ಕೋವಿಡ್-19 ವೈರಾಣುವಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದರ ಜತೆಗೆ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಎಂಬುದು ಸರಕಾರ ಮಾಡಿರುವ ತಾಕೀತು. ಆದರೆ, ಈಗ ಸ್ಯಾನಿಟೈಸರ್’ನಿಂದ ಆಗುತ್ತಿರುವ ಅಡ್ಡ ಪರಿಣಾಮಗಳ ಬಗ್ಗೆ ಸದ್ದಾಗುತ್ತಿದೆ. ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಅವರು ಈ ಬಗ್ಗೆ ಹೆಸರಾಂತ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಬರೆದಿದ್ದಾರೆ.
ಕೋವಿಡ್ 19 ಮಹಾಮಾರಿಯ ಈ ಸಂಕಷ್ಟ ಕಾಲದಲ್ಲಿ ಅತಿ ಹೆಚ್ಚು ಬೇಡಿಕೆಯ ಪದಾರ್ಥಗಳೆಂದರೆ ಕೈಗೆ ಬಳಿದುಕೊಳ್ಳುವ ಸ್ಯಾನಿಟೈಸರ್ ಎಂಬ ದ್ರಾವಣ ಮತ್ತು ಮುಖ, ಬಾಯಿ ಮುಚ್ಚುವ ಮಾಸ್ಕ್ ಗಳು.
ಯಾವುದೇ ವಸ್ತುವನ್ನು ಸ್ಪರ್ಶಿಸುವ ಮುನ್ನ ಕೈಯನ್ನು ಸ್ಯಾನಿಟೈಸರ್‌ನಿಂದ ಚೆನ್ನಾಗಿ ತೊಳೆದುಕೊಂಡರೆ ಕೊರೋನಾ ವೈರಾಣು ನಮ್ಮ ಕೈಗೆ ತಗಲುವುದಿಲ್ಲ. ಅದೇ ರೀತಿ ನಮ್ಮ ಕೈಗಳಲ್ಲಿ ಕೊರೋನಾ ವೈರಾಣುವೇನಾದರೂ ಇದ್ದರೆ ಅದು ನಾಶವಾಗುತ್ತದೆ ಎಂಬ ಕಾರಣಕ್ಕೆ ಸ್ಯಾನಿಟೈಸರ್ ಬಳಕೆ ಈಗ ಹೆಚ್ಚು ವ್ಯಾಪಕವಾಗಿದೆ. ಸರ್ಕಾರವೇ ಸುತ್ತೋಲೆ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಹಾಗಾಗಿ ಯಾವುದೇ ಅಂಗಡಿ, ಮಾಲ್, ತರಕಾರಿ ಅಂಗಡಿ, ಕಚೇರಿ, ಸ್ಕೂಲ್ ಎಲ್ಲೇ ಹೋದರೂ ಅಲ್ಲಿ ಪ್ರವೇಶದ್ವಾರದಲ್ಲಿಟ್ಟಿರುವ ಸ್ಯಾನಿಟೈಸರ್ ಎಂಬ ದ್ರಾವಣವನ್ನು ನಮಗಿಷ್ಟವಿರಲಿ, ಇಲ್ಲದಿರಲಿ ಕೈಗೆ ಸುರಿದುಕೊಂಡು ತೊಳೆದುಕೊಳ್ಳಲೇಬೇಕು. ಅನೇಕರ ಮನೆಗಳಲ್ಲೂ ಪ್ರವೇಶದ್ವಾರದಲ್ಲಿ ಇದನ್ನು ಕಡ್ಡಾಯವಾಗಿ ಇರಿಸಲಾಗಿದೆ. ಸ್ಯಾನಿಟೈಸರ್‌ಗಳನ್ನು ನೀಟಾಗಿ ಜೋಡಿಸಿ ಕಾಲಿನಿಂದ ಒತ್ತಿದರೆ ತಾನಾಗಿಯೇ ನಿಮ್ಮ ಕೈಗೆ ಸುರಿಯುವಂತಹ ಸ್ಯಾನಿಟೈಸರ್ ಸ್ಟ್ಯಾಂಡ್ ಗಳೂ ಮಾರುಕಟ್ಟೆಗೆ ಬಂದಿವೆ. ಸ್ಯಾನಿಟೈಸರ್ ಉತ್ಪಾದಿಸುವ ಕಂಪನಿಗಳಿಗಂತೂ ಈಗ ಭರಪೂರ ವ್ಯಾಪಾರ. ಸುಗ್ಗಿಯೋ ಸುಗ್ಗಿ. ಆದರೆ ಸ್ಯಾನಿಟೈಸರ್ ಬಳಕೆ ಎಷ್ಟು ಸುರಕ್ಷಿತ? ದೀರ್ಘಕಾಲ ಬಳಸಿದರೆ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳೇನು? ಈ ಬಗ್ಗೆ ಬಹುತೇಕ ಮಂದಿ ಚಿಂತಿಸಿದಂತೆ ಕಾಣುತ್ತಿಲ್ಲ. ಜನರ ಅಜ್ಞಾನ ಎಲ್ಲಿಯವರೆಗಿದೆಯೆಂದರೆ -ಸ್ಯಾನಿಟೈಸರ್ ದ್ರಾವಣವನ್ನು ಕೈತುಂಬಾ, ಮೊಣಕೈವರೆಗೂ ಆಗಾಗ ಚೆನ್ನಾಗಿ ಹಚ್ಚಿ ತಿಕ್ಕಿಕೊಳ್ಳುತ್ತಿದ್ದರೆ ಕೊರೋನಾ ತಮ್ಮ ಹತ್ತಿರ ಕೂಡ ಸುಳಿಯದೆಂಬ ತಪ್ಪು ತಿಳಿವಳಿಕೆ ಹೆಪ್ಪುಗಟ್ಟಿದೆ.
ಕಳೆದ ವಾರ ನನ್ನ ಪತ್ನಿಯನ್ನು ಬೆಂಗಳೂರಿನ ವಿಜಯಾ ಹೈಸ್ಕೂಲ್‌ಗೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಪ್ರತಿನಿತ್ಯ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದಾಗ ಅಲ್ಲಿನ ಸೆಕ್ಯುರಿಟಿಗಳ ವರ್ತನೆ ನೋಡಿ ನನಗೆ ಗಾಬರಿಯಾಗಿತ್ತು. ಪ್ರವೇಶದ್ವಾರದಲ್ಲಿ ಪಹರೆ ಕಾಯುವ ಸೆಕ್ಯುರಿಟಿಗಳು ಒಳಹೊರಗೆ ಓಡಾಡುತ್ತಾ ಹೋಗುವಾಗೊಮ್ಮೆ ಬರುವಾಗೊಮ್ಮೆ ಅಲ್ಲೇ ಇಟ್ಟಿದ್ದ ಸ್ಯಾನಿಟೈಸರ್ ದ್ರಾವಣವನ್ನು ಪದೇ ಪದೇ ಕೈತುಂಬಾ ಹಚ್ಚಿಕೊಂಡು ತಿಕ್ಕಿಕೊಳ್ಳುತ್ತಿದ್ದರು. ಹೀಗೆ ದಿನಕ್ಕೆ ಹಲವಾರು ಬಾರಿ ಕೈಗೆ ಸ್ಯಾನಿಟೈಸರ್ ಬಳಿದುಕೊಂಡರೆ ಅವರ ಕೈಗಳ ಗತಿ ಏನಪ್ಪಾ ಎಂದು ನನಗೆ ಚಿಂತೆ ಕಾಡಿದ್ದು ನಿಜ. ಆದರೆ ಸೆಕ್ಯುರಿಟಿಗಳಿಗೆ ಅಂತಹ ಯಾವ ಚಿಂತೆಯೂ ಕಾಡಿರಲಿಲ್ಲ. ಮದುವೆ ಸಮಾರಂಭದಲ್ಲಿ ಪನ್ನೀರು ದಾನಿಯಿಂದ ಕೈಗೆ ಪನ್ನೀರು ಚಿಮುಕಿಸಿಕೊಂಡು ಸಂಭ್ರಮ ಪಡುವಂತೆ ಅವರು ಸ್ಯಾನಿಟೈಸರ್ ಎಂಬ ವಿಷವನ್ನು ಹಚ್ಚಿಕೊಂಡು ಖುಷಿಪಡುತ್ತಿದ್ದರು.
