- ದು.ಗು.ಲಕ್ಷ್ಮಣ
ಲೇಖನದ ಶೀರ್ಷಿಕೆ ನೋಡಿದ ಹಲವರಿಗೆ ನಗು ಬರಬಹುದು. ಇವರೆಂತಹ ಲೇಖಕರೆಂದು ಮರುಕ ಉಂಟಾಗಬಹುದು. ಕಣ್ಣಿಗೆ ಕಾಣುವ ವೈರಾಣುಗಳನ್ನೇ ಒದ್ದೋಡಿಸಲಾಗದ ನಾವು, ಇನ್ನು ಕಣ್ಣಿಗೆ ಕಾಣದ ಕೊರೋನಾ ಎಂಬ ವೈರಾಣುವನ್ನು ಒದ್ದೋಡಿಸಲು ಸಾಧ್ಯವೇ? ಎಂಬ ಪ್ರಶ್ನೆ ಕಾಡಬಹುದು. ಹೀಗೆ ಅನಿಸುವುದೆಲ್ಲವೂ ಸಹಜ. ಆದರೆ ಕೊರೋನಾವನ್ನು ಒದ್ದೋಡಿಸಲು ಸಾಧ್ಯ ಎಂಬುದೂ ಅಷ್ಟೇ ನಿಜ.
ಕಣ್ಣಿಗೆ ಕಾಣದ ಕೊರೋನಾ ಭಾರತವನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವುದು ಸರ್ವವೇದ್ಯ. ಇದರಿಂದಾಗಿ ಬದುಕಿನ ಚಹರೆಯೇ ಬದಲಾಗಿದೆ. ಜೀವನಶೈಲಿಯನ್ನು ಎಲ್ಲರೂ ಅನಿವಾರ್ಯವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಕಣ್ಣಿಗೆ ಕಾಣದ ವೈರಾಣು ಸೃಷ್ಟಿಸಿರುವ ಭಯ, ಗಾಬರಿಗಿಂತಲೂ ಕಣ್ಣಿಗೆ ಕಾಣುವ ವಸ್ತು ಸೃಷ್ಟಿಸಿರುವ ತಲ್ಲಣ ಭಯಾನಕವಾದುದು. ಆ ವಸ್ತು ನಿಮ್ಮ ನಮ್ಮ ಮನೆಯಲ್ಲಿರುವ ಟಿವಿ ಎಂಬುದು ಈಗಾಗಲೇ ನಿಮ್ಮ ಗಮನಕ್ಕೂ ಬಂದಿರಲಿಕ್ಕೆ ಸಾಕು.
ಕೊರೋನಾದ ರಣಕೇಕೆ, ಬೆಂಗಳೂರಿನಲ್ಲಿ ಕೋವಿಡ್ ರುದ್ರತಾಂಡವ, ರಾಜ್ಯದಾದ್ಯಂತ ಮರಣಮೃದಂಗ, ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದೆ ರೋಗಿಗಳ ಪರದಾಟ...' ಟಿವಿ ಆ್ಯಂಕರ್‌ಗಳು ತಾರಕ ಸ್ವರದಲ್ಲಿ ಇಂತಹ ಪದಪುಂಜಗಳನ್ನು ಉದುರಿಸುತ್ತಿದ್ದರೆ ಕೇಳುಗರ ಮನದಲ್ಲಿ ಮರಣ ಮೃದಂಗ ಬಾರಿಸದೆ ಇರಲು ಸಾಧ್ಯವೆ? ಅಳ್ಳೆದೆಯ, ಹೃದಯ ದೌರ್ಬಲ್ಯವಿರುವವರಂತೂ ಇಂತಹ ಸುದ್ದಿ ಕೇಳಿಯೇ ಅರ್ಧ ಕುಸಿದುಹೋಗಿ ಸಾವಿನ ಮನೆಯ ಸನಿಹಕ್ಕೆ ಸರಿಯುತ್ತಾರೆ.
