ಆಡಳಿತಾಧಿಕಾರಿ ನೇಮಕ ನಿರೀಕ್ಷೆ; ಅನುದಾನ ಹಂಚಿಕೆ ಸಮಾರಾಧನೆ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಆಡಳಿತದ ನಂತರ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಇದೀಗ ಚುನಾವಣೆಗೆ ಸಜ್ಜಾಗುತ್ತಿದ್ದು, ವರ್ಷ ಪೂರೈಸಿದ ಉಮೇದಿನಲ್ಲಿರುವ ಜಿಜೆಪಿ ಸರಕಾರಕ್ಕೆ ಪಾಲಿಕೆ ಪ್ರತಿಷ್ಠೆಯ ಕಣವಾಗಿದೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿಯಂತೆ, 5 ವರ್ಷಗಳ ಬಿಬಿಎಂಪಿ ಅಧಿಕಾರ ಅವಧಿ ಇನ್ನು 8 ದಿನ ಮಾತ್ರವಿದೆ. ಅವಧಿ ಅಂತ್ಯದ ಬಗ್ಗೆ ಕೊಂಚ ಗೊಂದಲವೂ ಇದೆ. ಆದರೆ, ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ತೆರೆಮರೆಯಲ್ಲಿ ಸರಕಾರ ಪ್ರಯತ್ನ ನಡೆಸುತ್ತಿದ್ದು, ಈ ವಿಷಯ ಪಾಲಿಕೆ ಅಂಗಳವನ್ನೂ ತಲುಪಿದೆ. ನಗರಾಭಿವೃದ್ಧಿ ಇಲಾಖೆಯ ಉನ್ನತ ಮೂಲಗಳು ಕೂಡ ಆಡಳಿತಾಧಿಕಾರಿ ನೇಮಕದ ಗುಟ್ಟು ಬಿಟ್ಟುಕೊಟ್ಟಿವೆ.
ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಆತಂಕ ಒಂದೆಡೆ ಶುರುವಾಗಿದ್ದರೆ, ಮತ್ತೊಂದೆಡೆ ಪಾಲಿಕೆಯ ಜನಪ್ರತಿನಿಧಿಗಳ ಮನೆಗಳು, ಮೇಯರ್ ನಿವಾಸವೂ ಸಿಕ್ಕಾಪಟ್ಟೆ ಚಟುವಟಿಕೆಯ ತಾಣಗಳಾಗಿವೆ. ಮೇಯರ್ ಕಚೇರಿ ಮೂಲಗಳು ಹೇಳುವ ಪ್ರಕಾರ, ಬಿಬಿಎಂಪಿ ಪ್ರಥಮ ಸಭೆಯ ದಿನವನ್ನು ಗಣನೆಗೆ ತೆಗೆದುಕೊಂಡರೆ ಮುಂದಿನ ಸೆಪ್ಟೆಂಬರ್ 10ರಂದು ಪ್ರಸಕ್ತ ಬಿಬಿಎಂಪಿ ಅವಧಿ ಅಂತ್ಯವಾಗುತ್ತದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹೇಳುವುದೇ ಬೇರೆ. ಅಗಸ್ಟ್ 25ರಂದು ಈಗಿನ ಬಿಬಿಎಂಪಿ ಅವಧಿಗೆ 5 ವರ್ಷ ತುಂಬುತ್ತದೆ. ಹೀಗಾಗಿ ಪ್ರಸಕ್ತ ಪಾಲಿಕೆಯ ಅಧಿಕಾರಾವಧಿ 8 ದಿನಗಳು ಮಾತ್ರ ಇದೆ ಎನ್ನುತ್ತದೆ ಆ ಪಕ್ಷ.
