ಕೋವಿಡ್ -19 ಕಷ್ಟಕಾಲದಲ್ಲಿ ಮನುಷ್ಯನ ಜೀವಕ್ಕೆ ಮೂರುಕಾಸಿನ ಬೆಲೆಯಿಲ್ಲ ಎಂಬುದು ಗೊತ್ತಾಗುತ್ತಿದೆ. ಕೊನೆಗೆ, ಸೋಂಕಿನ ಕಾರಣಕ್ಕೆ ಸತ್ತರೇ ಅಂಥ ಸಾವು ಯಾರಿಗೂ ಬೇಡ.. ಅಂಥ ಸಾವುಗಳ ಸುತ್ತ… ಹಿರಿಯ ಪತ್ರಕರ್ತ ದು.ಗು ಲಕ್ಷ್ಮಣ ಅವರು ಬರೆದಿದ್ದಾರೆ, ಓದಿ…
ಹುಟ್ಟಿದವರೆಲ್ಲರೂ ಸಾಯಲೇಬೇಕು. ಅದು ಪ್ರಕೃತಿ ನಿಯಮ. ಯಾರಿಗೆ ಯಾವಾಗ ಸಾವು ಬರುತ್ತದೆಂಬುದು ಮಾತ್ರ ನಿಗೂಢ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿ ಬೇಗ ಸಾಯದೆಯೂ ಇರಬಹುದು. ಆರೋಗ್ಯವಂತನೆಂದು ಕಾಣುವ ವ್ಯಕ್ತಿ ಬೇಗ ಸಾಯಲೂಬಹುದು. ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ಚೆನ್ನಾಗಿರುವ ವ್ಯಕ್ತಿ ದೀರ್ಘಕಾಲ ಬದುಕಲೂಬಹುದು. ಆದರೆ ಸಾವು ಇಂತಹುದೇ ಕ್ಷಣದಲ್ಲಿ ಸಂಭವಿಸುತ್ತದೆಂದು ಯಾವ ಜ್ಯೋತಿಷಿಗೂ ಹೇಳಲಸಾಧ್ಯ.
ಹುಟ್ಟು ಹೇಗೆ ಮಾನವನ ಬದುಕಿನಲ್ಲಿ ಒಂದು ಆಕಸ್ಮಿಕ ಘಟನೆಯೋ ಸಾವು ಒಂದು ನಿರೀಕ್ಷಿತ ಘಟನೆ. ಆದರೆ ಎರಡು ಸಂದರ್ಭಗಳಲ್ಲೂ ಆ ಘಟನೆ ಗೌರವ, ಮರ್ಯಾದೆಗಳನ್ನು ಬೇಡುತ್ತದೆ. ಹುಟ್ಟಿದಾಗ ಸಂಭ್ರಮ, ಸಡಗರ ಹೇಗೆ ಸಹಜ ಪ್ರಕ್ರಿಯೆಯೋ, ಸತ್ತಾಗ ಶ್ರದ್ಧಾಂಜಲಿಯ ಗೌರವ, ಗುಣಗಾನ ಅಷ್ಟೇ ಸಹಜ. ಎಂಥ ಪರಮ ನೀಚನೇ ಸತ್ತರೂ ಆತನ ಒಂದೆರಡು ಉತ್ತಮ ಗುಣಗಳನ್ನಾದರೂ ಆ ಹೊತ್ತಿನಲ್ಲಿ ಸ್ಮರಿಸಿಕೊಳ್ಳುವುದಿದೆ.
