ಹೂವು-ಹಣ್ಣು, ಗಣಪನಿಗಷ್ಟೇ ವೆಚ್ಚ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಜನಜೀವನ ಬಹತೇಕ ಸಹಜ ಸ್ಥಿತಿಗೆ ಬಂದಂತೆ ಆಗಿದ್ದು, ಹಬ್ಬ ಹರಿದಿನಗಳು ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲ ಮಾಡಲಾಗುತ್ತಿದ್ದು, ವೃತ್ತಿಪರ ಕೋರ್ಸುಗಳಿಗೆ ನಡೆದ ಸಿಇಟಿ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರ ಮನಸ್ಸಿನಲ್ಲಿಯೂ ಆತ್ಮವಿಶ್ವಾಸ ಮೂಡಿದೆ. ಬೆಂಗಳೂರಿನಲ್ಲಿ ಕೋವಿಡ್ ಬಗ್ಗೆ ಈಗ ಮೊದಲಿನಷ್ಟು ಆತಂಕ, ಅಬ್ಬರ ಇಲ್ಲ. ಹೀಗಾಗಿ ಗೌರಿ-ಗಣೇಶ ಹಬ್ಬಕ್ಕೆ ತಯಾರಿಗೆ ಬಿರುಸು ಬಂದಿದೆ. ಆದರೆ ಜನರು ಹಬ್ಬ ಮಾಡಲು ರೆಡಿ ಇದ್ದರೂ ದುಡ್ಡಿನ ಮೇಲೆ ಮಾತ್ರ ಹಿಡಿತ ಇಟ್ಟುಕೊಂಡಿದ್ದಾರೆ.
ಈಗಾಗಲೇ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಗಣಪನ ಮೂರ್ತಿಗಳು ಬಂದಿವೆ. ಕೆಲವರು ಗಣೇಶೋತ್ಸವ ಆಗಲೇಬೇಕು ಎಂದು ಅಭಿಯಾನ ನಡೆಸಿದರಾದರೂ, ಜನರು ಮೂರ್ತಿಗಳ ಖರೀದಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಮತ್ತು ಶಾಪಿಂಗ್ ಕಳೆಗಟ್ಟುತ್ತಿಲ್ಲ. ಜತೆಗೆ, ಈ ಬಾರಿ ಪುಟ್ಟ ಮಣ್ಣಿನ ಗಣಪನನ್ನ ಮನೆಗೆ ಕರೆದೊಯ್ಯಲು ನಿರ್ಧರಿಸಿರುವ ಜನರೂ ಖರ್ಚು-ವೆಚ್ಚಗಳ ಬಗ್ಗೆ ಪಕ್ಕಾ ಲೆಕ್ಕ ಇಟ್ಟುಕೊಂಡೇ ಪೇಟೆಗೆ ಹೋಗುತ್ತಿದ್ದಾರೆ. ಮೊದಲಿನಂತೆ ಬೀಡುಬೀಸಾಗಿ ಕ್ರೆಡಿಟ್ಟು ಕಾರ್ಡುಗಳು ವ್ಯಾಲೆಟ್’ನಿಂದ ಹೊರಬರುತ್ತಿಲ್ಲ.
ಹಬ್ಬದ ಖರೀದಿ ಏನಿದ್ದರೂ ಹೂವು ಹಣ್ಣು, ಆಹಾರ ಸಾಮಗ್ರಿಗೆ ಮಾತ್ರ ಸೀಮಿತವಾಗಿದೆ. ಅದು ಬಿಟ್ಟರೆ ಈ ವರ್ಷ ಹೊಸ ಮೊಬೈಲ್, ಹೊಸ ಟಿವಿ, ಬೈಕು, ಕಾರು ಇಲ್ಲವೇ ಹೊಸ ಫ್ರಿಜ್’ದಂಥ ವಸ್ತುಗಳ ಖರೀದಿ ಇಲ್ಲ. ಮೇಲಾಗಿ ಹಬ್ಬವೇ ಈ ಸಲ ಫುಲ್ ಸಿಂಪಲ್ ಎನ್ನುತ್ತಿದ್ದಾರೆ ಬಹುತೇಕ ಜನರು. ಇನ್ನೊಂದೆಡೆ ಮಾರುಕಟ್ಟೆ ತಜ್ಞರು ಕೂಡ ಎಚ್ಚರದಿಂದ ಖರ್ಚು ಮಾಡಿ ಎಂದು ಕಿವಿಮಾತು ಹೇಳುತ್ತಿದ್ದಾರೆ. ಈ ಬಗ್ಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರು ಸಿಕೆನ್ಯೂಸ್ ನೌ ಜತೆ ಮಾತನಾಡಿದ್ದಾರೆ.
