ಬೆಂಗಳೂರು: ಸದ್ಯಕ್ಕೆ ಕೋವಿಡ್ ಉಪಕರಣ ಖರೀದಿ ವ್ಯವಹಾರ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಬದಲಾಗಿದ್ದು, ಎರಡೂ ಕಡೆ ಜನರ ಜಪ ಶುರುವಾಗಿದೆ. ಮಾತೆತ್ತಿದರೆ ಜನರಿಗೆ ಲೆಕ್ಕ ಒಪ್ಪಿಸುತ್ತೇವೆ ಎನ್ನುತ್ತಿದ್ದಾರೆ ಎರಡೂ ಕಡೆವರು. ಇದೇ ವೇಳೆ ಶುಕ್ರವಾರದ ಹೊತ್ತಿಗೆ ರಾಜ್ಯದಲ್ಲಿ ಹೊಸದಾಗಿ 5,030 ಕೋವಿಡ್ ಪಾಸಿಟೀವ್ ಸೋಂಕಿತರು ಪತ್ತೆಯಾಗಿದ್ದಾರೆ.
ವಾರದಿಂದ ಸರಣಿ ಪತ್ರಿಕಾಗೋಷ್ಠಿಗಳ ಸದ್ದೇ ಸದ್ದು. ಸಿದ್ದರಾಮಯ್ಯ ಹಾಗೂ ಸರಕಾರವು ಮಾತಿನ ಚಕಮಕಿಗೆ ಬಿದ್ದಿರುವ ಬೆನ್ನಲ್ಲೇ ಕೋವಿಡ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳು ಪ್ರತಿಯೊಂದಕ್ಕೂ ಸಚಿವರ ಮುಖ ನೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ನಿರ್ಧಾರವನ್ನು ಸ್ವತಂತ್ರವಾಗಿ ಕೈಗೊಳ್ಳಲು ಅವರು ಹಿಂಜರಿಯುತ್ತಿದ್ದಾರೆ ಎಂಬ ಮಾಹಿತಿ ಇದೆ.
ಬಿಬಿಎಂಪಿ ಆಯುಕ್ತಗಿರಿಯಿಂದ ಅನಿಲ್ ಕುಮಾರ್’ರನ್ನು ವರ್ಗ ಮಾಡಿದ್ದು, ಮತ್ತೊಮ್ಮೆ ಅದೇ ಜಾಗಕ್ಕೆ ಮಂಜುನಾಥ್ ಪ್ರಸಾದ್ ಬಂದಿದ್ದು ಅಧಿಕಾರಿಗಳ ವಲಯದಲ್ಲಿ ದೊಡ್ಡದೊಂದು ಚರ್ಚೆಗೆ ಕಾರಣವಾಗಿದೆ. ರಾಜಕೀಯ ನಾಯಕರು ಕೈಗೊಳ್ಳುವ ನಿರ್ಧಾರಗಳಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆಂದು ವರ್ಗವಾದ ಅಧಿಕಾರಿಯೊಬ್ಬರ ಆಪ್ತಮಿತ್ರರೊಬ್ಬರು ಹೇಳಿದ ಮಾತು. ನನ್ನ ಹೆಸರು ಗೌಪ್ಯವಾಗಿರಲಿ ಎಂದು ಅವರು ಮನವಿ ಮಾಡಿದ್ದಾರೆ.