ಹೀಗೆ ಸಾವು ಕೂಡ ಮರ್ಯಾದೆ, ಗೌರವಕ್ಕೆ ಅರ್ಹವಾದ ಪ್ರತಿಯೊಬ್ಬರ ಬದುಕಿನ ಪ್ರಮುಖ ವಿದ್ಯಮಾನ ವಾಗಿದ್ದರೂ ಈ ಕೋವಿಡ್ 19ರ ದುರಿತ ಕಾಲದಲ್ಲಿ ಸಾವು ಅನಾಥವಾಗತೊಡಗಿರುವುದು ಕಾಲದ ಮಹಿಮೆಯೋ ಅಥವಾ ಮೂಢನಂಬಿಕೆಯ ಪರಾಕಾಷ್ಠೆಯೋ ಎಂಬುದು ಚಿಂತನಾರ್ಹ. ಬಹುತೇಕ ಪ್ರಸಂಗಗಳಲ್ಲಿ ಮೂಢನಂಬಿಕೆ ಹಾಗೂ ಅರಿವಿನ ಕೊರತೆಯಿಂದಾಗಿ ಕೋವಿಡ್ ಕಾರಣದಿಂದ ಸಾವಿಗೀಡಾದವರನ್ನು ಅನಾಥ ಶವದಂತೆ ಕಾಣಲಾಗಿದೆ. ಬಳ್ಳಾರಿಯಲ್ಲಿ ಕೋವಿಡ್ ಕಾರಣದಿಂದ ಸಾವಿಗೀಡಾದವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ಲಾಸ್ಟಿಕ್ ಶೀಟಿನಲ್ಲಿ ಸುತ್ತಿ ಪ್ರಾಣಿಗಳನ್ನು ಎಳೆದುಕೊಂಡು ಬರುವಂತೆ (ಪ್ರಾಣಿಗಳನ್ನೂ ಆ ರೀತಿ ಮಾಡುವುದಿಲ್ಲ) ನೆಲದ ಮೇಲೆ ಎಳೆದುಕೊಂಡು ಬಂದು ಮೊದಲೇ ತೋಡಿದ್ದ ಆಳವಾದ ಗುಂಡಿಗೆ ಒಟ್ಟಿಗೇ ಎಸೆದ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ನೋಡಿದ ಪ್ರಜ್ಞಾವಂತರೆಲ್ಲರೂ ಮರುಗಿದ್ದರು. ಯಾದಗಿರಿಯಲ್ಲಂತೂ ಆಸ್ಪತ್ರೆಯಲ್ಲಿ ಸಾವಿಗೀಡಾದ ಕೋವಿಡ್ ರೋಗಿಯನ್ನು ಪ್ಲಾಸ್ಟಿಕ್ ಶೀಟ್ನಲ್ಲಿ ಸುತ್ತಿ ಜೆಸಿಬಿಯಲ್ಲಿ ತಂದು ಗುಂಡಿಗೆ ಎಸೆಯಲಾಯಿತು.
ಮಂಗಳೂರು, ಬೆಂಗಳೂರು ಮತ್ತಿತರೆ ಕೆಲವೆಡೆಗಳಲ್ಲಿ ರೋಗದಿಂದ ಸಾವಿಗೀಡಾದವರ ಶವಗಳನ್ನು ಊರೊಳಗಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೇ ಜನರು ಅವಕಾಶ ನೀಡದೆ ಪ್ರತಿಭಟಿಸಿದರು. ಮಂಗಳೂರಿನಲ್ಲಿ ಬಿಜೆಪಿಯ ಶಾಸಕರೊಬ್ಬರು, ಅವರು ಸ್ವತಃ ವೈದ್ಯರಾಗಿದ್ದರೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಕೂಡದೆಂಬ ಸಾರ್ವಜನಿಕರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಬೆಂಗಳೂರಿನ ಒಂದೆರಡು ಕಡೆ ತಾವಿರುವ ಮನೆಯ ಸಮೀಪವೇ ಸ್ಮಶಾನವಿರುವುದರಿಂದ ಅಲ್ಲಿ ಕೋವಿಡ್ಡಿನಿಂದ ಸಾವಿಗೀಡಾದವರ ಅಂತ್ಯಸಂಸ್ಕಾರ ನಡೆಸಕೂಡದೆಂದು ಅಲ್ಲಿನ ಕೆಲವು ನಿವಾಸಿಗಳು ಪ್ರತಿಭಟಿಸಿದರು. ಮಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗದೆ ಕೊನೆಗೆ ಆ ಶವವನ್ನು ಬಂಟ್ವಾಳಕ್ಕೆ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಅಲ್ಲಿ ಇನ್ನೋರ್ವ ಬಿಜೆಪಿ ಶಾಸಕರು ತಮ್ಮ ಜಮೀನಿನಲ್ಲೇ ಶವ ಸಂಸ್ಕಾರಕ್ಕೆ ಅವಕಾಶ ನೀಡಿ ಮಾನವೀಯತೆ ಮೆರೆದಿದ್ದರು. ಬೆಂಗಳೂರಿನಲ್ಲಿ ಜನರ ಪ್ರತಿಭಟನೆ ಎದುರಿಸಿದ ಸಾವಿಗೀಡಾದ ವ್ಯಕ್ತಿಯ ಕುಟುಂಬದವರು ಕೊನೆಗೆ ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಅಂತೂ ಇಂತೂ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.