ದೇಶಾದ್ಯಂತ ಮೊದಲ ಲಾಕ್‌ಡೌನ್ ಘೋಷಣೆಯಾಗಿ ಮದ್ಯದಂಗಡಿಗಳು ಕೂಡ ಬಂದ್ ಆದಾಗ ಎಣ್ಣೆಪ್ರಿಯರು ಮೊರೆ ಹೋಗಿದ್ದು ಇದೇ ಸ್ಯಾನಿಟೈಸರ್‌ಗೆ! ಕೈಗೆ ಬಳಿದುಕೊಳ್ಳುವುದಕ್ಕಲ್ಲ, ಅದನ್ನವರು ಎತ್ತಿ ಕುಡಿದೇಬಿಟ್ಟಿದ್ದರು. ಅದರಲ್ಲಿ ಆಲ್ಕೋಹಾಲ್ ಇರುವುದರಿಂದ ಅದು ಕಿಕ್ ಕೊಟ್ಟು, ನಶೆ ಏರಿಸುತ್ತದೆ ಎಂಬ ಭ್ರಮೆಯಿಂದ ಹಲವರು ಸ್ಯಾನಿಟೈಸರ್ ಖರೀದಿಸಿ ಅನಾಮತ್ತಾಗಿ ಕುಡಿದುಬಿಟ್ಟಿದ್ದರು. ಹಲವರ ಆರೋಗ್ಯ ಇದರಿಂದ ತೀವ್ರವಾಗಿ ಬಿಗಡಾಯಿಸಿ ಆಸ್ಪತ್ರೆ ಸೇರಬೇಕಾಯಿತು. ಕೆಲವರು ಚಿಕಿತ್ಸೆ ಫಲಿಸದೆ ಸತ್ತೇಹೋದರು. ಕರ್ನಾಟಕದ ಹುಬ್ಬಳ್ಳಿ, ಕಲಘಟಗಿ, ಧಾರವಾಡಗಳಲ್ಲೇ ಐದಾರು ಮಂದಿ ಸಾವಿಗೀಡಾಗಿದ್ದರು. ಮದ್ಯ ದೊರೆಯಲಿಲ್ಲವೆಂದು ಅವಸರದಲ್ಲಿ ಸ್ಯಾನಿಟೈಸರ್ ದ್ರಾವಣ ಕುಡಿದ ತಮಿಳುನಾಡಿನ ಚೆಂಗಲ್‌ದಟ್ಟು ಎಂಬ ಊರಿನ ಮೂವರು ಸತ್ತುಹೋಗಿದ್ದರು. ದೇಶದಾದ್ಯಂತ ಹೀಗೆ ಸ್ಯಾನಿಟೈಸರ್ ಕುಡಿದು ಸತ್ತವರು ಹಲವಾರು ಮಂದಿ.