ನಮ್ಮ ಶಾಪಿಂಗ್ ಏನಿದ್ರೂ ಯುಗಾದಿಗೆ:
“ನಾವು ಗಣೇಶ ಹಬ್ಬಕ್ಕೆಲ್ಲ ಶಾಪಿಂಗ್ ಮಾಡಲ್ಲ. ನಮ್ಮ ಭರ್ಜರಿ ಖರೀದಿ ಖುಷಿ ಏನಿದ್ರೂ ಯುಗಾದಿಗೆ ಮಾತ್ರ. ಅದರಲ್ಲೂ ಕೋವಿಡ್ ಇರೋದ್ರಿಂದ ಈ ಸಲ ಫುಲ್ ಸಿಂಪಲ್ ಫೆಸ್ಟಿವಲ್. ಮನೆಗೆ ಈಗಾಗಲೇ ಇಕೋ ಗಣೇಶ ಬಂದಾಗಿದೆ. ದರ್ಬೆ, ಹೂವು, ಹಣ್ಣು, ಕಡುಬಿಗೇನೂ ಕೊರತೆ ಇಲ್ಲ. ಆದರೆ ದುಬಾರಿ ಅಂತ ಏನೂ ಇಲ್ಲ” ಎನ್ನುತ್ತಾರೆ ಕನ್ನಡದ ಖ್ಯಾತ ನಟ ಪಿ.ಡಿ. ಸತೀಶ್ಚಂದ್ರ.
ಈ ವರ್ಷ ಶಾಪಿಂಗ್ ಮಾಡಲ್ಲ:
“ಹಬ್ಬ ಮಾಡುತ್ತೇವೆ, ಅದು ಅತ್ಯಂತ ಸರಳವಾಗಿ. ಶಾಪಿಂಗ್ ಮಾಡುತ್ತಿಲ್ಲ. ಈ ವರ್ಷ ನಾನು ಹೊಸ ಬಟ್ಟೆಯನ್ನೂ ಖರೀದಿಸುತ್ತಿಲ್ಲ. ಇರುವ ಬಟ್ಟೆಯಲ್ಲೇ ಒಂದನ್ನು ನೀಟಾಗಿ ಒಗೆದು ಐರನ್ ಮಾಡಿ ಧರಿಸಿದರೆ ಸಾಕು. ಮಿತವ್ಯಯ ಅನ್ನುವುದು ಬಹಳ ಮುಖ್ಯ ಈಗ. ಕೋವಿಡ್ ಜನರಿಗೆ, ಅದರಲ್ಲೂ ಭಾರತೀಯರಿಗೆ ಸರಳವಾಗಿ ಬದುಕುವ ರೀತಿಯನ್ನು ಕಲಿಸಿದೆ ಎಂಬುದು ನನ್ನ ಭಾವನೆ. ಹಾಗೆಯೇ ಆರೋಗ್ಯ, ಆರ್ಥಿಕತೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಿದೆ. ಇನ್ನು ಮನೆಗೆ ಪರಿಸರ ಗಣಪನನ್ನು ತರುತ್ತೇವೆ. ನಮ್ಮ ಮನೆಯ ಅಂಗಳದಲ್ಲಿಯೇ ದಾಸವಾಳ ಸೇರಿ ಹತ್ತಾರು ಹೋವಿನ ಗಿಡಗಳಿವೆ. ಹೀಗಾಗಿ ಹೂವಿಗೂ ನಾನು ಹೊರಗೆ ಹೋಗಲ್ಲ. ನಮ್ಮ ಮನೆಗಷ್ಟೇ ಹಬ್ಬ ಸೀಮಿತ ವಾಗಿರುತ್ತದೆ” ಎನ್ನುತ್ತಾರೆ ಲೇಖಕಿ ಹಾಗೂ ಸೋಶಿಯಲ್ ಮೀಡಿಯಾ ಸ್ಟ್ರ್ಯಾಟಜಿಸ್ಟ್ ರೋಹಿಣಿ ಎಸ್. ಮೂರ್ತಿ.
