ನನಗೆ ನೆನಪಿದ್ದ ಹಾಗೆ ಅದು 2001 ಇರಬಹುದು. ಬಹುಶಃ ಅದೇ ವರ್ಷ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪಂಡಿತ್ ಜಸ್‌ರಾಜರ ಕಛೇರಿ ಇತ್ತು. ನನಗೆ ಹಿಂದೂಸ್ತಾನಿ ಸಂಗೀತ ಅಂತ ಒಂದು ಸಂಗೀತ ಪ್ರಕಾರ ಇದೆ ಎಂದು ಗೊತ್ತಾಗಿದ್ದೇ ಆಗ. ಆ ಶಬ್ದವನ್ನು ನನಗೆ ಮೊದಲು ಕಿವಿಗೆ ಹಾಕಿದವರು ಪ.ಸ.ಕುಮಾರ್ ಎಂಬ ಅಪ್ಪಟ ಸಂಗೀತ ಪ್ರೇಮಿ ಹಾಗೂ ನನ್ನ ಪಿತೃಸ್ವರೂಪಿ. 2001 ಜನವರಿ ಅದು. ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದೆ. ಪತ್ರಿಕೆ ನಷ್ಟದಲ್ಲಿತ್ತು ಅಂತ ಕಾಣತ್ತೆ, ನ್ಯೂಸ್‌ಪ್ರಿಂಟ್ ಉಳಿಸಬೇಕೆಂಬ ಉದ್ದೇಶವೂ ಇರಬಹುದು. ಸಾಮಾನ್ಯವಾಗಿ ಗೌರಿ-ಗಣೇಶ, ದೀಪಾವಳಿ, ಯುಗಾದಿ ಮತ್ತು ಆಯುಧ ಪೂಜೆಯಂದು ಮಾತ್ರ ಕ್ಲೋಸ್ಡ್ ಹಾಲಿಡೇ ಘೋಷಿಸುತ್ತಿದ್ದ ಕನ್ನಡ ಮಾಧ್ಯಮ ಲೋಕದಲ್ಲಿ ಆಗ ಕನ್ನಡಪ್ರಭ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿತ್ತು. ವರ್ಷದ ಈ ನಾಲ್ಕು ದಿನಗಳ ರಜೆಯ ಜೊತೆಗೆ ಆ ವರ್ಷ ಜನವರಿ 26ರ ಗಣರಾಜ್ಯೋತ್ಸವ, ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೂ ರಜೆ ನೀಡಲಾಗುತ್ತಿತ್ತು. ಏನೋ ಉದ್ಧಾರ ಆಗಿಬಿಡಬಹುದು ಎಂದು ಕನಸು ಕಟ್ಟಿಕೊಂಡು ಸಂಯುಕ್ತ ಕರ್ನಾಟಕ ಬಿಟ್ಟು ಕ್ವೀನ್ಸ್‌ರೋಡಿಗೆ ಹಾರಿದ್ದ ನಾನು ಇಡೀ ಕರಿಯರನ್ನು ರಿಸ್ಕಿಗೆ ಹಾಕಿದೆ ಎಂದು ಅನಿಸಲು ಬಹಳ ದಿನ ಬೇಕಾಗಲಿಲ್ಲ. ಅಲ್ಲಿ ಡೆಸ್ಕಿಗೆ ಸೇರಿ ಕೊಳೆತದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಹಾಗಂತ ಕನ್ನಡಪ್ರಭವನ್ನು ದೂರುವಷ್ಟು ಏನಿಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ಅಲ್ಲಿ ನನಗೆ ಪ.ಸ.ಕುಮಾರ್ ಎಂಬ ಅಪ್ಪಟ ಸ್ನೇಹಜೀವಿ ಸಿಕ್ಕರು. ಸುಧಾಕರ ದರ್ಬೆಯಂಥ ಮಗುಮನಸ್ಸಿನ ಸಂಗೀತ ಪ್ರೇಮಿ ಸಿಕ್ಕರು. ಜೇಪಿ ಸಿಕ್ಕ. ಆಮೇಲೆ ನಡೆದಿದ್ದು, ನಾನು ತುಳಿದದ್ದು ಬೇರೆಯದ್ದೇ ದಾರಿ.
ಹೀಗೆ 2001 ಜನವರಿ 26ಕ್ಕೆ ಕನ್ನಡಪ್ರಭಕ್ಕೆ ರಜೆ ಘೋಷಿಸಲಾಗಿತ್ತು. ಕನ್ನಡದ ಅಷ್ಟೂ ಪತ್ರಿಕೆಗಳು ಕೆಲಸ ಮಾಡುತ್ತಿದ್ದರೆ, ಕನ್ನಡಪ್ರಭ ಮ್ಯಾನೇಜ್‌ಮೆಂಟ್ ಮಾತ್ರ ಆವತ್ತು ಬಾಗಿಲು ಹಾಕಿ ನೀವೆಲ್ಲ ಮನೆಯಲ್ಲಿರಿ ಎಂದು ಅಪ್ಪಣೆ ಮಾಡಿತ್ತು. ಕಷ್ಟದಲ್ಲಿದ್ದ ಕನ್ನಡಪ್ರಭಕ್ಕೆ ಅಂಥದೊಂದು ರಜೆ ನೆರವಾಗಿರಲೂ ಸಾಕು. ಹಾಗಾದರೆ ರಜೆ ಬಿದ್ದ ಮೇಲೆ ಏನು ಮಾಡುವುದು? ನನಗೆ ಮದುವೆಯಾಗಿ ಆಗ್ಗೆ ಬರೀ ಎಂಟೇ ತಿಂಗಳಾಗಿತ್ತು. ಸರಿ, ಮಡದಿಯನ್ನು ಎಲ್ಲಾದರೂ ಲಾಲ್‌ಬಾಗಿಗೋ ಅಥವಾ ಕಬ್ಬನ್‌ಪಾರ್ಕಿಗೋ ಕರೆದುಕೊಂಡು ಹೋಗುವುದು ತಪ್ಪಿದರೆ, ಹಳ್ಳಿಯ ಕಡೆ ಒಂದು ಹೆಜ್ಜೆ ಹಾಕುವುದು ಎಂದು ನಿರ್ಧರಿಸಿದ್ದೆ. ಹೀಗಿರಬೇಕಾದರೆ, ಜನವರಿ 26ಕ್ಕೆ ಒಂದು ದಿನ ಮೊದಲು ನಮ್ಮದೇ ಡೆಸ್ಕಿನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯರಾದ ಸುರೇಂದ್ರ ಶೆಟ್ಟಿ, ‘ನಾಳೆ ಸುಮ್ಮನೆ ಮನೆಯಲ್ಲಿ ಕೂರುವ ಬದಲು ಎಲ್ಲಿಗಾದರೂ ಹೋಗೋಣವೆ?ʼ ಎಂದರು. ಅದಕ್ಕೆ ನಮ್ಮ ಜತೆಗಾರರೇ ಆಗಿದ್ದ ಜೇಪಿ (ಬಿ.ಎಸ್. ಜಯಪ್ರಕಾಶ ನಾರಾಯಣ), ಯಶೋಧ, ಶಿವಕುಮಾರ ದಬ್ಬೇಗಟ್ಟ, ನಂದೀಶ ದುಗಡಿಹಳ್ಳಿ (ಪಟೇಲ), ಹೇಮಾ ಮತ್ತು ಅವರ ಅಣ್ಣ ಭರತ, ಪಕ್ಕದ ಇಂಡಿಯನ್ ಎಕ್ಸ್‌ಪ್ರೆಸ್ಸಿನ ಭೂಮಿಕಾ ಸೇರಿ ಇನ್ನೊಂದಿಷ್ಟು ಸಹೋದ್ಯೋಗಿಗಳು ಸೇರಿ ಮಾಗಡಿ ತಾಲ್ಲೂಕಿನ ಸಾವನದುರ್ಗಕ್ಕೆ ಹೋಗುವುದೂ ಎಂದಾಯಿತು. ಈ ಟೀಮ್ ಜತೆ ನನ್ನ ಮಡದಿ ಕವಿತಾ ಕೂಡ ಸೇರಿಕೊಂಡರು.