ಕೈಗಳಿಗೆ ಸ್ಯಾನಿಟೈಸರ್ ಸುರಿದುಕೊಂಡಾಗ ತಣ್ಣಗಿನ ಅನುಭವವಾಗಿ ಕೈಯೆಲ್ಲ ಸ್ವಚ್ಛವಾಯಿತೆಂದು ಅಂದುಕೊಳ್ಳುತ್ತೇವೆ. ಆದರೆ ಸ್ಯಾನಿಟೈಸರ್‌ನಲ್ಲಿರುವ ಆಲ್ಕೋಹಾಲ್, ಗ್ಲಿಸರಿನ್, ಟ್ರೈಕ್ಲೋಸಾನ್ ಅಥವಾ ಟ್ರೈಕ್ಲೋಕಾರ್ಬನ್ ಕೈಗಳಲ್ಲಿರುವ ಕಣ್ಣಿಗೆ ಕಾಣದ ವೈರಾಣುಗಳನ್ನು ನಾಶಪಡಿಸುವುದಲ್ಲದೆ ಕೈಗಳ ಆರೋಗ್ಯಕ್ಕೆ ಅಗತ್ಯವಾದ ವೈರಾಣುಗಳನ್ನು ಹಾಗೂ ಜೀವಕೋಶಗಳನ್ನೂ ನಾಶಪಡಿಸುತ್ತವೆ. ಆಗ ಸಹಜವಾಗಿ ದೇಹದಲ್ಲಿರುವ ರೋಗನಿರೋಧಕ ಜೀವಾಣುಗಳು ನಾಶವಾಗಿ, ರೋಗನಿರೋಧಕ ಶಕ್ತಿ (ಇಮ್ಯೂನಿಟಿ) ದುರ್ಬಲವಾಗುವ ಸಾಧ್ಯತೆ ಇದೆ. ಅಮೆರಿಕದ ರೋಗ ನಿಯಂತ್ರಣ ಕೇಂದ್ರವೊಂದರಲ್ಲಿ ಎಪಿಡೆಮಿಕ್ ಇಂಟೆಲಿಜೆನ್ಸ್ ಸರ್ವೀಸ್ 2011ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಸೋಪು ಹಾಗೂ ನೀರಿನ ಬದಲು ಸ್ಯಾನಿಟೈಸರ್‌ನಿಂದಲೇ ದಿನಕ್ಕೆ 6 ಬಾರಿ ಕೈ ತೊಳೆಯುತ್ತಿದ್ದ ಆರೋಗ್ಯ ರಕ್ಷಕ ಸಿಬ್ಬಂದಿಗಳಿಗೆ ವಿವಿಧ ಬಗೆಯ ದೈಹಿಕ ತೊಂದರೆಗಳು ಕಂಡುಬಂದವು.
ಸ್ಯಾನಿಟೈಸರ್‌ನಲ್ಲಿರುವ ಟ್ರೈಕ್ಲೋಸನ್ ಎಂಬ ರಾಸಾಯನಿಕ ಹಾರ್ಮೋನ್‌ಗಳ ವ್ಯತ್ಯಯಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಹಾರ್ಮೋನ್‌ಗಳ ಸಹಜ ಚಟುವಟಿಕೆಗೆ ಭಂಗ ಉಂಟಾಗುತ್ತದೆಂದು ಸಂಶೋಧನೆ ಶೃತಪಡಿಸಿದೆ. ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುವ ದೇಹದ ರೋಗ ನಿರೋಧಕ ವ್ಯವಸ್ಥೆಯೇ (ಇಮ್ಯೂನ್ ಸಿಸ್ಟಮ್) ಸ್ಯಾನಿಟೈಸರ್‌ನಲ್ಲಿರುವ ಟ್ರೈಕ್ಲೋಸನ್ ಹಾಳುಗೆಡವುತ್ತದೆ ಎಂದೂ ತಿಳಿದುಬಂದಿದೆ.