ಪ್ರೆಸ್ಮೀಟ್ ಮೇಲೆ ಪ್ರೆಸ್ಮೀಟ್:
ಗುರುವಾರ ಇಡೀ ಕೋವಿಡ್ ವ್ಯವಹಾರ ಸಾಕಷ್ಟು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮೊದಲು ಪತ್ರಿಕಾಗೋಷ್ಠಿ ನಡೆಸಿದ್ದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್. ಒಟ್ಟಾರೆ ಕೋವಿಡ್ ನಿರ್ವಹಣೆಯ ಹೆಸರಿನಲ್ಲಿ ಕಳೆದ 4 ತಿಂಗಳ ಅವಧಿಯಲ್ಲಿ 4,167 ಕೋಟಿ ರೂ. ಖರ್ಚು ಮಾಡಿದೆ ಸರಕಾರ. ಅದರಲ್ಲಿ ಬರೋಬ್ಬರಿ 2,000 ಕೋಟಿ ರೂ. ಸಚಿವರು, ಅಧಿಕಾರಿಗಳ ಕಿಸೆಗೆ ಸೇರಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಅವರು ಬಿಡಿಸಿಬಿಡಿಸಿ ಹೇಳಿದ ಲೆಕ್ಕ ಹೀಗಿದೆ; ಕಳೆದ 4 ತಿಂಗಳಲ್ಲಿ ಆರೊಗ್ಯ ಇಲಾಖೆಯೇ 700 ಕೋಟಿ ರೂ. ವೆಚ್ಚ ಮಾಡಿದೆ. ಜತೆಗೆ, ಬಿಬಿಎಂಪಿ, ಅದರ ಜತೆ ಸ್ಥಳೀಯ ಸಂಸ್ಥೆಗಳು 200 ಕೋಟಿ ರೂ., ಎಲ್ಲ ಜಿಲ್ಲಾಡಳಿತಗಳು ಸೇರಿ 742 ಕೋಟಿ ರೂ., ಇದರೊಂದಿಗೆ ಕಾರ್ಮಿಕ ಇಲಾಖೆಯಂತೂ1,000 ಕೋಟಿ ರೂ., ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 815 ಕೋಟಿ ರೂ., ಇವುಗಳ ಜತೆಗೆ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಗಳೆಲ್ಲ ಸೇರಿ 500 ಕೋಟಿ ರೂ.ಗಳನ್ನು ವೆಚ್ಚ ಮಾಡಿವೆ. ಮುಕ್ತ ಮಾರುಕಟ್ಟೆ ಬೆಲೆಗಿಂತ ಎರಡ್ಮೂರು ಪಟ್ಟು ಹೆಚ್ಚು ಹಣ ತೆತ್ತು ಕೋವಿಡ್ ಉಪಕರಣಗಳನ್ನು ಖರೀದಿ ಮಾಡಲಾಗಿದೆ ಎಂದು ಸಿದ್ದು ದೂರಿದ್ದಾರೆ.
ಪ್ರತಿ ವೆಂಟಿಲೇಟರ್‌ಗೆ ₹18 ಲಕ್ಷ!!:
ವೆಂಟಿಲೇಟರ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ದೂರಿರುವ ಸಿದ್ದರಾಮಯ್ಯ ಮತ್ತಷ್ಟು ಲೆಕ್ಕ ಕೊಟ್ಟಿದ್ದಾರೆ. ಕೇಂದ್ರ ಸರಕಾರವು ಪಿಎಂ ಕೇರ್ ನಿಧಿ ಅಡಿಯಲ್ಲಿ ಎಲ್ಲ ರಾಜ್ಯಗಳಿಗೆ 50 ಸಾವಿರ ವೆಂಟಿಲೇಟರ್‌ಗಳನ್ನು ಪೂರೈಸಿದೆ. ಆದರೆ ಅವುಗಳ ಖರೀದಿಗೆ ರಾಜ್ಯವು 2,000 ಕೋಟಿ ರೂ. ವೆಚ್ಚಿಸಿದೆ. ಈ ಲೆಕ್ಕದಲ್ಲಿ ನೋಡಿದರೆ, ಪ್ರತಿ ವೆಂಟಿಲೇಟರಿನ ಬೆಲೆ 4 ಲಕ್ಷ ರೂ., ಇದು ಹೀಗಿದ್ದರೆ, ಪಕ್ಕದ ತಮಿಳುನಾಡು ಪ್ರತಿ ವೆಂಟಿಲೇಟರ್‌ಗೆ ₹ 4.78 ಲಕ್ಷ ರೂ. ಕೊಟ್ಟು ಖರೀದಿಸಿದೆ. ನಮ್ಮ ಸರಕಾರ ಮಾರ್ಚ್ 22ರಂದು 5.60 ಲಕ್ಷ ರೂ., ಮತ್ತೊಮ್ಮೆ 12.30 ಲಕ್ಷ ರೂ.