ಕೋವಿಡ್ ಬಂದರೆ ಸಾವು ಖಚಿತ’ ಎಂಬಂತಹ ತಲೆಬುಡವಿಲ್ಲದ ಸುದ್ದಿಯ ತುಣುಕು ಎಂಥವರನ್ನಾದರೂ ಗಾಬರಿಗೊಳಿಸದೆ ಇರದು. 24/7 ಚಾನಲ್‌ಗಳು ಕೋವಿಡ್ ಕುರಿತು ಬಿತ್ತರಿಸುವ ಸುದ್ದಿಗಳನ್ನು ದಿನವಿಡೀ ಕೇಳುತ್ತಿದ್ದರೆ – ಇಡೀ ದೇಶದಲ್ಲಿ ರಸ್ತೆ ರಸ್ತೆಗಳಲ್ಲಿ ಜನರು ಎಲ್ಲೆಂದರಲ್ಲಿ ಬಿದ್ದು ಸಾಯುತ್ತಿದ್ದಾರೆ, ಇನ್ನು ಯಾರಿಗೂ ಉಳಿಗಾಲವೇ ಇಲ್ಲ ಎಂದು ಮನಸ್ಸಿಗೆ ವಿಪರೀತ ಆತಂಕ ಉಂಟಾಗದೆ ಇರದು. ಆದರೆ ವಾಸ್ತವ ಮಾತ್ರ ಹಾಗಿಲ್ಲ.
ಈ ದೇಶ ಹಲವಾರು ಖಾಯಿಲೆಗಳನ್ನು ಕಂಡಿದೆ. ಪ್ಲೇಗ್, ಮಲೇರಿಯಾ, ಸಿಡುಬು, ಡೆಂಗ್ಯು ಜ್ವರ, ಹೆಚ್1 ಎನ್1, ಫ್ಲೂ, ಹಕ್ಕಿಜ್ವರ, ಹಂದಿಜ್ವರ, ಮಂಗನ ಕಾಯಿಲೆ ಇತ್ಯಾದಿ ವರ್ಷದುದ್ದಕ್ಕೂ ಜನರನ್ನು ಕಾಡಿವೆ. ಆದರೆ ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಿ, ಸೂಕ್ತ ಚಿಕಿತ್ಸೆ ಪಡೆದರೆ ಆ ಕಾಯಿಲೆಗಳಿಂದ ಮುಕ್ತವಾಗಬಹುದು ಎಂಬುದೂ ಸಾಬೀತಾಗಿದೆ.
ಈಗ ಬಂದಿರುವ ಕೊರೋನಾ ವಿಷಯದಲ್ಲೂ ಮುನ್ನೆಚ್ಚರಿಕೆ ಕ್ರಮ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಈ ಕಾಯಿಲೆ ನಮ್ಮನ್ನೇನೂ ಮಾಡದು ಎಂಬುದಕ್ಕೆ ಇದುವರೆಗೆ ಚಿಕಿತ್ಸೆ ಪಡೆದು ಗುಣಮುಖರಾದ ದೇಶದ ಶೇ.62.42 ಜನರೇ ಸಾಕ್ಷಿ. ಕರ್ನಾಟಕದಲ್ಲೂ ಸೋಂಕು ತಗಲಿದವರಲ್ಲಿ ಶೇ.41.12 ಮಂದಿ ಗುಣಮುಖರಾಗಿದ್ದಾರೆ. 93, 97ರ ಇಳಿ ವಯಸ್ಸಿನ ಮೂವರು ಸೋಂಕಿತರು ಗುಣಮುಖರಾದ ನಿದರ್ಶನವೂ ಕಣ್ಮುಂದೆಯೇ ಇದೆ. ಆದರೆ ಸುದ್ದಿ ವಾಹಿನಿಗಳು ಗುಣಮುಖರಾದವರ ಕುರಿತು ಪ್ರಚಾರ ನೀಡುವುದೇ ಇಲ್ಲ. ಅವರನ್ನು ಸಂದರ್ಶಿಸಿ, ಅವರ ಅನುಭವಗಳನ್ನು ದಾಖಲಿಸಿ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುವುದೇ ಇಲ್ಲ. ಟಿಆರ್‌ಪಿ ಎಂಬ ಮಾಯಾಂಗನೆಯ ಬೆನ್ನುಹತ್ತಿ ಹೊರಟಿರುವ ಸುದ್ದಿವಾಹಿನಿಗಳಿಗೆ ಧನಾತ್ಮಕ, ಸಕಾರಾತ್ಮಕ ಸುದ್ದಿಗಳು ಖಂಡಿತ ಬೇಕಿಲ್ಲ.
