ರಾಹುಲ್ ಗಾಂಧಿ ಪಡೆಗೆ ಟಾಂಗ್ ಕೊಟ್ಟ ಪ್ರಧಾನಿ ನರೇಂದ್ರ ಮೋದಿ
ವಿಧಾನ ಪರಿಷತ್ ರಿಸಲ್ಟ್ 2028ರ ಚುನಾವಣೆ ಜನಾದೇಶ ಅಲ್ಲ ಎಂದ ಸಿಎಂ; ಆತ್ಮಾವಲೋಕನಕ್ಕೆ ಶರಣಾದ ಕಾಂಗ್ರೆಸ್; ಸ್ಟಿಂಗ್ ಆಪರೇಶನ್ ಮುಳುವಾಯಿತಾ?
ನವದೆಹಲಿ/ಬೆಂಗಳೂರು: ಪಂಚ ಗ್ಯಾರಂಟಿ, 136 ಸೀಟುಗಳ ಫುಲ್ ಗಮರ್ನಮೆಂಟ್ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ.
ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇಲ್ಮನೆಗೆ ನಡೆದ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ನಾಲ್ಕರಲ್ಲಿಯೂ ಸೋತಿದೆ. ಈ ಹಿನ್ನಲೆಯಲ್ಲಿ ಮುಂದಿನ ಉಪಚುನಾವಣೆಗಳು ಹಾಗೂ 2028ರ ವಿಧಾನಸಭೆ ಚುನಾವಣೆಯ ಬಗ್ಗೆ ಕಾಂಗ್ರೆಸ್ ಆತ್ಮವಲೋಕಕ್ಕೆ ಶರಣಾಗಿದೆ.
ಇದೇ ವೇಳೆ ಬಿಜೆಪಿ ದೇಶದ ಬಹುತೇಕ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಒಟ್ಟು 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಕಡೆ ಮಾತ್ರ ಗೆದ್ದಿದೆ.
ಕರ್ನಾಟಕದ 4 ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಡಬಲ್ ಹ್ಯಾಟ್ರಿಕ್ ಹೊಡೆಯಲು ಹೊರಟಿದ್ದ ಕಾಂಗ್ರೆಸ್ಸಿನ ಪುಟ್ಟಣ್ಣ ಅವರು ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಎದುರು ಹೀನಾಯವಾಗಿ ಸೋತಿದ್ದಾರೆ.
ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರುಗಳ ಮೂಲಕವೇ ಚುನಾವಣೆ ನಡೆಯಬೇಕು ಎಂದು ದೇಶಾದ್ಯಂತ ಹೋರಾಟ ನಡೆಸಿದ್ದ ಆ ಪಕ್ಷಕ್ಕೆ ಪರಿಷತ್ ಚುನಾವಣೆ ತೀವ್ರ ನಿರಾಶೆ ಉಂಟು ಮಾಡಿದೆ.
“ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕ; ಈ ನಾಲ್ಕು ಪ್ರಮುಖ ರಾಜ್ಯಗಳಲ್ಲಿ 28 ಸ್ಥಾನಗಳಿಗೆ ಎಂಎಲ್‌ಸಿ ಚುನಾವಣೆಗಳು ನಡೆದವು. ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆಗಳು ನಡೆದವು. ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಊಹಿಸಿ?” ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಬಗ್ಗೆ ಲೇವಡಿ ಮಾಡಿದ್ದಾರೆ.

ಮೋದಿ ಅವರ ಈ ಹೇಳಿಕೆಗೆ ಉತ್ತರಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಅದರಲ್ಲಿಯೂ ಡಿಕೆಶಿ ಅಂತಹ ಸಂಘಟನೆಗೆ ಹೆಸರಾದ ಮುಖ್ಯಮಂತ್ರಿ ಅಧಿಕಾರದಲ್ಲಿದ್ದ ಇದ್ದರೂ ಕೂಡ ಪಕ್ಷ ಸೋತಿರುವ ಬಗ್ಗೆ ವರಿಷ್ಠರು ತೀವ್ರ ಚಿಂತಾಕ್ರಾಂತರಾಗಿದ್ದಾರೆ.
ಮೇಲಾಗಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ರಾಜ್ಯದವರೇ ಆಗಿದ್ದಾರೆ. ಡಿಕೆಶಿ ಸಿಎಂ ಆದ ಮೇಲೆ ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ವರಿಷ್ಠರು ಭಾವಿಸಿದ್ದರು. ಸ್ಟಿಂಗ್ ಆಪರೇಷನ್ ಕೋಲಾಹಲ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಕಾಂಗ್ರೆಸ್ ಹಿನ್ನಡೆಗೆ ಕಾರಣಗಳನ್ನು ಹುಡುಕಲಾಗುತ್ತಿದೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ ನಂತರ ಪ್ರಬಲ ಕುರುಬರು, ಅಹಿಂದ ವರ್ಗದ ಸಮುದಾಯಗಳು ಕಾಂಗ್ರೆಸ್ ಪಕ್ಷದಿಂದ ಮೆಲ್ಲಗೆ ದೂರ ಸರಿಯುತ್ತಿವೆಯಾ ಎಂಬ ಅನುಮಾನವೂ ಮುನ್ನೆಲೆಗೆ ಬಂದಿದೆ.
ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಜನಾದೇಶ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ #NDA ಮೈತ್ರಿಕೂಟಕ್ಕೆ ಮತದಾರರ ಆಶೀರ್ವಾದ ದೊರೆತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿ ಚುನಾವಣೆ ಎದುರುಸಬೇಕೆಂಬ ಬಿಜೆಪಿ-ಜೆಡಿಎಸ್ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿಕೆಶಿ, ಚನ್ನಪಟ್ಟಣ ಮತ್ತು ಶಿಗ್ಗಾವಿ ವಿಧಾನಸಭಾ ಉಪ ಚುನಾವಣೆ ಫಲಿತಾಂಶಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಮತದಾರರ ತೀರ್ಮಾನ ಗೌರವಿಸುತ್ತೇವೆ
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು, ಮತದಾರರ ತೀರ್ಮಾನ ಗೌರವಿಸುತ್ತೇವೆ, ಜನರ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಮುಂಬರುವ ಚುನಾವಣೆಗೆ ಕಾರ್ಯಕರ್ತರನ್ನು ತಯಾರು ಮಾಡುತ್ತೇವೆ ಎಂದರು.
ನಮ್ಮ ಪಕ್ಷ 2 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು, ಅದು ಸಾಧ್ಯವಾಗಿಲ್ಲ, ನಮ್ಮ ಪಕ್ಷ ಸೋತಿದ್ದರೂ ಮತಗಳು ಚೆನ್ನಾಗಿಯೇ ಚಲಾವಣೆ ಆಗಿವೆ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಅಚ್ಚರಿ ತಂದಿದೆ, ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಮತಪತ್ರದ ಮೂಲಕ ಚುನಾವಣೆ ಅಗತ್ಯವಿದೆ, ಪ್ರಸ್ತುತ ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳಿವೆ, ನವೆಂಬರ್ ನಂತರ ನಮ್ಮ ಪಕ್ಷ ಈ ಕುರಿತು ಹೊಸ ಕ್ರಿಯಾ ಯೋಜನೆ ಹೊರತರಲಿದೆ ಎಂದರು ಅವರು.
ಮೇಲ್ಮನೆ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲಾ ಎಂದು ಡಿಕೆಶಿ ಹೇಳುತ್ತಿರುವ ಅಭಿಪ್ರಾಯಕ್ಕೆ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಒಮ್ಮತ ವ್ಯಕ್ತಪಡಿಸುತ್ತಿದ್ದಂತೆ ಕಾಣುತ್ತಿಲ್ಲ. ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ನೇರವಾಗಿಯೇ ಪ್ರತಿಕ್ರಿಯಿಸಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿ, ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಇರುವುದರಿಂದ ಅವರಿಬ್ಬರ ಶಕ್ತಿ ಹೆಚ್ಚಾಗಿದೆ. ಅದನ್ನು ಎದುರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದಿರುವುದು ಡಿಕೆಶಿ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿದೆ.
ಮೇಲ್ಮನೆಯ 4 ಕ್ಷೇತ್ರಗಳ ಸೋಲಿಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೊಸ ಅಂಶವನ್ನು ಮುನ್ನೆಲೆಗೆ ತಂದಿದ್ದಾರೆ. ಈ ಚುನಾವಣೆ ಸೋಲಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ದುರಹಂಕಾರವೇ ಕಾರಣ ಎಂದು ಅವರು ಗುಡುಗಿದ್ದಾರೆ.
ಅಲ್ಲದೆ ನೈಸ್ ಯೋಜನೆಯಲ್ಲಿ ಭೂ ಅಕ್ರಮ ಹಾಗೂ ಬಿಡದಿ ಭೂಮಿ ಸ್ವಾಧೀನದಂತಹ ಜನ ವಿರೋಧಿ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ನಡುನೀರಿನಲ್ಲಿ ಮುಳುಗಿಸಿದವು ಎಂದು ಅವರು ಚಾಟಿ ಬೀಸಿದ್ದಾರೆ.

















