ಎತ್ತರದ ನಿಲವು, ಆ ಎತ್ತರದ ಕಾಯಕ್ಕೆ ಶುದ್ಧ ಖಾದಿಯ ಸೊಬಗು. ಕನ್ನಡದ ಜತೆಗೆ ಇಂಗ್ಲೀಷೂ, ಹಿಂದಿಯನ್ನು ಕರ್ನಾಟಕಿಯದ ಹಿಂದೋಳ, ಹಿಂದೂಸ್ತಾನಿಯ ಮಾಲಕಂಸದಷ್ಟೆ ಸುಮಧುರವಾಗಿ ಮಿಳಿತಗೊಳಿಸಿ ಹೃದಯಕ್ಕೆ ಮುಟ್ಟಿಸುತ್ತಿದ್ದ ಮಾತುಗಾರ ಮತ್ತು ಮೋಡಿಗಾರ. ಅವರೇ ಹೆಗ್ಗನಹಳ್ಳಿ ನಾರಾಯಣ ಶಾಸ್ತ್ರೀ ಅನಂತ ಕುಮಾರ್ ಅಥವಾ ಎಚ್.ಎನ್. ಅನಂತ ಕುಮಾರ್.
ಇಂದು ಅವರ ಹುಟ್ಟುಹಬ್ಬ. ವಿಶೇಷವೆಂದರೆ ಅವರಿಗೆ ಎರಡು ಹುಟ್ಟುಹಬ್ಬಗಳು. ಒಂದು ಜುಲೈ 22, ಇದು ಶಾಲಾ ದಾಖಲೆಗಳಲ್ಲಿರುವುದು. ಇನ್ನೊಂದು ಸೆಪ್ಟೆಂಬರ್ 22, ಇದು ನಿಜವಾದ ಜನ್ಮದಿನ. ಸ್ವತಃ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರೇ ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
***
1999ರ ಸುಮಾರು, ವಿಂಡ್ಸರ್ ಮ್ಯಾನರ್ ಹೊಟೇಲಿನಲ್ಲೊಂದು ಸೆಮಿನಾರು. ಬಹಶಃ ಮಧ್ಯಾಹ್ನ ಒಂದೂವರೆ ಗಂಟೆ, ಅಥವಾ ಅರ್ಧ ಗಂಟೆ ಆಚೀಚೆ ಇದ್ದರೂ ಇದ್ದೀತು. ಸೆಮಿನಾರು ಮುಗಿಯಿತು. ಬಂದಿದ್ದ ಪತ್ರಕರ್ತರೆಲ್ಲ ಅವರನ್ನು ಮುತ್ತಿಕೊಂಡು ಹತ್ತಾರು ಪ್ರಶ್ನೆಗಳನ್ನು ಸಂಧಿಸಿದರು. ಅವಕ್ಕೆ ಅವರೂ ಅಷ್ಟೇ ಸಲೀಸಾಗಿ ಉತ್ತರಕೊಟ್ಟು ಬಿರಬಿರನೇ ಮುಖ್ಯದ್ವಾರದಲ್ಲಿ ಬಂದು ನಿಂತಿದ್ದ ತಮ್ಮ ಬಿಳೀ ಅಂಬಾಸಿಡರು ಕಾರಿನತ್ತ ಸಾಗಿದರು. ನಾನು ಎತ್ತರದಲ್ಲಿ ಅವರ ಭುಜಕ್ಕೂ ಕೆಳಗಿದ್ದೆ. ಈ ಚಾನ್ಸ್ ಬಿಟ್ಟರೇ ಮತ್ತೆ ಸಿಗದು ಎಂದು ಓಡಿದೆ. ನಾನು ಹಾಗೆ ಓಡಿಬಂದಿದ್ದನ್ನು ಕಂಡು ಕಾರು ಡೋರು ಹಿಡಿದಿದ್ದ ಅವರು ಥಟ್ಟನೆ ನಿಂತರು. ಸಣ್ಣಗೆ ನಕ್ಕು ನನ್ನಡೆಗೆ ದಿಟ್ಟಿಸಿ ನೋಡಿದರು. ಅವರು ಮಾತನಾಡುವ ಮುನ್ನವೇ ಪರಿಚಯ ಮಾಡಿಕೊಂಡೆ ನಾನು.
“ನಮಸ್ಕಾರ ಸರ್, ನನ್ನ ಹೆಸರು ಚನ್ನಕೃಷ್ಣ. ಸಂಯುಕ್ತ ಕರ್ನಾಟಕ ರಿಪೋರ್ಟರ್. ಒಂದೆರಡು ಪ್ರಶ್ನೆ ಕೇಳುವುದಿತ್ತು” ಎಂದೆ. ಹಾಗೆ ತಡೆದದ್ದಕ್ಕೆ ಅವರು ಉತ್ತರಿಸುತ್ತಾರಾ ಎಂಬ ಡೌಟಿತ್ತು.
‘ಸಂಯುಕ್ತ ಕರ್ನಾಟಕ’ ಎಂದ ಕೂಡಲೇ ಅವರು ಹಿಡಿದಿದ್ದ ಕಾರಿನ ಡೋರು ಬಿಟ್ಟು ಕೊಂಚ ಈಚೆ ಬಂದರು. ಅವರಿಗೆ ‘ಸಂಕ’ ಎಂದರೆ ವಿಶೇಷ ಮಮತೆ ಇತ್ತು ಎನಿಸುತ್ತದೆ. ಆ ಕೂಡಲೇ ಅವರು ಕೇಳಿದ ಮೊದಲ ಪ್ರಶ್ನೆ, “ಶಾಮರಾಯರು ಚೆನ್ನಾಗಿದ್ದಾರಾ?” ಎಂದು. ನಾನು, “ಚೆನ್ನಾಗಿದ್ದಾರೆ ಸರ್..” ಎಂದೆ. “ಏನು ನಿಮ್ಮ ಪ್ರಶ್ನೆ?”
ನನ್ನ ಪ್ರಶ್ನೆಗೆ ಉತ್ತರಿಸಲು ನಿಂತರು. ನನಗೆ ನೆನಪಿದ್ದ ಮಟ್ಟಿಗೆ 6ರಿಂದ 10 ಪ್ರಶ್ನೆ ಕೇಳಿರಬಹುದು ನಾನು. ಕಾರಿನ ಮುಂದೆಯೇ ಅಡ್ಡಗಟ್ಟಿದ ನನಗೆ ತಾಳ್ಮೆಯಿಂದಲೇ ಉತ್ತರ ಕೊಟ್ಟರಲ್ಲದೆ, ಮಾತು ಮುಗಿಸಿ ಹೊರಡುವಾಗ, ಶೇಕ್ ಹ್ಯಾಂಡ್ ಕೊಟ್ಟು, “ನಿಮ್ಮ ಹೆಸರೇನಂದ್ರಿ?” ಎಂದು ಕೇಳಿದರು. “ಸರ್, ಚನ್ನಕೃಷ್ಣ” ಎಂದೆ. “ನಿಮ್ಮ ಹೆಸರಿನಷ್ಟೇ ನಿಮ್ಮ ಪ್ರಶ್ನೆಗಳು ಚೆನ್ನಾಗಿದ್ದವು, ಒಳ್ಳೆಯದಾಗಲಿ” ಎಂದು ಹೇಳಿ ಮತ್ತೊಮ್ಮೆ ಕೈಕುಲಕಿ ಹೊರಟರು.
ಅವರು ಯಾರು ಅಂತೀರಾ? ಹೆಗ್ಗನಹಳ್ಳಿ ನಾರಾಯಣ ಶಾಸ್ತ್ರೀ ಅನಂತ ಕುಮಾರ್ ಅಥವಾ ಎಚ್.ಎನ್. ಅನಂತ ಕುಮಾರ್. ಕರ್ನಾಟಕ ಕಂಡ ನೀಟ್ ಅಂಡ್ ನೀಟ್ ರಾಜಕಾರಣಿ. ಕನ್ನಡ ಮತ್ತು ಹಿಂದಿಯ ನಡುವಿನ ಮರೆಯಲಾಗದ ಸ್ನೇಹಸೇತು.