ಗಳಿಗೆ, ಮಾರ್ಚ್ 24ರಂದು 18.20 ಲಕ್ಷ ರೂ. ತೆತ್ತು ವೆಂಟಿಲೇಟರ್‌ಗಳನ್ನು ಖರೀದಿಸಿದೆ. ಇನ್ನು 9.65 ಲಕ್ಷದಷ್ಟು ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ರೀತಿಯ ಕಿಟ್‌ಗೆ ಮಾರುಕಟ್ಟೆಯಲ್ಲಿ ತಲಾ 330 ರೂ. ಬೆಲೆ ಇದೆ. ಆದರೆ, ಸರಕಾರ 2,117 ರೂ ನೀಡಿ ಕೊಂಡಿದೆ ಎಂಬುದು ಸಿದ್ದು, ಡಿಕೆಶಿ ಮಾಡಿದ ಆರೋಪ.
ಅಖಾಡಕ್ಕಿಳಿದ ಸಚಿವರು:
ಉಪ ಮುಖ್ಯಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಸಂಯುಕ್ತವಾಗಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರ ತಂಡವು, ಸಿದ್ದರಾಮಯ್ಯ ಮಾಡಿದ ಆರೋಪಗಳೆಲ್ಲವೂ ಕಪೋಲಕಲ್ಪಿತ ಮತ್ತು ಹಾಗೂ ಸುಳ್ಳುಲೆಕ್ಕಗಳಿಂದ ಕೂಡಿವೆ ಎಂದು ತಿರುಗೇಟು ನೀಡಿದರು. ಡಿಸಿಎಂ ಅವರೊಂದಿಗೆ ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಬಿ. ಶ್ರೀರಾಮಲು, ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರು ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರು ಸ್ಪಷ್ಟಪಡಿಸಿದ ಮಾಹಿತಿ ಹೀಗಿದೆ;
330 ರೂ. ಬೆಲೆಯ 1.5 ಲಕ್ಷ ಕಿಟ್’ಗಳನ್ನು ಸರಕಾರ ಖರೀದಿಸಿದೆ. ಆದರೆ, ಪ್ರತಿ ಕಿಟ್’ಗೆ 2,100 ರೂ. ನೀಡಿ ಚೀನಾ ದೇಶದಿಂದ ಪಿಪಿಇ ಕಿಟ್ ತಂದಿದ್ದಾರೆ ಅಂತ ಆರೋಪಿಸಿದ್ದಾರೆ. ಆದರೆ, ಮಾರ್ಚ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕದಲ್ಲಿಯೇ ಏಕೆ?, ಭಾರತದಲ್ಲಿಯೇ ಪಿಪಿಇ ಕಿಟ್’ಗಳ ಉತ್ಪಾದನೆ ಆಗುತ್ತಿರಲಿಲ್ಲ. ಆ ವೇಳೆ ಬೇರೆ ದಾರಿ ಇಲ್ಲದೆ ಚೀನಾದಿಂದಲೇ 3 ಲಕ್ಷ ಪಿಪಿಇ ಕಿಟ್’ಗಳನ್ನುತುರ್ತಾಗಿ ಖರೀದಿ ಮಾಡಲಾಯತು. ಎಲ್ಲರಿಗೂ ಗೊತ್ತಿರುವಂತೆ ಈಗ ಕೂಡ ಪ್ರತಿ ಒಂದು ಪಿಪಿಇ ಕಿಟ್ 3,900 ರೂ. ಬೆಲೆಯಂತೆ ಫ್ಲಿಪ್’ಕಾರ್ಟ್’ ಆನ್’ಲೈನ್ ಮಾರಾಟ ತಾಣದಲ್ಲಿ ಮಾರಾಟ ಆಗುತ್ತಿದೆ ಎಂಬುದನ್ನು ಗಮನಿಸಬಹುದು.
