GROUND REPORT
ಬೆಂಗಳೂರು/ನರಸಾಪುರ ಕೈಗಾರಿಕಾ ಪ್ರದೇಶ:
ದೃಶ್ಯ 1
ಭಾರತದಿಂದ ಬ್ರಟೀಷರು ಹೊರಹೋದ ಮೇಲೆಯೂ ಜಾಗತಿಕ ಭೂಪಟದಲ್ಲಿ ಕೋಲಾರ ಜಿಲ್ಲೆ ರಾರಾಜಿಸುತ್ತಿತ್ತು. ಕಾರಣ ಕೆಜಿಎಫ್ ಗಣಿಗಳಲ್ಲಿ ಚಿನ್ನ ಸಿಗುತ್ತಲೇ ಇತ್ತು. ಜತೆಗೆ, ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕೂಡ ಅಲ್ಲಿಗೆ ಬಂದಾಗ ಭಾಗ್ಯದ ಬಾಗಿಲು ಮುಗಿಲೆತ್ತರಕ್ಕೆ ತೆರೆದುಕೊಂಡ ಹಾಗಾಗಿತ್ತು ಇಲ್ಲಿನ ಜನರ ಪಾಲಿಗೆ!!
ದೃಶ್ಯ 2
ನರಸಾಪುರ. ಅತ್ತ ಹಳ್ಳಿಯೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಊರು. ಮಳೆ ಬಂದರೆ ತುಂಬಿಕೊಳ್ಳುವ ಕೆರೆಯ ಮಗ್ಗುಲಲ್ಲಿ, ಅಂತರಗಂಗೆ ಬೆಟ್ಟಗಳ ನೆರಳಲ್ಲಿ ಹಾಯಾಗಿದ್ದ ಈ ಜಾಗ ಇವತ್ತು ಜಾಗತಿಕ ಭೂಪಟ ಮತ್ತು ರಾಜ್ಯದ ಕೈಗಾರಿಕಾ ಕ್ಷೇತ್ರದ ಅಚ್ಚುಮೆಚ್ಚಿನ ತಾಣ. ಈಗ ನರಸಾಪುರ ಕೆರೆ ತುಂಬಿ 365 ದಿನವೂ ನೀರಿರುತ್ತದೆ. ಅದರ ಎದುರುಗಡೆಯಲ್ಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನೂರಾರು ಎಕರೆ ಪ್ರದೇಶದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶ ತಲೆಎತ್ತಿ ನಿಂತಿದೆ. ಈ ಕೈಗಾರಿಕಾ ಪ್ರದೇಶಕ್ಕೆ ಅದೆಷ್ಟು ಮಹತ್ವ ಇದೆ ಇದೆಯೆಂದರೆ, ಭಾರತದ ಒಟ್ಟಾರೆ ಜಿಡಿಪಿಗೆ ಶೇ.೧.೨೫ರಷ್ಟನ್ನು ಇಲ್ಲಿಂದ ನಿರೀಕ್ಷೆ ಮಾಡಲಾಗುತ್ತಿದೆ.
ದೃಶ್ಯ 3
ಇಂತಹ ಕೈಗಾರಕಾ ಪ್ರದೇಶದಲ್ಲಿ ಇವತ್ತು ಸ್ಟೀವ್ ಜಾಬ್ಸ್ ಸದ್ದು ಕೇಳುತ್ತಿದೆ. ಏನಿದು ಸ್ಟೋರಿ? ಮುಂದೆ ನೀವೇ ಓದಿ…
****
ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಕೋಲಾರ ಜಿಲ್ಲೆ ಈಗ ರಾಜ್ಯ ಮಾತ್ರವಷ್ಟೇ ಅಲ್ಲ, ಇಡೀ ದೇಶದಲ್ಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ನಿತ್ಯಬರಪೀಡಿತ ಈ ಜಿಲ್ಲೆ ಇದೀಗ ಜಾಗತಿಕ ಮಾಧ್ಯಮಗಳಲ್ಲೂ ಮಿಂಚುತ್ತಿದೆ. ಹಾಗೆ ನೋಡಿದರೆ ಇದು ಬಯಲು ಸೀಮೆಯ ಭರ್ಜರಿ ಶೈನಿಂಗ್ ಎನ್ನಬಹುದು.