ಶಾಪಿಂಗ್ ಸಿಂಪಲ್:
ಪ್ರತಿ ವರ್ಷವೂ ವರ ಮಹಾಲಕ್ಷ್ಮೀ ವ್ರತ, ಗೌರಿ ವ್ರತ ಸೇರಿ ಎಲ್ಲ ಹಬ್ಬಗಳನ್ನು ಭರ್ಜರಿಯಾಗಿ ಮಾಡುವ ಬಾಣಸವಾಡಿಯ ನಗರದ ಗೃಹಿಣಿ ಗೌತಮಿ ಹೇಳುವುದು ಹೀಗೆ.., “ನಮಗೆ ಹಬ್ಬಗಳು ತುಂಬಾ ಮುಖ್ಯ. ಪ್ರತಿ ವರ್ಷವೂ ಅದ್ಧೂರಿಯಾಗಿ ಎಲ್ಲ ಹಬ್ಬಗಳನ್ನು ಮಾಡುತ್ತಿದ್ದೆವು. ನೆಂಟರಿಷ್ಟರನ್ನೂ ಕರೆಯುತ್ತಿದ್ದೆವು. ಈ ವರ್ಷ ಹಾಗೆ ಆಗುತ್ತಿಲ್ಲ. ಮನೆ ಸಂಪಾದನೆ ಗಣನೀಯವಾಗಿ ಕಮ್ಮಿ ಆಗಿದೆ. ಕೋವಿಡ್ ಬಂದು ಲಾಕ್’ಡೌನ್ ವಿಧಿಸಿದ ನಂತರ ನಾನು ಮನೆ ಖರ್ಚನ್ನು ಸಾಕಷ್ಟು ಕಡಿಮೆ ಮಾಡಿದ್ದೇನೆ. ಆಹಾರ ಧಾನ್ಯ, ತರಕಾರಿ, ಹಣ್ಣು ಮತ್ತು ಆರೋಗ್ಯದ ಬಾಬ್ತಿಗೆ ಬಿಟ್ಟರೆ ಬೇರೆ ಯಾವುದಕ್ಕೂ ನಯಾಪೈಸೆಯನ್ನೂ ಖರ್ಚು ಮಾಡುತ್ತಿಲ್ಲ” ಎನ್ನುತ್ತಾರೆ ಅವರು.
ಟೆಮ್ಟ್ ಆಗಿ ಖರ್ಚು ಮಾಡಬೇಡಿ:
“ಹಬ್ಬ ಬಂದಿದೆ ಸರಿ. ಹಾಗಂತ ಸಿಕ್ಕಾಪಟ್ಟೆ ಖರ್ಚು ಮಾಡವುದು ಬೇಡ. ಹಣ ದುಂದುವೆಚ್ಚ ಮಾಡುವುದಕ್ಕೆ ಇದು ಸಂದರ್ಭವಲ್ಲ. ಕಂಪನಿಗಳು, ಶೋ ರೂಮುಗಳು ಬಿಸ್ನೆಸ್ ಆಗಲಿ ಎಂದು ಜಾಹೀರಾತುಗಳಿಗೆ ಕೋಟ್ಯಂತರ ರೂಪಾಯಿ ಸುರಿಯುತ್ತವೆ. ಅದು ಅವುಗಳ ಜಾಯಮಾನ. ಹಾಗಂತ ಅವರು ಹೇಳಿದ್ದನ್ನು ಕೇಳಿಕೊಂಡು ಹೋದರೆ ಕಷ್ಟಕ್ಕೆ ಸಿಲುಕುವುದು ಖಚಿತ. ಕೋವಿಡ್ ಬರುವುದಕ್ಕೆ ಮುನ್ನ 1 ಲಕ್ಷ ರೂ. ಸಂಬಳ ತೆಗೆದುಕೊಳ್ಳುತ್ತಿದ್ದ ವ್ಯಕ್ತಿ, ಏನಿಲ್ಲವೆಂದರೂ 75 ಸಾವಿರದಷ್ಟು ಕಮಿಟ್ಮೆಂಟ್’ಗಳನ್ನೇ ಇಟ್ಟುಕೊಳ್ಳುತ್ತಿದ್ದ. ಉಳಿದ 25 ಸಾವಿರದಲ್ಲಿ ಹೇಗೋ ಮನೆಯನ್ನು ನಿಭಾಯಿಸುತ್ತಿದ್ದ. ಮನೆ ಸಾಲ, ಕಾರು ಸಾಲ, ಒಡವೆ ಸಾಲ, ಮಕ್ಕಳ ಶಿಕ್ಷಣ ಸಾಲ ಹೀಗೆ ಸರಣಿ ಸಾಲಗಳ ಸುಳಿಯಲ್ಲಿ ಸಿಲುಕಿಕೊಂಡರೂ ಕೆಲಸ ಇದೆ, ಸಂಬಳ ಬರುತ್ತಿದೆ ಎಂಬ ಧೈರ್ಯದಿಂದ ಮುಂದೆ ಸಾಗುತ್ತಿದ್ದ. ಈಗ ಪರಿಸ್ಥಿತಿ ಬದಲಾಗಿದೆ. ಹಣ ಉಳಿಸಲು ಎಷ್ಟೋ ಉದ್ಯೋಗಿಗಳನ್ನು ಮನೆಗೆ ಕಳಿಸಿದ ಕಂಪನಿಗಳೇ ಚೆನ್ನಾಗಿ ಹಬ್ಬ ಮಾಡಿ, ಭರ್ಜರಿಯಾಗಿ ಶಾಪಿಂಗ್ ಮಾಡಿ ಎಂದು ಜನರನ್ನು ದಾರಿ ತಪ್ಪಿಸುತ್ತಿವೆ. ಜನರು ಮತ್ತೊಂದು ಸಾಲಕ್ಕೆ ಸಿಲುಕಿಕೊಂಡರೂ ಪರವಾಗಿಲ್ಲ, ಅವರಿಗೆ ಜಾಹೀರಾತು ಬರಬೇಕು ಮತ್ತು ಶೋ ರೂಮ್’ಗಳಿಗೆ ಬಿಸ್ನೆಸ್ ಆಗಬೇಕು. ಇದು ಸರಿಯಲ್ಲ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಕೋವಿಡ್ ಬಂದ ಮೇಲೆ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಉಳಿದುಕೊಂಡವರು ಅರ್ಧ ಸಂಬಳಕ್ಕೆ ಕೆಲಸ ಮಾಡ್ತಾ ಇದ್ದಾರೆ. ಈ ಅರ್ಧ ಸಂಬಳ ಪಡೆಯುತ್ತಿರುವವರು ಟೆಮ್ಟ್ ಆಗಿ ಕಾರು, ಬೈಕು, ಮೊಬೈಲು, ಟೀವಿ, ಫ್ರಿಜ್ಜೂ ಅಂತ ಹೋಗಿ ಮತ್ತೆ ಸಾಲಕ್ಕೆ ಸಿಕ್ಕಿಕೊಳ್ಳುವುದೋ ಅಥವಾ ಇರುವ ಹಣವನ್ನು ಖರ್ಚು ಮಾಡಿಕೊಳ್ಳುವುದೋ ಮಾಡಿದರೆ ಮುಂದೆ ಕಷ್ಟ ಖಂಡಿತಾ. ಸಣ್ಣ ಪ್ರಮಾಣದ ಬಜೆಟ್ ಪ್ಲ್ಯಾನ್ ಮಾಡಿ ಪುಟ್ಟ ಗಣಪನನ್ನು ಕೂರಿಸಿ, ಹೂವು- ಹಣ್ಣು ಇಟ್ಟು ನೈವೇಧ್ಯದೊಂದಿಗೆ ಪೂಜೆ ಮಾಡಿದರೆ ಸಾಕು. ಇನ್ನು 6 ತಿಂಗಳು ನಾವು ಉಳಿಯಬೇಕು. ಜೀವ ಉಳಿಯೋದು ಮುಖ್ಯ. ಆಮೇಲೆ ಜೀವನ, ಕಾರು, ಮನೆ ಇತ್ಯಾದಿ ಎನ್ನುತ್ತಾರೆ ಮಾರುಕಟ್ಟೆ ತಜ್ಞ ಹಾಗೂ ಇನ್ಫಿನಿಟಿ ಸರ್ವೀಸಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಯತೀಶ್ ಕುಮಾರ್.