ಬೇಜವಾಬ್ದಾರಿ ಆರೋಪ:
ಮುಖ್ಯಮಂತ್ರಿ ಆಗಿದ್ದವರು, ಉಪ ಮುಖ್ಯಮಂತ್ರಿ ಕೂಡ ಆಗಿದ್ದವರು, ಬಹಳ ಕಾಲ ಹಣಕಾಸು ಸಚಿವರೂ ಆಗಿದ್ದವರು, ಜತೆಗೆ ಬೇರೆಬೇರೆ ಜವಾಬ್ದಾರಿಯುತ ಸ್ಥಾನಗಳಲ್ಲಿಯೂ ಕೆಲಸ ಮಾಡಿದವರೇ ಸ್ಪಷ್ಟ ದಾಖಲೆಗಳನ್ನು ಇಟ್ಟುಕೊಳ್ಳದೇ ಒಂದು ಜವಾಬ್ದಾರಿಯುತ ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅವರು ಸುಳ್ಳುಲೆಕ್ಕ ಹೇಳುತ್ತಿದ್ದಾರೆ ಮಾತ್ರವಲ್ಲ, ನಾಡಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೇವಲ ರಾಜಕೀಯಕ್ಕಾಗಿ ಸರಕಾರದ ಮೇಲೆ ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅತ್ಯಂತ ಅಪಾಯಕಾರಿ ನಡೆಯಾಗಿದೆ.
ಅವರೇ ಖರೀದಿಸಿದ್ದರು!:
2019ರಲ್ಲಿ ಅವರೇ ಅಧಿಕಾರದಲ್ಲಿ ಇದ್ದ ವೇಳೆಯಲ್ಲೇ 21 ಲಕ್ಷ ರೂ ಬೆಲೆಗೆ ಪ್ರತಿ ಒಂದು ವೆಂಟಿಲೇಟರನಂತೆ 9 ವೆಂಟಿಲೇಟರುಗಳನ್ನು ಖರೀದಿಸಲಾಗಿತ್ತು. ಜತೆಗೆ 15.12 ಲಕ್ಷಕ್ಕೂ ಅವುಗಳನ್ನುಖರೀದಿ ಮಾಡಿರುವುದೂ ಇದೆ. 14.51 ಲಕ್ಷ ಬೆಲೆಗೂ ಖರೀದಿಸಲಾಗಿದೆ. ಆಗ ಆರೋಗ್ಯ ಇಲಾಖೆಗೆ ಯಾವ ಒತ್ತಡವೂ ಇರಲಿಲ್ಲ, ಕೋವಿಡ್ ಕೂಡ ಇರಲಿಲ್ಲ. ನಾವು ಈ ಸಂಕಷ್ಟದ ಸಮಯದಲ್ಲಿನಾವು ಈ ಸಂಕಷ್ಟದ ಸಮಯದಲ್ಲಿ 80 ವೆಂಟಿಲೇಟರುಗಳನ್ನುಕೇವಲ ತಲಾ 5 ಲಕ್ಷ ರೂಪಾಯಿಗೆ ಖರೀದಿಸಿದ್ದೇವೆ. 28 ವೆಂಟಿಲೇಟರುಗಳನ್ನುಕೇವಲ 7 ಲಕ್ಷದಿಂದ 18 ಲಕ್ಷ ರೂ. ಒಳಗೆ ಖರೀದಿಸಿದ್ದೇವೆ. ಅದರಲ್ಲಿ ಕೆಲವು ಪ್ರತ್ಯೇಕ ವೈಷಿಷ್ಟ್ಯಗಳನ್ನು ಹೊಂದಿವೆ. ನೆರೆಯ ತಮಿಳುನಾಡು ಸರಕಾರ ವೆಂಟಿಲೇಟರುಗಳನ್ನು ಖರೀದಿಸಿದೆ ಎಂದು ಅವರದ್ದೇ ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಅವರಿಗೆ ಆಂಬುಲೆನ್ಸ್’ನಲ್ಲಿ ಹಾಕುವ ವೆಂಟಿಲೇಟರಿಗೂ ಆಸ್ಪತ್ರೆಯಲ್ಲಿ ಹಾಕುವ ವೆಂಟಿಲೇಟರಿಗೂ ವ್ಯತ್ಯಾಸವೇ ಗೊತ್ತಿಲ್ಲ.