ಆಡಳಿತಾಧಿಕಾರಿ ಆತಂಕ:
ಈ ನಡುವೆ ಪಾಲಿಕೆಗೆ ಆಡಳಿತಾಧಿಕಾರಿ ನೇಮಕವಾಗಲಿದ್ದಾರೆಂಬ ಸುದ್ದಿಯೇ ಅನೇಕರ ನಿದ್ದೆಗೆಡಿಸಿದೆ. ಸರಕಾರ ತನ್ನದೇ ಲೆಕ್ಕಾಚಾರದಲ್ಲಿದ್ದು, ಏನಾದರೂ ಪ್ರಮುಖ ನಿರ್ಧಾರಗಳಿದ್ದರೆ ಅಗಸ್ಟ್ 25ರೊಳಗೆ ಕೈಗೊಳ್ಳುವಂತೆ ಸರಕಾರವು ಬಿಬಿಎಂಪಿಗೆ ಸೂಚಿಸಿದೆ. ಆದರೆ, ಇದೇ ಅವಧಿಯಲ್ಲಿ ಅನುದಾನ ಹಂಚಿಕೆಯ ಸಮಾರಾಧನೆ ಎಗ್ಗಿಲ್ಲದೆ ಸಾಗುತ್ತಿದೆ. ರಸ್ತೆಗೆ ತೇಪೆ ಹಾಕುವುದು, ಚರಂಡಿಗಳಲ್ಲಿ ಮಣ್ಣೆತ್ತುವುದೂ ಸೇರಿದಂತೆ ಹತ್ತು ಹಲವು ಕಾಮಗಾರಿಗಳಿಗೆ ಹಣ ಪಡೆಯಲು ಗುತ್ತಿಗೆದಾರರು ತಾ ಮುಂದು ನಾ ಮುಂದು ಎಂದು ಸ್ಪರ್ಧೆಗಿಳಿದಿದ್ದಾರೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿಯಂತೆ, ಈಗಾಗಲೇ ಕೋಟ್ಯಂತರ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಈ ಮೊತ್ತ 300 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ. ಆಡಳಿತಾಧಿಕಾರಿ ಎಂಟ್ರಿ ಕೊಡುವ ಮುನ್ನವೇ ಕಾಮಗಾರಿ ಆರಂಭಿಸಲು ಕಾರ್ಯಾದೇಶ ಪಡೆಯಲು ಕೆಲ ಗುತ್ತಿಗೆದಾರರು ಹರಸಾಹಸ ನಡೆಸಿದ್ದಾರೆ. ಇನ್ನೊಂದೆಡೆ ಈಗ ಆಗುತ್ತಿರುವ ಅನುದಾನ ಹಂಚಿಕೆ ಸಮಾರಾಧನೆಯ ಹುಳುಕುಗಳನ್ನು ಆಡಳಿತಾಧಿಕಾರಿ ಹೊರತೆಗೆದರೆ ಕಥೆ ಏನು ಎಂಬ ಆತಂಕವೂ ಕೆಲವರಿಗಿದೆ.
ಅನುದಾನದ ಪ್ರವಾಹ:
ಒಂದೆಡೆ ರಾಜ್ಯದ ಕೆಲ ಜಿಲ್ಲೆಗಳು ನೆರೆಗೆ ಸಿಕ್ಕಿ ಹೈರಾಣಾಗಿದ್ದರೆ, ಇತ್ತ ಬಿಬಿಎಂಪಿಯಲ್ಲಿ ಅನುದಾನದ ಪ್ರವಾಹ ಶುರುವಾಗಿದೆ. ತಮಗಿಷ್ಟ ಬಂದವರಿಗೆ ವಿವೇಚನಾ ಕೋಟಾದಲ್ಲಿ ಭರ್ಜರಿ ವಿನಿಯೋಗ ಮಾಡಲಾಗುತ್ತಿದೆ. ಬಿಬಿಎಂಪಿ ಬಜೆಟ್’ನಲ್ಲಿ ನಿಗದಿ ಮಾಡಿದಂತೆ ಮೇಯರ್ ಅವರು ತಮ್ಮ ’ವಿವೇಚನಾ’ ಕೋಟಾ ಲೆಕ್ಕದಲ್ಲಿ ಬರೋಬ್ಬರಿ 150 ಕೋಟಿ ರೂ. ಗಳನ್ನು ಹಂಚುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನು ಉಪ ಮೇಯರ್ ಕೂಡ 75 ಕೋಟಿ ರೂ.ಗಳನ್ನು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು 75 ಕೋಟಿ ರೂ.ಳಷ್ಟು ಮೊತ್ತವನ್ನು ಸಮಾರಾಧನೆ ಮಾಡುತ್ತಿದ್ದಾರೆಂದು ಹೇಳಲಾಗಿದೆ.
ಚುನಾವಣೆ ಅನುಮಾನ:
ಇದೇ ವೇಳೆ ಪಾಲಿಕೆಯ ಚುನಾವಣೆಯ ಬಗ್ಗೆ ಸರಕಾರಕ್ಕೆ ಆಸಕ್ತಿ ಇದ್ದಂತೆ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಆಡಳಿತಾಧಿಕಾರಿ ನೇಮಕ ಖಚಿತ ಎನ್ನಲಾಗಿದೆ. ನಿಯಮದ ಪ್ರಕಾರ ಬಿಬಿಎಂಪಿಗೆ ಚುನಾವಣೆ ನಡೆಸುವುದಾದರೆ ಚುನಾವಣಾ ಆಯೋಗ 45 ದಿನಗಳಿಗೂ ಮೊದಲೇ ಸೂಚನೆ ಕೊಡುತ್ತದೆ. ನಂತರ ನೀತಿ ಸಂಹಿತೆ ಜಾರಿಯಾಗಿ ಬಿಬಿಎಂಪಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ನಿರ್ಭಂಧ ವಿಧಿಸುತ್ತದೆ. ಸದ್ಯಕ್ಕೆ ಆಯೋಗದಿಂದ ಯಾವುದೇ ಸೂಚನೆ ಬಂದಿಲ್ಲ. ಸರಕಾರವೂ ಸುಮ್ಮನಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕಿದೆ.
Lead photo: BNMK Photographs