ಜನವರಿ 26ರ ಬೆಳಗ್ಗೆ ನಾವೆಲ್ಲರೂ 7 ಗಂಟೆ ಸುಮಾರಿಗೆ ಒಂದು ಟಿಟಿ ಗಾಡಿಯಲ್ಲಿ ಸಾವನದುರ್ಗದತ್ತ ಹೊರಟೆವು. ಆಗೆಲ್ಲ ಯಾರೊಬ್ಬರ ಬಳಿಯೂ ಮೊಬೈಲು ಇರಲಿಲ್ಲ. ಜಸ್ಟ್ ಪೇಜರ್ʼಗಳ ಕಾಲವದು. ರಿಲೆಯನ್ಸ್ ಕೂಡ 500 ರೂಪಾಯಿ ಮೊಬೈಲ್ ಸೆಟ್ ಬಿಟ್ಟಿರಲಿಲ್ಲ. ಹೀಗಾಗಿ ಬರೀ ಲ್ಯಾಂಡ್‌ಲೈನುಗಳೇ ಇದ್ದ ಆ ಕಾಲದಲ್ಲಿ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ನಮಗೂ ಹಾಗೆಯೇ ಆಯಿತು. ನಾವಿನ್ನೂ ಸಾವನದುರ್ಗಕ್ಕೆ ತಲುಪಿದ್ದೆವೋ ಇಲ್ಲವೋ ಗೊತ್ತಿಲ್ಲ. ಅಷ್ಟರಲ್ಲಿ ಗುಜರಾತಿನ ಕಛ್‌ನಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಬಾಯ್ಬಿಟ್ಟ ಭೂಮಿಯ ಅಬ್ಬರಕ್ಕೆ ಸಿಲಿಕಿ ಇಡೀ ಕಛ್ ಅಲ್ಲೋಲ್ಲಕಲ್ಲೋಲ ಆಗಿತ್ತು. ಆ ಸಾವು, ನೋವು, ಆರ್ತನಾದ ಇದಾವುದೂ ನಾವೆಲ್ಲರೂ ಬೆಂಗಳೂರಿಗೆ ವಾಪಸ್ ಬಂದು ಟಿವಿ ಚಾನೆಲ್ ಹಾಕುವ ತನಕ ಗೊತ್ತಾಗಲೇ ಇಲ್ಲ. ಒಂದು ಪತ್ರಿಕೆಯಾಗಿ ಕನ್ನಡಪ್ರಭ ಸೋತಿದ್ದು ಆ ದಿನವೇ. ಆದರೆ ಅದಕ್ಕೆ ಕಾರಣವಿತ್ತು.
ಇರಲಿ, ನಮ್ಮ ಟೀಮ್ ಯಶಸ್ವಿಯಾಗಿ ಸಾವನದುರ್ಗ ಬೆಟ್ವವನ್ನು ಕ್ರಮಿಸಿತ್ತು. ನನ್ನ ಮಡದಿಯಂತೂ ಸೀರೆ ಉಟ್ಟುಕೊಂಡೇ ಎಲ್ಲೂ ಒಂದು ಬ್ರೇಕ್ ತೆಗೆದುಕೊಳ್ಳದೇ ಬೆಟ್ಟ ಹತ್ತಿದ್ದರು. ಎಲ್ಲರಿಗಿಂತ ಮೊದಲು ಗುರಿ ಮುಟ್ಟಿದವರು ಅವರೇ ಎಂಬದು ನನ್ನ ಹೆಮ್ಮೆ. ಇಡೀ ದುರ್ಗದ ಮೇಲೆಲ್ಲ ಒಂದು ಸುತ್ತು ಹಾಕಿದ ಮೇಲೆ ಎಲ್ಲೋ ಒಂದು ಜಾಗದಲ್ಲಿ ಕೂತೆವು. ನಮ್ಮ ಹಾಗೆಯೇ ಸಾಕಷ್ಟು ಚಾರಣಿಗರು ಬಂದಿದ್ದರು. ಅಲ್ಲಿ ಶುರುವಾಗಿದ್ದೇ ಹಾಡು-ಪಾಡು ಮತ್ತು ಅಂತ್ಯಾಕ್ಷರಿ. ಭೂಮಿಕಾ, ರಂಗೀಲಾ ಚಿತ್ರದ ʼಯಾಹಿರೇ ಯಾಹೀರೆ…ʼ ಹಾಡು ಹಾಡಿದರೆ, ಯಶೋಧ ಒಂದು ಗೀತೆ ಹಾಡಿದ ನೆನಪು. ನನ್ನ ಸರದಿ ಬಂದಾಗ, ಹಿಂಜರಿದೆ. ನನ್ನ ಮಡದಿ, ಇವರೂ ಹಾಡುತ್ತಾರೆ ಹಾಡಿಸಿ ಎಂದರು. ಏಕೆಂದರೆ, ಆಲ್ಲಿ ನಮ್ಮ ಜತೆ ನಮಗೆ ಗೊತ್ತೇ ಇಲ್ಲದ ಮತ್ತೊಂದಿಷ್ಟು ಜನ ಇದ್ದರು. ಸಂಕೋಚದ ನನಗೆ ಹಾಗೆ ತತ್‌ಕ್ಷಣಕ್ಕೆ ಹಾಡುವುದು ಕಷ್ಟವಾಗಿತ್ತು. ಆದರೂ ಟ್ರೈ ಮಾಡಿದೆ..
“ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯು ದೊರೆಯೆ..”
ಕೆ.ಎಸ್.ನರಸಿಂಹಸ್ವಾಮಿ ಅವರ ʼಮೈಸೂರ ಮಲ್ಲಿಗೆʼಯ ಗೀತೆ. ಮನಸ್ಸು ತುಂಬಿಕೊಂಡು ಹಾಡಿದ್ದೆ. ತಣ್ಣನೆಯ ಗಾಳಿಯ ನಡುವೆ ನನ್ನೊಳಗಿನ ಸ್ವರ ಕೊಂಚ ಅಂಜಿಕೆಯಿಂದಲೇ ಹೊರಬಂದು ಅಲ್ಲಿದ್ದ ಎಲ್ಲರನ್ನೂ ಆವರಿಸಿಕೊಂಡಿತ್ತು. ಹಾಡು ಮುಗಿಸಿ ಕಣ್ಬಿಟ್ಟರೆ ನನ್ನ ಸುತ್ತ ಐವತ್ತಕ್ಕೂ ಹೆಚ್ಚು ಜನ ಸೇರಿದ್ದರು. ದೊಡ್ಡ ಚಪ್ಪಾಳೆ. ನನ್ನ ಬದುಕಿನಲ್ಲಿ ಅಂಥ ಚಪ್ಪಾಳೆ ಕೇಳಿದ್ದು ಅದೇ ಮೊದಲು. ಕಣ್ಣಲ್ಲಿ ನೀರು ತುಂಬಿಕೊಂಡಿತು. ರಾಗ ಗೊತ್ತಿಲ್ಲ, ತಾಳ ತಿಳಿಯದು, ಹೀಗಿದ್ದರೂ ಆ ಹಾಡನ್ನು ಭಾವ ತುಂಬಿ ಹಾಡಿದ್ದೆ. ಅದು ಅಲ್ಲಿದ್ದವರಿಗೆಲ್ಲ ಇಷ್ಟವಾಯಿತು. ಆಮೇಲೆ ಅದೇ ʼಮೈಸೂರ ಮಲ್ಲಿಗೆʼಯ..
“ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು..”
ಇದಕ್ಕೆ ನನ್ನಲ್ಲಿದ್ದ ಮತ್ತಷ್ಟು ಭಾವ ತುಂಬಿದ್ದೆ. ಹಿಂದೆ ಒಬ್ಬಳು ಕೈಕೊಟ್ಟಿದ್ದನ್ನು ಅನುಭವಿಸಿ ಹಾಡಿದೆನೋ ಅಥವಾ ಹೊಸದಾಗಿ ಬಂದಿದ್ದ ಮಡದಿ ಮೆಚ್ಚಲಿ ಎಂದು ಹಾಡಿದೆನೋ ಗೊತ್ತಿಲ್ಲ. ಅಂತೂ ಹಾಡು ಮುಗಿಯುವಷ್ಟರಲ್ಲಿ ಜೇಪಿ ಬಂದು ಬಿಗಿಯಾಗಿ ಅಪ್ಪಿಕೊಂಡ. ಆಮೇಲೆ ಪಟೇಲ ಬಂದು ಮೇಲೆ ಬಿದ್ದ. ಬಳಿಕ ಸುರೇಂದ್ರ ಶೆಟ್ಟರು ಬಿಗಿಯಾದ ಶೇಕ್‌ಹ್ಯಾಂಡು ಕೊಟ್ಟು “ಚೆನ್ನಾಗಿ ಹಾಡಿದಿರಿ” ಎಂದರು. “ನಿಮ್ಮ ವಾಯ್ಸ್ ಸ್ವಲ್ಪ ಎಸ್‌ಪಿಬಿ ಅವರ ಕಂಠವನ್ನು ಹೋಲುತ್ತದೆ” ಎಂದರು ಯಶೋಧ. ನಮ್ಮ ಟೀಮು ಬಿಟ್ಟು ಅಲ್ಲಿದ್ದ ಇತರರೆಲ್ಲ ಬಂದು ಮೆಚ್ಚುಗೆ ಸೂಚಿಸಿದರು. ಆಗ ಜೇಪಿ ಒಂದು ಮಾತು ಹೇಳಿದ, “ಚನ್ನಕೃಷ್ಣ, ನೀನು ಕ್ಲಾಸಿಕಲ್ ಮ್ಯೂಸಿಕ್ ಕಲಿಯೋ”. ನನಗೆ ಆ ಶಬ್ದವೂ ಹೊಸತೇ ಆಗಿತ್ತು. ದುರ್ಗ ಇಳಿದು ರಾತ್ರಿ ಮನೆಗೆ ಬಂದು ಟಿವಿ ಚಾನೆಲ್ ಹಾಕಿದ ಕೂಡಲೇ ನಮ್ಮ ಸಾವನದುರ್ಗದ ಸಂಭ್ರಮ ಜರ್ರನೆ ಇಳಿದುಹೋಗಿತ್ತು. ರಾತ್ರಿ 9 ಗಂಟೆಗೆ ʼಈ ಟಿವಿʼ ನ್ಯೂಸ್ ಹಾಕಿದಾಗ, ಅದರಲ್ಲಿ ಕಂಡು ಬಂದ ಅವಶೇಷಗಳು, ಹೆಣಗಳ ರಾಶಿ ಇಡೀ ಆ ದಿನದ ಬಗ್ಗೆ ಅಸಹ್ಯ ಹುಟ್ಟುವಂತೆ ಮಾಡಿತು.
