ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿದ್ದ ನಾಯತ್ವದ ಶೂನ್ಯತೆಯನ್ನು ಹಿರಿಯ ನಟ ಡಾ. ಶಿವರಾಜ್ ಕುಮಾರ್ ತುಂಬಿದ್ದಾರೆ. ಅಂಬರೀಶ್ ನಿಧನರಾದ ನಂತರ ಹೆಚ್ಚೂಕಮ್ಮಿ ಸ್ಯಾಂಡಲ್’ವುಡ್ಡಿನಲ್ಲಿ ಅವರ ನಂತರ ಯಾರು ನೇತೃತ್ವ ವಹಿಸಬೇಕು ಎಂಬ ಬಗ್ಗೆ ಅಲ್ಲಿಇಲ್ಲಿ ಚರ್ಚೆ ಆಗುತ್ತಿದ್ದದ್ದು ಸಾಮಾನ್ಯವಾಗಿತ್ತು. ಆಗೆಲ್ಲ ಶಿವಣ್ಣ ಬಿಟ್ಟರೆ ಇನ್ನಾರಿದ್ದಾರೆ ಎನ್ನುವ ಮಾತೇ ಹೆಚ್ಚು ಕೇಳಿಬರುತ್ತಿತ್ತು. ಆದರೆ, ಅನುಭವ ಹಾಗೂ ಹಿರಿತನದಲ್ಲಿಯೂ ಅವರು ಎಲ್ಲರಿಗೂ ಸರ್ವಸಮ್ಮತ ವ್ಯಕ್ತಿ. ಹೀಗೆಂದು ನಿದೇರ್ಶಕರೊಬ್ಬರೂ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಹೇಳಿದರು.
ಚಿತ್ರರಂಗದಲ್ಲಿ ಸದ್ಯಕ್ಕೆ ಇರುವ ಏಕೈಕ ಬಿಕ್ಕಟ್ಟು ಎಂದರೆ ಅದು ಕೋವಿಡ್-19 ಮಾತ್ರ. ಮಾರ್ಚ್ ತಿಂಗಳಲ್ಲಿ ರಾಜ್ಯಕ್ಕೆ ವೈರಸ್ ಬಂದಾಗಿನಿಂದ ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿವೆ. ಲಾಕ್’ಡೌನ್ ಕಾಲದಲ್ಲಂತೂ ಸಿನಿಮಾ ಕಾರ್ಮಿಕರು ತೀವ್ರ ಇಕ್ಕಟ್ಟಿಗೆ ಗುರಿಯಾಗಿದ್ದರು. ನಿರ್ಮಾಪಕರು, ಕಾರ್ಮಿಕರು, ಥಿಯೇಟರ್’ಗಳ ಮಾಲೀಕರು ಸೇರಿ ಚಿತ್ರರಂಗದ ಬಹುತೇಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಚಿತ್ರರಂಗಕ್ಕೆ ಪುನಶ್ಚೇತನ ನೀಡುವುದರ ಜತೆಗೆ, ಸರಕಾರದಿಂದ ಸಾಧ್ಯವಾದರೆ ಒಂದು ಪ್ಯಾಕೇಜ್ ಪಡೆಯುವುದು ಸದ್ಯದ ಎಲ್ಲರ ಯೋಚನೆ. ಹೀಗಾಗಿ ಈ ಎಲ್ಲ ಕೆಲಸಗಳಿಗೆ ಸೂಕ್ತ ವ್ಯಕ್ತಿ ಶಿವರಾಜ್ ಕುಮಾರ್ ಎಂಬುದು ಎಲ್ಲರಿಗೂ ಈಗ ಮನವರಿಕೆಯಾಗಿದೆ.
