ಬೆಂಗಳೂರು: ಕೋವಿಡ್-19 ಖರೀದಿಯಲ್ಲಿ ಪರಸ್ಪರ ಕಚ್ಚಾಟಕ್ಕೆ ತೊಡಗಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳತ್ತ ಪ್ರಶ್ಗಳ ಬಾಣಗಳನ್ನು ಹೂಡಿರುವ ಮಾಜಿ ಮುಖ್ಯಮಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎರಡೂ ಪಕ್ಷಗಳಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಡಳಿತ ಮತ್ತು ಪ್ರತಿಪಕ್ಷಕ್ಕೆ ಫೇಸ್’ಬುಕ್ಕಿನಲ್ಲಿ ನೇರ ಸವಾಲು ಹಾಕಿದ್ದಾರೆ.
ಅವರ ಪ್ರಕಾರ ಆರೋಪಗಳನ್ನು ಕೇಳಿಸಿಕೊಳ್ಳುತ್ತ ಸರಕಾರ ಕಾಲ ಹರಣ ಮಾಡುತ್ತಿದೆ. ಅದೇ ರೀತಿ ಕಾಂಗ್ರೆಸ್ ಕೂಡ ಬರೀ ಬಾಯಿಮಾತಿನ ಆರೋಪ ಮಾಡುತ್ತಾ ಸಮಯ ಹಾಳು ಮಾಡುತ್ತಿದೆ. ಆ ಪಕ್ಷಕ್ಕೆ ಈ ಹಗರಣವನ್ನು ಒಂದು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗುವ ಉದ್ದೇಶ ಇದ್ದಂತಿಲ್ಲ ಎಂದು ಎಚ್’ಡಿಕೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೇವಲ ಆರೋಪ- ಪ್ರತ್ಯಾರೋಪಗಳ ಮೂಲಕ ಎರಡೂ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ಈ ಕೆಸರೆರಚಾಟದಲ್ಲಿ ಏನಾದರೂ ರಾಜಕೀಯ ಅಡಗಿದೆಯಾ ಎಂಬ ಶಂಕೆಯೂ ಬರುತ್ತಿದೆ ಎಂದಿದ್ದಾರೆ ಅವರು. ಹಾಗಾದರೆ ಅವರು ಎತ್ತಿದ ಪ್ರಶ್ನೆಗಳೇನು?
ಈ ನಡುವೆ 4,000 ಕೋಟಿಗೂ ಹೆಚ್ಚು ಅಕ್ರಮ ಎಸಗಲಾಗಿದೆ ಎಂದು ಕಾಂಗ್ರೆಸ್ ದೂರಿದರೂ ಆ ಕಳಂಕದಿಂದ ಹೊರಬರುವ ಬಗ್ಗೆ ಬಿಜೆಪಿಯಾಗಲಿ ಅಥವಾ ಸರಕಾರವಾಗಲಿ ಚಕಾರ ಎತ್ತುತ್ತಿಲ್ಲ ಎಂದಿರುವ ಅವರು, ಸರಕಾರ ಒಂದು ವರ್ಷ ಪೂರೈಸಿದ ಹೊತ್ತಿನಲ್ಲಿ ಅವರು ಈ ಪ್ರಶ್ನೆಗಳನ್ನು ದೂಡಿರುವುದು ಎಲ್ಲರ ಗಮನ ಸೆಳೆದಿದೆ.
ಕಾಂಗ್ರೆಸ್’ಗೆ ಕೇಳಿದ ಪ್ರಶ್ನೆಗಳು:
1.ಕೋವಿಡ್ ಹಗರಣದ ಬಗ್ಗೆ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಎಲ್ಲಾ ದಾಖಲೆಪತ್ರಗಳಿದ್ದೂ ಈವರೆಗೆ ಯಾರ ವಿರುದ್ಧವೂ ಯಾಕೆ ಒಂದೇ ಒಂದು ದೂರು ದಾಖಲಿಸಿಲ್ಲ?
- ದೂರು ದಾಖಲು ಮಾಡದೇ ನಿತ್ಯ ಪತ್ರಿಕಾಗೋಷ್ಠಿಯಲ್ಲಿ ಬಂದು ಏರು ಧ್ವನಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರ ನಡೆಯ ಹಿಂದೆ ಪ್ರಚಾರಪ್ರಿಯತೆ ಅಡಗಿದೆಯೋ ಅಥವಾ ಸಾರ್ವಜನಿಕ ಹಣ ಅಪವ್ಯವಾಗುತ್ತಿದೆ ಎಂಬ ಪ್ರಾಮಾಣಿಕ ಕಾಳಜಿ ಇದೆಯೋ?
