ಭೌತವಿಜ್ಞಾನಕ್ಕೆ 90.23%, ಕೆಮಿಸ್ಟ್ರಿಗೆ 90.9% ಹಾಜರಿ; 20 ದಿನದಲ್ಲಿ ರಿಸಲ್ಟ್
ಬೆಂಗಳೂರು: ಎರಡನೇ ದಿನವೂ ರಾಜ್ಯದ 497 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಒಂದು ಸಣ್ಣ ಸಮಸ್ಯೆ, ಲೋಪದೋಷವೂ ಇಲ್ಲದೆ ಸಮಾಪ್ತಿಯಾಗಿದೆ. ಕೋವಿಡ್-19 ಪಾಸಿಟೀವ್ ಇದ್ದ 63 ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದು, ಇನ್ನು 10ರಿಂದ 15 ದಿನದೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಸರಕಾರ ಹೇಳಿದೆ.
ಒಟ್ಟು 1,94,419 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ಪೈಕಿ ಭೌತಶಾಶ್ತ್ರಕ್ಕೆ 1,75,4428 ವಿದ್ಯಾರ್ಥಿಗಳು ಹಾಜರಾಗಿದ್ದರು. ಶೇ. 90.23ರಷ್ಟು ಹಾಜರಾತಿ ಇತ್ತು. ರಸಾಯನಶಾಸ್ತ್ರದಲ್ಲಿ 1,75,337 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 90.9ರಷ್ಟು ಹಾಜರಾತಿ ಆಗಿದೆ. ಇನ್ನು 2019ರಲ್ಲಿ ಭೌತಶಾಸ್ತ್ರದಲ್ಲಿ ಶೇ. 92.27 ಹಾಗೂ ರಸಾಯನ ಶಾಸ್ತ್ರದಲ್ಲಿ ಶೇ.90.88 ಹಾಜರಾತಿ ಇತ್ತು. ಕೋವಿಡ್ ಆತಂಕದ ನಡುವೆಯೂ ಈ ವರ್ಷ ಅತ್ಯುತ್ತಮ ಹಾಜರಾತಿ ಇದೆ. ಸೋಂಕಿನ ಭಯವಿದ್ದರೂ ಆತ್ಮಸ್ಥೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಸರಕಾರದ ಪರವಾಗಿ ಎಲ್ಲ ವಿದ್ಯಾರ್ಥಿಗಳು, ಪೋಷಕರಿಗೆ ಕೃತಜ್ಞತೆಗಳು ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಿಳಿಸಿದರು.
6 ಕೇಂದ್ರಗಳಲ್ಲಿ ಗಡಿ ಕನ್ನಡಿಗರಿಗೆ ಪರೀಕ್ಷೆ:
ಶನಿವಾರ ಹೊರನಾಡು ಮತ್ತು ಗಡಿ ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಮಂಗಳೂರು, ಬೆಂಗಳೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಬೀದರ್ ಜಿಲ್ಲಾ ಪರೀಕ್ಷೆ ನಡೆಯಲಿದೆ. ಅದಕ್ಕೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದರು.