ಮುಖ್ಯವಾಗಿ ಶಿವರಾಜ್ ಕುಮಾರ್ ಅವರು ಚಿತ್ರರಂಗದ ನಾಯಕತ್ವದ ಬಗ್ಗೆ ಎಂದೂ ಮಾತನಾಡಿದವರಲ್ಲ, ಜತೆಗೆ ತಮ್ಮಲ್ಲಿಗೆ ಬರುತ್ತಿದ್ದ ಕೆಲ ಸಮಸ್ಯೆಗಳನ್ನುತಮ್ಮ ಮೆದುಮಾತಿನಲ್ಲಿಯೇ ಬಗೆಹರಿಸಿ ಚಿತ್ರರಂಗದ ಪಾಲಿಗೆ ತೆರೆಮರೆಯ ನಾಯಕರಾಗಿ ಹೊರಹೊಮ್ಮಿದ್ದರು. ಇದೀಗ ಬಹಿರಂಗ ನಾಯಕತ್ವವನ್ನು ವಹಿಸಬೇಕಾಗಿದೆ. ಕೋವಿಡ್ ಪೆಟ್ಟಿನಿಂದ ಕಂಗೆಟ್ಟಿರುವ ಚಿತ್ರರಂಗಕ್ಕೆ ಹೊಸ ಬೆಡಗು ನೀಡಬೇಕಾದ ಹೊಣೆಗಾರಿಕೆಯನ್ನು ಅವರ ಹೆಗಲಿಗೆ ಹಾಕಲಾಗಿದೆ. ಇಡೀ ಚಿತ್ರರಂಗದ ’ಅಜಾತಶತ್ರು’ವಾಗಿರುವ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು ಬಿಕ್ಕಟ್ಟಿಗೊಂದು ಪರಿಹಾರ ಹುಡುಕುತ್ತಾರೆಂಬ ನಂಬಿಕೆ ಎಲ್ಲರದು.
ಕಳೆದ ಶುಕ್ರವಾರ (ಜುಲೈ 24) ರಂದು ಇಡೀ ಚಿತ್ರರಂಗವೇ ಶಿವರಾಜ್ ಕುಮಾರ್ ಅವರ ಮನೆಯಲ್ಲಿತ್ತು. ಇಂಡಸ್ಟ್ರಿಯ ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದ ಸದಸ್ಯರು, ಮುಖ್ಯಸ್ಥರೆಲ್ಲರೂ ಶಿವಣ್ಣ ಅವರ ಮನೆಯಲ್ಲಿ ಸಭೆ ಸೇರಿದ್ದರು. ಮುಕ್ತವಾಗಿ ಎಲ್ಲ ಸಮಸ್ಯೆಗಳ ಬಗ್ಗೆ ಅಲ್ಲಿ ಚರ್ಚೆ ನಡೆಯಿತು. ಕೋವಿಡ್’ನಿಂದ ತಳಮುಟ್ಟಿರುವ ಚಿತ್ರರಂಗವನ್ನು ಮೇಲೆತ್ತುವುದು ಹೇಗೆಂಬ ಬಗ್ಗೆಯೇ ಮಹತ್ವದ ಚರ್ಚೆಯೂ ನಡೆಯಿತು. ಇದುವರೆಗೂ ಚಿತ್ರಮಂದಿರಗಳು ಕದ ತೆರೆದಿಲ್ಲ, ಮಲ್ಟಿಪ್ಲೆಕ್ಸುಗಳು ಮುಚ್ಚಿಕೊಂಡಿವೆ. ನಿರ್ಮಾಪಕರು ವಿಧಿ ಇಲ್ಲದೇ ಒಟಿಟಿ ಫ್ಲಾಟ್’ಫಾರ್ಮ್’ಗಳಲ್ಲಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಬೇಕಾಗಿದೆ. ಥೀಯಟರಿಕಲ್ ರಿಲೀಸ್ ಆಗದ ಕಾರಣ ನಿರ್ಮಾಪಕರು ತೀವ್ರ ಆತಂಕಗೊಂಡಿದ್ದಾರೆ. ಗ್ರಾಮೀಣ ಪ್ರೇಕ್ಷಕರಿಗೆ ಸಿನಿಮಾಗಳು ಸಿಗುತ್ತಿಲ್ಲ. ಹೀಗಾದರೆ ಮುಂದೇನು? ಜನರನ್ನು ಪುನಾ ಥಿಯೇಟರುಗಳಿಗೆ ಕರೆದುಕೊಂಡು ಬರುವುದು ಹೇಗೆ ಎಂಬ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಶಿವರಾಜ್ ಕುಮಾರ್ ಅವರ ಎದುರಿನಲ್ಲಿ ಚರ್ಚೆ ಮಾಡಲಾಗಿದೆ.
ಒಪ್ಪಿದ ಶಿವರಾಜ್ ಕುಮಾರ್:
ಎಲ್ಲ ಸಮಸ್ಯೆಗಳನ್ನು ಕೇಳಿಸಿಕೊಂಡ ಶಿವಣ್ಣ, ಒಂದು ಷರತ್ತಿನ ಮೇಲೆ ನಾಯಕತ್ವ ಒಪ್ಪಿಕೊಂಡಿದ್ದಾರೆ. ಎಲ್ಲರೂ ಮುಕ್ತಮನಸ್ಸಿನಿಂದ ಸಹಕಾರ ನೀಡಿದರೆ ಮಾತ್ರ ವಹಿಸಿರುವ ಜವಾಬ್ದಾರಿಯನ್ನು ಕಾಯಾ ವಾಚ ಮನಸಾ ಮಾಡುವೆ. ಇಡೀ ಚಿತ್ರರಂಗ ಇಂದು ಕುಟುಂಬದಂತೆ ಹೋರಾಟ ಮಾಡಿದರೆ ಯಾವುದೇ ಬಿಕ್ಕಟ್ಟಿಗೆ ಪರಿಹಾರ ಹುಡುಕುವುದು ಕಷ್ಟವೇನಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಹೀಗೆ ಅಂಬರೀಶ್ ಅವರು ನಿಧನರಾದ ಒಂದೂವರೆ ವರ್ಷದ ನಂತರ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವ ಸಿಕ್ಕಿದಂತೆ ಆಗಿದೆ.
’ಕನ್ನಡ ಚಿತ್ರರಂಗದ ಪರಂಪರೆ ದೊಡ್ಡದು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ನನ್ನ ಮಾತಿಗೆ ಚಿತ್ರರಂಗದ ಎಲ್ಲರೂ ಗೌರವ ನೀಡುತ್ತಾರೆಂದು ನಂಬಿದ್ದೇನೆ. ಮುಂದೆ ನಿಂತು ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುವೆ. ಸಿನಿಮಾ ರಂಗದಲ್ಲಿ ಎಲ್ಲರೂ ಒಂದೇ. ಅದಷ್ಟು ಬೇಗ ಸಿನಿಮಾ ಶೂಟಿಂಗ್ ಆರಂಭವಾಗುತ್ತದೆ. ನಮ್ಮೆಲ್ಲರ ಆಶಯವೂ ಇದೇ’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಈ ಪೈಕಿ ಶಿವಣ್ಣ ಬಹಳ ಮುಖ್ಯವಾದ ಒಂದು ಮಾತು ಹೇಳಿದ್ದಾರೆ.