- ‘ಲೆಕ್ಕ ಕೊಡಿ’ ಎಂದು ಕಾಂಗ್ರೆಸ್ನ ಸಿಎಲ್ಪಿ ನಾಯಕರು ಕೇಳುತ್ತಾರೆ. ‘ಉತ್ತರ ಕೊಡಿ ಬಿಜೆಪಿ’ ಎಂದು ಪಕ್ಷದ ಅಧ್ಯಕ್ಷರು ಕೇಳುತ್ತಾರೆ. ನಿಮಗೆ ಉತ್ತರ, ಲೆಕ್ಕ ಕೊಟ್ಟರೆ ಸಾಕೆ? ಹಗರಣವನ್ನು ಕಾನೂನಾತ್ಮಕ ಹೋರಾಟದ ದಿಕ್ಕಿಗೆ ಕೊಂಡೊಯ್ಯುವ ಯಾವುದಾದರೂ ನಿಶ್ಚಿತ, ನಿಖರ ಯೋಜನೆ ಇದೆಯೇ?
- ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ ಸಂಸ್ಥೆಯ ರಕ್ತ, ಮಾಂಸವನ್ನು ಹೀರಿ, ತಿಂದು ಇದೇ ಕಾಂಗ್ರೆಸ್ ಸರಕಾರ ಎಸಿಬಿ ರಚಿಸಿತ್ತು. ಹಗರಣದ ಸಂಬಂಧ ಇದೇ ಸಂಸ್ಥೆಗೆ ಕಾಂಗ್ರೆಸ್ ದೂರು ನೀಡಬಹುದಿತ್ತಲ್ಲ? ಯಾಕೆ ಎಸಿಬಿ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇಲ್ಲವೇ?
- ಕೋವಿಡ್ ಅಕ್ರಮದ ಆರೋಪ ಮಾಡಿದಾಗಿನಿಂದ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆ, ಟ್ವೀಟ್, ಟ್ವಿಟರ್ ಟ್ರೆಂಡ್, ಪತ್ರ ಚಳವಳಿಗೆ ಮಾತ್ರ ಸೀಮಿವಾಗಿರುವುದನ್ನು ನೋಡುತ್ತಿದ್ದರೆ ಇದು ಕೇವಲ ಪ್ರಚಾರಕ್ಕಾಗಿ, ಸುದ್ದಿಯಲ್ಲಿರಲ್ಲಿಕ್ಕಾಗಿ ಮಾಡುತ್ತಿರುವ ಪ್ರಹಸನ ಎನಿಸುತ್ತಿದೆ. ಇದಕ್ಕೆ ನಿಮ್ಮ ಉತ್ತರವೇನು?
*ಜವಾಬ್ದಾರಿಯುತ ಪ್ರತಿಪಕ್ಷವಾಗಿರುವ ಕಾಂಗ್ರೆಸ್ಗೆ ಸಾರ್ವಜನಿಕರ ಹಣದ ಮೇಲೆ ಅಷ್ಟು ಕಾಳಜಿ ಇದ್ದರೆ ಮೊದಲು ಯಾವುದಾದರೂ ತನಿಖಾ ಸಂಸ್ಥೆಗೆ ಅಧಿಕೃತವಾಗಿ ದೂರು ದಾಖಲಿಸಲಿ. ಇದು ನನ್ನ ಸವಾಲು ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್’ಗೆ ಟಾಂಗ್ ನೀಡಿದ್ದಾರೆ.
ಬಿಜೆಪಿಗೆ ಕೇಳಿದ ಪ್ರಶ್ನೆಗಳು:
1.ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದರೂ ಬಿಜೆಪಿ ಯಾಕೆ ತನಿಖೆಯ ಆಗ್ರಹಗಳಿಗೆ ಕಿವಿಗೊಡುತ್ತಿಲ್ಲ. ತನಿಖೆಯ ಕಡೆಗೆ ಗಮನವನ್ನೇ ನೀಡದೇ ನಿಂದನೆಯನ್ನು ಯಾಕೆ ಹೊತ್ತು ತಿರುಗುತ್ತಿದೆ?
2.ನಿರ್ದಿಷ್ಟ ಸಚಿವರ ಮೇಲೆ ಗಂಭೀರ ಆರೋಪಗಳು ಬಂದರೂ ಅವರಿಂದ ರಾಜೀನಾಮೆ ಪಡೆದಿಲ್ಲ ಏಕೆ? ಇದೇನಾ ಜನರಿಗೆ ಯಡಿಯೂರಪ್ಪನವರ ಉತ್ತರದಾಯಿತ್ವ?