***
1999ರಲ್ಲೇ. ಆಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಷಯ ಕಗ್ಗಂಟಾಗಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜೆ.ಎಚ್. ಪಟೇಲರ ಸರಕಾರಕ್ಕೂ ಟಾಟಾ ಗ್ರೂಪ್ ನೇತೃತ್ವದ ಕನ್ಸಾರ್ಷಿಯಂಗೂ ಅದೇನೋ ಸರಿಹೊಂದದೆ ಟಾಟಾದವರು ಯೋಜನೆಯಿಂದ ಹಿಂದೆ ಸರಿಯುವ ಆಲೋಚನೆ ಮಾಡುತ್ತಿದ್ದರು. ಆ ಗ್ರೂಪಿನ ಅಧಿಕಾರಿಗಳು ಯೋಜನೆಯಿಂದ ಹೊರ ನಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಅದು ಆ ದಿನದ ರಾಜ್ಯದ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಪ್ರಮುಖವಾಗಿ ವರದಿಯಾಗಿತ್ತು. ಅದರ ಬಗ್ಗೆ ಅವರನ್ನು ಕೇಳುವುದಿತ್ತು ನನಗೆ. ಕಾರಣವಿಷ್ಟೇ, ಅಟಲ್ ಬಿಹಾರಿ ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ಅವರು ನಾಗರೀಕ ವಿಮಾನಯಾನ ಖಾತೆ ಮಂತ್ರಿಯಾಗಿದ್ದರು. ಆವತ್ತು ನಾನು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದರಲ್ಲದೆ, ಅವರನ್ನು ಹಾಗೆ ಬಾಗಿಲಲ್ಲಿ ನಿಲ್ಲಿಸಿ ಸಂದರ್ಶಿಸಿದ್ದು ನನ್ನ ಪಾಲಿಗೆ ಹೊಸ ಅನುಭವ, ಜತೆಗೆ ಹೆಮ್ಮೆಯೂ ಹೌದು. ಆವರೆಗೆ ನಾನು ಕೇಂದ್ರ ಸಚಿವರೊಬ್ಬರನ್ನು ಹಾಗೆ ಎಕ್ಸ್’ಕ್ಲೂಸೀವ್ ಆಗಿ ಮಾತನಾಡಿದ್ದಿಲ್ಲ. ಅಂದು ನಾನು ಬರೆದ ಸುದ್ದಿ ‘ಸಂಕ’ದಲ್ಲಿ ಮಾತ್ರವೇ ಇತ್ತು. ಅನಂತ ಕುಮಾರ್ ಅವರ ಸೌಜನ್ಯದಿಂದ ಅದು ಸಾಧ್ಯವಾಗಿತ್ತು.
/ photo courtesy: ITC WINDSOR, BENGALURU
***
ಆಮೇಲೆ ‘ಸಂಯುಕ್ತ ಕರ್ನಾಟಕ’ ಬಿಟ್ಟು ‘ಕನ್ನಡಪ್ರಭ’ ಸೇರುವ ತನಕ ನಾನು ಹತ್ತಾರು ಸಲ ಅನಂತ ಕುಮಾರ್ ಅವರ ಕಾರ್ಯಕ್ರಮಗಳನ್ನೂ, ಪತ್ರಿಕಾಗೋಷ್ಠಿಗಳನ್ನು ವರದಿ ಮಾಡಿದ್ದೆ. ಈ ಕಾರಣಕ್ಕೆ ಹುಣಸವಾಡಿ ರಾಜನ್ ಮತ್ತು ಯಗಟಿ ಮೋಹನ್ ಅವರಿಗೆ ಕೃತಜ್ಞತೆ ಅರ್ಪಿಸಲೇಬೇಕು. 2000ರಲ್ಲಿ ನನಗೆ ಮದುವೆ ಅಂತ ಒಂದು ಆಯಿತು. ‘ಸಂಕ’ದಲ್ಲಿ ವರ್ಗಾವಣೆ ಭೀತಿ ಶುರುವಾಯಿತು. ನಾನು ಮದುವೆಯ ಆಹ್ವಾನ ಪತ್ರಿಕೆ ಕೊಟ್ಟು ರಜೆ ಕೇಳಲು ಹೋಗಿದ್ದಾಗಲೇ ಶಾಮರಾಯರು ಗುಡುಗಿದ್ದರು. “ಗಾಡಿ ಕೊಡಿಸುತ್ತೇನೆ, ರಿಪೋರ್ಟಿಂಗ್ ಮಾಡಿ ಮೇಲೆ ಬಾ ಅಂತ ಹೇಳಿದರೆ ಹೋಗಿ ಮದುವೆ ಆಗ್ತಾ ಇದೀಯಾ. 15 ದಿನ ಆಗಲ್ಲ. ವಾರ ಸಾಕು” ಎಂದು 7 ದಿನ ರಜೆ ಕೊಟ್ಟರು ರಾಯರು. ಆವತ್ತು ಗುಂಡಾಭಟ್ಟರು ನನ್ನ ಜೆತೆಗಿದ್ದರು. ರಾಯರು ನಸುನಗುತ್ತಲೇ ರಜೆಯನ್ನೂ ಕೊಟ್ಟು, ಆಶೀರ್ವಾದ ಮಾಡಿ ಕಳಿಸಿದ್ದರು. ಆದರೂ ಎತ್ತಂಗಡಿ ಆಗಬಹುದು ಎಂಬ ಸಣ್ಣ ಸುಳಿವೂ ಇತ್ತು.
