಿಪ್ರ ಕ್ರಾಂತಿಯಲ್ಲ, ಮಹಾಕ್ರಾಂತಿ. ಆವತ್ತು ಧರ್ಮಸಿಂಗ್ ಅವರಿಗೆ ಆಗಿತ್ತಲ್ಲ, ಅದೇ ಮತ್ತೆ ಪುನರಾವರ್ತನೆ ಆಯಿತು. ಕರ್ಮ ಹಿಟ್ ಬ್ಯಾಕ್ ಎಂಬ ಮಾತು ನಿಜವಾಯಿತು. ಇರಲಿ, ಓದು ಬರವಣಿಗೆ ನನಗೆ ಹುಚ್ಚು ಮಾತ್ರವಲ್ಲ, ನನ್ನ ಶಕ್ತಿ ಕೂಡ. ಆ ಪತ್ರಿಕೆಯ ಬರಹ ನನ್ನನ್ನು ಅಷ್ಟು ಕಟ್ಟಿಹಾಕಿತ್ತು ಕೂಡ. ಇನ್ನುಈ ಪಕ್ಷದ ಪಯಣ ಕೊನೆಯಾಗಬೇಕು ಅಂತ ಏನಾದರೂ ಇದ್ದರೆ ನನ್ನ ಕೊನೆಯ ನಿಲ್ದಾಣ ನನ್ನ ಮನೆ ಮಾತ್ರ. ನಾನು ತುಂಬಾ ಓದಬೇಕಿದೆ, ಬರೆಯಬೇಕಿದೆ. ಕಷ್ಟಕಾಲದಲ್ಲಿ, ಖಾಲಿ ಹೊತ್ತಿನಲ್ಲಿ ನನಗೆ ಅಕ್ಷರಗಳೇ ಎಲ್ಲ. ನನ್ನ ಮನೆ ಯಾವಾಗಲೂ ನನಗೆ ಹಾಯ್ ಹೇಳುವುದು ತಪ್ಪಿಸುವುದಿಲ್ಲ, ಅಲ್ಲವೇ?
Q: ಈಗ ಏನಾದರೂ ಬರೆಯುತ್ತಿದ್ದೀರಾ? ಬರೆಯಲು ಸಮಯ ಇದೆಯಾ?
A: ಆಗಲೇ ಹೇಳಿದೆನಲ್ಲ. ಬರವಣಿಗೆ ಮತ್ತು ಓದು ನನ್ನ ಶಕ್ತಿ ಅಂತ. ನಾನು ರಾಜಕಾರಣಿ ಮಾತ್ರವಲ್ಲ, ಬರಹಗಾರ ಕೂಡ. ಬರೆಯುತ್ತಿದ್ದೇನೆ, ಹೊಸ ಪುಸ್ತಕದ ಹೆಸರು ’ಬಾಂಬೆ ಡೇಸ್’. ನನ್ನ ರಾಜಕೀಯ ವನವಾಸದ ಕಥೆ ಇದರಲ್ಲಿರುತ್ತೆ. ಬೆಂಗಳೂರು, ಪುಣೆ, ಮುಂಬಯಿ ಅಂತೆಲ್ಲ ಸುತ್ತಿದ್ದು ಅಲ್ಲಿ ಏನೇನು ನಡೆಯಿತು? ಈ ಎಲ್ಲ ಅಂಶಗಳು ಇರುವ ಒಂದು ಸಮಗ್ರ ಕಥನವದು. ನಾನು ಅಧಿಕಾರಕ್ಕಾಗಿ, ಹಣಕ್ಕಾಗಿ ಬಿಜೆಪಿಗೆ ಹೋದೆ ಎಂದು ಹೇಳುವವರಿಗೊಂದು ಸತ್ಯದರ್ಶನ. ಜನರಲ್ಲಿ ಮೂಡಿದ್ದ ಅನುಮಾನ ಹಾಗೆಯೇ ಉಳಿದುಬಿಟ್ಟಿದೆ. ತಪ್ಪುಗ್ರಹಿಕೆ ಇದೆ. ಅಟ್ಲೀಸ್ಟ್, ಮೀಡಿಯಾ ಕೂಡ ಈ ಕುರಿತು ಸತ್ಯಶೋಧನೆ ಮಾಡಲಿಲ್ಲ. ನನಗೆ ನೋವಾಯಿತು, ಅನ್ಯಾಯವೂ ಆಯಿತು. ಹೀಗಾಗಿ ಆ ಕಳಂಕವನ್ನು ನಾನು ನಿವಾರಿಸಲೇಬೇಕಲ್ಲವೆ? ಅದಕ್ಕೇ ಈ ಪುಸ್ತಕ. ಕರ್ನಾಟಕ ರಾಜ್ಯದ ಮಟ್ಟಿಗೆ ಇದೊಂದು ಅತ್ಯುತ್ತಮ ರಾಜಕೀಯ ದಾಖಲೆಯಾಗುತ್ತದೆ. ’ಹಳ್ಳಿ ಹಕ್ಕಿ ಹಾಡು’ ಕೃತಿಗಿಂತ ಇದು ವಿಭಿನ್ನವಾಗಲಿದೆ. ಹತ್ತು ಹಲವು ರೋಚಕ ಸಂಗತಿಗಳು ಇರುತ್ತವೆ. ಅವುಗಳನ್ನು ನಾನು ಈಗಲೇ ಬಹಿರಂಗಪಡಿಸಲಾರೆ. ನನ್ನ ಭಾವನೆಗಳ ತಿಕ್ಕಾಟ, ರಾಜಕೀಯ ಬೇಗುದಿ, ಅಪಮಾನ, ಬಾಂಬೆ ಚಿತ್ರಣಗಳು ಎಲ್ಲವೂ ಕೃತಿಯಲ್ಲಿ ಇರುತ್ತವೆ. ನೀವು ಪುಸ್ತಕ ಓದಬೇಕು. ಈಗಲೇ ಎಲ್ಲವನ್ನೂ ಹೇಳಲಾರೆ.