’ಅನಿರೀಕ್ಷಿತವಾಗಿ ಕೋವಿಡ್ ಬಂದಿದೆ. ಇದಕ್ಕೆ ಹೆದರಬಾರದು. ಇದು ಅಂತಹ ದೊಡ್ಡ ವಿಚಾರವೂ ಅಲ್ಲ. ನಾವೆಲ್ಲ ಒಟ್ಟಾದರೆ ಅದನ್ನು ಹೆದರಿಸುವುದು ಕಷ್ಟವೇನಲ್ಲ. ನಾವೆಲ್ಲರೂ ಸರಕಾರದ ಜತೆಯೇ ಹೋಗೋಣ. ಸರಕಾರದ ಜತೆ ಚರ್ಚಿಸಿಯೇ ನಮ್ಮೆಲ್ಲರ ಸಮಸ್ಯೆಗೆ ಪರಿಹಾರ ಹುಡುಕೋಣ. ನನ್ನ ಮನೆಯವರೆಗೂ ಬಂದಿದ್ದ ಎಲ್ಲ ಪ್ರಮುಖರು ಮುಕ್ತವಾಗಿ ಎಲ್ಲ ವಿಚಾರಗಳನ್ನು ನನ್ನ ಜತೆ ಹಂಚಿಕೊಂಡಿದ್ದಾರೆ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಅದೇ ರೀತಿ ಎಲ್ಲರ ಸಹಕಾರವನ್ನೂ ನಾನು ಅಪೇಕ್ಷಿಸುತ್ತೇನೆ. ಕೇವಲ ಸಾವಿರ ಜನರನ್ನು ತನ್ನ ಹಿಂದೆ ಇಟ್ಟುಕೊಂಡರೆ ಮಾತ್ರ ನಾಯಕನಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನೂ ಕುಟುಂಬದಂತೆ ಒಟ್ಟಿಗೆ ಕರೆದುಕೊಂಡು ಹೋಗುವವನೇ ನಾಯಕ. ಚಿತ್ರರಂಗದಲ್ಲಿರುವ ಎಲ್ಲರಿಗೂ ನಾನೆಂದರೆ ಪ್ರೀತಿ-ಗೌರವ ಇದೆ. ಎಲ್ಲರೂ ಇಷ್ಟಪಡುತ್ತಾರೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ ಹಾಗೂ ಒಟ್ಟಾಗಿ ಕೆಲಸ ಮಾಡುತ್ತೇವೆ’.
ಅವರು ಹೇಳಿರುವ ಮಾತು ಬಹಳ ಚರ್ಚೆಗೆ ಗ್ರಾಸವಾಗಿದೆ. ಅನೇಕ ಸಂದರ್ಭಗಳಲ್ಲಿ ದಿಕ್ಕಿಗೊಬ್ಬರಂತೆ ಇದ್ದ ಚಿತ್ರರಂಗದಲ್ಲಿ ಈಗ ಒಗ್ಗಟ್ಟಿನ ಮಂತ್ರ ಜಪವಾಗುತ್ತಿದೆ. ಯಾಕೆ ಹೀಗೆ? ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೇಳಿದ್ದು ಹೀಗೆ.
“ಕನ್ನಡ ಚಿತ್ರರಂಗ ಇವತ್ತು ಬಹಳ ಸಂಕಷ್ಟದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಉಳಿಸುವ ನಾಯಕತ್ವ ನಮಗೆ ಬೇಕಿದೆ. ಅದಕ್ಕೆ ಶಿವರಾಜ್ ಕುಮಾರ್ ಅವರೇ ಸೂಕ್ತವಾದವರು” ಎಂದು ಅವರು ತಿಳಿಸಿದ್ದಾರೆ.
ನಿರ್ಮಾಪಕರೂ ಆದ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರೂ ಶಿವರಾಜ್ ಕುಮಾರ್ ನಾಯಕತ್ವದಲ್ಲಿ ಚಿತ್ರರಂಗಕ್ಕೆ ಒಳಿತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಯಕತ್ವದ ಕೊರತೆಯನ್ನು ಶಿವಣ್ಣ ಅವರು ಉತ್ತಮವಾಗಿ ನೀಗಿಸುತ್ತಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಫೂರ್ತಿಯಾದ ಸುದೀಪ್:
ಕೊರೊನಾ ಅಟ್ಟಹಾಸ ಮುಂದುವರೆದಿರುವ ಬೆನ್ನಲ್ಲಿಯೇ ‘ಫ್ಯಾಂಟಮ್’ ಚಿತ್ರದ ಶೂಟಿಂಗ್ ನಿರಾತಂಕವಾಗಿ ಸಾಗಿರುವುದು ಚಿತ್ರರಂಗಕ್ಕೆ ಕೊಂಚ ಧೈರ್ಯ ಬರುವಂತೆ ಮಾಡಿದೆ. ಕೋವಿಡ್ ವಿಚಾರದಲ್ಲಿ ಸರಕಾರ ವಿಧಿಸಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೊಂಡೇ ಸುದೀಪ್ ಮತ್ತವರ ತಂಡ ಚಿತ್ರೀಕರಣವನ್ನು ನಡೆಸಿದೆ. ವಿಶೇಷವೆಂದರೆ, ಆ ಚಿತ್ರದ ಸೆಟ್’ನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ತಂತ್ರಜ್ಞರು ಕನ್ನಡಿಗರೇ ಆಗಿದ್ದಾರೆ. ಇದು ಒಂದು ರೀತಿಯಲ್ಲಿ ಕನ್ನಡದ ಚಿತ್ರ ಕಾರ್ಮಿಕರು, ಟೆಕ್ನಿಷಿಯನ್ನುಗಳಿಗೆ ವರದಾನವಾಗಲಿದೆ ಎಂದು ಸ್ವತಃ ಶಿವರಾಜ್ ಕುಮಾರ್ ಹೇಳಿದ್ದಾರಲ್ಲದೆ, ಉಳಿದ ಚಿತ್ರಗಳ ಚಿತ್ರೀಕರಣ ಆದಷ್ಟು ಬೇಗ ಆರಂಭವಾಗಲಿದೆ ಎಂದು ಹೇಳಿದರು.
ಕೋವಿಡ್ ಕೊಟ್ಟ ಪೆಟ್ಟು:
ಕೋವಿಡ್’ನಿಂದ ತೀವ್ರ ಆರ್ಥಿಕ ಕುಸಿತ ಕಂಡಿರುವ ಕನ್ನಡ ಚಿತ್ರರಂಗ ನಿಜಕ್ಕೂ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸದ್ಯದ ಅಂದಾಜಿನ ಪ್ರಕಾರ, ನಮ್ಮ ಚಿತ್ರರಂಗ ಮೊದಲಿನಂತೆ ಸಹಜ ಸ್ಥಿತಿಗೆ ಬರಬೇಕಾದರೆ ಕಮ್ಮಿ ಎಂದರೂ ಕನಿಷ್ಟ ಎರಡರಿಂದ ಮೂರು ವರ್ಷಗಳಾದರೂ ಬೇಕು. ಈ ಬಿಕ್ಕಟ್ಟಿನಿಂದ ಉಂಟಾಗಿರುವ ಆರ್ಥಿಕ ಹೊಡೆತ ನೇರವಾಗಿ ನಿರ್ಮಾಪಕರ ಮೇಲೆಯೇ ಬಿದ್ದಿದೆ. ಸಿಕೆನ್ಯೂಸ್ ನೌ ಕಲೆಕ್ಟ್ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 90ರಿಂದ 100 ಸಿನಿಮಾಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ’ರಾಜ ವೀರ ಮದಕರಿ ನಾಯಕ’, ’ಕೋಟಿಗೊಬ್ಬ 3’, ’ರಾಬರ್ಟ್’ ಹಾಗೂ ’ಯುವರರತ್ನ’ದಂಥ ದೊಡ್ಡ ಬಜೆಟ್ ಚಿತ್ರಗಳ ಸ್ಥಿತಿಯೇ ಈಗ ಅಯೋಮಯವಾಗಿದೆ. ಇದರಿಂದ ಆಗಿರುವ ನಷ್ಟವೆಷ್ಟು ಎಂಬುದು ಅಂದಾಜು ಮಾಡುವುದೇ ಕಷ್ಟವಾಗಿದೆ. ಒಂದು ಅಂದಾಜಿನ ಪ್ರಕಾರ ಕೋವಿಡ್ ಕಾರಣದಿಂದ ಚಿತ್ರರಂಗಕ್ಕೆ 1000 ಕೋಟಿ ರೂ. ನಷ್ಟ ಉಂಟಾಗಿದೆಯಂತೆ. ಮುಂದೆ ಏನು ಮಾಡಬೇಕು ಎಂಬ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ ಎಂದು ನಿರ್ಮಾಪಕರೊಬ್ಬರು ಹೇಳುವ ಮಾತು.