***
ಹೀಗೆ ವರ್ಗಾವಣೆ ಭೀತಿಯಲ್ಲಿದ್ದ ನನಗೆ ಅಚಾನಕ್ಕಾಗಿ ‘ಕನ್ನಡಪ್ರಭ’ ಆಫರ್ ಬಂತು. ಒಂದು ದಿನ ವಿಧಾನಸೌಧದಲ್ಲಿ ಸಂಜೆ ರೌಂಡ್ಸ್’ನಲ್ಲಿದ್ದ ಹಿರಿಯರಾದ ಶಶಿಧರ ಭಟ್ಟರು ಸಿಕ್ಕಿ, (ಅವರು ಆಗ ಕನ್ನಡಪ್ರಭ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದರು..) “ಹೇಯ್, ಎಲ್ಲಿ ಹೋಗಿದ್ಯೋ. ನಮ್ಮ ಸತ್ಯ ನಿನ್ನನ್ನು ಹುಡುಕುತ್ತಿದ್ದರು” ಎಂದರು. ಸತ್ಯ ಎಂದರೆ ಕೆ. ಸತ್ಯನಾರಾಯಣ ಅವರು. ಆಗ ‘ಕನ್ನಡಪ್ರಭ’ ಸಂಪಾದಕರು. ಹೇಗಾದರೂ ಮಾಡಿ ಟ್ರಾನ್ಸ್’ಫರಿನಿಂದ ಪಾರಾದರೆ ಸಾಕು, ಹೊಸ ಹೆಂಡತಿ ಜತೆ ಒಂದಷ್ಟು ಬೆಂಗಳೂರು ಸುತ್ತಬೇಕು ಎಂಬ ಐಡಿಯಾದಲ್ಲಿದ್ದ ನನಗೆ ‘ಕನ್ನಡಪ್ರಭ’ ಬಂಗಾರದ ಅವಕಾಶದಂತೆ ಕಾಣಿಸಿತು. ಆಗ ವಿಧಾನಸೌಧದ ಕೆಳಮಹಡಿಯಲ್ಲಿದ್ದ ಆರೋಗ್ಯ ಸಚಿವ ಡಾ. ಎ.ಬಿ. ಮಾಲಕ ರಡ್ಡಿ ಅವರನ್ನು (ಆ ಹೊತ್ತಿಗೆ ಪಟೇಲರ ಸರಕಾರ ಹೋಗಿ ಎಸ್.ಎಂ. ಕೃಷ್ಣ ಸರಕಾರ ಬಂದಿತ್ತು. ಮಾಲಕ ರಡ್ಡಿ ಆರೋಗ್ಯ ಮಂತ್ರಿಯಾಗಿದ್ದರು. ಅವರು ವೃತ್ತಿಯಲ್ಲೂ ವೈದ್ಯರೇ ಆಗಿದ್ದರು) ಭಟ್ಟರ ಜತೆಯಲ್ಲೇ ಭೇಟಿ ಮಾಡಿ, ನಂತರ ನೇರ ಅವರ ಜತೆಯಲ್ಲೇ ಹೋಗಿ ಸತ್ಯ ಅವರನ್ನು ಕಂಡೆ. ಅವರು ಎದುರಿಗೆ ಸಿಕ್ಕಿದವರೆ, “ಡೆಸ್ಕಿನಲ್ಲಿ ಖಾಲಿ ಇದೆ, ಬರ್ತೀಯಾ?” ಎಂದರು. ನನಗೆ ಹೊಸ ಹೆಂಡತಿ ಬಿಟ್ಟರೆ ಕಣ್ಮುಂದೆ ಬೇರೇನೂ ಇರಲಿಲ್ಲ. ವರದಿಗಾರಿಕೆಯ ಮಹತ್ವ ಮರೆತುಹೋಗಿತ್ತು. “ಆಯ್ತು ಸರ್” ಎಂದೆ. ಆದಾದ ಎರಡು ವಾರಕ್ಕೆ ನಾನು ‘ಸಂಕ’ ಬಿಟ್ಟಿದ್ದೆ. ಆದರೆ ‘ಕನ್ನಡಪ್ರಭ’ದಲ್ಲಿ ರಿಪೋರ್ಟಿಂಗ್ ಅನ್ನೋದು ನನಗೆ ಗಗನದಷ್ಟೇ ದೂರ ಎನ್ನುವುದು ತಡವಾಗಿ ಗೊತ್ತಾಯಿತು!