ಮಾಸ್ಕುಗಳಲ್ಲಿ ಮುಚ್ಚಿಡುವುದೇನಿಲ್ಲ:
ನಮ್ಮ ಸರಕಾರವು 147 ಹಾಗೂ 97 ರೂ. ದರದಲ್ಲಿ ಮಾಸ್ಕ್’ಗಳನ್ನು ಖರೀದಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಈಗ ಒಂದು ಮಾಸ್ಕ್ ಬೆಲೆ 200 ರೂ.ವರೆಗೆ ಇದೆ. ಈಗ 47 ರೂಪಾಯಿಗೇ ಸಿಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಅತ್ಯಗತ್ಯ ವಸ್ತು ಕೂಡ. ಸರಕಾರಕ್ಕೆ ವಿವೇಚನೆ ಇದೆ. ಅಕೌಂಟಬಲಿಟಿ ಇದೆ. ಜತೆಗೆ, ಹ್ಯಾಂಡ್ ಸ್ಯಾನಿಟೈಸರ್ ಕುರಿತು ಎಸ್’ಎಂ ಕಂಪನಿಯಿಂದ ಸರಕಾರ ಖರೀದಿ ಮಾಡಿಲ್ಲ. ಅದೊಂದು ಹಳೆಯ ಕಂಪನಿ. ನಮ್ಮೆಲ್ಲ ಖರೀದಿವನ್ನು ನೀಡುತ್ತೇವೆ. 500 ಎಂಎಲ್ ಗಾತ್ರದ ಸ್ಯಾನಿಟೈಸರ್ ಬಾಟಲಿಯನ್ನು 250 ರೂ.ಗೆ ಖರೀದಿಸಲಾಗಿದೆ. ಮೈಸೂರಿನ ಸ್ಕ್ಯಾನ್ ರೇ ಕಂಪನಿಯಿಂದ 7.28 ಕೋಟಿ ರೂ. ಮೊತ್ತಕ್ಕೆ 130 ವೆಂಟಿಲೇಟರ್, ಹಾಗೂ ಕೆ.ಕೆ. ಅಲಿನೇಜ್’ ಕಂಪನಿಗೆ ಬೇಡಿಕೆ ಆದೇಶ ನೀಡಲಾಗಿದ್ದು, 12.32 ಲಕ್ಷ ರೂ. ಮೊತ್ತಕ್ಕೆ 10 ವೆಂಟಿಲೇಟರ್’ಗಳನ್ನು ಪೂರೈಸುವಂತೆ ಸೂಚಿಸಲಾಗಿದೆ. ಈ ಪೈಕಿ 8 ವೆಂಟಿಲೇಟರುಗಳಷ್ಟೇ ಪೂರೈಕೆಯಾಗಿವೆ. ಇನ್ನುಈವರೆಗೆ ಬಯೋಮೆಡಿಕ್ಸ್ ಎಂಬ ಕಂಪನಿ ವೆಂಟಿಲೇಟರ್’ಗಳನ್ನು ಸಪ್ಲೈ ಮಾಡಿಲ್ಲ. ಹೋ ಮೆಡಿಕ್ಸ್ ಕಂಪನಿಯೂ 13.44 ಲಕ್ಷ ರೂ. ಬೆಲೆಗೆ ಐದು ವೆಂಟಿಲೇಟರ್’ಗಳನ್ನು ಪೂರೈಸಿದೆ. ಕೆಲ ಕಂಪನಿಗಳು 2019ರಲ್ಲಿ ಇದೇ ವೆಂಟಿಲೇಟರುಗಳನ್ನು ತಲಾ ಒಂದಕ್ಕೆ 14 ಲಕ್ಷ ರೂ. ಬೆಲೆಯಂತೆ ತಮಿಳುನಾಡು ಆರೋಗ್ಯ ಇಲಾಖೆಗೆ ಪೂರೈಸಿವೆ. ನಮ್ಮ ಸರಕಾರಕ್ಕೆ 4 ಲಕ್ಷ ರೂ. ದರದಲ್ಲಿ ನೀಡಿವೆ. ಈ ಸರಕಾರ ಪ್ರತಿಯೊಂದು ವಸ್ತುವನ್ನು ಕೇಂದ್ರದ ಮಾರ್ಗಸೂಚಿಯಂತೆಯೇ ಖರೀದಿಸಲಾಗಿದೆ.