ಹೌದು. ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಈಗ ಮೊಬೈಲ್ ಬ್ರಾಂಡ್‌ಗಳಲ್ಲೇ ಅತ್ಯಂತ ಪ್ರತಿಷ್ಠಿತವಾದ ಆಪಲ್ ಮೊಬೈಲ್ ತಯಾರಕಾ ಘಟಕವಿದ್ದು, ಅಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇಡೀ ಜಗತ್ತೇ ಬಹುಕಾತುರದಿಂದ ನಿರೀಕ್ಷೆ ಮಾಡುತ್ತಿರುವ ಐಫೋನ್-12 ಇಲ್ಲಿಯೇ ತಯಾರಾಗುತ್ತಿದೆ. ಇದು ಚಿನ್ನದಿಂದ ಜಗದ್ವಿಖ್ಯಾತಿಯಾಗಿದ್ದ ಕೋಲಾರಕ್ಕೆ ಹೊಸ ಗರಿ ಮೂಡುವಂತೆ ಮಾಡಿದೆ ಹಾಗೂ ಆತ್ಮನಿರ್ಭರ ಭಾರತಕ್ಕೆ ಭರವಸೆಯ ಮುನ್ನುಡಿ ಬರೆಯುವುದರ ಜತೆಗೆ ಚೀನಾದಿಂದ ಕಾಲ್ತೆಗೆಯುತ್ತಿರುವ ವಿದೇಶಿ ಕಂಪನಿಗಳಿಗೆ ಭಾರತವೇ ಬೆಸ್ಟ್, ಅದರಲ್ಲೂ ಕರ್ನಾಟಕವೇ ಸೂಪರ್ ಎನ್ನುವ ಸಂದೇಶವನ್ನೂ ಸಾರುತ್ತಿದೆ.
*ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಘಟಕ.
ಡಿಜಿಟಲ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾ ಸ್ಲೋಗನ್ ಅಡಿಯಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಪಲ್ ಮೊಬೈಲುಗಳ ಉತ್ಪಾದನೆ ಆರಂಭವಾಗಿದೆ. ಆ ಕಂಪನಿಯ ಕಾರ್ಯಸೂಚಿಯಂತೆ ಎಲ್ಲವೂ ನಡೆದರೆ ಮುಂದಿನ ವರ್ಷದ ಆರಂಭಕ್ಕೆ ಅಥವಾ 2021ರ ನಡುವೆಗೆಲ್ಲ ಐಫೋನ್ 12 ಮಾರುಕಟ್ಟೆಗೆ ಬರಬಹುದು ಎಂದು ಇತ್ತೀಚೆಗೆ ‘ಬಿಸಿನೆಸ್ ಸ್ಟ್ಯಾಂಡರ್ಡ್ʼ ಪತ್ರಿಕೆ ವರದಿ ಮಾಡಿತ್ತು.
ಉತ್ಪಾದನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಇದೇ ಕೈಗಾರಿಕಾ ಪ್ರದೇಶದಲ್ಲಿರುವ ‘ವಿಸ್ಟ್ರಾನ್ʼ ಎಂಬ ಕಂಪನಿಯ ಘಟಕದಲ್ಲಿ ಭರದಿಂದ ನಡೆಯುತ್ತಿವೆ. ಈಗಾಗಲೇ ಈ ಘಟಕದಲ್ಲಿ ಐಫೋನ್ 12ರ ಕೆಲ ಬಿಡಿಭಾಗಗಳ ಉತ್ಪಾದನೆಯೂ ಆರಂಭವಾಗಿದೆ ಎಂಬ ಮಾಹಿತಿಯೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ‘ವಿಸ್ಟ್ರಾನ್ʼ ಕಂಪನಿ ಹಂತಹಂತವಾಗಿ 10,000ಕ್ಕೂ ಹೆಚ್ಚು ಉದ್ಯೋಗಿಳನ್ನು ನೇಮಿಸಿಕೊಳ್ಳಲು ಉದ್ದೇಶಿಸಿದೆ ಎಂದು ಗೊತ್ತಾಗಿದೆ. ಮೊದಲ ಭಾಗವಾಗಿ ಈಗಾಗಲೇ ಸ್ಥಳೀಯ 4 ಸಾವಿರಕ್ಕೂ ಹೆಚ್ಚು ಪ್ರತಿಭಾವಂತ ಯುವಜನರಿಗೆ ಉದ್ಯೋಗ ನೀಡಿದೆ. ಈ ಪೈಕಿ ಶೇ.90ರಷ್ಟು ಮಂದಿ ಸ್ಥಳೀಯರೇ ಇದ್ದಾರೆ. ಉಳಿದ ಶೇ.10ರಷ್ಟು ರಾಜ್ಯದ ಹೊರಗಿನವರು ಹಾಗೂ ತೈವಾನ್ ತಜ್ಞರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಕ್ಕಿರುವ ಮಾಹಿತಿಯಂತೆ, ಈಗಾಗಲೇ ಡಿಪ್ಲೊಮೋ ಅಭ್ಯರ್ಥಿಗಳಿಗೆ ಹಾಗೂ ಈಗಾಗಲೇ ನುರಿತವರು, ಹೊಸಬರಿಗೆ ಈ ಕಂಪನಿಯು ಅವಕಾಶಗಳನ್ನು ನೀಡುತ್ತಿದೆ ಎನ್ನಲಾಗಿದೆ. ಉಳಿದಂತೆ ಐಫೋನ್ 12ರ ಕೆಲ ಬಿಡಿಭಾಗಗಳನ್ನು ತಯಾರಿಕೆಯಲ್ಲಿ ನಿರತವಾಗಿರುವ ‘ವಿಸ್ಟ್ರಾನ್ʼ ಕಂಪನಿಯು ಸೆಪ್ಟಂಬರ್ ಹೊತ್ತಿಗೆ ಈ ಮೊಬೈಲಿನ ಪೂರ್ಣ ಪ್ರಮಾಣದ ತಯಾರಿಕೆಯನ್ನು ಆರಂಭ ಮಾಡಲಿದೆ. ಈಗಾಗಲೇ ಈ ಮೊಬೈಲ್ ಬಗ್ಗೆ ಟೆಕ್‌ಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಯಾಗಿದ್ದು, ಸ್ಥಳೀಯವಾಗಿಯೇ ಈ ಐಫೋನ್ ಅನ್ನು ತಯಾರು ಮಾಡುತ್ತಿರುವುದರಿಂದ ಶೇ.21ರಷ್ಟಕ್ಕೂ ಆಮದು ಸುಂಕ ಉಳಿಯಲಿದೆ, ಇದರ ಲಾಭ ಗ್ರಾಹಕರಿಗೆ ನೇರವಾಗಿ ಸಿಗಲಿದೆ, ಮಾತ್ರವಲ್ಲದೆ, ಭಾರತದಲ್ಲಿ ಮುಂದಿನ ದಿನಗಳಲ್ಲಿ ಆಪಲ್ ಮಾರುಕಟ್ಟೆ ವೇಗವಾಗಿ ಬೆಳೆಯಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಈಗಾಗಲೇ ಭಾರತದಲ್ಲಿ ಐಫೋನ್ 6ಎಸ್, ಐಫೋನ್ 7, ಐಫೋನ್ ಎಕ್ಸ್‌ಆರ್, ಐಫೋನ್ 11 ಮಾಡೆಲ್‌ಗಳನ್ನು ತಯಾರಿಸಿದ್ದ ಆಪಲ್, ಇದೀಗ ಐಫೋನ್ 12ನ್ನೂ ಉತ್ಪಾದಿಸುತ್ತಿದ್ದು, ಇದರ ಯಶಸ್ಸಿನ ನಂತರ ಮತ್ತಷ್ಟು ಮೊಬೈಲುಗಳನ್ನು ತಯಾರಿಸುವ ನಿರೀಕ್ಷೆ ಇದೆ. 2017ರಿಂದಲೇ ನರಸಾಪುರದ ʼವಿಸ್ಟ್ರಾನ್ʼ ಘಟಕದಲ್ಲಿ ಹೊಸ ಮೊಬೈಲಿನ ಜೋಡಣಾ ಉಪರಣಗಳ ಪ್ರಕ್ರಿಯೆಯನ್ನು ಆರಂಭ ಮಾಡಿತ್ತು. ವಿಚಿತ್ರವೆಂದರೆ, ಅದೇ ತೈವಾನಿನ ‘ಫಾಕ್ಸ್‌ಕಾನ್ʼ ಕಂಪನಿ ಚೆನ್ನೈನಲ್ಲಿದ್ದು, ಆ ಘಟಕದಲ್ಲಿ ಐಫೋನ್ 11 ತಯಾರಾಗಿತ್ತು. ವಿಚಿತ್ರವೆಂದರೆ ‘ವಿಸ್ಟ್ರಾನ್ʼ ಮತ್ತು ‘ಫಾಕ್ಸ್‌ಕಾನ್ʼ ಪರಸ್ಪರ ಪ್ರತಿಸ್ಪರ್ಧಿ ಕಂಪನಿಗಳೆಂದು ಹೇಳಲಾಗಿದೆ. ಒಟ್ಟಾರೆಯಾಗಿ ಆತ್ಮನಿರ್ಭರ ಪರಿಕಲ್ಪನೆ ಅಡಿಯಲ್ಲಿ ಆಪಲ್ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ತನ್ನ ಹೊಸ ಜನರೇಷನ್ ಫೋನ್‌ಗಳನ್ನು ತಯಾರು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಪ್ರಗತಿಗೆ ನಾಂದಿ
ಡಾ. ಸಿ.ಎನ್. ಅಶ್ವತ್ಥನಾರಾಯಣ
“ನರಸಾಪುರದ ಘಟಕದಲ್ಲಿ ಆಪಲ್ ಕಂಪನಿಯೂ ತನ್ನ ಐಫೋನ್ ಸರಣಿಯ 12ನೇ ಆವೃತ್ತಿಯನ್ನು ತಯಾರು ಮಾಡಲು ಆರಂಭಿಸುವುದು ಖುಷಿಯ ವಿಚಾರ. ಅಮೆರಿಕದ ಅತಿದೊಡ್ಡ ಮೊಬೈಲ್ ಬ್ರಾಂಡ್ ಆಗಿರುವ ಆಪಲ್, ಇದೀಗ ಆತ್ಮನಿರ್ಭರತೆಯ ಅಡಿಯಲ್ಲಿ ನಮ್ಮ ನೆಲದಲ್ಲಿಯೇ ತನ್ನ ಪ್ರತಿಷ್ಠಿತ ಮೊಬೈಲನ್ನು ತಯಾರು ಮಾಡುತ್ತಿರುವುದು ರಾಜ್ಯದ ಪ್ರಗತಿಗೂ ಮತ್ತಷ್ಟು ಬಲ ತುಂಬಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಕೈಗಾರಿಕೆ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳಾಗಿ, ಸಾಕಷ್ಟು ವಿದೇಶಿ ಬಂಡವಾಳವೂ ಹರಿದುಬಂದು ಉದ್ಯೋಗ ಮಾರುಕಟ್ಟೆಯೂ ಬೆಳೆಯಲಿದೆ” ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ದರವೂ ಕಡಿಮೆ ನಿರೀಕ್ಷೆ