ವಿಷಕಾರಕ ರಾಸಾಯನಿಕಗಳನ್ನು ಸ್ಯಾನಿಟೈಸರ್ ಒಳಗೊಂಡಿರುವುದರಿಂದ ದೇಹದ ಮೇಲೆ ಅಂಗಾಂಗಗಳ ಮೇಲೆ ವಿವಿಧ ಬಗೆಯ ದುಷ್ಪರಿಣಾಮ ಬೀರುತ್ತದೆಂದು ಇನ್ನೊಂದು ಸಂಶೋಧನೆ ದೃಢಪಡಿಸಿದೆ. ತಲೆನೋವು, ವಾಂತಿ, ತೊದಲುವಿಕೆ, ಮಿದುಳಿನ ಆಘಾತ… ಹೀಗೆ ಹಲವು ಬಗೆಯ ತೊಂದರೆಗಳಿಗೆ ಸ್ಯಾನಿಟೈಸರ್‌ನ ನಿರಂತರ ಬಳಕೆ ಅವಕಾಶ ಮಾಡಿಕೊಡುತ್ತದೆ ಎಂದು ಡಾ. ಸಂಜಯ ಗುಪ್ತಾ ಹೇಳುತ್ತಾರೆ. ಸಾಧ್ಯವಾದಷ್ಟೂ ಕಡಿಮೆ ಪ್ರಮಾಣದಲ್ಲಿ ಸ್ಯಾನಿಟೈಸರ್ ಬಳಕೆ ಮಾಡಿ. ಮಕ್ಕಳಿಗಂತೂ ಸ್ಯಾನಿಟೈಸರ್ ಬಳಸದಂತೆ ಎಚ್ಚರಿಕೆ ವಹಿಸಿ ಎಂದು ಅವರು ಸಲಹೆ ಕೊಡುತ್ತಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಮಂಗಳೂರಿನ ಹಿರಿಯ ವೈದ್ಯ ಡಾ.ಬಿ.ಎಂ.ಹೆಗ್ಡೆ ಅವರು ಕೂಡ ಸ್ಯಾನಿಟೈಸರ್ ಬಳಕೆ ವಿರುದ್ಧ ಅಪಸ್ವರ ಎತ್ತಿದ್ದಾರೆ. ನೀವು ನಿರಂತರ ಎರಡು ವರ್ಷ ಕಾಲ ಸ್ಯಾನಿಟೈಸರ್ ಬಳಸಿ ಕೈ ತೊಳೆದರೆ ನಿಮಗೆ ಕ್ಯಾನ್ಸರ್ ತಗಲುವುದು ಗ್ಯಾರಂಟಿ ಎಂದು ನೇರವಾಗಿಯೇ ಅವರು ಎಚ್ಚರಿಸಿದ್ದಾರೆ. ಆದರೆ ಅವರು ಎಚ್ಚರಿಕೆಯನ್ನಷ್ಟೇ ನೀಡದೆ, ಪರಿಹಾರವನ್ನೂ ಸೂಚಿಸಿರುವುದು ಗಮನಾರ್ಹ. ಸ್ಯಾನಿಟೈಸರ್ ಬದಲಿಗೆ ಶುದ್ಧವಾದ ತೆಂಗಿನೆಣ್ಣೆ (ಕೊಬ್ಬರಿ ಎಣ್ಣೆ)ಗೆ ಮೂರ‍್ನಾಲ್ಕು ಎಸಳು ಬೆಳ್ಳುಳ್ಳಿ ಜಜ್ಜಿ ಹಾಕಿ ಮಿಶ್ರಣ ಮಾಡಿದ ಎಣ್ಣೆಯನ್ನು ಕೈಗೆ ಹಚ್ಚಿಕೊಂಡರೆ ಅದು ಸ್ಯಾನಿಟೈಸರ್‌ಗಿಂತಲೂ ಪರಿಣಾಮಕಾರಿ. ಕೊರೋನಾ ಮತ್ತಿತರೆ ಮಾರಕ ವೈರಾಣುಗಳೆಲ್ಲ ಹೇಳಹೆಸರಿಲ್ಲದಂತೆ ನಾಶವಾಗುತ್ತವೆ. ಅಲ್ಲದೆ ಯಾವುದೇ ಅಡ್ಡ ಪರಿಣಾಮವಾಗಲೀ ಹಾನಿಯಾಗಲೀ ಆಗದು ಎಂದವರು ಭರವಸೆ ನೀಡಿದ್ದಾರೆ. ಕೈಗಳು ಮತ್ತು ಮೂಗಿಗೆ ಬೆಳ್ಳುಳ್ಳಿ ಸೇರಿಸಿದ ಕೊಬ್ಬರಿ ಎಣ್ಣೆ ಹಚ್ಚಿಕೊಂಡರೆ ಕೊರೋನಾ ಮಾರಿ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲವೆಂದು ಅವರೇ ಹೇಳಿದ್ದಾರೆ. ಇನ್ನು ಕೆಲ ತಜ್ಞರು ಸಾವಯವ ಪದಾರ್ಥಗಳಿಂದ ಮಾಡಿದ ಸ್ಯಾನಿಟೈಸರ್ ಬಳಕೆ ಕೂಡ ಆರೋಗ್ಯವರ್ಧಕ. ಹಾನಿಕಾರಕವಲ್ಲ ಎಂದು ಸಾಬೀತುಪಡಿಸಿದ್ದಾರೆ.