ಮರುದಿನ ನಾನು ಕನ್ನಡಪ್ರಭಕ್ಕೆ ಬಂದೆ. ಮಾಮೂಲಿ ನನ್ನದು 3 ಗಂಟೆ ಶಿಫ್ಟ್. ನಿನ್ನೆಯ ದಿನದ ರಜೆಯ ಬಗ್ಗೆ ಚಕಾರವಿಲ್ಲದ, ಭೂಕಂಪದ ಬಗ್ಗೆ ಅಷ್ಟೇನೂ ಚರ್ಚೆ ಇಲ್ಲದ ನಿರ್ಭಾವುಕ ವಾತಾವರಣವಿತ್ತು. “ಅದೇನ್ರೀ ಕರ್ಮ ಅದು. ನೆರೆ, ತಪ್ಪಿದ್ರೆ ಬರ. ಅದೂ ತಪ್ಪಿದ್ರೆ ಭೂಕಂಪ. ನಾರ್ತ್ ಇಂಡಿಯಾದ ಹಣೆಬರಹವೇ ಸರಿ ಇಲ್ಲ” ಎಂದು ಬೇಸರ ಮಾಡಿಕೊಂಡ ನಮ್ಮ ದೊಡ್ಡಬಳ್ಳಾಪುರ ವೆಂಕಟೇಶ. ಹೀಗೆ ಎರಡ್ಮೂರು ದಿನ ಕಳೆದಿತ್ತು ಅನ್ಸುತ್ತೆ. ಆ ಒಂದು ದಿನ ಕಾರಿಡಾರ್‌ನಲ್ಲಿ ಪ.ಸ.ಕುಮಾರ್ ಎದುರಾದರು. “ಲೋ.. ಚನ್ನಕೃಷ್ಣ, ಚೆನ್ನಾಗಿ ಹಾಡ್ತಿಯಂತಲ್ಲೋ ಮಾರಾಯ. ಬಾ.. ಟೀ ಕುಡಿಯೋಣ” ಅಂತ ಸೀದಾ ಕ್ಯಾಂಟೀನಿಗೆ ಕರೆದುಕೊಂಡು ಹೋದರು. ಟೀ ಕುಡಿಸಿ, “ಮೊನ್ನೆ ಬೆಟ್ಟದ ಮೇಲೆ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡು” ಎಂದರು. ನನಗೆ ಕಕ್ಕಾಬಿಕ್ಕಿಯಾಯಿತು. ದೊಡ್ಡವರು ಕೇಳಿದರಲ್ಲ ಎಂಬ ಕಾರಣಕ್ಕೆ ಧೈರ್ಯವಾಗಿ ಅದೇ ಬಳೆಗಾರನ ಹಾಡನ್ನು ಹಾಡಿದೆ. ಅವರು ಚಪ್ಪಾಳೆ ತಟ್ಟಿ ಚೆನ್ನಾಗಿದೆ ಎಂದರಲ್ಲದೆ, ಮರುಕ್ಷಣವೇ, “ನೀನು ತಾಳ ತಪ್ತಿದ್ದೀಯಾ, ಚೆನ್ನಾಗಿ ಪ್ರಾಕ್ಟೀಸ್ ಮಾಡು, ತಾಳ ಹಾಕಿಕೊಂಡು ಅಭ್ಯಾಸ ಮಾಡು” ಎಂದರು. ಅದುವರೆಗೂ ನನ್ನಲ್ಲಿ ಕಂಬಳಿ ಹೊದ್ದು ಮಲಗಿದ್ದ ಸೋಮಾರಿ ಗಾಯಕನನ್ನು ಅವರು ಬಡಿದೆಬ್ಬಿಸಿದ್ದು ಹೀಗೆ. “ಪ್ರಯತ್ನ ಮಾಡು. ನಿನಗೆ ಪ್ಲೇ ಬ್ಯಾಕ್ ಸಿಂಗರ್ ಆಗುವ ಎಲ್ಲ ಲಕ್ಷಣಗಳೂ ಇವೆ. ಸ್ವಲ್ಪ ಕಷ್ಟಪಟ್ಟರೆ ಖಂಡಿತಾ ನೀನು ಗಾಯಕನಾಗಬಹುದು. ಸಾಧ್ಯವಾದರೆ ಹಿಂದೂಸ್ತಾನಿ ಮ್ಯೂಸಿಕ್ ಕಲಿ” ಎಂದರು. ನಾನು, “ಆಯಿತು ಸರ್” ಎಂದು ತಲೆಯಾಡಿಸಿದೆ. “ಯಾರಾದರೂ ಗುರುಗಳಿದ್ದರೆ ನಾನೇ ತಿಳಿಸ್ತೀನಿ ಮಾರಾಯ. ಮನೆಗೆ ಹೋದ್ಮೇಲೆ ಸುಮ್ಮನೆ ಟೈಮ್ ವೇಸ್ಟ್ ಮಾಡದೇ ಪ್ರಾಕ್ಟೀಸ್ ಮಾಡು” ಎಂದ್ಹೇಳಿ ಅವರು ಹಿಂದುಮುಂದು ನೋಡದೇ ಎದ್ದುಹೋದರು. ಸುಮ್ಮನಿದ್ದ ನನ್ನಲ್ಲಿ ಹೊಸ ಆಲೋಚನೆ ಹುಟ್ಟಲು ಪ.ಸ.ಕುಮಾರ್ ಕಾರಣರಾಗಿದ್ದು ಹೀಗೆ.
ಮತ್ತೆ ನಾಲ್ಕೈದು ದಿನಗಳು ಕಳೆದರೂ ಕುಮಾರ್ ಅವರು ಸಿಗಲೇ ಇಲ್ಲ. ರಜೆ ಇರಬಹುದು ಎಂದು ನಾನು ಸುಮ್ಮನಾಗಿದ್ದೆ. ಒಂದು ದಿನ ಡೆಸ್ಕಿನಲ್ಲಿ ಕೆಲಸ ಮಾಡಬೇಕಾದರೆ, ನನ್ನ ಪಕ್ಕದಲ್ಲಿದ್ದ ಇಂಟರ್‌ಕಾಂಗೆ ಕಾಲ್ ಮಾಡಿದ ಕುಮಾರ್, ʼಕ್ಯಾಂಟೀನ್‌ಗೆ ಬಾʼ ಎಂದರು. ನಾನೋ, ವಾರದ ನಂತರ ಕೊನೆಗೂ ಸಿಕ್ಕರಲ್ಲ ಎಂದು ಓಡಿದೆ. ಅವರು, ಸುಧಾಕರ ದರ್ಬೆ ಇಬ್ಬರೂ ಟೀ ಹೀರುತ್ತಿದ್ದರು. ನಾನು ಹೋಗಿ ಕೂತಿದ್ದೇ ತಡ, “ಪರಮೇಶ್ವರ ಹೆಗಡೆ ಅವರಲ್ಲಿ ಸಂಗೀತ ಕಲೀತಿಯಾ?” ಎಂದು ಕೇಳಿದರು. ನನಗೆ ಗುರುಗಳನ್ನು ಹುಡುಕುವುದಕ್ಕೆ ಅವರು ಸುಮಾರು ಸಮಯ ವೆಚ್ಚಿಸಿದ್ದರು. “ಆಗಲಿ ಸರ್” ಎಂದೆ. ಅದಾದ ಮೇಲೆ ಪಂಡಿತ್ ಹೆಗಡೆಯವರ ಬಗ್ಗೆ ಬಹುಹೊತ್ತು ಮಾತನಾಡಿದರು ಕುಮಾರ್. ನಾನು ಅದೇ ಗುಂಗಿನಲ್ಲಿ ಕೆಲಸ ಮುಗಿಸಿ ಮನೆಯತ್ತ ಹೊರಟೆ. ಕ್ಯಾಂಟೀನ್‌ನಿಂದ ಹೊರಡುವ ಮುನ್ನ “ಲೋ, ಚನ್ನ, ಬ್ರಿಗೇಡ್ ರೋಡಿನಲ್ಲಿ ಮ್ಯೂಸಿಕ್ ವರಲ್ಡ್ ಅಥವಾ ಪ್ಲಾನೆಟ್ ಎಂ ಅಂತ ಮ್ಯೂಸಿಕ್ ಶಾಪ್ʼಗಳಿವೆ. ಅಲ್ಲಿ ಹಿಂದೂಸ್ತಾನಿ ಕ್ಯಾಸೆಟ್ಟುಗಳು ಸಿಗುತ್ತವೆ. ಸಾಧ್ಯವಾದರೆ, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅಥವಾ ಪರಮೇಶ್ವರ ಹೆಗಡೆ ಅವರ ಕ್ಯಾಸೆಟ್ಟುಗಳು ಸಿಕ್ಕರೆ ನೋಡು” ಎಂದರು.