ಡೆಂಗ್ಯೂ, ಪ್ಲೇಗ್ ಇತ್ಯಾದಿ ಮಾರಕ ರೋಗಗಳಿಗೆ ಹೋಲಿಸಿದರೆ ಕೊರೋನಾ ಅಂತಹ ಹೆಮ್ಮಾರಿ ಕಾಯಿಲೆಯಂತೂ ಅಲ್ಲ. ಹಾಗಂತ ನಿರ್ಲಕ್ಷಿಸಿದರೆ ಅಪಾಯವೂ ತಪ್ಪಿದ್ದಲ್ಲ. ಯಾವುದೇ ಕಾಯಿಲೆಯನ್ನು ಯಶಸ್ವಿಯಾಗಿ ಎದುರಿಸಬೇಕಾದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಪ್ರಬಲವಾಗಿರಬೇಕು. ಯಾವುದೇ ಸೋಂಕು ಉಂಟಾದಾಗ ಅದನ್ನು ಹೊಡೆದೋಡಿಸಲು ದೇಹದಲ್ಲಿ ಸೈನಿಕರಂತೆ ಕಾರ್ಯ ನಿರ್ವಹಿಸುವುದು ರಕ್ತದಲ್ಲಿರುವ ಬಿಳಿ ರಕ್ತ ಕಣಗಳು ಮತ್ತು ಟಿ.ಲಿಂಫೋಸೈಟ್ ಎಂಬ ಜೀವಕೋಶಗಳು. ದೇಶವನ್ನು ಕಾಯಲು ಗಡಿಗಳಲ್ಲಿ ಸೈನಿಕರಿದ್ದಂತೆ ದೇಹವನ್ನು ರಕ್ಷಿಸಲು ಈ ಸೈನಿಕರು ನಿರಂತರ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಾರೆ. ಆದರೆ ಈ ರೋಗನಿರೋಧಕ ಸೈನಿಕರ ಕಾರ್ಯಕ್ಷಮತೆಯು ಭಯ, ಕೋಪ, ಹತಾಶೆ, ಗಾಬರಿ, ಅನಾಥ, ಪ್ರಜ್ಞೆಯಂತಹ ನಕಾರಾತ್ಮಕ ಭಾವನೆಗಳಿಂದ ಕುಂಠಿತವಾಗುತ್ತದೆ. ಸೋಂಕು ಉಂಟುಮಾಡುವ ವೈರಾಣುಗಳ ವಿನಾಶಕಾರಿ ವರ್ತನೆಯನ್ನು ಉತ್ತೇಜಿಸುತ್ತವೆ. ನಮ್ಮ ರೋಗನಿರೋಧಕ ಸೈನ್ಯಕ್ಕೂ ನಮ್ಮ ಮನಃಸ್ಥಿತಿಗೂ ನಿಕಟ ಸಂಬಂಧವಿದೆ ಎಂಬುದನ್ನು ಮನೋವಿಜ್ಞಾನಿಗಳೇ ಖಚಿತಪಡಿಸಿದ್ದಾರೆ. ಹಾಗಾಗಿ ನಕಾರಾತ್ಮಕ ವಿಷಯಗಳನ್ನು ತಲೆಯಲ್ಲಿ ತುಂಬಿಕೊಂಡಷ್ಟೂ ಭಯ, ಉದ್ವೇಗ, ಗಾಬರಿ, ಹತಾಶೆ, ಅನಾಥ ಪ್ರಜ್ಞೆ ಹೆಚ್ಚಾಗಿ ಇನ್ನು ತಮಗೆ ಉಳಿಗಾಲವೇ ಇಲ್ಲ ಎಂಬ ನಿರಾಶಾಭಾವವೇ ನಮ್ಮ ಮೇಲೆ ಸವಾರಿ ಮಾಡತೊಡಗುತ್ತದೆ. ಕೋವಿಡ್ ಕಾಟ ಆರಂಭವಾದಾಗಿನಿಂದ ಇಡೀ ದೇಶದಲ್ಲಿ ಆಗಿರುವುದೂ ಹೀಗೆಯೇ.