***
ಮತ್ತೆ ಅನಂತ ಕುಮಾರ್ ಅವರನ್ನು ಭೇಟಿಯಾಗುವ ಅವಕಾಶವೇ ಸಿಗಲಿಲ್ಲ. ‘ಕನ್ನಡಪ್ರಭ’ದ ಡೆಸ್ಕಿನಲ್ಲಿಯೇ ನನ್ನ ಜರ್ನಲಿಸಂ ಬೇರೊಂದು ಹೊಸ್ತಿಲಿನತ್ತ ಹೊರಳಲು ದಾರಿಯಾಯಿತು. ಅದಾದ ಮೇಲೆ ‘ಸೂರ್ಯೋದಯ’, ಬಳಿಕ ‘ಈ ಸಂಜೆ’ ಮುಗಿಸಿಕೊಂಡು ‘ಹೊಸ ದಿಗಂತ’ಕ್ಕೆ ಬಂದಾಗ ಮತ್ತೆ ಅನಂತ ಕುಮಾರ್ ಅವರು ಸಿಕ್ಕರು. ಅಲ್ಲಿಗೆ ಹೋದ ಮೇಲೆ ವಾರಕ್ಕೆ ಒಮ್ಮೆಯೋ ಅಥವಾ ತಿಂಗಳಿಗೆ ಎರಡು ಸಲವಾದರೂ ಅವರನ್ನು ನೋಡುವ, ಇಲ್ಲವೇ ಮಾತನಾಡುವ ಅವಕಾಶ ತಪ್ಪದೇ ಇರುತ್ತಿತ್ತು. ಅವರದ್ದೇ ಪರಿವಾರದ ಪತ್ರಿಕೆಯಲ್ಲಿದ್ದ ನಮ್ಮೆಲ್ಲರನ್ನು ಕಂಡರೆ ಅವರಿಗೂ ಪ್ರೀತಿ ಇತ್ತು. ಆದರೆ ಯಾವತ್ತೂ ಅವರೊಂದಿಗೆ ವಿರಳವಾಗಿ ಸಮಯ ಕಳೆಯುವ ಅವಕಾಶ ಸಿಕ್ಕಿರಲಿಲ್ಲ.
***
ಹೀಗಿದ್ದಾಗ ಆ ದಿನವೂ ಬಂದಿತು. ಬೆಂಗಳೂರಿನಲ್ಲಿ ಆರ್.ಎಸ್.ಎಸ್’ನ ಅತಿದೊಡ್ಡ, ಮಹತ್ವದ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಡೆಯಿತು. ಸರಸಂಘ ಚಾಲಕರಾದ ಮೋಹನ್ ಜೀ ಭಾಗವತ್ ಅವರೂ ಬಂದಿದ್ದರು. ಅವರು ಎರಡು-ಮೂರು ದಿನ ಅವರು ಬೆಂಗಳೂರಿನಲ್ಲಿಯೇ ತಂಗಿದ್ದರು. ಆಗ ನಮಗೆ ‘ಹೊಸ ದಿಗಂತ’ದಲ್ಲಿ ಸಿಕ್ಕಾಪಟ್ಟೆ ಕೆಲಸವಿತ್ತು. ವಿಶೇಷ ಪುರವಣಿಗಳು, ವಿಶೇಷ ಪುಟಗಳನ್ನು ಮಾಡುವುದಿತ್ತು. 