ಪಂಡಿತ್ ಜಸ್‌ರಾಜ್ ಅವರ ರಾಗ “ಶುದ್ಧ ಸಾರಂಗ್”ನ ರೆಕಾರ್ಡ್ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಮರುದಿನ ನಾನು ಆಫೀಸ್‌ಗೆ ಬರಲು ಸ್ವಲ್ಪ ಬೇಗ ಹೊರಟು 12 ಗಂಟೆ ಸುಮಾರಿಗೆ ಮ್ಯೂಸಿಕ್ ವರಲ್ಡ್ʼಗೆ ಎಂಟ್ರಿ ಕೊಟ್ಟೆ. ನಾನು ಅಲ್ಲಿಗೆ ಹೋಗಿದ್ದು ಅದೇ ಮೊದಲು. ಕ್ಲಾಸಿಕಲ್ ಕ್ಯಾಸೆಟ್ಟು ಹುಡುಕಿಕೊಂಡು ಹೋದ ನಾನು ಯಾನಿ ಎಂಬ ಅಮೆರಿಕ ಸಂಗೀತಗಾರನ ಮುಖ ನೋಡಿದ್ದು ಅದೇ ಮೊದಲು. ಆತನ ಮ್ಯೂಸಿಕ್ ಆಲ್ಬಂಗಳಿಗೆ ಪಡ್ಡೆ ಹುಡುಗರು ಮುಗಿಬಿದ್ದಿದ್ದರು. ಅಲ್ಲಿಂದ ಮುಂದೆ ಹೋದರೆ ಕೊನೆಯ ಎರಡು ರಾಕ್‌ಗಳಲ್ಲಿ ಕ್ಲಾಸಿಕಲ್ ಸಿಡಿ, ಕ್ಯಾಸೆಟ್ಟುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಅಲ್ಲಿ ಕೊನೆಗೆ ಒಂದು ಜೀವವೂ ಇರಲಿಲ್ಲ. ನಾನು ನಮ್ಮ ಗುರುಗಳ ಕ್ಯಾಸೆಟ್ ಹುಡುಕಿದೆ. ಇರಲಿಲ್ಲ, ಕೊನೆಗೆ ಭೀಮಸೇನರ ಕ್ಯಾಸೆಟ್ಟುಗಳತ್ತ ನೋಡಿದೆ. ಒಂದು ಕ್ಯಾಸೆಟ್ ಬೆಲೆ 75 ರೂಪಾಯಿ. ಆ ದರ ನನ್ನನ್ನು ಕ್ಷಣಕಾಲ ಕಂಪಿಸುವಂತೆ ಮಾಡಿತ್ತು. ಸಿನಿಮಾ ಕ್ಯಾಸೆಟ್ಟುಗಳ ಬೆಲೆ ಹೆಚ್ಚೆಂದರೆ 35 ರೂಪಾಯಿ. ಅರೆ, ಅಂದುಕೊಳ್ಳುತ್ತಲೇ ಹಿಂದೂಸ್ತಾನಿ ಸಂಗೀತದ ಕ್ಯಾಸೆಟ್ಟುಗಳನ್ನು ತೆಗೆತೆಗೆದು ನೋಡತೊಡಗಿದೆ. ಆಗೊಬ್ಬ ಹುಡುಗಿ ಬಂದು, “ಯಾರ ಆಲ್ಬಂ ಬೇಕಿತ್ತು ಸರ್” ಎಂದರು. ನಾನು ನೇರ ವಿಷಯಕ್ಕೆ ಬಂದೆ, ಇದ್ದಿದ್ದನ್ನು ಇದ್ದಹಾಗೆ ಹೇಳಿದೆ..
“ಮೇಡಂ, ಕ್ಲಾಸಿಕಲ್ ಮ್ಯೂಜಿಕ್ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವ ಕ್ಯಾಸೆಟ್ ತೆಗೋಬೇಕು? ಯಾರ ಆಲ್ಬಂ ಕೇಳಬೇಕು ಎಂದು ಗೊತ್ತಿಲ್ಲ” ಎಂದೆ. ಅವರಿಗೆ ನನ್ನ ಪರಿಸ್ಥಿತಿ ಅರ್ಥವಾಯಿತು. ಸೀದಾ ಅವರು ಎರಡು ಕ್ಯಾಸೆಟ್ಟುಗಳನ್ನು ಎತ್ತಿಕೊಟ್ಟರು. ಒಂದು, ಪಂಡಿತ್ ಜಸ್‌ರಾಜರ ʼಸಾರಂಗ್ʼ ಮತ್ತು ಇನ್ನೊಂದು, ಪಂಡಿತ್ ಭೀಮಸೇನರ ʼಶುದ್ಧಿʼ. ಈ ಎರಡು ಕ್ಯಾಸೆಟ್ಟುಗಳಲ್ಲಿ ನಾನು ಮೊದಲು ಹಿಡಿದುಕೊಂಡಿದ್ದು, ʼಸಾರಂಗ್ʼ ಕ್ಯಾಸೆಟ್ಟನ್ನು. ಜಸ್‌ರಾಜ್ ಅವರು ಹಾಡಿದ್ದು. ʼಶುದ್ಧ ಸಾರಂಗ್ʼ ಮತ್ತು ʼಮಿಯಾನ್ ಕಿ ಸಾರಂಗ್ʼ ಎಂಬೆರಡು ರಾಗಗಳಿದ್ದವು. (ಇವೆರಡೂ ಅಹರಾಹ್ನ ಕಾಲದ ರಾಗಗಳು) ” ಬೇಕಾದರೆ ನೀವು ಕೇಳಲೂಬಹುದು” ಎಂದರು ಆಕೆ. ಸರಿ, ಅಲ್ಲೇ ಇದ್ದ ಹೆಡ್‌ಫೋನ್ ಹಾಕಿಕೊಂಡು ಕೂತೆ. ಅವರು ಕ್ಯಾಸೆಟ್ಟು ಹಾಕಿ ಹೋದರು. ತಾನ್ಪುರ ತಂತಿಯ ತೀವ್ರ ನಾದದ ಜತೆಯಲ್ಲೇ “ಶ್ರೀ..ರಾಮ್..” ಎಂದು ಶುರುವಾದ ಅವರ ಗಾಯನ ಕ್ಷಣಮಾತ್ರದಲ್ಲಿ ನನ್ನ ಕಟ್ಟಿಹಾಕಿಬಿಟ್ಟಿತು. “ಸಕಲ ಬನ ಲಾ..ರಕೆ” ಅಂತ ಶುರುವಾಯಿತು. ಅದು ಬಂದಿಷ್ ಅಂತ ನನಗೆ ಗೊತ್ತಿರಲಿಲ್ಲ. ಕೇಳುತ್ತಾ ಹೋದೆ, ಮೊದಲ ರಾಗ ಮುಗಿದು, ಕ್ಯಾಸೆಟ್ ತಿರುವಿ ಹಾಕಿ, ಎರಡನೇ ರಾಗವನ್ನು ಕೇಳತೊಡಗಿದೆ. ಕೇಳಲು ಎನೋ ಒಂಥರಾ, ಹೊಸದಾಗಿ ಇದೆ ಹೊರತು ಅದು ಏನೆಂದು ಅರ್ಥವಾಗುತ್ತಿಲ್ಲ. ಆದರೂ ಅದನ್ನು ಕೇಳುವ ಉತ್ಕಟತೆ ಮತ್ತೂ ಹೆಚ್ಚಾಗಿ ಒಂದೂಮುಕ್ಕಾಲು ತಾಸಿನಲ್ಲಿ ಇಡೀ ಕ್ಯಾಸೆಟ್ಟನ್ನು ಕೇಳಿದೆ, ಅದನ್ನು ಖರೀದಿಸಿಯೂ ತಂದೆ. ನಾನು ಮೊದಲು ಖರೀದಿಸಿದ ಕ್ಲಾಸಿಕಲ್ ಮ್ಯೂಸಿಕ್ ಆಲ್ಬಂ ಅದು. ಅದೂ ಜಸ್‌ರಾಜ್ ಅವರದ್ದು.
ಆ ಕ್ಯಾಸೆಟ್ಟನ್ನು ಆವತ್ತೇ ಕುಮಾರ್ ಅವರಿಗೆ ತೋರಿಸಿದೆ. ಅವರು ನೋಡಿದವರೆ, “ಲೋ ಚನ್ನ, ಇವೆಲ್ಲ ಕಷ್ಟದ ರಾಗಗಳು ಕಣಪ್ಪ. ಯಮನ್, ಬೀಮಪಲಾಸಿಯಂಥ ಸರಳ ರಾಗಗಳ ಕ್ಯಾಸೆಟ್ಟುಗಳನ್ನು ತೆಗೊಳ್ಳೋದಲ್ವಾ? ಗುರುಗಳು ಮೊದಲು ಇಂಥ ರಾಗಗಳನ್ನೇ ಹೇಳಿಕೊಡುತ್ತಾರೆ” ಎಂದರು. ನಾನೋ, ಪಿಳಿಪಿಳಿ ಅಂತ ಕಣ್ಬಿಡುತ್ತಾ, “ಗೊತ್ತಾಗಲಿಲ್ಲ ಸರ್, ಅಲ್ಲೊಬ್ಬ ಹುಡುಗಿ ಇದ್ಲು. ಚೆನ್ನಾಗಿದೆ ಅಂತ ಕೊಟ್ಟರು” ಅಂದೆ. ಅವರು ನಕ್ಕು ಸುಮ್ಮನಾದರು. ಆಮೇಲೆ ನಾನು ಏನಿಲ್ಲವೆಂದರೂ ಇಪ್ಪತ್ತು ಮೂವತ್ತು ಸಲ ಈ ಕ್ಯಾಸೆಟ್ಟನ್ನು ಕೇಳಿರಬಹುದು. ಆ ಕ್ಯಾಸೆಟ್ಟು ಬಂದ ಗಳಿಗೆಯೋ ಏನೋ, ಆ ಮರುವಾರವೇ ನಾನು ಪಂಡಿತ್ ಪರಮೇಶ್ವರ ಹೆಗಡೆ ಅವರಿದ್ದ ಮಲ್ಲೇಶ್ವರದ ಮನೆಗೆ ಹೋಗಿ, “ನನಗೆ ಸ್ವರಭಿಕ್ಷೆ ನೀಡಿ ಗುರುಗಳೇ” ಎಂದು ಅರಿಕೆ ಮಾಡಿಕೊಂಡೆ. ಅವರು ಅತ್ಯಂತ ಪ್ರೀತಿಯಿಂದ ನನ್ನನ್ನು ಪಾಠಕ್ಕೆ ಸೇರಿಸಿಕೊಂಡರಲ್ಲದೆ, ಆರಂಭದಲ್ಲಿ ʼಯಮನ್ʼ ರಾಗದ ಪಾಠವನ್ನು ಶುರು ಮಾಡಿದರು.