ಹೆಲ್ಪ್’ಲೈನ್ ನೆರವು:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ. ಸಿಇಟಿ ಹೆಲ್ಪ್’ಲೈನ್’ಗೆ ಗುರುವಾರ 200ಕ್ಕೂ ಹೆಚ್ಚು ಕರೆಗಳು ಬಂದಿದ್ದವು. ಅದರಲ್ಲಿ 10ರಿಂದ 15 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮನವಿ ಮಾಡಿದ್ದರು. ಪರೀಕ್ಷಾ ಪ್ರಾಧಿಕಾರ ಅವರಿಗೆ ನೆರವಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳು ಅಪ್ಲಿಕೇಷನ್ ಸಂಖ್ಯೆ ಮತ್ತು ಯೂಸರ್ ಐಡಿ ಮರೆತಿದ್ದರು. ಅವರಿಗೂ ಸೂಕ್ತ ಮಾಹಿತಿ ಕೊಟ್ಟು ಪ್ರವೇಶ ಪತ್ರ ಡೌನ್’ಲೋಡ್ ಮಾಡಿಕೊಳ್ಳಲು ಸಹಾಯ ಮಾಡಲಾಗಿದೆ. ಇನ್ನು ಅನೇಕ ಕಡೆ ಮಾಸ್ಕ್ ಇಲ್ಲದೆ ಬಂದ ಪರೀಕ್ಷಾರ್ಥಿಗಳಿಗೆ ಮಾಸ್ಕ್ ನೀಡಲಾಗಿದೆ. ಉಳಿದಂತೆ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಇಡೀ ತಂಡಕ್ಕೆ ಕೃತಜ್ಞತೆ:
ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಕಾರಣರಾದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ ಉನ್ನತ ಶಿಕ್ಷಣ, ಬಿಬಿಎಂಪಿ, ಕೆಸ್ಸಾರ್ಟಿಸಿ, ಬಿಎಂಟಿಸಿ, ಆರೋಗ್ಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ಎಲ್ಲ ಸಿಬ್ಬಂದಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಸೋಮವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ ಅವರಿಗೆ ಅಭಿವಂದನೆ ಸಲ್ಲಿಸಲಿದ್ದೇನೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು. ನೂರಾರು ಚಾಲಕರು ವಿದ್ಯಾರ್ಥಿಗಳಿಗಾಗಿ ಕೆಲಸ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಅನೇಕ ವೈದ್ಯರು, ನರ್ಸ್’ಗಳು, ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥ ಡಾ. ವೆಂಕಟರಾಜ ಮತ್ತು ಅವರ ಸಿಬ್ಬಂದಿ ಕಳೆದೊಂದು ವಾರದಿಂದ ನಿರಂತರವಾಗಿ ಕೆಲಸ ಮಾಡಿದ್ದರು. ಮುಖ್ಯವಾಗಿ ಎಲ್ಲ ಜಿಲ್ಲಾಧಿಕಾರಿಗಳು ಸವಾಲಿನಂತೇ ಸ್ವೀಕರಿಸಿ ಪರೀಕ್ಷೆ ಸುಖಾಂತ್ಯವಾಗುವಂತೆ ಮಾಡಿದ್ದಾರೆ.
20 ದಿನದಲ್ಲಿ ಫಲಿತಾಂಶ:
ಇನ್ನು 15ರಿಂದ 20 ದಿನಗಳ ಒಳಗಾಗಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಈ ವರ್ಷ ಕೌನ್ಸೆಲಿಂಗ್ ಸೇರಿದಂತೆ ಎಲ್ಲವನ್ನೂ ಆನ್’ಲೈನ್’ನಲ್ಲಿಯೇ ಮಾಡಲಾಗುವುದು ಎಂದು ಅವರು ಹೇಳಿದರು.
ದೇಶಕ್ಕೇ ಮಾದರಿ ಕರ್ನಾಟಕ:
ಇಡೀ ಭಾರತದಲ್ಲಿಯೇ ಉನ್ನತ ಶಿಕ್ಷಣದ ಮಹತ್ವವನ್ನು ಅರಿತ ಮೊದಲ ರಾಜ್ಯ ಕರ್ನಾಟಕವಾಗಿದೆ. ಅದೇ ರೀತಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಆರಂಭಿಸಿದ ರಾಜ್ಯವೂ ನಮ್ಮದೇ. ಅದೇ ರೀತಿ ಇತರೆ ರಾಜ್ಯಗಳು ಕೋವಿಡ್’ಗೆ ಹೆದರಿ ಇಂತಹ ಪರೀಕ್ಷೆಗಳನ್ನು ನಡೆಸಲು ಹೆದರುತ್ತಿರುವಾಗಲೇ ನಮ್ಮಲ್ಲಿ sslc ಪರೀಕ್ಷೆ ನಿರಾತಂಕವಾಗಿ ನಡೆಯಿತು. ಅದಾದ ಮೇಲೆ ಸಿಇಟಿ ಪರೀಕ್ಷೆಯೂ ಸುಲಲಿತವಾಗಿ ನಡೆದಿದೆ. ಯಡಿಯೂರಪ್ಪ ಅವರ ಸರಕಾರಕ್ಕೆ ಇದೊಂದು ಗರಿ ಎಂದು ನಿಸ್ಸಂಶವಾಗಿ ಹೇಳಬಹುದಾಗಿದೆ