2009 ನವೆಂಬರ್ 22, 23ರಂದು ಈ ಕಾರ್ಯಕ್ರಮವಿತ್ತು. ಶಾಂತಾರಾಂ ಮತ್ತು ರವಿ ಪ್ರಕಾಶ್ ಅವರು ಭಾಗವತ್ ಅವರ ಸಂದರ್ಶನ ಮಾಡಿದ್ದರು. ಹೀಗಿರಬೇಕಾದರೆ, 22ರಂದು ಭಾನುವಾರ ಹಾಗೂ 23ರ ಸೋಮವಾರ ಎರಡೂ ದಿನವೂ ‘ಹೊಸ ದಿಗಂತ’ ಕಚೇರಿ ಇದ್ದ ಮಲ್ಲೇಶ್ವರದ ಬಾವೂರಾವ್ ದೇಶಪಾಂಡೆ ಭವನಕ್ಕೆ ಅನಂತ ಕುಮಾರ್ ಅವರು ಬಂದರು. ಅದೂ ಗಣವೇಷಧಾರಿಯಾಗಿ. 22ರಂದು ಸಂಘದ ಕಾರ್ಯಕ್ರಮ ಮುಗಿಸಿ ಗಣವೇಷದಲ್ಲೇ ಬಂದಿದ್ದ ಅನಂತ ಕುಮಾರ್ ಅವರ ಜತೆಯಲ್ಲಿ ನಾನೂ, ಆವತ್ತು ಗಣವೇಶಷದಲ್ಲೇ ಇದ್ದ ಶಾಂತಾರಾಂ, ಮತ್ತೂ ರವಿ ಪ್ರಕಾಶ್ ಫೋಟೋ ತೆಗೆಸಿಕೊಂಡೆವು. ಅವರೆಷ್ಟು ಸಂತೋಷದಿಂದ ಆ ಫೋಟೋಕ್ಕೆ ನಮ್ಮ ಜತೆ ಫೋಸು ಕೊಟ್ಟರೆಂದರೆ, ನನ್ನ ಸಂಗ್ರಹದಲ್ಲಿ ಅದು ಬೆಲೆ ಕಟ್ಟಲಾಗದ ಫೋಟೋವಾಗುತ್ತದೆ ಎಂಬುದು ಈ ಕ್ಷಣದವರೆಗೂ, ಅಂದರೆ ಈ ಲೇಖನ ಬರೆಯುವ ತನಕ ಗೊತ್ತಾಗಲಿಲ್ಲ. ಉದಯ ಕುಮಾರನೆಂಬ ನನ್ನ ದಿವಂಗತ ಗೆಳೆಯ ಆ ಕ್ಷಣದಲ್ಲಿ ಅಲ್ಲಿರದಿದ್ದರೆ ನನ್ನ ಬದುಕಿನ ಈ ನೆನಪು ಹೀಗೆ ಅಕ್ಷರಕ್ಕಿಳಿಯುತ್ತಿರಲಿಲ್ಲ. ಯಾಕೆಂದರೆ, ಆ ಹೊತ್ತಿಗೆ ಸೆಲ್ಫಿ ಕ್ಯಾಮೆರಾಗಳು ಬಂದಿರಲಿಲ್ಲ.
***
ಫೋಟೋಶೂಟ್ ಮುಗಿದ ಮೇಲೆ ಅಲ್ಲಿಯೇ ಪಕ್ಕದ ಕೋಣೆಯೊಂದರಲ್ಲಿಅನಂತ ಕುಮಾರ್ ಅವರು ತಮ್ಮ ಡ್ರೆಸ್ ಬದಲಿಸಿಕೊಂಡರು. ಗಣವೇಷ ತೆಗೆದು ಶ್ವೇತಧಾರಿಯಾಗಿ ಹೊರಬಂದರು. ಒಂದು ಚುಕ್ಕೆಯಷ್ಟೂ ಕಲ್ಮಶವಿಲ್ಲದ ಜುಬ್ಬಾ ಪೈಜಾಮಾ, ಅದರ ಮೇಲಿದ್ದ ಗ್ರೇ ಕಲರಿನ ವೆಸ್ಟ್’ಕೋಟ್ ಅವರ ಡ್ರೆಸ್ ಸೆನ್ಸ್’ಗೆ ಕಳಶವಿಟ್ಟಂತೆ ಇತ್ತು. “ಸ್ವಲ್ಪ ನೀರು ಬೇಕಲ್ಲ?” ಎಂದರು ಅವರು. ನಾವು ಮೊದಲ ಮಹಡಿಯಲ್ಲಿದ್ದ ‘ಹೊಸ ದಿಗಂತ’ ಕಚೇರಿಗೆ ಅವರನ್ನು