ಸ್ಥಳೀಯವಾಗಿಯೇ ಐಫೋನ್ 12 ತಯಾರಾಗುವ ಹಿನ್ನಲೆಯಲ್ಲಿ ಇದರ ಬೆಲೆಯೂ ಕಡಿಮೆ ಆಗಬಹುದು. ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗಬಹುದು ಎಂಬ ನಿರೀಕ್ಷೆ ಟೆಕ್‌ಪ್ರಿಯರಲ್ಲಿ ಇದೆ.”ನಾನು ಮೊದಲಿನಿಂದಲೂ ಐಫೋನ್ ಅನ್ನೇ ಬಳಸುತ್ತಿದ್ದೇನೆ. ಐಫೋನ್ 5ರಿಂದಲೇ ಆಪಲ್‌ಗೆ ಅಡಿಕ್ಟ್ ಆಗಿದ್ದೇನೆ ಎನ್ನಬಹುದು. ಅದರಲ್ಲೂ ಆಂಡ್ರಾಯ್ಡ್ ಫೋನ್‌ಗಳು ಬಳಕೆಗೆ ಸುಲಭವಾದರೂ ನನಗೆ ಅವುಗಳ ಮೇಲೆ ಇಂಟರೆಸ್ಟ್ ಇಲ್ಲ. ಐಫೋನ್ 7 ಸೇರಿದಂತೆ ಬಹುತೇಕ ಎಲ್ಲ ಮಾಡೆಲ್‌ಗಳ ಐಫೋನ್‌ಗಳನ್ನು ಬಳಕೆ ಮಾಡಿದ್ದೇನೆʼ ಎಂದು ಹೇಳುತ್ತಾರೆ ಅದೇ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರ ಲೆಕ್ಕಾಧಿಕಾರಿ ಹಾಗೂ ಸ್ಥಳೀಯ ನಿವಾಸಿ ಎ.ಸಿ. ಬಾಬು.
ಸ್ಟೀಬ್ ಸ್ಫೂರ್ತಿ
steve jobs / wikipedia
ಪ್ರಖರ ದೂರದೃಷ್ಟಿಯಿಂದ ಆಪಲ್ ಕಂಪನಿಯನ್ನು ಸ್ಥಾಪನೆ ಮಾಡಿ, ಜಗತ್ತಿನ ಸ್ಮಾರ್ಟ್‌ಫೋನ್ ವಲಯದಲ್ಲಿ ಸರಿಸಾಟಿ ಇಲ್ಲದ ಬ್ಯಾಂಡ್ ಅನ್ನಾಗಿ ರೂಪಿಸಿದ ಸ್ಟೀವ್ ಜಾಬ್ಸ್ ಕೋಲಾರದ ಯುವಕರಿಗೆ ಐಕಾನ್ ಆಗಿಬಿಟ್ಟಿದ್ದಾರೆ. “ಜಾಬ್ಸ್ ಬಗ್ಗೆ ಕೇಳಿದ್ದೆ, ಓದಿದ್ದೆ. ಅವರು ಆಪಲ್ ಕಂಪನಿಯನ್ನು ಕಟ್ಟಿ ಬೆಳೆಸಿದ ರೋಚಕ ಕಥೆ ಇವತ್ತಿಗೂ ಮೈಜುಂ ಎನ್ನುವಂತೆ ಮಾಡುತ್ತದೆ. ಇವತ್ತು ನಮ್ಮ ಭಾಗದಲ್ಲಿ ಅನೇಕ ಯುವಜನರು ಸ್ಟೀವ್ ಜಾಬ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಆಪಲ್ ಬಹುದೊಡ್ಡ ಕಂಪನಿ, ಅದು ನಮ್ಮೂರಿನ ಪಕ್ಕ ಫೋನ್‌ಗಳನ್ನು ತಯಾರಿಸುತ್ತಿದೆ. ಇದರ ಜತೆಗೆ, ಜಾಬ್ಸ್ ಅವರ ಸ್ಫೂರ್ತಿ ಇಲ್ಲಿ ಮತ್ತಷ್ಟು ಹವಾ ಎಬ್ಬಿಸಿದೆ. ದುಬಾರಿ ಎನ್ನುವ ಕಾರಣಕ್ಕೆ ಇದುವರೆಗೂ ನಾನು ಐಫೋನ್ ಬಳಕೆ ಮಾಡಿರಲಿಲ್ಲ. ಈಗ ಐಫೋನ್ 12ಅನ್ನು ಖಂಡಿತಾ ಖರೀದಿ ಮಾಡುತ್ತೇನೆ” ಎನ್ನುತ್ತಾರೆ ನರಸಾಪುರದ ಪ್ರಕಾಶ್ ಹೇಳುತ್ತಾರೆ.