ಜನಜೀವನದಲ್ಲಿ ಕೋವಿಡ್ ಸೋಂಕಿಗಿಂತಲೂ ತಲ್ಲಣದ ಸೋಂಕು ಬಹು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ಊಟ, ವಸತಿಯಂತಹ ಮೂಲಭೂತ ಅಗತ್ಯಗಳಿಗೆ ಕೊರತೆಯಿಲ್ಲದವರೂ ಗಲಿಬಿಲಿಗೊಳ್ಳುತ್ತಿದ್ದಾರೆ. ಕಂಪನಿಯಲ್ಲಿ ವೇತನ ಅರ್ಧಕ್ಕೆ ಕುಸಿಯಿತೆಂದು ಚಿಂತಿತರಾಗಿ ಮಾನಸಿಕ ಕ್ಲೇಶಕ್ಕೆ ಒಳಗಾದವರು ಸಾಕಷ್ಟು. ಹೊಟ್ಟೆ-ಬಟ್ಟೆಗೆ ಕೊರತೆ ಇಲ್ಲದಿದ್ದರೂ ವಿದ್ಯಾವಂತರು ನಕಾರಾತ್ಮಕ ಚಿಂತನೆಗಳಿಗೆ ಶರಣಾಗುವುದೇಕೆ? ಇತರರಿಗೂ ಅದೇ ಚಿಂತೆಯ, ಚಿಂತನೆಯ ವೈರಾಣು ಸೋಂಕು ಅಂಟಿಸುವುದೇಕೆ?
ಮಾರ್ಚ್ 24ರಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ `ಗಾಬರಿ ಬೇಡ. ಆದರೆ ಎಚ್ಚರಿಕೆ ಅಗತ್ಯ’ ಎಂಬ ಸಂದೇಶ ನೀಡಿದ್ದರು. ಮುಖಗವಸು ಧಾರಣೆ, ಅಂತರ ಕಾಯ್ದುಕೊಳ್ಳುವಿಕೆ, ಸರಳಜೀವನ, ಆರೋಗ್ಯ ಪಾಲನೆ ಮುಂತಾದ ಕ್ರಮಗಳನ್ನು ಜನರು ಅನುಸರಿಸಬೇಕಾಗಿತ್ತು. ಆದರೆ ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವವರ ಪ್ರಮಾಣ ಈಗಲೂ ಕಡಿಮೆ ಇದೆ. ಜೊತೆಗೆ ನಕಾರಾತ್ಮಕ ಚಿಂತನೆಗಳನ್ನು ಮೈತುಂಬ ಮನದ ತುಂಬಾ ತುಂಬಿಕೊಂಡಿರುವುದರ ಪರಿಣಾಮವೇ ಎಲ್ಲೆಡೆ ಕೋವಿಡ್ ತಲ್ಲಣ.
ಆಯುರ್ವೇದ ಔಷಧಿಗೇಕೆ ಮನ್ನಣೆ ಇಲ್ಲ?
ಕೊರೋನಾಗೆ ಇದುವರೆಗೆ ಯಾರೂ ಸೂಕ್ತ ಸಮರ್ಪಕ ಲಸಿಕೆ ಕಂಡುಹಿಡಿದಿಲ್ಲ. ಜಗತ್ತಿನಾದ್ಯಂತ ನೂರೈವತ್ತು ಔಷಧ ಸಂಸ್ಥೆಗಳೇನೋ ಪ್ರಯೋಗ ನಿರತವಾಗಿವೆ. ಆದರೆ ಅದು ಅಷ್ಟು ಅವಸರದಿಂದ ಆಗುವ ಕಾರ್ಯವಲ್ಲ. ದೀರ್ಘಕಾಲವೇ ಬೇಕಾಗುತ್ತದೆ. ಇಷ್ಟರೊಳಗೇ ಲಸಿಕೆ ತಯಾರಾಗಬೇಕು ಎಂದು ಕಾಲಮಿತಿ ಹಾಕಲು ಬರುವುದಿಲ್ಲ. ಹಾಗೆ ಮಾಡುವುದಕ್ಕೆ ಅದೇನೂ ಉಪ್ಪಿಟ್ಟು, ಕೇಸರಿಬಾತ್ ತಯಾರಿಸಿದಷ್ಟು ಸುಲಭವಲ್ಲ. ಹಲವು ಬಗೆಯ ಪ್ರಯೋಗ, ಪರೀಕ್ಷೆಗಳು ನಡೆದು ಅವೆಲ್ಲ ಫಲಪ್ರದವಾಗಬೇಕು.