ಕರೆದುಕೊಂಡು ಹೋದೆವು. ಎರಡು ಗುಟುಕು ನೀರು ಕುಡಿದು ಸುತ್ತಲೂ ಕಣ್ಣು ಹಾಯಿಸಿದರು. ಆಗ ಸಂಜೆ 7.50ರ ಸಮಯ. ಇಡೀ ಡೆಸ್ಕಿನ ತುಂಬಾ ಎಲ್ಲರೂ ಕೆಲಸದಲ್ಲಿ ತಲ್ಲೀನರಾಗಿದ್ದರು. ಆ ದೃಶ್ಯ ಕಂಡು ಅವರಿಗೆ ಮತ್ತೂ ಖುಷಿಯಾಯಿತು. ಎಲ್ಲರನ್ನೂ ಮಾತನಾಡಿಸಿದರು. ಪ್ರತಿಯೊಬ್ಬರ ಹೆಸರೂ ಕೇಳಿದರು. ಬಳಿಕ “ಇವತ್ತು ಸಂಘದ್ದೆಲ್ಲ ಏನು ಕವರ್ ಮಾಡಿದ್ದೀರಿ?” ಎಂದು ಕೇಳಿದರು. ಅವರಿಗೆ ಎಲ್ಲವನ್ನೂ ತೋರಿಸಲು ನಾವೇ ಸಜ್ಜಾಗಿದ್ದೆವು. ಅವರೇ ಕೇಳಿದ್ದು ನನಗೆ ಅಚ್ಚರಿಯೂ, ಸಂತೋಷವು ಉಂಟು ಮಾಡಿತು. ಖುಷಿ ಖುಷಿಯಾಗಿ ನಾನು ಮತ್ತು ರವಿ ಪ್ರಕಾಶ್ ಸೇರಿ ಅವರಿಗೆ ಆವತ್ತು ಬೆಳಗ್ಗೆ ಪತ್ರಿಕೆಯಲ್ಲಿ ಬಂದಿದ್ದ ಮೋಹನ್ ಜೀ ಅವರ ಸಂದರ್ಶನವನ್ನು ತೋರಿಸಿದೆವು. ಒಂದು ಪುಟದ ತುಂಬಾ ಬಂದಿದ್ದ ಸಂದರ್ಶನವನ್ನು ಪೂರ್ಣ ಓದಬೇಕು ಎಂದು ಹೇಳಿ ಆ ದಿನದ ಎಲ್ಲ ಪುರವಣಿಗಳನ್ನೊಳಗೊಂಡ ಇಡೀ ಸಂಚಿಕೆಯನ್ನು ಕೇಳಿ ತೆಗೆದುಕೊಂಡರು. ಅದಾದ ಮೇಲೆ ನಮ್ಮಿಬ್ಬರ ಉತ್ಸಾಹ ಇಮ್ಮಿಡಿಸಿ ಆವರೆಗೂ ನಾವು ’ಹೊಸ ದಿಗಂತ’ದಲ್ಲಿ ಮಾಡಿದ್ದ ‘ಸಾಧನೆ’ಗಳೆಲ್ಲವನ್ನೂ ಅವರ ಮುಂದಿಟ್ಟೆವು. ಜಸ್ಟ್ ನೀರು ಕುಡಿಯಲೆಂದು ಬಂದ ಅವರು ಮುಕ್ಕಾಲು ಗಂಟೆ ಮೀರಿ ನಮ್ಮ ಸುದ್ದಿಮನೆಯಲ್ಲೇ ಇದ್ದರು. ಒಂದು ‘ಹೊಸ ದಿಗಂತ’ದ ಬದಲಾವಣೆ ಅವರಿಗೆ ಖುಷಿ ತಂದಿತ್ತು. ಇನ್ನೊಂದು; ಈ ಪತ್ರಿಕೆ ಮತ್ತಷ್ಟು ಉತ್ತರೋತ್ತರವಾಗಿ ಬೆಳೆಬೇಕು ಎಂಬ ಕಳಕಳಿಯೂ ಅವರಲ್ಲಿತ್ತು.