ಹೋಮ್ ವರ್ಕ್ ಮಾಡಬೇಕು:
ತಪ್ಪಿದ್ದರೆ ಗಮನಿಸಿ ಹೇಳಲಿ. ತಿದ್ದಿಕೊಳ್ಳಲು ಸರಕಾರ ತಯಾರಿದೆ. ಆದರೆ ಬರೀ ಸುಳ್ಳು ಹೇಳಿದರೆ ಹೇಗೆ? ಜನರು ಏನೆಂದುಕೊಳ್ಳುತ್ತಾರೆ? ಮೊದಲೇ ನೋವಿನಲ್ಲಿರುವ ಜನರು ಇದರಿಂದ ಮತ್ತಷ್ಟು ಘಾಸಿಗೊಳ್ಳುವುದಿಲ್ಲವೇ? ಇಂಥ ಸೂಕ್ಷ್ಮತೆಯೂ ಪ್ರತಿಪಕ್ಷ ನಾಯಕರಿಗೆ ಬೇಡವೇ? ಆರೋಪ ಮಾಡುವ ಮುನ್ನ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು. ಸೂಕ್ತ ರೀತಿಯಲ್ಲಿ ಹೋಮ್ ವರ್ಕ್ ಮಾಡಬೇಕು. ಹೋಮ್ ವರ್ಕ್ ಮಾಡದೇ ಮಾತನಾಡಿದರೆ ಹೀಗೆಯೇ ಅಗುತ್ತದೆ. ಇತ್ತೀಚೆಗೆ ಶ್ರೀರಾಮುಲು ನೀಡಿದ ಸ್ಪಷ್ಟನೆಯಿಂದ ಅವರಿಗೆ ಮುಖಭಂಗ ಆಗಿದೆ. ಯಾಕಿಷ್ಟು ಆತುರ? ಕೇಳಲು ಸದನ ಇರಲಿಲ್ಲವೇ? ಕೇವಲ ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಇವರೆಲ್ಲ ಹಿಂದೆ ಏನೇನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿಲ್ಲವೇ? ಗೊತ್ತಿದೆ ಇವರ ಬಂಡವಾಳ.
ಇದೇ ವೇಳೆ ಬಸವರಾಜ ಬೊಮ್ಮಾಯಿ, ಡಾ. ಸುಧಾಕರ್, ಆಶೋಕ್ ಕೂಡ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದಾದ ಮೇಲ ಶುಕ್ರವಾರವು ಕೆಲ ಸುದ್ದಿವಾಹಿನಿಗಳಲ್ಲಿ ಕೋವಿಡ್ ಯುದ್ಧ ಮುಂದುವರೆದಿತ್ತು.
Lead photo: CKPhotography