ಡಾ.ಬಿ.ಎಂ. ಹೆಗ್ಡೆಯವರು ಸ್ವತಃ ಅಲೋಪತಿ ವೈದ್ಯರು. ಹಲವಾರು ವೈದ್ಯಕೀಯ ಪ್ರಬಂಧಗಳನ್ನು ಮಂಡಿಸಿದವರು. ಅವರೇ ಸ್ಯಾನಿಟೈಸರ್ ಬಳಕೆಯಿಂದಾಗುವ ಹಾನಿಯನ್ನು ಹೀಗೆ ಬಹಿರಂಗವಾಗಿ ಹೇಳಿರಬೇಕಾದರೆ ಅದರಲ್ಲಿ ಸತ್ಯಾಂಶವಿರಲೇಬೇಕು. ತೆಂಗಿನೆಣ್ಣೆಯನ್ನು ಪ್ರಮೋಟ್ ಮಾಡಿ, ತೆಂಗಿನೆಣ್ಣೆ ಕಾರ್ಖಾನೆಗಳಿಂದ ಕಮಿಷನ್ ಪಡೆಯುವ ಯಾವ ಹುನ್ನಾರವೂ ಅವರ ಈ ಹೇಳಿಕೆಯ ಹಿಂದೆ ಅಡಗಿಲ್ಲ.
ನಾನಂತೂ ಸಾಧ್ಯವಾದಷ್ಟೂ ತೆಂಗಿನೆಣ್ಣೆಯನ್ನೇ ಕೈಗೆ ಹಚ್ಚಿಕೊಂಡು ಹೊರಗೆ ಹೋಗುತ್ತಿರುವೆ. ಸ್ಯಾನಿಟೈಸರ್ ಬಳಸುವುದಿಲ್ಲ. ತೆಂಗಿನೆಣ್ಣೆ ಬಳಸುವುದರಿಂದ ಕೈಗಳಿಗೆ ಹಿತವಾಗಿ ಬೇಡದ ವೈರಾಣುಗಳನ್ನು ನಾಶಪಡಿಸುವುದಾದರೆ ನಾವೇಕೆ ತೆಂಗಿನೆಣ್ಣೆ ಬಳಸಬಾರದು? ತೆಂಗಿನೆಣ್ಣೆಯೂ ಬೇಡವೆಂದಾದರೆ ಸೋಪು ಮತ್ತು ನೀರಿನಿಂದ ಕೈತೊಳೆದುಕೊಂಡರೆ ಯಾವುದೇ ಹಾನಿಯಾಗದು. ಸೋಪಿನಿಂದ ಕೈ ತೊಳೆಯುವುದು ಸ್ಯಾನಿಟೈಸರ್ ಬಳಕೆಗಿಂತ ಕಡಿಮೆ ಅಪಾಯಕರ.
ಹಲವು ವಿದ್ಯಾವಂತರು ಕೈತುಂಬ ಆಗಾಗ ಸ್ಯಾನಿಟೈಸರ್ ಬಳಿದುಕೊಂಡು ತಾವು ಉಳಿದೆಲ್ಲರಿಗಿಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವರು ಎಂದು ಇಲ್ಲದ ಜಂಭ ಪ್ರದರ್ಶಿಸುವುದನ್ನು ನೋಡಿ ಮರುಕ ಉಂಟಾಯಿತು. ಸ್ಯಾನಿಟೈಸರ್ ಬಳಕೆಯ ದುಷ್ಪರಿಣಾಮದ ಇನ್ನೊಂದು ಮುಖವೂ ಅವರಿಗೆ ಗೊತ್ತಾಗಲಿ ಎಂದು ಈ ಲೇಖನ ಬರೆಯಬೇಕಾಯಿತು.