3.ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೆ ರಾಜಕೀಯದ ಒತ್ತಡ ಇರಬಹುದು. ಆದರೆ, ಅಧಿಕಾರಿಗಳ ವಿರುದ್ಧವಾದರೂ ಕ್ರಮ ಕೈಗೊಳ್ಳಬಹುದಿತ್ತು. ಈ ವರೆಗೆ ಒಬ್ಬೇ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡ ವರದಿ ಇಲ್ಲ. ಅಧಿಕಾರಿಗಳನ್ನು ಅಲ್ಲಲ್ಲಿಯೇ ಬಿಟ್ಟು ಸಾಕ್ಷ್ಯ ನಾಶಕ್ಕೇನಾದರೂ ಪ್ರಯತ್ನಿಸುತ್ತಿದ್ದೀರಾ?
4.ಕಾಂಗ್ರೆಸ್ ಮಾಡುತ್ತಿರುವ ಪತ್ರಿಕಾಗೋಷ್ಠಿಗಳಿಗೆ ಪ್ರತಿಯಾಗಿ ಸಚಿವರಿಂದ ಪತ್ರಿಕಾಗೋಷ್ಠಿಗಳನ್ನು ಮಾಡಿಸುತ್ತಿರುವ ಸರಕಾರ ಇಲ್ಲಿ ಪ್ರಚಾರ ಪಡೆಯಲೇನಾದರೂ ಪ್ರಯತ್ನಿಸುತ್ತಿದೆಯೇ? ಅದೂ ಐವರು ಸಚಿವರು ಒಟ್ಟೊಟ್ಟಿಗೆ ಬಂದು ಮಾಧ್ಯಮಗಳ ಮುಂದೆ ನಿಲ್ಲುವುದನ್ನು ನೋಡಿದರೆ ಮಂತ್ರಿಮಂಡಲದ ಸಹೋದ್ಯೋಗಿಗಳಲ್ಲಿ ಪ್ರಚಾರದ ದಾಹ ತೀವ್ರವಾಗಿರುವಂತೆ ಕಾಣದೇ?
5.ಹಗರಣದ ಬಗ್ಗೆ ಈ ವರೆಗೆ ಪ್ರತಿ ಹೇಳಿಕೆಗಳನ್ನೇ ನೀಡುತ್ತಿರುವ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿರುವುದು ನೋಡಿದರೆ, ಹಣ ಕದಿಯಲಾಗಿದೆ ಎಂದು ಅನಿಸದೇ? ಆಪರೇಷನ್ ಕಮಲಕ್ಕೆ ಮಾಡಿದ್ದ ಸಾಲ ತೀರಿಸಲು ಈ ಹಗರಣ ಮಾಡಿದ್ದೀರಾ?
ದೇಶದ ಅತಿ ಸ್ವಚ್ಛ, ಭ್ರಷ್ಟಾಚಾರ ರಹಿತ, ದೇಶವನ್ನು ವಿಶ್ವಗುರು ಪಟ್ಟಕ್ಕೇರಿಸಲು ಹೊರಟಿರುವ ಬಿಜೆಪಿ ಆರೋಪದಿಂದ ಮುಕ್ತಿ ಪಡೆಯಲು ಸೂಕ್ತ ನಡೆ ಅನುಸರಿಸಬೇಕು! ಹೀಗೆ ಎಚ್’ಡಿಕೆ ಅವರು ಬಿಜೆಪಿಗೂ ಬಲವಾದ ಪ್ರಶ್ನಾವಳಿ ಹಾಕಿದ್ದಾರೆ.
ಟಾರ್ಗೆಟ್ ಆದವರ ಮೌನ:
ಕುಮಾರಸ್ವಾಮಿ ಅವರು ಹಾಕಿರುವ ಪ್ರಶ್ನೆಗಳಿಗೆ ಬಿಜೆಪಿಯಾಗಲಿ, ಸರಕಾರವಾಗಲಿ ಹಾಗೂ ಕಾಂಗ್ರೆಸ್ ಆಗಲಿ ಉತ್ತರ ನೀಡಿಲ್ಲ. ಭಾನುವಾರ ಸಂಜೆ (ಜುಲೈ 26) ಸಂಜೆ 7.30 ಸುಮಾರಿಗೆ ಅವರು ಈ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಉತ್ತಿ ಈವರೆಗೂ ಅವರಿಗೆ ಸಿಕ್ಕಿಲ್ಲ. ಮೊದಲು ಆರೋಪ ಮಾಡಿದ ಸಿದ್ದರಾಮಯ್ಯ ಆಗಲಿ, ಆರೋಪಕ್ಕೆ ಗುರಿಯಾದ ಸಚಿವರಾಗಲಿ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ತಾವು ಮಾತ್ರ ಅವರ ಉತ್ತರಕ್ಕೆ ಕಾಯುತ್ತಿರುವುದಾಗಿ ಎಚ್’ಡಿಕೆ ತಿಳಿಸಿದ್ದಾರೆ.