Q: ಇದಾದ ಮೇಲೆ ಮುಂದಿನ ಕಥೆ..
A: ಆಕ್ಚುಯಲಿ, ನಮ್ಮ ವಿಶ್ವವಿದ್ಯಾಲಯಗಳ ರಾಜ್ಯಶಾಸ್ತ್ರ ವಿಭಾಗಗಳಲ್ಲಿ ಪ್ರಸಕ್ತ ರಾಜಕೀಯವನ್ನು ಬೋಧಿಸಬೇಕು. ವರ್ತಮಾನ ರಾಜಕಾರಣದ ಬಗ್ಗೆ ಅಧ್ಯಯನ ನಡೆಸಬೇಕು. ಅದು ನಮ್ಮ ವಿವಿಗಳಲ್ಲಿ ಆಗುತ್ತಿಲ್ಲ. ಓಬೆರಾಯನ ಕಾಲದ ಸಿಲೆಬಸ್ಸನ್ನು ಈಗಲೂ ವಿದ್ಯಾರ್ಥಿಗಳ ತಲೆಗೆ ರುಬ್ಬಿ ತುಂಬುತ್ತಿದ್ದಾರೆ. ನಮ್ಮಲ್ಲೊಂದು ರಾಜಕೀಯ ಅಕಾಡೆಮಿ ಬೇಕು. ಅಲ್ಲಿ ರಾಜಕೀಯದ ಬಗ್ಗೆ ಅಧ್ಯಯನ ನಡೆಯಬೇಕು. ಭವಿಷ್ಯದ ನಾಯಕರು ಅಲ್ಲಿಯೇ ರೂಪುಗೊಳ್ಳಬೇಕು. 2014ರಲ್ಲೇ ನಾನು ಇಂತಹ ಪ್ರಯತ್ನ ಮಾಡಿದ್ದೆ. ಇಂಡಿಯಾ ಇಂಟರ್ ನ್ಯಾಷನಲ್ ಪೊಲಿಟಿಕಲ್ ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದೆ. ದೇಶ ವಿದೇಶಗಳ ಅನೇಕ ವಿವಿಗಳನ್ನು ಸುತ್ತಿದ್ದೆ. ಇವತ್ತು ನಮ್ಮಲ್ಲಿ ಆಯ್ಕೆಯಾಗುವ ಒಬ್ಬ ಪಂಚಾಯಿತಿ ಸದಸ್ಯನಿಗೆ ತನ್ನ ಧರ್ಮ ಯಾವುದು? ಜಾತಿ ಯಾವುದು? ಅಂತ ಗೊತ್ತಿದೆ. ಆದರೆ, ನಾನು ಯಾವ ವ್ಯವಸ್ಥೆಯಲ್ಲಿ ಇದ್ದೇನೆಂಬು ಗೊತ್ತಿಲ್ಲ. ನೀನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೀಯಾ ಎಂಬುದನ್ನು ಅವನಿಗೆ ಅರ್ಥ ಮಾಡಿಸಬೇಕು. ಇಂತಹ ಸಂಗತಿಗಳ ಮೇಲೆ ಬೆಳಕು ಚೆಲ್ಲಬಲ್ಲ ಬರಹಗಳು ಮೀಡಿಯಾದಲ್ಲಿ ಕೂಡ ಬರ್ತಿಲ್ಲ. ಇದೆಲ್ಲವೂ ನನ್ನ ತಲೆಯಲ್ಲಿದೆ. ಆ ದಿಕ್ಕಿನಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಾದ್ಯಂತ ಸುತ್ತಿ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಒಂದು ವೇಳೆ ಬಿಜೆಪಿ ಬಿಟ್ಟರೆ ನಾನು ನಿಲ್ಲುವುದು ನನ್ನ ಮನೆಯ ಬಾಗಿಲ ಮುಂದೆ ಮಾತ್ರ. ಆ ಘಳಿಗೆಯ ನಂತರ ನಾನು ಚುನಾವಣೆ ರಾಜಕೀಯ ಮಾಡಲ್ಲ, ಆದರೆ ರಾಜಕೀಯದಲ್ಲೇ ಇರುತ್ತೇನೆ.