ಹಬ್ಬ ಮಾಡುತ್ತೇವೆ, ಶಾಪಿಂಗ್ ಇಲ್ಲ:
“ಪ್ರತಿ ವರ್ಷ ನಮಗೆ ಗೌರಿ-ಗಣೇಶ ಎಂದರೆ ಬಹಳ ಕ್ರೇಜ್. ಈ ಹಬ್ಬಕ್ಕೆ ತಪ್ಪದೇ ಮನೆಗೊಂದು ಹೊಸ ವಸ್ತು ಬರುತ್ತಿತ್ತು. ಈ ವರ್ಷ ಅದೆಲ್ಲ ಇಲ್ಲ. ನನ್ನ ಪ್ರಕಾರ ದಸರಾ ಹಬ್ಬಕ್ಕೂ ಶಾಪಿಂಗ್ ಇಲ್ಲ. ಉಳಿತಾಯದ ದುಡ್ಡು ಬದುಕಲು ಬೇಕು. ಇನ್ನು ಶಾಪಿಂಗ್ ಮಾಡುತ್ತ ಹೋದರೆ ಹೇಗೆ? ಮೊಬೈಲ್ ಮಳಿಗೆಗಳು, ಶಾಪಿಂಗ್ ಸೆಂಟರುಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಳಿಗೆಗಳು ಶಾಪಿಂಗ್ ಮಾಡಿ ಎಂದು ಟೀವಿಗಳು ಮತ್ತು ಪತ್ರಿಕೆಗಳಲ್ಲಿ ಭರ್ಜರಿಯಾಗಿ ಜಾಹೀರಾತು ನೀಡುತ್ತಿವೆ. ನಮಗೇನು ವೇತನ ಕಡಿತ ಆಗಿಲ್ಲ. ಸದ್ಯಕ್ಕೆ ಇರುವ ಉಳಿತಾಯದಲ್ಲಿ ಮಕ್ಕಳ ಶಿಕ್ಷಣ, ಮನೆ ವ್ಯವಹಾರ ನೋಡಿಕೊಂಡರೆ ಸಾಕಾಗಿದೆ. ಹೀಗಾಗಿ ಈ ಬಾರಿ ಗೌರಿ ಗಣೇಶ ಹಬ್ಬ ಪೂಜೆಗೆ ಮಾತ್ರ ಸೀಮಿತ” ಎಂದು ಅಭಿಪ್ರಾಯಪಡುತ್ತಾರೆ ಯಲಹಂಕದ ನಿವಾಸಿ ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಎಂಜಿನೀಯರ್ ಆಗಿರುವ ಜಿ.ಎನ್. ಚಂದ್ರಶೇಖರ್. ಸದ್ಯದ ಪರಿಸ್ಥಿತಿಯಲ್ಲಿ ದುಬಾರಿ ಖರ್ಚು ಮಾಡದೇ ಹಣವನ್ನು ಉಳಿಸಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳುತ್ತಾರೆ.