ಹೀಗೆ ಒಂದೆರಡು ಪಾಠ ಆಗಿರಬಹುದು. ಬೆಂಗಳೂರಿನ ವೈಯ್ಯಾಲಿ ಕಾವೆಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಜಸ್‌ರಾಜರ ಕಛೇರಿ ಇದ್ದದ್ದು ಗೊತ್ತಾಯಿತು. ಖ್ಯಾತ ವಯಲಿನ್ ವಾದಕ ಎಲ್. ಸುಬ್ರಹ್ಮಣ್ಯಂ ಅವರು ತಮ್ಮ ತಂದೆಯವರ ಹೆಸರನಲ್ಲಿ ನಡೆಸುತ್ತಿದ್ದ ಸಂಗೀತೋತ್ಸವ ಅದಾಗಿತ್ತು. “ಶ್ರೀ ಲಕ್ಷ್ಮೀನಾರಾಯಣ ಗ್ಲೋಬಲ್ ಮ್ಯೂಸಿಕ್ ಫೆಸ್ಟಿವಲ್” ಅಂತ ಅದರ ಹೆಸರು. ಮೊದಲ ದಿನ ಪಂಡಿತ್ ಜಸ್‌ರಾಜ್ ಮತ್ತು ಎಲ್.ಎಲ್. ಸುಬ್ರಹ್ಮಣ್ಯಂ ಅವರ ಕಛೇರಿಗಳಿದ್ದವು. ಮರುದಿನ ಪಂಡಿತ್ ಹರಿಪ್ರಸಾದ ಚೌರಾಸಿಯಾ ಅವರ ಕಛೇರಿಯೂ ಇತ್ತು. ನಾನು ಮತ್ತು ಪ.ಸ.ಕುಮಾರ್ ಹೇಗೋ ಪಾಸ್ ಸಂಪಾದಿಸಿ ಇಬ್ಬರೂ ಮೊದಲ ದಿನದ ಕಛೇರಿಗೆ ಹೋದೆವು. ಒಂದು ಸೀಟ್ ಕೂಡ ಖಾಲಿ ಇರಲಿಲ್ಲ. ನಮ್ಮ ಸೀಟುಗಳು ಹಾಗೆಯೇ ಇದ್ದವು. ಹೋಗಿ ಕೂತೆವು. ಕೆಲಹೊತ್ತಿನಲ್ಲಿ ಸಹಸಾಥಿ ಕಲಾವಿದರೆಲ್ಲ ಬಂದರು. ಕೊನೆಯದಾಗಿ ಜಸ್‌ರಾಜ್ ಅವರೂ ಪ್ರತ್ಯಕ್ಷರಾದರು. ಇಡೀ ಸಭಾಂಗಣ ಎದ್ದುನಿಂತುಬಿಟ್ಟಿತು, ಮುಂದಿನ ಸಾಲಿನಲ್ಲಿ ಇದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಅವರ ಧರ್ಮಪತ್ನಿ ಪ್ರೇಮಾ ಕಷ್ಣ ಅವರೂ ಸೇರಿ. ದೈವಾಂಶ ಸಂಭೂತರಂತೆ, ವಿಭೂತಿಪುರುಷರಂತೆ ಅಥವಾ ಆ ದೇವರೇ ಭೂಮಿಗೆ ಕಳಿಸಿಕೊಟ್ಟ ಸಂಗೀತ ಸಂತರಂತೆ ಕಂಡರು ಜಸ್‌ರಾಜ್ ಅವರು. ನಾನು ಅವರನ್ನು ನೋಡಿದ ಮೊದಲ ಕ್ಷಣವದು. ಮೈಯ್ಯಲ್ಲ ಜುಂ ಎಂದಂತಾಯಿತು. ಎರಡು ಕೈಗಳನ್ನು ಮೇಲೆತ್ತಿ ಎಲ್ಲರನ್ನು ಆಶೀರ್ವದಿಸುತ್ತಾ ಇಲ್ಲವೇ ಆಸೀನರಾಗಿ ಎಂದು ಹೇಳುವಂತಿತ್ತು ಅವರ ಆಗಮನದ ಪರಿ. ಎಲ್ಲರೂ ಕೂರುತ್ತಿದ್ದರೆ ನಾನು ನಿಂತವನು ಅವರನ್ನು ನೋಡುತ್ತ ಮೈಮರೆತುಬಿಟ್ಟೆ. ಕುಮಾರ್ ಕೈಹಿಡಿದು ಕೂರಿಸಿಕೊಂಡರು. ಮೊದಲು ಪ್ರಾಸ್ತಾವಿಕವಾಗಿ ಒಂದೆರಡು ಮಾತು ಹೇಳಿದ ಪಂಡಿತರು, ಆಮೇಲೆ ಮೆಲ್ಲಗೆ ಆಲಾಪ ಶುರು ಮಾಡಿದರು. ಅದು ರಾಗ ಮಾಲಕಂಸ್. ಬಹುಶಃ ಅದೇ ಇರಬೇಕು, ಕೊಂಚ ಅನುಮಾನವಿದೆ. ಆಮೇಲಿನ ದಿನಗಳಲ್ಲಿ ಈ ರಾಗವೆಂದರೆ ನನಗೆ ಬಹು ಇಷ್ಟವಾಗಿಬಿಟ್ಟಿತ್ತು. ಒಂದು ಗಂಟೆಕಾಲ ನಡೆದ ಆ ರಾಗದ ಸುಧೆಯಿಂದ ಇಡೀ ಸಭಾಂಗಣವೇ ಆ ದೈವತ್ವದ ದನಿಯಲ್ಲಿ ಮಿಂದುಹೋಗಿತ್ತು. ಆಮೇಲೆ ಪುರಿಯಾ ಧನುಶ್ರೀ. ಮುಕ್ಕಾಲು ಗಂಟೆ ಆ ಹಾಡುಗಾರಿಕೆಯನ್ನು ಇಡೀ ಶ್ರೋತೃವರ್ಗ ಹೃದಯವನ್ನು ತುಂಬಿಕೊಂಡಿತು ಎಂಬುದು ನನಗೆ ಅರ್ಥವಾಗುತ್ತಿತ್ತು. ಆದರೆ, ನನಗೆ ಬದುಕಿನಲ್ಲಿ ಮೊತ್ತಮೊದಲ ನೇರ ಕಛೇರಿ. ಶಬ್ದ ಕಿವಿಗೆ ಹೋಗುತ್ತಿತ್ತೇ ವಿನಾ ಅದರ ಸ್ವಾದ ಹೃದಯಕ್ಕೆ ಇಳಿಯಲಿಲ್ಲ. ಅಂದರೆ, ಅರ್ಥ ಆಗುತ್ತಿರಲಿಲ್ಲ. ʼವ್ಹಾ, ಅದ್ಭುತ, ವಾರೆ ವ್ಹಾ..ʼ ಎನ್ನುತ್ತಾ ಕಛೇರಿಯನ್ನು ಸವಿಯುತ್ತಿದ್ದ ಕುಮಾರ್ ಅವರನ್ನು ನೋಡುವುದು, ಇನ್ನೊಮ್ಮೆ ಜಸ್‌ರಾಜರನ್ನು ದಿಟ್ಟಿಸುವುದೂ ನನ್ನ ಕೆಲಸವಾಯಿತು. ಎಂಟು ಗಂಟೆ ಹೊತ್ತಿಗೆ ಅವರ ಕಛೇರಿ ಮುಗಿಯಿತು. ವೇದಿಕೆಯಿಂದ ಎದ್ದ ಪಂಡಿತರು ವೇದಿಕೆ ಹಿಂದಿನ ಭಾಗಕ್ಕೆ ತೆರಳಿದರು. ಕ್ಷಣಮಾತ್ರದಲ್ಲಿ ಅವರನ್ನು ಜನ ಮುತ್ತಿಕೊಂಡರು. ನಾನು, ಕುಮಾರ್ ಬಹುಹೊತ್ತು ಕಾದೆವು. ಹೆಚ್ಚೂಕಮ್ಮಿ ಅರ್ಧ ಗಂಟೆಯಾದ ಮೇಲೆ ಸ್ವಲ್ಪ ಜನಸಾಂದ್ರತೆ ಕಮ್ಮಿಯಾಯಿತು. ಮೆಲ್ಲಗೆ ಹತ್ತಿರಕ್ಕೆ ಹೋದೆವು. ಕುಮಾರ್ ಅವರು ಪರಿಚಯ ಮಾಡಿಕೊಂಡರು. ನನ್ನನ್ನೂ ಪರಿಚಯಿಸಿದರು. “ಹಿ ಈಸ್ ಹಿಂದೂಸ್ತಾನಿ ಸ್ಟೂಡೆಂಟ್” ಅಂದರು. ಅವರಿಗೆ ಸಂತೋವಾಯಿತು. “ಅಚ್ಛಾ ಬೇಟಾ” ಎಂದು ನನ್ನ ಬೆನ್ನುತಟ್ಟಿದರು. ನಾನು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಪಾದ ಮುಟ್ಟಿ ನಮಸ್ಕರಿಸಿದೆ. ಮತ್ತೊಮ್ಮೆ ಮೈಯ್ಯಲ್ಲ ಕಂಪಿಸಿದಂತಾಯಿತು. ಅಲ್ಲೇ ಖರೀದಿ ಮಾಡಿದ್ದ ಮೂರು ಕ್ಯಾಸೆಟ್ಟುಗಳ ಅವರದ್ದೇ ಆದ ಪ್ಯಾಕ್ ಮೇಲೆ ಒಂದು ಆಟೋಗ್ರಾಫ್ ಪಡೆದು ಇಬ್ಬರೂ ಹೊರಬಂದೆವು. ನನಗೆ ಯಾವುದೋ ಲೋಕದಲ್ಲಿದ್ದವನು ವಾಸ್ತವಕ್ಕೆ ಬಂದ ಹಾಗೆ ಅನಿಸಿತು.