ನರೇಂದ್ರ ಮೋದಿ / Courtesy: pm india
Q: ಕೊನೆ ಪ್ರಶ್ನೆ. ನೀವು ಮೋದಿ ಬಗ್ಗೆ ಮಾತನಾಡಿದ್ದು ನಾನು ಕೇಳಿಲ್ಲ. ನಮ್ಮ ಪಿಎಂ ಬಗ್ಗೆ ನಿಮ್ಮ ಅಭಿಪ್ರಾಯವೇನು?
A: ಮೋದಿ ಅವರನ್ನು ನಾನು ಪಕ್ಷಾತೀತವಾಗಿ ಇಷ್ಟಪಡುತ್ತೇನೆ. ನನ್ನ ಪ್ರಕಾರ ಅವರು ಈ ದೇಶದ ಮೊದಲ ಮತ್ತಿ ಕಟ್ಟಕಡೆಯ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ. 2001ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಅವರು ಸಾಮಾನ್ಯ ಪ್ರಚಾರಕರಾಗಿದ್ದರು. ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತ ಯಾರಿಗೂ ಗೊತ್ತಿಲ್ಲದ ಎಲೆಮರೆ ಕಾಯಿಯಂತೆ ಇದ್ದುಬಿಟ್ಟಿದ್ದರು. ಅಂತಹ ವ್ಯಕ್ತಿ ನಮ್ಮ ದೇಶದ ಸಮಸ್ತ ಹಿಂದುಳಿದ ವರ್ಗದ ಆಸ್ತಿ ಮತ್ತು ಆಸ್ಮತೆ. ಇಡೀ ಓಬಿಸಿಗಳೆಲ್ಲ ಹೆಮ್ಮೆಪಡಬೇಕು. ಒರಿಜಿನಲ್ ಅಹಿಂದಾ ಎಂದರೆ ಮೋದಿ ಅಹಿಂದಾ ಮಾತ್ರ. ಸಿದ್ದರಾಮಯ್ಯ ಅಹಿಂದಾ ಮಾತ್ರ ಅಲ್ಲವೇ ಅಲ್ಲ. ಕಛ್ ಮತ್ತು ಭುಜ್’ನಲ್ಲಿ ಭೂಕಂಪ ಆದಾಗ ಆ ಎರಡು ಪ್ರದೇಶಗಳು ಸಂಪೂರ್ಣವಾಗಿ ನಿರ್ನಾಮವಾಗಿಬಿಟ್ಟಿದ್ದವು. ಅವೆರಡೂ ಪ್ರದೇಶಗಳನ್ನು ಮೋದಿ ಮರು ನಿರ್ಮಾಣ ಮಾಡಿದ ಪರಿ ನಿಜಕ್ಕೂ ವಿಸ್ಮಯ ಉಂಟು ಮಾಡುತ್ತದೆ. ಗುಜರಾತ್ ಮಾದರಿಯನ್ನು ನಾವು ಹಾಗೆ ಗುರುತಿಸಬೇಕು. ಮಾಡೆಲ್ ಆಫ್ ಡೆವಲಪ್’ಮೆಂಟ್ ಅಂದ್ರೆ ಅದು. ಅಂಥ ವ್ಯಕ್ತಿಯನ್ನು ಸಿದ್ದರಾಮಯ್ಯನಂಥ ವ್ಯಕ್ತಿ ಏಕವಚನದಲ್ಲಿ ಟೀಕಿಸೋದು ಅತ್ಯಂತ ಬೇಸರದ ಸಂಗತಿ.
***