ಆದರೆ ವೈರಾಣುಗಳಿಂದುಂಟಾಗುವ ಹಲವು ಬಗೆಯ ರೋಗಗಳಿಗೆ ನಮ್ಮ ಪ್ರಾಚೀನ ಆಯುರ್ವೇದ ಔಷಧ ಪದ್ಧತಿ ಯಶಸ್ವಿ ಚಿಕಿತ್ಸೆ ನೀಡುತ್ತಾ ಬಂದಿದೆ. ಕೊರೋನಾ ಸೋಂಕು ತಗಲಿದ ಶಿವಮೊಗ್ಗೆಯ ರಾಮಕೃಷ್ಣಾಶ್ರಮದ ಸ್ವಾಮೀಜಿ ಆಸ್ಪತ್ರೆಗೆ ದಾಖಲಾದರೂ, ಅಲ್ಲಿ ಅವರು ಆಯುರ್ವೇದ ಚಿಕಿತ್ಸೆಯಿಂದಲೇ ಗುಣಮುಖರಾಗಿ ಬಂದ ನಿದರ್ಶನ ಕಣ್ಣೆದುರೇ ಇದೆ.
ಬೆಂಗಳೂರಿನ ಡಾ.ಗಿರಿಧರ ಕಜೆಯವರಂತೂ ಎರಡು ಆಯುರ್ವೇದಿಕ್ ಮಾತ್ರೆಗಳನ್ನು ಅಭಿವೃದ್ಧಿಪಡಿಸಿ, ಕ್ಲಿನಿಕಲ್ ಟ್ರಯಲ್‌ನಲ್ಲೂ ಯಶಸ್ವಿಯಾಗಿದ್ದಾರೆ. ಅದರ ಮಾರಾಟಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಅಹವಾಲನ್ನೂ ಸಲ್ಲಿಸಿದ್ದಾರೆ. ಕೇವಲ 250 ರೂ. ಖರ್ಚಿನಲ್ಲಿ ಆ ಮಾತ್ರೆಗಳನ್ನು ಉಪಯೋಗಿಸಿ, ನಾಲ್ಕೈದು ದಿನದೊಳಗೆ ಕೋವಿಡ್‌ನಿಂದ ಗುಣಮುಖರಾಗಬಹುದೆಂದು ಸಾಬೀತುಪಡಿಸಿದ್ದಾರೆ. ಆದರೆ ಸರ್ಕಾರ ಅವರ ಅಹವಾಲು ಸ್ವೀಕರಿಸಿದೆಯೇ ಹೊರತು, ಔಷಧ ಮಾರಾಟಕ್ಕೆ ಅನುಮತಿ ನೀಡಿಲ್ಲ. ಗಾಗಲ್ ಮಾಡಿ' ಎನ್ನುವ ಬದಲು
ಗಾರ್ಲಿಕ್ ಮಾಡಿ’ ಎನ್ನುವ, ಗಾಗಲ್‌ಗೂ ಗಾರ್ಲಿಕ್‌ಗೂ ವ್ಯತ್ಯಾಸವನ್ನೇ ಅರಿಯದ, ಆರೋಗ್ಯ ಕುರಿತು ಕಿಂಚಿತ್ತೂ ತಿಳಿವಳಿಕೆ ಇರದ ಶ್ರೀರಾಮುಲು ಆರೋಗ್ಯ ಸಚಿವರಾಗಿರುವ ಈ ಸರ್ಕಾರಕ್ಕೆ ಇಂತಹುದೊಂದು ಕಡಿಮೆ ಖರ್ಚಿನ, ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಔಷಧಿಯನ್ನು ಬಳಸಿ ಜನರನ್ನೇಕೆ ಕಾಪಾಡಬಾರದು ಎನ್ನುವ ಆಲೋಚನೆಯೇ ಬಂದಿಲ್ಲ. ಅಲೋಪತಿ ಮಾಫಿಯಾದ ಕಬಂಧ ಹಿಡಿತ ಆಯುಷ್ ಇಲಾಖೆಯ ಮೇಲೂ ಇರುವುದರಿಂದ ಸರ್ಕಾರವನ್ನು ಇಂತಹ ಸ್ಥಿತಿಗೆ ದೂಡಿರುವುದು ಗುಟ್ಟಾಗಿಲ್ಲ. ಒಂದೇ ಕೋವಿಡ್ ಟೆಸ್ಟಿಗೆ 4,500 ರೂ. ತೆರಬೇಕಾಗಿರುವ ಜನಸಾಮಾನ್ಯರಿಗೆ 250 