***
ಎಲ್ಲೋ ದೂರದಲ್ಲಿ ಕುಮಾರ್ ಅವರು ತಮ್ಮ ಬಜಾಜ್ ಚೇತಕ್ ಗಾಡಿಯನ್ನು ನಿಲ್ಲಿಸಿದ್ದರು. ಅಲ್ಲಿವರೆಗೂ ಮೌನವಾಗಿ ನಡೆದುಕೊಂಡು ಬಂದವರೆ, ಗಾಡಿಯ ಸ್ಟ್ಯಾಂಡ್ ಇಳಿಸಿ, “ಚನ್ನ, ಜೀವನ ಸಾರ್ಥಕವಾಯಿತು ಕಣೋ. ಇನ್ನು ಸತ್ತು ಹೋದರೂ ಪರವಾಗಿಲ್ಲ” ಎಂದುಬಿಟ್ಟರು. ಆಕಾಶ ನೋಡುತ್ತಾ ದೀರ್ಘ ಉಸಿರುಬಿಟ್ಟು ʼಗಾಡಿ ಹತ್ತುʼ ಎಂದರು. ಅವರು ಹೇಳಿದ್ದನ್ನು ಅರ್ಥೈಸಿಕೊಳ್ಳುವಷ್ಟು ತಿಳಿವಳಿಕೆ ನಗಿರಲಿಲ್ಲ. ಆದರೆ, ಅವರು ಜಸ್‌ರಾಜ್ ಅವರ ಕಛೇರಿಯನ್ನು ಬಹುವಾಗಿ ಎಂಜಾಯ್ ಮಾಡಿದ್ದರು. ಅವರನ್ನು ಪಂಡಿತರು ಬಹುವಾಗಿ ಆವರಿಸಿಕೊಂಡಿದ್ದರು. ಅದಾದ ಮೇಲೆ ಬಹಳಷ್ಟು ದಿನ ಅವರು ಜಸ್‌ರಾಜ್ ಧ್ಯಾನದಲ್ಲಿಯೇ ಇದ್ದರು ಕುಮಾರ್.
ಪ.ಸ.ಕುಮಾರ್
ಅದಾದ ಮೇಲೆ ಮತ್ತೆ ನಾಲ್ಕು ಕಛೇರಿಗಳಿಗೆ ಹೋಗಿದ್ದೆ. ಅದರಲ್ಲಿ ಎರಡು ಎಲ್. ಸುಬ್ರಹ್ಮಣ್ಯಂ ಅವರ ಜತೆಗೆ ಜಸ್‌ರಾಜರ ಜುಗಲ್‌ಬಂದಿಗಳಾಗಿದ್ದವು. ಇನ್ನೊಂದು ಹರಿಪ್ರಸಾದ್ ಚೌರಾಸಿಯಾ ಅವರ ಜತೆಗಿನ ಜುಗಲ್‌ಬಂದಿ. ಅವರ ಗಟ್ಟಿಕಂಠ ಮತ್ತು ಮಂದ್ರವನ್ನು ಮತ್ತು ತಾರಕವನ್ನು ತಮ್ಮ ಹೃದಯದ ಆಳದಿಂದ ಉಕ್ಕಿಸುತ್ತಿದ್ದ ಕಲೆ ಅವರಿಗಷ್ಟೇ ಸಿದ್ಧಿಸಿತ್ತೇನೋ. ಅವರು ಹೊರಟುಹೋಗಿದ್ದಾರೆ, ಹಾಡಿದ್ದೆಲ್ಲವನ್ನೂ ನಮಗೇ ಬಿಟ್ಟು.
ಪಂಡಿತ್ ಭೀಮಸೇನ ಜೋಶಿ ಅವರು 2011 ಜನವರಿ 24ರಂದು ನಿಧನರಾದಾಗ ಪಂಡಿತ್ ಜಸ್‌ರಾಜ್ ಹೀಗೆ ಉದ್ಘರಿಸಿದ್ದರು. “ಇನ್ನು ನಾಲ್ಕು ಶತಮಾನ ಕಳೆದರೂ ಇನ್ನೊಬ್ಬ ಭೀಮಸೇನರು ಹುಟ್ಟಲು ಸಾಧ್ಯವಿಲ್ಲ” ಎಂದಿದ್ದರು. ಅದೇ ಮಾತು ಜಸ್‌ರಾಜರಿಗೂ ಅನ್ವಯವಾಗುತ್ತದೆ, ಸಂಗೀತಕ್ಕೆ ದೈವತ್ವ ತುಂಬಿದ ಅವರಂಥ ಸ್ವರಪುತ್ರ ಇನ್ನೊಬ್ಬರು ಬರುವುದು ಕಷ್ಟ.
ಜಸ್‌ರಾಜರಿಗೆ ಅನಂತ ಪ್ರಣಾಮಗಳು.
***