ಕೋವಿಡ್ ರೋಗ ಸಾವಿಗೀಡಾದವರಿಂದಲೂ ಹರಡುತ್ತದೆ ಎಂಬ ಮೂಢನಂಬಿಕೆಯೇ ಈ ಎಲ್ಲ ಅಧ್ವಾನಗಳಿಗೆ ಕಾರಣ. ಸೋಂಕು ಹರಡುವುದು ಮನುಷ್ಯನ ಉಸಿರಾಟದಿಂದ. ಉಸಿರಾಟವೇ ಇಲ್ಲದಿದ್ದಲ್ಲಿ ಸೋಂಕು ಹೊರಗೆ ಬರುವುದಾದರೂ ಹೇಗೆ? ಮೃತದೇಹದ ಪಕ್ಕದಲ್ಲೇ ಇದ್ದರೂ ಸೋಂಕು ಹರಡುವುದಿಲ್ಲ. ಆ ದೇಹವನ್ನು ಬರಿಗೈನಿಂದ ಸ್ಪರ್ಶಿಸಿದಲ್ಲಿ ಮಾತ್ರ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ವ್ಯಕ್ತಿ ಸತ್ತ ಬಳಿಕ ಸೂಕ್ತ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಸಬೇಕು ಎಂದು ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ, ನುರಿತ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ಮನುಷ್ಯ ಮೃತಪಟ್ಟ ಎರಡರಿಂದ ಆರು ಗಂಟೆಯೊಳಗೆ ವೈರಾಣು ಸಾಯುತ್ತದೆ. ಮೃತ ದೇಹ ಹಸ್ತಾಂತರಿಸುವಾಗ ಅದಕ್ಕಿಂತ ಹೆಚ್ಚು ಅವರು ಹಿಡಿದಿರುವುದರಿಂದ ದೇಹದಲ್ಲಿ ವೈರಾಣು ಇರುವುದಿಲ್ಲ. ಆದರೆ ಹೊದಿಕೆ, ಮೇಲ್ಮೈನಲ್ಲಿ ಇರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು. ಸಂಬಂಧಿಕರು ಮಾಸ್ಕ್ ಹಾಕಿಕೊಂಡು ದೂರದೂರ ನಿಂತು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರೆ ಏನೂ ತೊಂದರೆಯಾಗೋದಿಲ್ಲ ಎಂಬುದು ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಅವರ ಸ್ಪಷ್ಟ ಅಭಿಮತ.
ಸರ್ಕಾರದ ಸ್ಥಳೀಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಅವರೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಬೇಕು. ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವುದು ಅರ್ಥಹೀನ. ಯಾರೇ ಅಡ್ಡಿಪಡಿಸಿದರೂ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸುವ ಮೂಲಕ ಕಠಿಣ ಸಂದೇಶ ರವಾನಿಸಬೇಕೆಂದು ಮಂಗಳೂರಿನ ವೈದ್ಯ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಖಡಕ್ ಆಗಿಯೇ ಹೇಳಿದ್ದಾರೆ.