ಕೊಳ್ಳುಬಾಕತನ ಬೇಡ:
“ಶಾಪಿಂಗ್ ಮಳಿಗೆಗಳಿಗೆ ಏನಾಗಬೇಕು? ಆಪರ್’ಗಳ ಮೇಲೆ ಆಫರ್’ಗಳನ್ನು ಕೊಡುತ್ತವೆಯೇನೋ ಸರಿ. ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ನೀಡುತ್ತಿವೆ ಎನ್ನುವುದೇನೋ ಸರಿ. ಆದರೆ ಖರೀದಿ ಮಾಡಲು ನಮ್ಮಲ್ಲಿ ದುಡ್ಡಿರಬೇಕಲ್ಲ. ಕೊಟ್ಟವನು ಕೋಡಂಗಿ, ಈಸ್ಕಂಡವನು ಈರಭದ್ರ ಎನ್ನುವಂತೆ ಜಾಹೀರಾತು ಕೊಟ್ಟು ಮಳಿಗೆಗಳು ದುಡ್ಡು ಕಳೆದುಕೊಳ್ಳುವುದು ಬಿಟ್ಟರೆ ಬೇರೇನೂ ಆಗದು. ಕೋವಿಡ್ ಎಲ್ಲ ರೀತಿಯಲ್ಲೂ ಜನಜೀವನವನ್ನು ಹಾಳು ಮಾಡಿದೆ. ಇರುವ ಇಎಂಐಗಳನ್ನು ಕಟ್ಟಿಕೊಂಡು ಮಕ್ಕಳನ್ನು ಓದಿಸಿಕೊಂಡರೆ ಸಾಕು. ಸುಮ್ಮನೇ ಮೊದಲೇ ಕಷ್ಟದಲ್ಲಿರುವ ಜನರಿಗೆ ಇಲ್ಲಸಲ್ಲದ ಆಫರ್’ಗಳ ಆಸೆ ಹುಟ್ಟಿಸಿ ಕೊಳ್ಳುಬಾಕ ಸಂಸ್ಕೃತಿಯನ್ನು ಹೇರಿ ದುಡ್ಡು ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದರ ಬಗ್ಗೆ ಜನರು ಕೊಂಚ ಎಚ್ಚರಿಕೆಯಿಂದ ಇರಬೇಕು. ತಪ್ಪಿದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ” ಎನ್ನುತ್ತಾರೆ ಬಹುರಾಷ್ಟ್ರೀಯ ಕಂಪನಿಯೊಂದರ ಲೆಕ್ಕಾಧಿಕಾರಿ ಎ.ಸಿ. ಬಾಬು.
ಬಿಸ್ನೆಸ್ ಆಗುತ್ತಿಲ್ಲ, ಟ್ರೈ ಮಾಡುತ್ತಿದ್ದೇವೆ:
ರಾಮಮೂರ್ತಿ ನಗರದ ಮುಖ್ಯ ರಸ್ತೆಯ ಉದ್ದಕ್ಕೂ ಚಾಚಿಕೊಂಡಿರುವ ಹತ್ತಾರು ಬ್ರಾಂಡೆಡ್ ಶೋ ರೂಮ್’ಗಳಿಗೆ ಬುಧವಾರ ಸಿಕೆನ್ಯೂಸ್ ನೌ ಭೇಟಿ ನೀಡಿತ್ತು. ವ್ಯಾಪಾರ ಕಂಪ್ಲೀಟ್ ನೀರಸವಾಗಿತ್ತು. ಕೆಲ ಮಳಿಗೆಗಳಲ್ಲಿ ಸಿಬ್ಬಂದಿ ಬಿಟ್ಟರೆ ಗ್ರಾಹಕರು ಕಾಣಲೇ ಇಲ್ಲ. “ಬಿಸ್ನೆಸ್ ನೀರಸವಾಗಿದೆ. ಗ್ರಾಹಕರು ಬರುತ್ತಿಲ್ಲ. ಕೋವಿಡ್ ಬಿಸಿ ಎಲ್ಲರನ್ನೂ ಕಟ್ಟಿಹಾಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗೌರಿ ಗಣೇಶ ಹಬ್ಬಕ್ಕೆ ಬಿಸ್ನೆಸ್ ಫುಲ್ ನಿಲ್. ಗ್ರಾಹಕರನ್ನು ಸೆಳೆಯಲು ಎಷ್ಟೇ ಪ್ರಯತ್ನ ಮಾಡಿದರೂ ಉಪಯೋಗವಾಗುತ್ತಿಲ್ಲ. ಕೊಡುತ್ತಿರುವ ಜಾಹೀರಾತುಗಳಿಗೆ ಆಗುತ್ತಿರುವ ವೆಚ್ಚವೇ ಗಿಟ್ಟುತ್ತಿಲ್ಲ. ಆದರೆ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ ಎಂಬ ವಿಶ್ವಾಸವಿದೆ” ಎಂದು ಶೋ ರೂಮ್ ಒಂದರ ಮಾರಾಟ ವ್ಯವಸ್ಥಾಪಕರೊಬ್ಬರು ತಮ್ಮ ಅಸಹಾಯತೆ ವ್ಯಕ್ತಪಡಿಸಿದರು.
Lead Photo: BNMK Photographs