ಈ ಸುದ್ದಿಯ ಹಿನ್ನೆಲೆಯಲ್ಲಿ ಸಿಕೆನ್ಯೂಸ್ ನೌ ಕೋಲಾರ ಮತ್ತು ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಸುತ್ತುಹಾಕಿತು. ನರಸಾಪುರ ಪಟ್ಟಣ, ನರಸಾಪುರ ಕೈಗಾರಿಕಾ ಪ್ರದೇಶ, ಅಲ್ಲಿರುವ ವಿಶಾಲವಾದ ಕೆರೆ, (ಇದಕ್ಕೆ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಹರಿಸಲಾಗಿದೆ. ಈ ಯೋಜನೆಗೆ ಕೆ.ಸಿ. ವ್ಯಾಲಿ ಎನ್ನುತ್ತಾರೆ..) ಜತೆಗೆ ಅಕ್ಕಪಕ್ಕದ ಕೆಲ ಹಳ್ಳಿಗಳನ್ನು ಸುತ್ತುಹಾಕಿತು. ಕೈಗಾರಿಕಾ ಪ್ರದೇಶಕ್ಕೆ ಅಂಟಿಕೊಂಡೇ ಇರುವ ಕಾಜಿಕಲ್ಲಹಳ್ಳಿಯಿಂದ ವಕ್ಕಲೇರಿವರೆಗೂ ಸಿಕೆನ್ಯೂಸ್ ನೌ ರೌಂಡ್ ಹಾಕಿತು. ಮುಖ್ಯವಾಗಿ ಕೈಗಾರಿಕಾ ಪ್ರದೇಶದ ಒಳಗೇ ಇರುವ ಕರಿನಾಯಕನಹಳ್ಳಿ ಎಂಬ ಹಳ್ಳಿಯೇ ಬಹಳ ಸೊಗಸು. ಇಡೀ ಕೈಗಾರಿಕಾ ಪ್ರದೇಶದ ಟೌನ್ʼಶಿಪ್ಪಿನೊಳಗೆ ಈ ಹಳ್ಳಿ ಗುಬ್ಬಚ್ಚಿಯಂತೆ ಇದೆ. ಇನ್ನು ಈ ಭಾಗದ ಬಹತೇಕ ಪ್ರತಿಭಾವಂತ ಯುವಜನರೆಲ್ಲ ಉದ್ಯೋಗಕ್ಕೆ ಈ ಕೈಗಾರಿಕಾ ಪ್ರದೇಶಕ್ಕೆ ಹೋಗುತ್ತಿದ್ದಾರೆ.
ಆಗ ಬಂಗಾರ, ಈಗ ಐಫೋನ್
ಇನ್ನು ಇದೇ ಕೈಗಾರಿಕಾ ಪ್ರದೇಶದ ಖಾಸಗಿ ಕಂಪಿನಿಯೊಂದರಲ್ಲಿ ಲೆಕ್ಕಾಧಿಕಾರಿ ಆಗಿರುವ ಎ.ಸಿ. ಬಾಬು ಅವರದ್ದು, ಅಲ್ಲಿಗೆ ಸಮೀಪದ ಹಳ್ಳಿ. ಸುಮಾರು ಎಂಟು ವರ್ಷಗಳಿಂದ ಅವರು ಅದೇ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ಒಟ್ಟಾರೆ ಬೆಳವಣಿಗೆ ಬಗ್ಗೆ ಅರಿತುಕೊಂಡಿದ್ದಾರೆ. ಐಫೋನ್ ತಯಾರಿ ಬಗ್ಗೆ ಬಗ್ಗೆ ಅವರು ಹೇಳಿದ್ದಿಷ್ಟು..,