ಇಷ್ಟಕ್ಕೆ ಸುಮ್ಮನಾಗಲಿಲ್ಲ ಅವರು. ಬೆಂಗಳೂರಿನಲ್ಲಿ ಎಷ್ಟು ಸ್ಟ್ಯಾಫ್ ಇದ್ದೀರಿ? ಎಷ್ಟು ಎಡಿಷನ್ನುಗಳಿವೆ? ದೆಹಲಿ ಸುದ್ದಿಗಳು ಹೇಗೆ ಬರುತ್ತವೆ? ಇತ್ಯಾದಿ ಸಂಗತಿಗಳನ್ನು ಕೇಳಿದರಲ್ಲದೆ, “ಇನ್ನು ನಾನು ಹೊರಡಬಹುದೇ?” ಎಂದರು. ನಾವು “ಆಯ್ತು ಸರ್” ಎಂದಾಕ್ಷಣ ಕೆಳಕ್ಕೊಮ್ಮೆ ಬಗ್ಗಿದರು. ನೆಲದಲ್ಲಿ ಅವರ ಶೂಗಳು ಇದ್ದವು. ಕೆಳಿಗಿನಿಂದಲೇ ಅವರು ಶೂಗಳನ್ನು ಕೈಯ್ಯಲ್ಲಿಟ್ಟುಕೊಂಡೇ ಮೇಲೆ ಬಂದಿದ್ದರು. ನಮ್ಮ ಕಚೇರಿ ಸಹಾಯಕ, “ಸರ್ ತಂದುಕೊಡಲೇ” ಎಂದಾಗ, “ಛೇ! ಬೇಡಪ್ಪ” ಎಂದರು. ಮತ್ತೆ, “ಇಲ್ಲೇ ಹಾಕಿಕೊಳ್ಳಿ” ಎಂದೆವು ನಾವು. “ಪರವಾಗಿಲ್ಲ, ಕೆಳಗೆ ಕಾರಿನ ಹತ್ತಿರ ಹಾಕಿಕೊಳ್ಳುತ್ತೇನೆ” ಎಂದರು. ನನಗೆ ಅರ್ಥವಾಗಲಿಲ್ಲ. ನಾವು ಅವರನ್ನು ಹಿಂಬಾಲಿಸಿದೆವು. ಕಾಂಪೊಂಡಿನ ಕೊನೆ ಅಂಚಿಗೆ ಬಂದಾಗ ಎರಡೂ ಶೂಗಳನ್ನು ಕೆಳಗೆ ಹಾಕಿ ಕಾಲಿಗೆ ಹಾಕಿಕೊಂಡರು. ಹಾಗೆಯೇ ಕಾರು ಹತ್ತಿದ ಅನಂತ ಕುಮಾರ್ ಅವರಿಗೆ ನಾವು, ಮುಖ್ಯವಾಗಿ ನಾನು ಕೊಟ್ಟ ಕಡೆಯ ಬೀಳ್ಕೊಡುಗೆ ಅದು. ಮತ್ತೆ ಅವರು ನಾನು ಅಲ್ಲಿದ್ದಷ್ಟು ದಿನ ’ಹೊಸ ದಿಗಂತ’ ಕಚೇರಿ ಕಡೆಗೆ ಬರಲಿಲ್ಲ.
***
‘ಹೊಸ ದಿಗಂತ’ಕ್ಕಿಂತ ‘ವಿಜಯ ಕರ್ನಾಟಕ’ ದೊಡ್ಡ ಪತ್ರಿಕೆಯೆಂದು ಹೋದ ನನಗೆ ಹೀಗೆ ಸಿಕ್ಕಿದ್ದ ಕೊಂಡಿಗಳೆಷ್ಟು ಮುಖ್ಯವಾಗಿದ್ದವು ಎಂಬ ಅರಿವೇ ಇರಲಿಲ್ಲ. ಅನೇಕರ ಸಂಪರ್ಕವೇ ತಪ್ಪಿಹೋಗಿತ್ತು. ಪತ್ರಕರ್ತನೊಬ್ಬನಿಗೇ ಆಗುವ ನಷ್ಟವದು. ಇವತ್ತು ಅವರ ಹುಟ್ಟುಹಬ್ಬ. ಅವರ ಜತೆಗಿನ ಎರಡು ಆವಿಸ್ಮರಣೀಯ ಘಟನೆಗಳು ನೆನಪಾದವು. ರಾಜ್ಯದಲ್ಲಿ ಅವರು ಸೃಷ್ಟಿಸಿ ಹೋದ ಶೂನ್ಯತೆ ತುಂಬಿಲ್ಲ, ಮತ್ತೂ ದೆಹಲಿ-ಬೆಂಗಳೂರು ನಡುವಿನ ಸ್ನೇಹಸೇತುವಿನತ್ತ ಒಮ್ಮೆ ನೋಡಿದರೆ ಅನಂತ ಕುಮಾರ್ ಎಂಬ ಪ್ರಖರ ಪ್ರತಿಭೆಯ ಪ್ರಭಾವಳಿ ಎದ್ದು ಕಾಣುತ್ತದೆ. ಕೆಲವರ ಜಾಗಗಳನ್ನು ತುಂಬುವುದು ಕಷ್ಟ. ಅವರ ಜಾಗವೂ ಅಷ್ಟೇ.
ಅವರಿಗೆ ಜನ್ಮದಿನದ ಶುಭಾಶಯಗಳು ಮತ್ತು ನನ್ನ ಹೃದಯಾಂತರಾಳದ ನಮಸ್ಕಾರಗಳು.