ಮೊದಲು ಯಾವುದೇ ವ್ಯಕ್ತಿ ಮೃತಪಟ್ಟರೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಧಾವಿಸುತ್ತಿದ್ದ ಜನರೇ ಈಗ ಕೋವಿಡ್ಡಿನಿಂದ ಮೃತಪಟ್ಟವರನ್ನು ಮಣ್ಣು ಮಾಡದಂತೆ ತಡೆಯಲು ಓಡೋಡಿ ಬರುತ್ತಿರುವುದು ವಿಪರ್ಯಾಸ. ಮೃತದೇಹದಿಂದಲೂ ಸೋಂಕು ಹರಡುತ್ತದೆ ಎಂಬ ಸುದ್ದಿಯ ಅಬ್ಬರದ ಮುಂದೆ ಮಾನವೀಯತೆ ಗೌಣವಾಗಿದೆ. ಮೃತ ಶರೀರದಿಂದ ಸೋಂಕು ಹರಡುವುದಿಲ್ಲ ಎಂದು ವೈದ್ಯರು ಪರಿಪರಿಯಾಗಿ ಹೇಳಿದರೂ ಜನರು ಕೇಳುತ್ತಿಲ್ಲ. ಶರೀರದಿಂದ ಉಸಿರೇ ಹೊರಡದಿದ್ದ ಮೇಲೆ ಸೋಂಕು ಹೇಗೆ ಹೊರಸೂಸುತ್ತದೆ? ಆ ಭೀತಿಯನ್ನು ಬಿಟ್ಟುಬಿಡಿ ಎಂದು ವೈದ್ಯಸಮೂಹ ವಿನಂತಿಸಿಕೊಂಡರೂ ಜನರು ಕ್ಯಾರೇ ಎನ್ನುತ್ತಿಲ್ಲ.
ಈಚೆಗೆ ತೀರ್ಥಹಳ್ಳಿ ತಾಲ್ಲೂಕಿನ ನನ್ನ ಆಪ್ತ ಸ್ನೇಹಿತರೊಬ್ಬರ ಬಂಧು ಶಿವಮೊಗ್ಗೆಯ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಅವರು ಸಾವಿಗೀಡಾದದ್ದು ಹೃದಯಾಘಾತ ಹಾಗೂ ಮೂತ್ರಪಿಂಡ ವೈಫಲ್ಯದಿಂದ. ಆದರೆ ಅವರು ಕೋವಿಡ್ಡಿನಿಂದಲೇ ಮೃತಪಟ್ಟಿದ್ದಾರೆಂದು ಸುದ್ದಿ ಹರಡಿತು. ಹಾಗಾಗಿ ಮೃತದೇಹವನ್ನು ಯಾವುದೇ ಕಾರಣಕ್ಕೂ ಊರಿಗೆ ತರಕೂಡದೆಂದು ಊರಿನ ವಿದ್ಯಾವಂತರೆನಿಸಿಕೊಂಡ ಬಂಧುಬಳಗದವರು ಮತ್ತಿತರರು ತಾಕೀತು ಮಾಡಿದರು. ಕೊನೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲೇ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು. ಅಂತ್ಯಸಂಸ್ಕಾರಕ್ಕೆ ಅಗತ್ಯವಾಗಿ ಬರಬೇಕಾದ ಕೆಲವು ಬಂಧುಗಳೂ ಬರಲಿಲ್ಲ. ಅನಾನುಕೂಲದಿಂದಲ್ಲ, ಕೋವಿಡ್ ಹೆದರಿಕೆಯಿಂದ! ಆದರೆ ಆ ಚಿತಾಗಾರವನ್ನು ತನ್ನ ಮನೆಯೆಂದೇ ಭಾವಿಸಿರುವ ಚಿತಾಗಾರದ ಮೇಲ್ವಿಚಾರಕಿ ಅನಸೂಯಮ್ಮ ಮಾತ್ರ ಸಕಲ ಗೌರವ ಮರ್ಯಾದೆ ಸಂಪ್ರದಾಯಗಳೊಂದಿಗೆ ಮೃತದೇಹದ ಅಂತ್ಯಸಂಸ್ಕಾರಕ್ಕೆ ನೆರವಾಗಿ ಮಾನವೀಯತೆ ಮೆರೆದರು. ಆಕೆಯೇನೂ ಅಂತಹ ವಿದ್ಯಾವಂತೆಯಲ್ಲ. ಆದರೆ ಅತ್ಯಂತ ಹೃದಯವಂತಳಾಗಿದ್ದರು. ವಿವೇಕವಂತೆಯಾಗಿದ್ದರು. ಹಾಗಾಗಿ ಕೋವಿಡ್ ಭೀತಿ ಆಕೆಯನ್ನು ಕಾಡಲಿಲ್ಲ. ನನ್ನ ಸ್ನೇಹಿತರ ಬಂಧುಬಳಗ ಈಗಲೂ ಕೋವಿಡ್ ಭೀತಿಯಿಂದ ಸಂತ್ರಸ್ತ ಕುಟುಂಬದೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಕೋವಿಡ್ ಕಾರಣಕ್ಕೆ ಸಾವು ಬರದಿದ್ದರೂ ಸುಖಾಸುಮ್ಮನೆ ಮೃತವ್ಯಕ್ತಿಗೆ ಕೋವಿಡ್ ಕಳಂಕ ಅಂಟಿಸಿಯೇಬಿಟ್ಟಿದ್ದಾರೆ!
ನಮ್ಮ ಪಕ್ಕದ ಮನೆಯವರು ಉಳಿದ ಸಮಯದಲ್ಲಿ ಬಹಳ ಆತ್ಮೀಯವಾಗಿ ಎಲ್ಲಿ ಸಿಕ್ಕಿದರೂ ಮಾತನಾಡುತ್ತಾರೆ. ಗೌರವಿಸುತ್ತಾರೆ. ಆದರೆ ಲಾಕ್ ಡೌನ್-1 ಮತ್ತು ಲಾಕ್ ಡೌನ್-2ರ ಸಂದರ್ಭದಲ್ಲಿ ನಾನು ಎದುರಿಗೆ ಸುಳಿದರೂ ಅಪ್ಪಿತಪ್ಪಿಯೂ ಅವರು ಮಾತನಾಡುವುದಿಲ್ಲ. ಮಾತನಾಡಿದರೆ ಎಲ್ಲಿ ಕೊರೋನಾ ಬಂದುಬಿಡುತ್ತದೆಯೋ ಎಂಬ ಭಯ! ಲಾಕ್ಡೌನ್ ಮುಗಿಯುತ್ತಿದ್ದಂತೆ ಮತ್ತೆ ಆತ್ಮೀಯವಾಗಿ ಮಾತಿಗೆ ಶುರುಹಚ್ಚಿಕೊಳ್ತಾರೆ. ಆಗ ಕೋವಿಡ್ ಭೀತಿ ಅವರನ್ನು ಕಾಡುವುದಿಲ್ಲ! ಅಷ್ಟಕ್ಕೂ ಅವರು ಕೂಡ ವಿದ್ಯಾವಂತರು!
ನಂಬಿಕೆ ಅಥವಾ ಮೂಢನಂಬಿಕೆಗಳನ್ನು ಇಟ್ಟುಕೊಳ್ಳುವುದು/ಇಟ್ಟುಕೊಳ್ಳದಿರುವುದು ಅವರವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿದ್ದು. ಅದರ ಬಗ್ಗೆ ನನ್ನದೇನೂ ತಕರಾರಿಲ್ಲ. ಆದರೆ ಪ್ರಜ್ಞಾವಂತಿಕೆ ಮೆರೆಯುವುದು, ಹೃದಯವಂತರಾಗುವುದು, ವಿವೇಕದ ನಡೆ ಪ್ರದರ್ಶಿಸುವುದು ಮಾನವ ಜನ್ಮದ ಶ್ರೇಷ್ಠ ಲಕ್ಷಣ.
ನಾವು ಎಂಥವರಾಗಬೇಕೆಂದು ನಾವೇ ನಿರ್ಧರಿಸೋಣ.