“ಮೊದಲು ಕೋಲಾರ ಜಿಲ್ಲೆ ಎಂದರೆ ಚಿನ್ನಕ್ಕೆ ಹೆಸರುವಾಸಿಯಾಗಿತ್ತು. ಕೆಜಿಎಫ್ ಪಟ್ಟಣ ಜಾಗತಿಕ ಭೂಪಟದಲ್ಲಿ ಒಂದು ದೊಡ್ಡ ಹೆಸರಾಗಿತ್ತು. ಆ ಗಣಿಗಳು ಮುಚ್ಚಿಹೋದ ಬಳಿಕ ನಮ್ಮ ಜಿಲ್ಲೆಯ ಪ್ರತಿಷ್ಠೆಗೆ ಮುಕ್ಕಾಗಿತ್ತು. ಈಗ ನರಸಾಪುರ ಕೈಗಾರಿಕಾ ಪ್ರದೇಶ ಬಂದ ಮೇಲೆ ಕಳೆದುಹೋಗಿದ್ದ ವೈಭವ ಮರಳಿ ಬಂದಿದೆಯೇನೋ ಎನಿಸುತ್ತಿದೆ. ಇಲ್ಲಿ ದೇಶ-ವಿದೇಶಗಳ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆದರಲ್ಲೂ ಆಪಲ್ ಕಂಪನಿ ಈಗ ಇದೇ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನೆ ಆರಂಭ ಮಾಡಿರುವುದು ನಮಗೆಲ್ಲರಿಗೂ ಹೆಮ್ಮೆ ಎನಿಸುತ್ತಿದೆ. ಸ್ಟೀವ್‌ಜಾಬ್ಸ್ ಅವರ ಸ್ಫೂರ್ತಿಯ ಜತೆಗೆ ನಮ್ಮ ಪ್ರಧಾನಮಂತ್ರಿಗಳ ಆತ್ಮನಿರ್ಭರತೆಯ ಕಲ್ಪನೆ ಹೆಚ್ಚು ಉತ್ಸಾಹ ತುಂಬಿದೆ. ಇಲ್ಲಿ ತಯಾರಾಗುತ್ತಿರುವ ಐಫೋನ್ ನೋಡಲು ನಾನು ಕೂಡ ತುಂಬಾ ಕಾತರನಾಗಿದ್ದೇನೆ” ಎಂದು ಹೇಳುತ್ತಾರೆ ಎ.ಸಿ. ಬಾಬು.
ಶುಭ ಸೂಚನೆ
ಕೋವಿಡ್ ಕಾರಣಕ್ಕೆ ಇಡೀ ಎಕಾನಮಿಯೇ ತಳಕಚ್ಚಿರುವಾಗ ಆಪಲ್ ಹೊಸದಾಗಿ ನೇಮಕಾತಿ ಮಾಡುತ್ತಿರುವುದು ನಿಜಕ್ಕೂ ಶುಭ ಸೂಚನೆ ಎಂದು ಸ್ಥಳೀಯರು ಹೇಳುತ್ತಾರೆ. ಅನೇಕ ಕಂಪನಿಗಳಲ್ಲಿ ಸಿಬ್ಬಂದಿ ಕಡಿತ ಮಾಡುತ್ತಿರುವ ಬೆಳವಣಿಗೆಗಳ ನಡುವೆ ಇದು ಕೊಂಚ ಚೇತೋಹಾರಿಯಾದ ಹಜ್ಜೆ. 2017ರಲ್ಲಿಯೇ ಸುಮಾರು 43 ಎಕರೆ ಪ್ರದೇಶದಲ್ಲಿ ‘ವಿಸ್ಟ್ರಾನ್ʼ ತನ್ನ ಘಟಕವನ್ನು ಸ್ಥಾಪನೆ ಮಾಡಿತು. ಕಂಪನಿಯೂ 3,000 ಕೋಟಿಗೂ ಹೆಚ್ಚು ಹೂಡಿಕೆಯನ್ನು ಮಾಡಿದೆ. ಅದು ಪೀಣ್ಯದಲ್ಲೂ ತನ್ನ ಘಟಕವನ್ನು ಹೊಂದಿದ್ದು, ಆಲ್ಲಿ ಐಫೋನ್‌ಗಳನ್ನು ಅಸೆಂಬಲ್ ಮಾಡಲಾಗುತ್ತಿದೆ.
Lead Photo by Matheus Bertelli from Pexels