ರೂ. ಖರ್ಚಿನಲ್ಲಿ ಕೊರೋನಾದಿಂದ ಗುಣಮುಖರಾಗುವ ಆಯುರ್ವೇದ ಔಷಧಿಯನ್ನೇಕೆ ಒದಗಿಸಬಾರದು? ಹಾಗೆ ಮಾಡಿದರೆ ಕೋಟಿಗಟ್ಟಲೆ ಆದಾಯ ತರುವ ಪಿಪಿಇ ಕಿಟ್, ಐಸೋಲೇಶನ್ ವಾರ್ಡ್, ಐಸಿಯು ವಾರ್ಡ್, ಇತ್ಯಾದಿಗಳ ಗತಿಯೇನು ಎಂಬ ಚಿಂತೆ ಅಲೋಪತಿ ಮಾಫಿಯಾ ಹಾಗೂ ಸರ್ಕಾರವನ್ನು ಕಾಡಿರಬಹುದು!
ಆಯುರ್ವೇದ ಔಷಧಿಗಳಿಗೆ ಉತ್ತೇಜನ ನೀಡದ ಸರ್ಕಾರದ ಈಗಿನ ಕ್ರಮಗಳಿಂದಾಗಿ ಜನರಿಗಂತೂ ಸರ್ಕಾರದ ಮೇಲೆ ಗುಮಾನಿ ಶುರುವಾಗಿದೆ. ಸರ್ಕಾರದ ಉದ್ದಿಶ್ಯ-ಕೋವಿಡ್ ನೆಪದಲ್ಲಿ ದುಡ್ಡು ಮಾಡುವುದೋ ಅಥವಾ ಸೋಂಕಿತರನ್ನು ಗುಣಪಡಿಸುವುದೋ ಎಂಬ ಜಿಜ್ಞಾಸೆಗೆ ಈ ವಿದ್ಯಮಾನ ಗ್ರಾಸವೊದಗಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈ ವಿಚಾರದಲ್ಲಿ ಜನರ ನಿಂದನೆಗೆ ಗುರಿಯಾಗಬೇಕಾಗಿದೆ.
ಅದೇನೇ ಇರಲಿ, ಲೇಖನದ ಆರಂಭದಲ್ಲೇ ಹೇಳಿರುವಂತೆ ಕೊರೋನಾ ಹೆಮ್ಮಾರಿಯನ್ನು ಒದ್ದೋಡಿಸುವುದು ಬಹುತೇಕರು ತಿಳಿದಿರುವಂತೆ ಕಷ್ಟಕರವೇನೂ ಅಲ್ಲ. ಆದರೆ ಅದಕ್ಕೆ ಬೇಕಾಗಿರುವುದು ನಕಾರಾತ್ಮಕ ಚಿಂತನೆಗಳಲ್ಲ, ದುಬಾರಿ ಪಿಪಿಇ ಕಿಟ್‌ಗಳಲ್ಲ, ದುಬಾರಿ ಚಿಕಿತ್ಸೆಯೂ ಅಲ್ಲ. ಪ್ರಬಲ ಇಚ್ಛಾಶಕ್ತಿ, ಸಕಾರಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಜನಸಮೂಹ ರೂಢಿಸಿಕೊಂಡರೆ ಖಂಡಿತ ಕೊರೋನಾ ತೊಲಗಬೇಕಾಗುತ್ತದೆ.
ನಾವೆಲ್ಲರೂ ಸೇರಿ ಕೊರೋನಾವನ್ನು ಒದ್ದೋಡಿಸೋಣ. ಇನ್ನೂ ಎಷ್ಟು ದಿನಾಂತ ಕೊರೋನಾ ಚಿಂತನೆಯಲ್ಲೇ ಭಯಭೀತರಾಗಿ ಇರೋದು!
ದು.ಗು. ಲಕ್ಷ್ಮಣ: ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ’ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ’ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.